ಜನವರಿ ತಿಂಗಳ ಜಗದ್ಗುರುಗಳ ಪ್ರಾರ್ಥನಾ ಉದ್ದೇಶ
ವ್ಯಾಟಿಕನ್ ವರದಿ
ಹೊಸ ವರ್ಷದೊಂದಿಗೆ ಜಗದ್ಗುರು XIVನೇ ಲಿಯೋ ರವರು “ಪೋಪ್ ಅವರೊಂದಿಗೆ ಪ್ರಾರ್ಥಿಸೋಣ” ಎಂಬ ನವೀಕೃತ ಮುಂದಾಳತ್ವಕ್ಕೆ ತಮ್ಮ ಸಂಪೂರ್ಣ ಬೆಂಬಲವನ್ನು ಘೋಷಿಸಿದ್ದಾರೆ. ಈ ಯೋಜನೆಯ ಮೂಲಕ ಜಗದ್ಗುರುಗಳ ಮಾಸಿಕ ಪ್ರಾರ್ಥನಾ ಉದ್ದೇಶಗಳನ್ನು ಜಗತ್ತಿನಾದ್ಯಂತ ಧರ್ಮ ಸಭೆಗೆ ತಲುಪಿಸಲಾಗುತ್ತದೆ. ಇದು ಜಗದ್ಗುರು ಫ್ರಾನ್ಸಿಸ್ ರವರು ವೀಡಿಯೋ ಮತ್ತು ಆಡಿಯೋ ಮೂಲಕ ಜಗದ್ಗುರುಗಳ ಪ್ರಾರ್ಥನಾ ಉದ್ದೇಶಗಳನ್ನು ಹಂಚಿಕೊಳ್ಳಬೇಕೆಂಬ ಆಶಯದ ಮುಂದುವರಿಕೆಯಾಗಿದೆ. ಡಿಜಿಟಲ್ ಸಂವಹನದ ಇಂದಿನ ಯುಗದಲ್ಲಿ, ಪ್ರಾರ್ಥನೆಗೆ ಸೂಕ್ತವಾದ ಭಾಷೆ ಮತ್ತು ಹೊಸ ಮಾದರಿಗಳ ಮೂಲಕ ವಿಶ್ವದ ನಂಬಿಗಸ್ತರಿಗೆ ಸುಲಭವಾಗಿ ತಲುಪಿಸುವುದೇ ಇದರ ಉದ್ದೇಶವಾಗಿದೆ.
ಈ ಹೊಸ ಮಾದರಿಯ ಮೊದಲ ವೀಡಿಯೋದಲ್ಲಿ, ಜಗದ್ಗುರು XIVನೇ ಲಿಯೋರವರು ದೇವರ ವಾಕ್ಯದೊಂದಿಗೆ ನಿರಂತರವಾಗಿ ಪ್ರಾರ್ಥಿಸಲು ನಂಬಿಗಸ್ತರನ್ನು ಆಹ್ವಾನಿಸಿದರು. ಮಾನವ ಹೃದಯದ ಅಶಾಂತತೆಗೂ ಅರ್ಥದ ಹಸಿವಿಗೂ ಸಾಂತ್ವನ ಮತ್ತು ಪೂರ್ಣತೆಯನ್ನು ನೀಡಬಲ್ಲದು ಸುವಾರ್ತೆಯೊಂದೇ ಎಂದು ಅವರು ಹೇಳಿದರು. ಪ್ರತಿದಿನ ಶಾಸ್ತ್ರಗಳಲ್ಲಿ ನಿಮ್ಮ ಧ್ವನಿಯನ್ನು ಕೇಳಲು, ಅದರಿಂದ ನಮ್ಮ ಜೀವನದ ನಿರ್ಧಾರಗಳನ್ನು ವಿವೇಚಿಸಲು ನಮಗೆ ಕಲಿಸಿರಿ ಎಂದು ಅವರು ಪ್ರಾರ್ಥಿಸಿದರು.
ಪವಿತ್ರ ಶಾಸ್ತ್ರದಲ್ಲಿರುವ ದೇವರ ವಾಕ್ಯವು ದಣಿವಿನಲ್ಲಿ ಪೋಷಣೆ, ಕತ್ತಲಿನಲ್ಲಿ ಆಶೆ ಮತ್ತು ಸಮುದಾಯಗಳಲ್ಲಿ ಬಲವನ್ನು ನೀಡುತ್ತದೆ ಎಂದು ಜಗದ್ಗುರುಗಳು ಹೇಳಿದರು. ಎಲ್ಲಾ ಕ್ರೈಸ್ತರು ದೇವರ ವಾಕ್ಯದಿಂದ ಶಕ್ತಿ ಮತ್ತು ಮಾರ್ಗದರ್ಶನ ಪಡೆಯಲಿ ಹಾಗೂ ಧರ್ಮ ಸಭೆಯು ಸದಾ ಸಂತೋಷದಿಂದ ಸುವಾರ್ತೆಯನ್ನು ಘೋಷಿಸಲಿ ಎಂದು ಅವರು ಪ್ರಾರ್ಥಿಸಿದರು. ದೇವರ ವಾಕ್ಯದೊಂದಿಗೆ ಇರುವ ಭೇಟಿಯ ಮೂಲಕ ನಮ್ಮ ನಂಬಿಕೆ ಬೆಳೆಯಲಿ ಮತ್ತು ಅದು ನಮಗೆ ಇತರರ ಕಡೆಗೆ ಕೈಚಾಚಿ, ದುರ್ಬಲರನ್ನು ಕ್ಷಮಿಸಲು, ಸೇತುವೆಗಳನ್ನು ಕಟ್ಟಲು ಮತ್ತು ಜೀವವನ್ನು ಘೋಷಿಸಲು ಪ್ರೇರಣೆ ನೀಡಲಿ ಎಂದು ಜಗದ್ಗುರುಗಳು ಹೇಳಿದರು.
ಹಿಂದೆ “ದಿ ಪೋಪ್ ವೀಡಿಯೋ” ಎಂದು ಪರಿಚಿತವಾಗಿದ್ದ ಈ ಮುಂದಾಳತ್ವವು ಈಗ “ಪೋಪ್ ಅವರೊಂದಿಗೆ ಪ್ರಾರ್ಥಿಸೋಣ” ಎಂಬ ಹೆಸರಿನಲ್ಲಿ ಜಗದ್ಗುರುಗಳ ದೈನಂದಿನ ಪ್ರಾರ್ಥನೆಗೆ ಧರ್ಮ ಸಭೆಯನ್ನು ಏಕಮಟ್ಟಿಗೆ ತರುವ ಉದ್ದೇಶ ಹೊಂದಿದೆ. ಜಗದ್ಗುರುಗಳ ವಿಶ್ವವ್ಯಾಪಿ ಪ್ರಾರ್ಥನಾ ಜಾಲದ ಅಂತರರಾಷ್ಟ್ರೀಯ ನಿರ್ದೇಶಕ ಫಾ. ಕ್ರಿಸ್ತೋಬಲ್ ಫೋನೆಸ್ ಎಸ್.ಜೆ. ರವರ ಮಾತಿನಂತೆ, ಈ ಹೊಸ ಮಾದರಿ ನಂಬಿಗಸ್ತರಿಗೆ ಜಗದ್ಗುರುಗಳ ಉದ್ದೇಶಗಳಿಗೆ ಇನ್ನಷ್ಟು ಆಳವಾಗಿ ಬೆಂಬಲ ನೀಡಲು ಸಹಾಯ ಮಾಡುತ್ತದೆ. ಯಾರೇ ಆಗಿರಲಿ, ಎಲ್ಲೆಲ್ಲಿದ್ದರೂ, ಜಗದ್ಗುರುಗಳು ಸೂಚಿಸುವ ಮಾಸಿಕ ಉದ್ದೇಶಕ್ಕಾಗಿ ಅವರೊಂದಿಗೆ ಪ್ರಾರ್ಥಿಸಲು ಇದು ತೆರೆಯಲ್ಪಟ್ಟ ಸರಳ ಮತ್ತು ವಿಶ್ವವ್ಯಾಪಿ ಆಹ್ವಾನವಾಗಿದೆ.
ಜನವರಿ ತಿಂಗಳ ಜಗದ್ಗುರುಗಳ ಪ್ರಾರ್ಥನಾ ಉದ್ದೇಶವು, ಕ್ರಿಸ್ತನೊಂದಿಗೆ ಭೇಟಿಯಾಗುವ ವಿಶೇಷ ಸ್ಥಳವಾಗಿ ಪವಿತ್ರ ಶಾಸ್ತ್ರದ ಆತ್ಮೀಯ ಶಕ್ತಿಯನ್ನು ಮರುಶೋಧಿಸಬೇಕೆಂದು ಕ್ರೈಸ್ತರನ್ನು ಉತ್ತೇಜಿಸುತ್ತದೆ. ಈ ವೀಡಿಯೋ ಚಿತ್ರೀಕರಣವು ವಾಟಿಕನ್ ನಗರದಲ್ಲಿನ ಅತ್ಯಂತ ಪುರಾತನ ಚರ್ಚುಗಳಲ್ಲಿ ಒಂದಾದ ಸಂತ್ ಪೆಲ್ಲೆಗ್ರಿನೊ ದೇವಾಲಯದಲ್ಲಿ ನಡೆಯಿತು. ಪುರಾತನ ವಿಯಾ ಫ್ರಾಂಚಿಜೆನಾ ಮಾರ್ಗದ ಬಳಿ ಇರುವ ಈ ದೇವಾಲಯವು ಇತಿಹಾಸಪೂರ್ವದಿಂದಲೂ ಸಂತ ಪೇತ್ರನ ಸಮಾಧಿಯ ಕಡೆಗೆ ಯಾತ್ರೆ ಮಾಡುವ ಯಾತ್ರಿಕರಿಗೆ ಆತಿಥ್ಯ ಮತ್ತು ಪ್ರಾರ್ಥನೆಯ ಸ್ಥಳವಾಗಿ ಸೇವೆ ಸಲ್ಲಿಸುತ್ತ ಬಂದಿದೆ ಎಂದರು.