ಗಾಜಾದಲ್ಲಿ ಅಸ್ತವ್ಯಸ್ತಗೊಂಡಿರುವ ಜನಜೀವನದ ಕುರಿತು ಕಳವಳ ವ್ಯಕ್ತಪಡಿಸಿದ ವಿಶ್ವಸಂಸ್ಥೆ
ಲೇಖಕರು: ನೇತನ್ ಮಾರ್ಲೆ
ವಿಶ್ವಸಂಸ್ಥೆಯ ಮಾನವೀಯ ವ್ಯವಹಾರಗಳ ಸಮನ್ವಯ ಕಚೇರಿಯು, ಗಾಜಾದಲ್ಲಿ ನೆರವು ಕಾರ್ಯಗಳನ್ನು ವಿಸ್ತರಿಸಲು ಮತ್ತು ಆಶ್ರಯತಾಣಗಳನ್ನು ಸುಧಾರಿಸಲು ಮರದ ಸಾಮಗ್ರಿಗಳು, ಹಗ್ಗಗಳು, ಸೌರ ದೀಪಗಳು ಹಾಗೂ ಮೂಲಭೂತ ಉಪಕರಣಗಳನ್ನು ತುರ್ತಾಗಿ ಗಾಜಾಕ್ಕೆ ತಲುಪಿಸಬೇಕಾಗಿದೆ ಎಂದು ತಿಳಿಸಿದೆ. ಪ್ರಸ್ತುತ ನಡೆಯುತ್ತಿರುವ ಕಾರ್ಯಾಚರಣೆಗಳು ಜೀವ ರಕ್ಷಕ ಸೇವೆಗಳನ್ನು ಜನರು ಪಡೆಯುವುದಕ್ಕೂ ಅಡ್ಡಿಯಾಗುತ್ತಿವೆ ಎಂದು ಅದು ಹೇಳಿದೆ. ಕಳೆದ ವಾರ ಗಾಜಾ ನಗರದಲ್ಲಿ ನೆರವು ಸಂಸ್ಥೆಗಳು ಸುಮಾರು 3,000 ತಾತ್ಕಾಲಿಕ ಆಶ್ರಯತಾಣಗಳನ್ನು ಸುಧಾರಿಸಿದ್ದು, 9,000 ಕುಟುಂಬಗಳಿಗೆ ತುರ್ತು ಅಗತ್ಯದ ಸಾಮಗ್ರಿಗಳನ್ನು ವಿತರಿಸಿವೆ.
ಇದೇ ವೇಳೆ, ಗುರುವಾರ ಜೆರುಸಲೇಮಿನ ಉತ್ತರ ಭಾಗದಲ್ಲಿರುವ ನಿರಾಶ್ರಿತರ ಶಿಬಿರದಲ್ಲಿ ಇಸ್ರಾಯೇಲಿ ಸೇನೆ ನಡೆಸಿದ ಕಾರ್ಯಾಚರಣೆಯಲ್ಲಿ 16 ಪ್ಯಾಲೆಸ್ತೀನಿಯರು ಗಾಯಗೊಂಡಿದ್ದು, 60ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ.
ಪ್ಯಾಲೆಸ್ತೀನ್ ರೆಡ್ ಕ್ರೆಸೆಂಟ್ ಸೊಸೈಟಿಯ ಪ್ರಕಾರ, ಅದರ ಸಿಬ್ಬಂದಿ ವಿವಿಧ ರೀತಿಯಲ್ಲಿ ಗಾಯಗೊಂಡ 16 ಮಂದಿಗೆ ಚಿಕಿತ್ಸೆ ನೀಡಿದ್ದು, ಹಲವಾರು ರೋಗಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದ್ದಾರೆ.
ಗಾಜಾದಲ್ಲಿ, ಹಮಾಸ್ ಆಡಳಿತದ ಪತ್ರಿಕಾ ಕಚೇರಿಯು ಕಳೆದ 300 ದಿನಗಳಲ್ಲಿ ಇಸ್ರಾಯೇಲ್ ಕದನ ವಿರಾಮ ಒಪ್ಪಂದವನ್ನು 4,091 ಬಾರಿ ಉಲ್ಲಂಘಿಸಿದೆ ಎಂದು ಆರೋಪಿಸಿದೆ. ಈ ಅವಧಿಯಲ್ಲಿ 1,254 ಪ್ಯಾಲೆಸ್ತೀನಿಯರು ಮೃತಪಟ್ಟಿದ್ದು, 4,121 ಮಂದಿ ಗಾಯಗೊಂಡಿದ್ದಾರೆ ಎಂದು ಅದು ತಿಳಿಸಿದೆ.
ಗುರುವಾರವೇ ಯುನೈಟೆಡ್ ಅರಬ್ ಎಮಿರೇಟ್ಸ್, ಕತಾರ್, ಜೋರ್ಡಾನ್, ಇಂಡೋನೇಷ್ಯಾ, ಪಾಕಿಸ್ತಾನ, ಟರ್ಕಿ, ಸೌದಿ ಅರೇಬಿಯಾ ಮತ್ತು ಈಜಿಪ್ಟ್ ಜಂಟಿ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಗಾಜಾದಲ್ಲಿ ಮುಂದುವರಿಯುತ್ತಿರುವ 'ಇಸ್ರಾಯೇಲಿ ಉಲ್ಲಂಘನೆಗಳು' ಎಂದು ಅವು ವಿವರಿಸಿರುವ ಘಟನೆಗಳನ್ನು ಖಂಡಿಸಿವೆ.
ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).