ಜಾಂಜಿಬಾರ್ ಕಪ್ 2026: ಶಾಂತಿ, ಸ್ನೇಹ ಮತ್ತು ಭ್ರಾತೃತ್ವಕ್ಕಾಗಿ ಪಯಣ
ವ್ಯಾಟಿಕನ್ ವರದಿ
ಒಂದು ದಶಕಕ್ಕೂ ಹೆಚ್ಚು ಕಾಲದಿಂದ ಇಟಲಿಯ ವೈದ್ಯರಾದ ಡಾ. ಸ್ಟೆಫಾನೊ ಕಾಂಟೆ ಅವರು ಜಾಂಜಿಬಾರ್‌ಗೆ ನಿಯಮಿತವಾಗಿ ಭೇಟಿ ನೀಡುತ್ತಿದ್ದಾರೆ. ಸ್ಥಳೀಯ ನಿವಾಸಿಗಳು ಮತ್ತು ಪ್ರವಾಸಿಗರಿಗೆ ವೈದ್ಯರಾಗಿ ಸೇವೆ ಸಲ್ಲಿಸುವ ಮೂಲಕ ಅವರು ಇಲ್ಲಿ ತಮ್ಮ ಕಾರ್ಯವನ್ನು ಆರಂಭಿಸಿದರು. 2010ರಲ್ಲಿ ಆರಂಭವಾದ ಈ “ಕೆಲಸದೊಂದಿಗೆ ರಜಾ” ಪ್ರವಾಸವು ಶೀಘ್ರದಲ್ಲೇ ದೀರ್ಘಕಾಲದ ಬದ್ಧತೆಯಾಗಿ ಪರಿವರ್ತನೆಯಾಯಿತು. ಸ್ಥಳೀಯ ಸಮುದಾಯಗಳಿಗೆ ಉಚಿತವಾಗಿ ವೈದ್ಯಕೀಯ ಸೇವೆ ಸಲ್ಲಿಸುತ್ತಿದ್ದ ಕಾಂಟೆ ಅವರು ಕೈಟ್‌ಸರ್ಫಿಂಗ್ ಕ್ರೀಡೆಯ ಮೇಲಿನ ತಮ್ಮ ಆಸಕ್ತಿಯನ್ನೂ ಮುಂದುವರಿಸಿದರು. ಜಾಂಜಿಬಾರ್‌ನ ಬೆಚ್ಚಗಿನ ನೀರು, ಸ್ಥಿರವಾದ ಗಾಳಿ ಮತ್ತು ರಕ್ಷಿತ ಹವಳದ ಬಂಡೆಗಳ ಪ್ರದೇಶಗಳು ಈ ಕ್ರೀಡೆಗೆ ಅತ್ಯಂತ ಸೂಕ್ತವಾದ ಪರಿಸ್ಥಿತಿಯನ್ನು ಒದಗಿಸುತ್ತವೆ.
ವ್ಯಾಟಿಕನ್ ರೇಡಿಯೋಗೆ ನೀಡಿದ ಸಂದರ್ಶನದಲ್ಲಿ ಅವರು, ವರ್ಷಗಳು ಕಳೆದಂತೆ ವೈದ್ಯರಾಗಿ ಸಲ್ಲಿಸುತ್ತಿದ್ದ ಸೇವೆಯನ್ನು ಮೀರಿ ತಾವು ಇನ್ನೇನು ಕೊಡುಗೆ ನೀಡಬಹುದು ಎಂಬ ಪ್ರಶ್ನೆಯನ್ನು ತಮ್ಮೊಳಗೆ ಕೇಳಿಕೊಳ್ಳಲು ಆರಂಭಿಸಿದ್ದಾಗಿ ವಿವರಿಸಿದರು. ಅದಕ್ಕೆ ಅವರ ಉತ್ತರವೇ ಜಾಂಜಿಬಾರ್ ಕಪ್. ಈ ಅಂತಾರಾಷ್ಟ್ರೀಯ ಕೈಟ್‌ಸರ್ಫಿಂಗ್ ಸ್ಪರ್ಧೆಯ ಉದ್ದೇಶ ದ್ವೀಪವನ್ನು ವಿಶ್ವಮಟ್ಟದ ಕ್ರೀಡಾ ತಾಣವಾಗಿ ಪರಿಚಯಿಸುವುದಷ್ಟೇ ಅಲ್ಲ; ಪ್ರವಾಸೋದ್ಯಮ ಮತ್ತು ಅಂತಾರಾಷ್ಟ್ರೀಯ ಸಹಕಾರದ ಮೂಲಕ ಸ್ಥಳೀಯ ಸಮುದಾಯಕ್ಕೆ ಅವಕಾಶಗಳನ್ನು ಸೃಷ್ಟಿಸುವುದೂ ಆಗಿದೆ.
ಕನಸಿನಿಂದ ವಾಸ್ತವದತ್ತ
ಇಟಲಿಯ ನೌಕಾಯಾನ ಒಕ್ಕೂಟದ ದೀರ್ಘಕಾಲದ ಸದಸ್ಯರಾಗಿರುವ ತಮ್ಮ ಅನುಭವ ಮತ್ತು ವೃತ್ತಿಪರ ಹಿನ್ನೆಲೆಯನ್ನು ಆಧರಿಸಿ, ಜಾಂಜಿಬಾರ್‌ನಲ್ಲಿ ಮೊದಲ ಅಂತಾರಾಷ್ಟ್ರೀಯ ಕೈಟ್‌ಸರ್ಫಿಂಗ್ ಸ್ಪರ್ಧೆಯನ್ನು ಆಯೋಜಿಸುವ ಪ್ರಸ್ತಾಪವನ್ನು ಕಾಂಟೆ ಮುಂದಿಟ್ಟರು. ಸ್ಥಳೀಯ ಸರ್ಕಾರ ಈ ಕಲ್ಪನೆಯನ್ನು ಸ್ವೀಕರಿಸಿ ಯೋಜನೆಗೆ ಕೈಜೋಡಿಸಿತು. ಮೊದಲ ಸ್ಪರ್ಧೆ 2024ರ ಜನವರಿಯಲ್ಲಿ ನಡೆಯಿತು. ಅದರಲ್ಲಿ ಸುಮಾರು 20 ಸ್ಪರ್ಧಿಗಳು ಮತ್ತು ಒಬ್ಬ ಪ್ರಾಯೋಜಕರು ಭಾಗವಹಿಸಿದ್ದರು. ಅಂದಿನಿಂದ ಸ್ಪರ್ಧೆಯು ನಿರಂತರವಾಗಿ ಬೆಳೆಯುತ್ತಿದ್ದು, ಈಗ 40ರಿಂದ 50 ಕ್ರೀಡಾಪಟುಗಳು ಮತ್ತು 10ರಿಂದ 15 ಪ್ರಾಯೋಜಕರನ್ನು ಸ್ವಾಗತಿಸುತ್ತಿದೆ. ಇದರ ಅಂತಾರಾಷ್ಟ್ರೀಯ ಗುರುತಿಸುವಿಕೆಯೂ ಹೆಚ್ಚುತ್ತಿದೆ.
ಕ್ರೀಡಾಸ್ಫೂರ್ತಿ ಮತ್ತು ಸ್ನೇಹ
ಕಾಂಟೆ ಅವರ ದೃಷ್ಟಿಯಲ್ಲಿ ಜಾಂಜಿಬಾರ್ ಕಪ್ ಕೇವಲ ನೀರಿನ ಮೇಲಿನ ಸ್ಪರ್ಧೆಯಲ್ಲ. ಜನರನ್ನು ಸ್ನೇಹ ಮತ್ತು ಸೌಹಾರ್ದದಲ್ಲಿ ಒಂದಾಗಿಸುವ ಹಾಗೂ ವಿಭಿನ್ನ ಸಂಸ್ಕೃತಿಗಳು ಮತ್ತು ಹಿನ್ನೆಲೆಗಳ ವೈವಿಧ್ಯತೆಯನ್ನು ಗೌರವಿಸಲು ಸಹಾಯ ಮಾಡುವ ಸಾರ್ವತ್ರಿಕ ಭಾಷೆಯಾಗಿ ಅವರು ಕ್ರೀಡೆಯನ್ನು ಕಾಣುತ್ತಾರೆ. ಪೂಜ್ಯ ಜಗದ್ಗುರುಗಳಾದ ಫ್ರಾನ್ಸಿಸ್ ಮತ್ತು ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರ ಸಂದೇಶಗಳಿಂದ ಪ್ರೇರಣೆ ಪಡೆದ ಅವರು, ಶಾಂತಿ, ಭ್ರಾತೃತ್ವ, ಗೌರವ ಮತ್ತು ಒಗ್ಗಟ್ಟಿನ ಮೌಲ್ಯಗಳ ಸುತ್ತ ಈ ಕ್ರೀಡಾಕೂಟವನ್ನು ರೂಪಿಸಲು ಪ್ರಯತ್ನಿಸಿದ್ದಾರೆ. ಕ್ರೀಡಾ ಕಾರ್ಯಕ್ರಮವನ್ನು ಆಯೋಜಿಸುವುದರಾಚೆಗೆ, ಜನರು ಪರಸ್ಪರರನ್ನು ಪ್ರತಿಸ್ಪರ್ಧಿಗಳಾಗಿ ಅಲ್ಲ, ಸಹೋದರ ಸಹೋದರಿಯರಾಗಿ ಕಾಣುವ ಅವಕಾಶವನ್ನು ಸೃಷ್ಟಿಸುವುದು ಅವರ ಆಶಯವಾಗಿದೆ. ಅವರ ಮಾರ್ಗದರ್ಶಕ ತತ್ವ ಸರಳವಾಗಿದೆ: “ನಿಮ್ಮ ಸಹೋದರ ಸಹೋದರಿಯರು ನಿಮ್ಮನ್ನು ಪ್ರೀತಿಸಬೇಕೆಂದು ನೀವು ಬಯಸುವ ರೀತಿಯಲ್ಲೇ ಅವರನ್ನು ಪ್ರೀತಿಸಿ.” ಹೆಚ್ಚಿನ ಜನರು ಈ ಮೂಲಭೂತ ತತ್ವವನ್ನು ಅಳವಡಿಸಿಕೊಂಡರೆ ಜಗತ್ತು ಇನ್ನಷ್ಟು ಶಾಂತಿಯುತ ಸ್ಥಳವಾಗುತ್ತದೆ ಎಂದು ಡಾ. ಕಾಂಟೆ ನಂಬಿಕೆ ವ್ಯಕ್ತಪಡಿಸಿದರು.
ಕ್ರೀಡೆಯು ನೀಡುವ ಪಾಠ
ಕ್ರೀಡಾ ಚಟುವಟಿಕೆಗಳು ನಮಗೆ ಕಲಿಸುವ ಪಾಠಗಳ ಕುರಿತು ಮಾತನಾಡಿದ ಡಾ. ಕಾಂಟೆ ಅವರು ಶಿಸ್ತು, ನಿಯಮಗಳ ಗೌರವ, ಪರಿಶ್ರಮ ಮತ್ತು ವಿನಯವನ್ನು ಪ್ರಮುಖವಾಗಿ ಉಲ್ಲೇಖಿಸಿದರು. ಮಕ್ಕಳ ಹೃದಯ ಶಸ್ತ್ರಚಿಕಿತ್ಸೆ ಕ್ಷೇತ್ರದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ತಮ್ಮ ಅನುಭವವನ್ನು ನೆನಪಿಸಿಕೊಂಡ ಅವರು, ತಾವು ಭೇಟಿಯಾದ ಶ್ರೇಷ್ಠ ಶಸ್ತ್ರಚಿಕಿತ್ಸಕರು ಅತ್ಯಂತ ವಿನಯಶೀಲರೂ ಆಗಿದ್ದರು ಎಂದು ಹೇಳಿದರು. ಅವರ ಅನುಭವದಲ್ಲಿ ನಿಜವಾದ ಪರಿಣತಿಯು ತನ್ನ ಸಾಮರ್ಥ್ಯವನ್ನು ತಾನೇ ತೋರಿಸುತ್ತದೆ; ಆದರೆ ಅಹಂಕಾರವು ಅನೇಕ ಬಾರಿ ಆತ್ಮವಿಶ್ವಾಸದ ಕೊರತೆಯನ್ನು ಮುಚ್ಚಿಡುತ್ತದೆ. ಇಂದಿನ ಜಗತ್ತಿಗೆ ಹೆಚ್ಚು ಪ್ರಾಮಾಣಿಕತೆ ಮತ್ತು ಕಡಿಮೆ ಮೇಲ್ನೋಟದ ಪ್ರದರ್ಶನ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು. ಸಾಮರ್ಥ್ಯ ಮತ್ತು ಸತ್ಯನಿಷ್ಠೆ ಅಂತಿಮವಾಗಿ ಹೊರಗಿನ ಆಡಂಬರಕ್ಕಿಂತ ಮೇಲುಗೈ ಸಾಧಿಸುತ್ತವೆ ಎಂಬುದು ಅವರ ನಂಬಿಕೆ.
ಕೈಟ್‌ಸರ್ಫಿಂಗ್‌ನ ವಿಶಿಷ್ಟತೆ
ಕೈಟ್‌ಸರ್ಫಿಂಗ್ ಕ್ರೀಡೆಯು ಸರ್ಫಿಂಗ್ ಮತ್ತು ನೌಕಾಯಾನದ ಅಂಶಗಳನ್ನು ಸಂಯೋಜಿಸುತ್ತದೆ. ಕ್ರೀಡಾಪಟುಗಳು ಒಂದು ಫಲಕದ ಮೇಲೆ ನಿಂತುಕೊಂಡು, ಸುಮಾರು 20 ಮೀಟರ್ ಎತ್ತರದಲ್ಲಿ ಹಾರುವ ದೊಡ್ಡದಾದ ನಿಯಂತ್ರಿಸಬಹುದಾದ ಗಾಳಿಪಟದ ಮೂಲಕ ಎಳೆಯಲ್ಪಡುತ್ತಾರೆ. ಸರಿಯಾದ ರೀತಿಯಲ್ಲಿ ಅಭ್ಯಾಸ ಮಾಡದಿದ್ದರೆ ಇದು ಅಪಾಯಕಾರಿಯಾಗಬಹುದಾದರೂ, ಅರ್ಹ ತರಬೇತುದಾರರ ಮಾರ್ಗದರ್ಶನದಲ್ಲಿ ಸೂಕ್ತ ಸ್ಥಳಗಳಲ್ಲಿ ಕಲಿಯುವಾಗ ಇದು ಅತ್ಯಂತ ಸುರಕ್ಷಿತ ಕ್ರೀಡೆಯಾಗಿದೆ ಎಂದು ಕಾಂಟೆ ಒತ್ತಿಹೇಳುತ್ತಾರೆ. ಏಳು ಅಥವಾ ಎಂಟು ವರ್ಷದ ಮಕ್ಕಳಿಂದ ಹಿಡಿದು ಎಪ್ಪತ್ತರ ಹರೆಯದವರವರೆಗೆ ವಿವಿಧ ವಯಸ್ಸಿನ ಆರಂಭಿಕರಿಗೆ ತಾವು ವೈಯಕ್ತಿಕವಾಗಿ ತರಬೇತಿ ನೀಡಿರುವುದಾಗಿ ಅವರು ಹೇಳಿದರು.
ಆರನೇ ಜಾಂಜಿಬಾರ್ ಕಪ್
ಜಾಂಜಿಬಾರ್ ಕಪ್‌ನ ಆರನೇ ಆವೃತ್ತಿಯು ಆಗಸ್ಟ್ 23ರಂದು ಜಾಂಜಿಬಾರ್‌ನ ಪೂರ್ವ ಕರಾವಳಿಯ ಕಿವೇಂಗ್ವಾದಲ್ಲಿ ನಡೆಯಲಿದೆ. ಸ್ಥಿರವಾದ ಗಾಳಿ ಮತ್ತು ಅತ್ಯುತ್ತಮ ಕೈಟ್‌ಸರ್ಫಿಂಗ್ ಪರಿಸ್ಥಿತಿಗಳಿಗೆ ಪ್ರಸಿದ್ಧವಾಗಿರುವ ಪ್ರದೇಶ ಇದಾಗಿದೆ. ಜಾಂಜಿಬಾರ್ ಕಪ್ ಪ್ರಮುಖ ಅಂತಾರಾಷ್ಟ್ರೀಯ ಕ್ರೀಡಾಕೂಟವಾಗಿ ಇನ್ನಷ್ಟು ಬೆಳೆಯಬೇಕು ಎಂಬುದು ಡಾ. ಕಾಂಟೆ ಅವರ ಆಶಯ. ಆದರೆ ಅದೇ ಸಮಯದಲ್ಲಿ ಅದರ ಮೂಲ ಉದ್ದೇಶವಾದ ಕ್ರೀಡೆಯ ಮೂಲಕ ಜನರ ನಡುವೆ ಸೇತುವೆಗಳನ್ನು ನಿರ್ಮಿಸುವುದು ಮುಂದುವರಿಯಬೇಕು ಎಂಬುದು ಅವರ ಬಯಕೆ.
ಈ ಕ್ರೀಡಾಕೂಟದ ಧ್ಯೇಯವಾಕ್ಯವು ಅದರ ಆಶಯವನ್ನು ಸಾರುತ್ತದೆ: “ಎಲ್ಲರಿಗಾಗಿ ಒಬ್ಬರು, ಒಬ್ಬರಿಗಾಗಿ ಎಲ್ಲರೂ.” ಕಾಂಟೆ ಅವರ ಪಾಲಿಗೆ ಇದು ಕೇವಲ ಘೋಷವಾಕ್ಯವಲ್ಲ. ಪ್ರತಿಯೊಬ್ಬರೂ ಇತರರಿಗೆ ನೆರವಾಗುವ ಮತ್ತು ಹೆಚ್ಚು ಶಾಂತಿಯುತ ಹಾಗೂ ಏಕತೆಯ ಜಗತ್ತಿನ ನಿರ್ಮಾಣಕ್ಕಾಗಿ ಒಟ್ಟಾಗಿ ಶ್ರಮಿಸುವ ಹೊಣೆಗಾರಿಕೆಯನ್ನು ಹೊಂದಿದ್ದಾರೆ ಎಂಬ ಅವರ ನಂಬಿಕೆಯ ಅಭಿವ್ಯಕ್ತಿಯಾಗಿದೆ.
ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).