1982ರಲ್ಲಿ ರಿಮಿನಿ ಸಮಾವೇಶದಲ್ಲಿ ಪೂಜ್ಯ ಜಗದ್ಗುರು ಎರಡನೇ ಜಾನ್ ಪಾಲ್ 1982ರಲ್ಲಿ ರಿಮಿನಿ ಸಮಾವೇಶದಲ್ಲಿ ಪೂಜ್ಯ ಜಗದ್ಗುರು ಎರಡನೇ ಜಾನ್ ಪಾಲ್ 

ರಿಮಿನಿ ಸಮಾವೇಶ: ಪೂಜ್ಯ ಜಗದ್ಗುರು ಎರಡನೇ ಜಾನ್ ಪಾಲರ ಹೆಜ್ಜೆಗಳಲ್ಲಿ ಪೂಜ್ಯ ಜಗದ್ಗುರು 14ನೇ ಲಿಯೋ

45 ವರ್ಷಗಳಿಗೂ ಹೆಚ್ಚು ಕಾಲ, ಜನರ ನಡುವಿನ ಸ್ನೇಹಕ್ಕಾಗಿ ನಡೆಯುವ ರಿಮಿನಿ ಸಮಾವೇಶ, ವಿವಿಧ ಸಂಸ್ಕೃತಿಗಳು, ಧರ್ಮಗಳು ಮತ್ತು ಹಿನ್ನೆಲೆಗಳ ಜನರನ್ನು ಒಂದೆಡೆ ಸೇರಿಸುತ್ತಾ, ಸಂವಾದಕ್ಕೂ ನಮ್ಮನ್ನು ಒಂದುಗೂಡಿಸುವ ಅಂಶಗಳ ಅನ್ವೇಷಣೆಗೂ ವೇದಿಕೆಯಾಗಿದೆ. ಆಗಸ್ಟ್ 22ರಂದು ಪೂಜ್ಯ ಜಗದ್ಗುರು 14ನೇ ಲಿಯೋ ಅವರು ಈ ಸಮಾವೇಶಕ್ಕೆ ವೈಯಕ್ತಿಕವಾಗಿ ಭೇಟಿ ನೀಡಲಿದ್ದು, ಸಂತ ಎರಡನೇ ಜಾನ್ ಪಾಲ್ ಅವರ ನಂತರ ಸಮಾವೇಶಕ್ಕೆ ಭೇಟಿ ನೀಡುವ ಎರಡನೇ ಪೂಜ್ಯ ಜಗದ್ಗುರು ಆಗಲಿದ್ದಾರೆ.

ಲೇಖಕರು: ವಂ. ಗುರುಲೂಕಾಸ್ ಬ್ಯಾಂಕೋವ್ಸ್ಕಿ

ಜನರ ನಡುವಿನ ಸ್ನೇಹಕ್ಕಾಗಿ ನಡೆಯುವ ಸಮಾವೇಶ, ಅಂದರೆ ರಿಮಿನಿ ಸಮಾವೇಶದ ಇತಿಹಾಸವು 1970ರ ದಶಕದ ಅಂತ್ಯಕ್ಕೆ ಹಿಂದಿರುಗುತ್ತದೆ. ರಿಮಿನಿಯಲ್ಲಿದ್ದ ಕ್ರೈಸ್ತ ಅನುಭವವನ್ನು ಹಂಚಿಕೊಂಡಿದ್ದ ಸ್ನೇಹಿತರ ಗುಂಪಿನಲ್ಲಿ, ಸಮಕಾಲೀನ ಸಂಸ್ಕೃತಿಯಲ್ಲಿ ಕಂಡುಬರುವ ಸುಂದರ ಮತ್ತು ಒಳಿತನ್ನು ಅನ್ವೇಷಿಸಿ ಅದನ್ನು ಇತರರೊಂದಿಗೆ ಹಂಚಿಕೊಳ್ಳುವ ಬಯಕೆ ಮೂಡಿತು. ಹೀಗೆ 1980ರಲ್ಲಿ ಈ ಸಮಾವೇಶವು ಹುಟ್ಟಿಕೊಂಡಿತು.

ಆರಂಭದಿಂದಲೇ ಇದು ವಿಭಿನ್ನ ಸಂಸ್ಕೃತಿಗಳು ಮತ್ತು ಧರ್ಮಗಳ ಜನರು ಪರಸ್ಪರ ಭೇಟಿಯಾಗುವ ಸ್ಥಳವಾಗಬೇಕೆಂದು ಉದ್ದೇಶಿಸಲಾಗಿತ್ತು. ಶಾಂತಿ, ಸಹಬಾಳ್ವೆ ಮತ್ತು ಜನರ ನಡುವಿನ ಸ್ನೇಹವನ್ನು ನಿರ್ಮಿಸುವ ವೇದಿಕೆಯಾಗಿ ಇದು ರೂಪುಗೊಂಡಿತು. ಸತ್ಯ, ಒಳಿತು, ಸೌಂದರ್ಯ ಮತ್ತು ನ್ಯಾಯದ ಬಯಕೆಯೇ ಜನರನ್ನು ಒಂದುಗೂಡಿಸುತ್ತದೆ ಎಂಬ ನಂಬಿಕೆ ಇದರ ಮೂಲದಲ್ಲಿದೆ. ಕಮ್ಯುನಿಯನ್ ಅಂಡ್ ಲಿಬರೇಷನ್ ಚಳವಳಿಯ ಸ್ಥಾಪಕರಾದ ಫಾದರ್ ಲುಯಿಜಿ ಜುಸ್ಸಾನಿ ಈ ಸಾಮಾನ್ಯ ನೆಲೆಯನ್ನು “ಮೂಲಭೂತ ಅನುಭವ” ಎಂದು ವಿವರಿಸಿದ್ದರು.

ವಿವಿಧ ಸಂಸ್ಕೃತಿಗಳು ಮತ್ತು ಧರ್ಮಗಳ ಜನರು ಒಂದಾಗುವ ಸ್ಥಳ

ನಾಲ್ಕು ದಶಕಗಳಿಗೂ ಹೆಚ್ಚು ಕಾಲ, ರಾಜಕೀಯ, ಆರ್ಥಿಕತೆ, ವಿಜ್ಞಾನ, ಧರ್ಮ, ಸಂಸ್ಕೃತಿ ಮತ್ತು ಕ್ರೀಡಾ ಕ್ಷೇತ್ರಗಳ ಪ್ರತಿನಿಧಿಗಳು ರಿಮಿನಿಗೆ ಆಗಮಿಸುತ್ತಿದ್ದಾರೆ. ಸಭೆಗಳು, ಚರ್ಚೆಗಳು, ಪ್ರದರ್ಶನಗಳು ಮತ್ತು ಕಲಾ ಕಾರ್ಯಕ್ರಮಗಳ ಮೂಲಕ ಪ್ರಮುಖ ಸಾಮಾಜಿಕ ಹಾಗೂ ರಾಜಕೀಯ ಸವಾಲುಗಳ ಜೊತೆಗೆ ವಿಜ್ಞಾನ, ಕಲೆ, ಸಾಹಿತ್ಯ ಮತ್ತು ಆರ್ಥಿಕತೆಗೆ ಸಂಬಂಧಿಸಿದ ವಿಷಯಗಳನ್ನೂ ಚರ್ಚಿಸಲಾಗುತ್ತದೆ. ಸಂವಾದಕ್ಕೆ ಮುಕ್ತವಾಗಿರುವುದು ಈ ಸಮಾವೇಶದ ಪ್ರಮುಖ ವೈಶಿಷ್ಟ್ಯಗಳಲ್ಲಿ ಒಂದಾಗಿದೆ. ವಿವಿಧ ಕ್ರೈಸ್ತ ಪಂಗಡಗಳ ಕ್ರೈಸ್ತರು, ಯೆಹೂದ್ಯರು, ಮುಸ್ಲಿಮರು, ಬೌದ್ಧರು ಮತ್ತು ಯಾವುದೇ ಧಾರ್ಮಿಕ ನಂಬಿಕೆಯನ್ನು ಹೊಂದಿರದವರೂ ಇಲ್ಲಿ ಪಾಲ್ಗೊಳ್ಳುತ್ತಾರೆ. ಜನರ ನಡುವಿನ ಭಿನ್ನತೆಗಳನ್ನು ಅಡ್ಡಿಯೆಂದು ನೋಡುವ ಬದಲು, ಪರಸ್ಪರ ಭೇಟಿಯಾಗಲು, ಒಬ್ಬರನ್ನೊಬ್ಬರು ತಿಳಿದುಕೊಳ್ಳಲು ಮತ್ತು ಒಟ್ಟಾಗಿ ಸತ್ಯವನ್ನು ಹುಡುಕಲು ದೊರೆಯುವ ಅವಕಾಶವೆಂದು ಇಲ್ಲಿ ಪರಿಗಣಿಸಲಾಗುತ್ತದೆ.

ಸಮಾವೇಶದ ಹೃದಯ

ಪ್ರತಿ ವರ್ಷ ಇಟಲಿ ಮತ್ತು ಇತರ ದೇಶಗಳಿಂದ ಸಾವಿರಾರು ಸ್ವಯಂಸೇವಕರು ರಿಮಿನಿಗೆ ಆಗಮಿಸುವುದು ಈ ಕಾರ್ಯಕ್ರಮದ ವಿಶಿಷ್ಟ ಲಕ್ಷಣವಾಗಿದೆ. ತಮ್ಮ ಪ್ರಯಾಣ ಮತ್ತು ವಸತಿ ವೆಚ್ಚಗಳನ್ನು ಅವರು ಸ್ವತಃ ಭರಿಸುತ್ತಾರೆ.ಅಲ್ಲಿಗೆ ತಲುಪಿದ ನಂತರ ಅವರು ಕಾರ್ಯಕ್ರಮಗಳ ಸ್ಥಳಗಳನ್ನು ಸಿದ್ಧಪಡಿಸುತ್ತಾರೆ, ವಿವಿಧ ಕಾರ್ಯಕ್ರಮಗಳ ನಿರ್ವಹಣೆಗೆ ಸಹಕರಿಸುತ್ತಾರೆ, ಭಾಗವಹಿಸುವವರಿಗೆ ನೆರವಾಗುತ್ತಾರೆ. ಸಮಾವೇಶ ಮುಗಿದ ಬಳಿಕ ವ್ಯವಸ್ಥೆಗಳನ್ನು ತೆರವುಗೊಳಿಸುವ ಕಾರ್ಯದಲ್ಲಿಯೂ ಅವರು ಪಾಲ್ಗೊಳ್ಳುತ್ತಾರೆ. ನಿಸ್ವಾರ್ಥ ಸೇವೆಯು ಈ ಸಮಾವೇಶದ ಆರಂಭದಿಂದಲೂ ಆಧಾರವಾಗಿರುವ ಮೌಲ್ಯಗಳಲ್ಲಿ ಒಂದಾಗಿದೆ. ಸ್ವಯಂಸೇವಕರ ಸೇವೆ ಆ ಮೌಲ್ಯಕ್ಕೆ ಪ್ರಾಯೋಗಿಕ ಸಾಕ್ಷಿಯಾಗಿದೆ.

ಪೂಜ್ಯ ಜಗದ್ಗುರು ಎರಡನೇ ಜಾನ್ ಪಾಲ್ ಅವರ ಹೆಜ್ಜೆಗಳಲ್ಲಿ

ರಿಮಿನಿ ಸಮಾವೇಶದ ಇತಿಹಾಸದಲ್ಲಿ ಪೂಜ್ಯ ಜಗದ್ಗುರು ಎರಡನೇ ಜಾನ್ ಪಾಲ್ ಅವರಿಗೆ ವಿಶೇಷ ಸ್ಥಾನವಿದೆ. ಪೋಲಿಷ್ ಮೂಲದ ಈ ಜಗದ್ಗುರು ಅವರು 1982ರ ಆಗಸ್ಟ್ 29ರಂದು, ಸಮಾವೇಶವು ಆರಂಭಗೊಂಡು ಕೇವಲ ಮೂರನೇ ಬಾರಿಗೆ ನಡೆಯುತ್ತಿದ್ದ ಸಂದರ್ಭದಲ್ಲಿ, ವೈಯಕ್ತಿಕವಾಗಿ ಅದರಲ್ಲಿ ಪಾಲ್ಗೊಂಡಿದ್ದರು. ಭಾಗವಹಿಸಿದ್ದವರನ್ನುದ್ದೇಶಿಸಿ ಮಾತನಾಡಿದ ಅವರು, ಈ ಸಮಾವೇಶದ ಹಿಂದಿನ ಮೂಲ ಆಶಯದ ಮಹತ್ವವನ್ನು ಒತ್ತಿಹೇಳಿದರು: “ಭೇಟಿ! ಸ್ನೇಹದ ಭೇಟಿ! ಜನರ ನಡುವಿನ ಸ್ನೇಹ!”

ಅವರ ಪ್ರಕಾರ, ವಿಶ್ವ ಇತಿಹಾಸದ “ಅನೇಕ ವೇಳೆ ನಾಟಕೀಯವಾಗಿರುವ ಈ ಘಟ್ಟಗಳಲ್ಲಿ” ಈ ಮಾತುಗಳು ವಿಶೇಷ ಅರ್ಥವನ್ನು ಪಡೆದುಕೊಳ್ಳುತ್ತವೆ. ರಿಮಿನಿ ಸಮಾವೇಶವು ರಿಮಿನಿಯಲ್ಲಿದ್ದ ಕ್ರೈಸ್ತರ ಒಂದು ಗುಂಪಿನ ಸ್ನೇಹದಿಂದ ಮತ್ತು ಜೀವಂತ ನಂಬಿಕೆಯಿಂದ ಹರಿದುಬರುವ “ಸಂವಹನ, ಸೃಜನಶೀಲತೆ ಮತ್ತು ಸಂವಾದದ ಉತ್ಸಾಹ” ದಿಂದ ಹುಟ್ಟಿಕೊಂಡಿತು ಎಂಬುದನ್ನೂ ಪೂಜ್ಯ ಜಗದ್ಗುರು ಎರಡನೇ ಜಾನ್ ಪಾಲ್ ಸ್ಮರಿಸಿದರು. ಕೊನೆಯಲ್ಲಿ ಅವರು ಭಾಗವಹಿಸಿದವರಿಗೆ ಪ್ರಬಲವಾದ ಕರೆಯನ್ನು ನೀಡಿದರು: “ಪ್ರೀತಿಯ ನಾಗರಿಕತೆ! (...) ಸಹೋದರ ಸಹೋದರಿಯರೇ, ಈ ನಾಗರಿಕತೆಯನ್ನು ಎಂದಿಗೂ ದಣಿಯದೆ ನಿರ್ಮಿಸಿ!”

ಪೂಜ್ಯ ಜಗದ್ಗುರು 14ನೇ ಲಿಯೋ ಅವರು ಈ ಸಮಾವೇಶದಲ್ಲಿ ವೈಯಕ್ತಿಕವಾಗಿ ಪಾಲ್ಗೊಳ್ಳಲಿರುವ ಎರಡನೇ ಪೂಜ್ಯ ಜಗದ್ಗುರು ಆಗಲಿದ್ದಾರೆ. ಹೀಗಾಗಿ ಆಗಸ್ಟ್ 22ರಂದು ಅವರ ಉಪಸ್ಥಿತಿಯು ರಿಮಿನಿಯಲ್ಲಿ ನಡೆಯುತ್ತಿರುವ ಈ 45 ವರ್ಷಗಳಿಗೂ ಹೆಚ್ಚಿನ ಅವಧಿಯ ಸಮಾವೇಶಗಳ ಇತಿಹಾಸದಲ್ಲಿ ಮತ್ತೊಂದು ಮಹತ್ವದ ಘಟ್ಟವಾಗಲಿದೆ. ಪೂಜ್ಯ ಜಗದ್ಗುರು ಅವರು ಸಮಾವೇಶದ ಸ್ಥಳಗಳಿಗೆ ಭೇಟಿ ನೀಡಿ ಭಾಗವಹಿಸುವವರನ್ನು ಭೇಟಿಯಾಗಿ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳಲಿದ್ದಾರೆ. ನಗರದಲ್ಲಿನ ಅವರ ಉಳಿದ ಕಾರ್ಯಕ್ರಮಗಳಲ್ಲಿ, ಅಸ್ವಸ್ಥರು, ಅಂಗವಿಕಲರು ಮತ್ತು ಬಡತನದಲ್ಲಿ ಬದುಕುತ್ತಿದ್ದು ಕಾರಿತಾಸ್‌ನಿಂದ ನೆರವು ಪಡೆಯುತ್ತಿರುವ ಜನರನ್ನು ಭೇಟಿಯಾಗುವುದೂ ಸೇರಿದೆ. ಅವರ ಭೇಟಿಯು ಪಿಯಾಝಾಲೆ ದೆಲ್ ಪೋರ್ಟೊದಲ್ಲಿ ನಡೆಯುವ ಪವಿತ್ರ ಯೂಕರಿಸ್ಟ್ ಬಲಿಪೂಜೆಯೊಂದಿಗೆ ಸಮಾಪ್ತಿಯಾಗಲಿದೆ. ಅದನ್ನು ಪೂಜ್ಯ ಜಗದ್ಗುರು 14ನೇ ಲಿಯೋ ಅವರು ನೆರವೇರಿಸಲಿದ್ದಾರೆ.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

 

21 ಆಗಸ್ಟ್ 2026, 20:09