ಹುಡುಕಿ

ಇಂಡೋನೇಷ್ಯಾದ ಫ್ಲೊರೆಸ್ ದ್ವೀಪದಲ್ಲಿ ಸ್ವರ್ಗಸ್ವೀಕಾರ ಮಹೋತ್ಸವದಂದು ಸಂಭವಿಸಿದ ಭೂಕಂಪದ ಬಳಿಕ, ಅವಶೇಷಗಳ ನಡುವೆ ಬದುಕುಳಿದವರಿಗಾಗಿ ರಕ್ಷಣಾ ತಂಡಗಳು ಶೋಧ ನಡೆಸುತ್ತಿವೆ. (AFP ಅಥವಾ ಪರವಾನಗಿದಾರರು) ಇಂಡೋನೇಷ್ಯಾದ ಫ್ಲೊರೆಸ್ ದ್ವೀಪದಲ್ಲಿ ಸ್ವರ್ಗಸ್ವೀಕಾರ ಮಹೋತ್ಸವದಂದು ಸಂಭವಿಸಿದ ಭೂಕಂಪದ ಬಳಿಕ, ಅವಶೇಷಗಳ ನಡುವೆ ಬದುಕುಳಿದವರಿಗಾಗಿ ರಕ್ಷಣಾ ತಂಡಗಳು ಶೋಧ ನಡೆಸುತ್ತಿವೆ. (AFP ಅಥವಾ ಪರವಾನಗಿದಾರರು)  (AFP or licensors)

ಇಂಡೋನೇಷ್ಯಾದಲ್ಲಿ ಭೂಕಂಪ: 38 ಮಂದಿ ಸಾವು; ಕಕಥೋಲಿಕರ ಹಬ್ಬದ ಕಾರ್ಯಕ್ರಮ ರದ್ದು

ಪ್ರಬಲ 7.7 ತೀವ್ರತೆಯ ಭೂಕಂಪವು ಪ್ರಧಾನವಾಗಿ ಕಥೋಲಿಕರು ವಾಸಿಸುವ ಇಂಡೋನೇಷ್ಯಾದ ಫ್ಲೊರೆಸ್ ದ್ವೀಪವನ್ನು ಅಪ್ಪಳಿಸಿದ ಬಳಿಕ ಕನಿಷ್ಠ 38 ಮಂದಿ ಮೃತಪಟ್ಟಿದ್ದು, ಸಾವಿರಾರು ಜನರು ಸ್ಥಳಾಂತರಗೊಂಡಿದ್ದಾರೆ. ಲಬುವಾನ್ ಬಾಜೋ ಧರ್ಮಕ್ಷೇತ್ರವು ‘ಗೋಲೊ ಕೋಯೆ ಮರಿಯಾ ಅಸ್ಸುಂಪ್ತಾ ನುಸಾಂತಾರ’ ಉತ್ಸವದ ಸಮಾರೋಪ ಕಾರ್ಯಕ್ರಮಗಳನ್ನು ರದ್ದುಗೊಳಿಸಿದೆ. ಭೂಕಂಪದಿಂದ ಪ್ರಾರ್ಥನಾ ಮಂದಿರ ಮತ್ತು ಸ್ವಾಗತ ಸಭಾಂಗಣಗಳು ಅಸುರಕ್ಷಿತವಾದ ಕಾರಣ, ಲೆದಲೇರೊದಲ್ಲಿ ನಡೆಯಬೇಕಿದ್ದ ಪ್ರಮುಖ ಧಾರ್ಮಿಕ ಸಮಾರಂಭವನ್ನು ಹೊರಾಂಗಣದಲ್ಲಿ ನಡೆಸಲಾಯಿತು.

ಲೇಖಕರು: ವಂ. ಗುರು ಕಸ್ಮಿರ್ ನೇಮಾ, SVD – ಲಬುವಾನ್ ಬಾಜೋ, ಇಂಡೋನೇಷ್ಯಾ

ಆಗಸ್ಟ್ 15, ಶನಿವಾರ ಮುಂಜಾನೆ ಇಂಡೋನೇಷ್ಯಾದ ಫ್ಲೊರೆಸ್ ದ್ವೀಪವನ್ನು ಪ್ರಬಲ 7.7 ತೀವ್ರತೆಯ ಭೂಕಂಪ ಅಪ್ಪಳಿಸಿದ ಬಳಿಕ ಕನಿಷ್ಠ 38 ಮಂದಿ ಮೃತಪಟ್ಟಿದ್ದು, ಸಾವಿರಾರು ಜನರು ಸ್ಥಳಾಂತರಗೊಂಡಿದ್ದಾರೆ. ಭೂಕಂಪದಿಂದ ಹಲವು ಪ್ರದೇಶಗಳಲ್ಲಿ ವ್ಯಾಪಕ ಹಾನಿ ಸಂಭವಿಸಿದೆ. ಭೂಕುಸಿತಗಳು, ಕಟ್ಟಡಗಳ ಕುಸಿತ ಮತ್ತು ರಸ್ತೆಗಳು ಬಂದ್ ಆಗಿರುವ ವರದಿಗಳು ವಿವಿಧ ಜಿಲ್ಲೆಗಳಿಂದ ಬಂದಿವೆ. ಹಾನಿಗೊಳಗಾದ ಮೂಲಸೌಕರ್ಯ ಮತ್ತು ಕೆಲವು ಸಮುದಾಯಗಳಿಗೆ ತಲುಪಲು ಇರುವ ಕಷ್ಟದಿಂದ ರಕ್ಷಣಾ ಕಾರ್ಯಾಚರಣೆಗಳು ಮತ್ತಷ್ಟು ಸವಾಲಿನದ್ದಾಗಿವೆ.

ಸ್ವರ್ಗ ಸ್ವೀಕೃತ ಮಾತೆಯ ಹಬ್ಬದ ದಿನವೇ ಭೂಕಂಪ

ಇಂಡೋನೇಷ್ಯಾದ ಹವಾಮಾನ, ಹವಾಮಾನಶಾಸ್ತ್ರ ಮತ್ತು ಭೂಭೌತಶಾಸ್ತ್ರ ಸಂಸ್ಥೆ (BMKG) ಪ್ರಕಾರ, ಸ್ಥಳೀಯ ಕಾಲಮಾನ ಬೆಳಿಗ್ಗೆ 5:58ಕ್ಕೆ ಭೂಕಂಪ ಸಂಭವಿಸಿದೆ. ಪೂರ್ವ ನುಸಾ ತೆಂಗಾರಾ ಪ್ರಾಂತ್ಯದ ಎಂಬಾಯ್ ಪಟ್ಟಣದ ಈಶಾನ್ಯಕ್ಕೆ ಸುಮಾರು 30 ಕಿಲೋಮೀಟರ್ ದೂರದಲ್ಲಿ ಇದರ ಕೇಂದ್ರಬಿಂದು ಇತ್ತು. ಈ ಭೂಕಂಪವು ಈ ಪ್ರದೇಶದಲ್ಲಿರುವ ಸಕ್ರಿಯ ಭೂಗರ್ಭ ಬಿರುಕು ವ್ಯವಸ್ಥೆಗಳಲ್ಲಿ ಒಂದಾದ ಫ್ಲೊರೆಸ್ ಬ್ಯಾಕ್-ಆರ್ಕ್ ಥ್ರಸ್ಟ್ ಪ್ರದೇಶದಲ್ಲಿ ಸಂಭವಿಸಿದೆ.

ಕರಾವಳಿ ಪ್ರದೇಶಗಳ ನಿವಾಸಿಗಳು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸ್ವಲ್ಪ ಸಮಯಕ್ಕೆ ಸುನಾಮಿ ಎಚ್ಚರಿಕೆ ನೀಡಲಾಗಿತ್ತು. ಬಳಿಕ ಆ ಎಚ್ಚರಿಕೆಯನ್ನು ಹಿಂಪಡೆಯಲಾಯಿತು. ಮಧ್ಯಾಹ್ನದ ವೇಳೆಗೆ ಕನಿಷ್ಠ 31 ಪಶ್ಚಾತ್‌ ಕಂಪನಗಳು ದಾಖಲಾಗಿದ್ದವು ಎಂದು BMKG ತಿಳಿಸಿತು.

ಕಥೋಲಿಕರು ಕನ್ಯಾಮಾತೆ ಮರಿಯಮ್ಮನ ಸ್ವರ್ಗಸ್ವೀಕಾರ ಮಹೋತ್ಸವವನ್ನು ಆಚರಿಸಲು ಸಿದ್ಧತೆ ನಡೆಸುತ್ತಿದ್ದ ಸಮಯದಲ್ಲೇ ಭೂಕಂಪ ಸಂಭವಿಸಿತು. ಸಿಕ್ಕಾ ಪ್ರದೇಶದ ರಿತಾಪಿರೆಟ್  ಮಹಾಗುರುತರಬೇತಿಕೇಂದ್ರದಲ್ಲಿ, ಕಟ್ಟಡವು ತೀವ್ರವಾಗಿ ನಡುಗಿದಾಗ ಗುರುದೀಕ್ಷಾಭ್ಯರ್ಥಿಗಳು , ಯಾಜಕರು ಮತ್ತು ಧಾರ್ಮಿಕ ಸಹೋದರಿಯರು ಹೊರಗೆ ಓಡಿಬಂದರು. ಕಟ್ಟಡದ ಕೆಲವು ಭಾಗಗಳಿಗೆ ಹಾನಿಯಾಗಿದೆ. ಸ್ಥಳೀಯ ವರದಿಗಳ ಪ್ರಕಾರ, ಎರಡನೇ ಮಹಡಿಯ ಕಿಟಕಿಯಿಂದ ಜಿಗಿದು ಹೊರಬರಲು ಪ್ರಯತ್ನಿಸಿದ ಒಬ್ಬ ಯಾಜಕರ ಕಾಲು ಮುರಿದಿದೆ.

ಲೆದಲೇರೊದಲ್ಲಿ ಹೊರಾಂಗಣದಲ್ಲಿ ಶಾಶ್ವತ ವ್ರತ ಸಮರ್ಪಣೆ

ಭೂಕಂಪವು ಲೆದಲೇರೊದಲ್ಲಿನ ಸಂತ ಪೌಲ ಮಹಾಗುರುತರಬೇತಿಕೇಂದ್ರದಲ್ಲಿ ನಡೆಯಬೇಕಿದ್ದ ಶಾಶ್ವತ ವ್ರತ ಸಮರ್ಪಣೆಯ ಆಚರಣೆಯನ್ನೂ ತೀವ್ರವಾಗಿ ಬದಲಿಸಿತು. ಸ್ವರ್ಗಾರೋಹಣದ ಮಹೋತ್ಸವದಂದು 27 ದಿವ್ಯವಾಕ್ಯ ಸಭೆಯ ಧರ್ಮಶಿಕ್ಷಣಾರ್ಥಿಗಳು ತಮ್ಮ ಅಂತಿಮ ಸಮರ್ಪಣೆಯನ್ನು ಮಾಡುವ ಕಾರ್ಯಕ್ರಮ ನಿಗದಿಯಾಗಿತ್ತು.ಹಿಂದಿನ ವರ್ಷಗಳಂತೆ ಈ ಬಾರಿ ಸಮಾರಂಭವನ್ನು ಧರ್ಮಶಿಕ್ಷಣಾಲಯದ ಪ್ರಾರ್ಥನಾ ಮಂದಿರದ ಒಳಗೆ ನಡೆಸಲು ಸಾಧ್ಯವಾಗಲಿಲ್ಲ. ಭೂಕಂಪದಿಂದ ಮೇಲ್ಛಾವಣಿಯ ಒಂದು ಭಾಗ ಕುಸಿದ ಕಾರಣ ಪ್ರಾರ್ಥನಾ ಮಂದಿರವನ್ನು ಬಳಸಲಾಗದ ಸ್ಥಿತಿ ಉಂಟಾಯಿತು.

ಸ್ವಾಗತ ಸಮಾರಂಭಕ್ಕಾಗಿ ಸಿದ್ಧಪಡಿಸಲಾಗಿದ್ದ ಸಭಾಂಗಣವೂ ಹಾನಿಗೊಳಗಾಯಿತು. ಮೇಲ್ಛಾವಣಿಯಿಂದ ಬಿದ್ದ ಅವಶೇಷಗಳಿಂದಾಗಿ ಅದನ್ನು ಬಳಸುವುದು ಅಪಾಯಕಾರಿಯಾಯಿತು. ಹೀಗಾಗಿ ಪವಿತ್ರ ಬಲಿಪೂಜೆಯನ್ನು ಸಭಾಂಗಣದ ಮುಂಭಾಗದಲ್ಲಿ ತಾತ್ಕಾಲಿಕ ಗುಡಾರದ ಕೆಳಗೆ ಹೊರಾಂಗಣದಲ್ಲಿ ನಡೆಸಲಾಯಿತು. ಮುಂದಿನ ಭೂಕಂಪನಗಳ ಸಂದರ್ಭದಲ್ಲಿ ಎಚ್ಚರಿಕೆಯಿಂದಿರಲು ಈ ವ್ಯವಸ್ಥೆಯು ಸಹಾಯ ಮಾಡಿತು. ಬೆಳಿಗ್ಗೆ 8:30ಕ್ಕೆ ನಿಗದಿಯಾಗಿದ್ದ ಪವಿತ್ರ ಬಲಿಪೂಜೆಯನ್ನು ಪರಿಸ್ಥಿತಿಯನ್ನು ಪರಿಶೀಲಿಸಿ ಅಗತ್ಯ ಸಿದ್ಧತೆಗಳನ್ನು ಪೂರ್ಣಗೊಳಿಸಲು ಒಂದು ಗಂಟೆ ಮುಂದೂಡಿ ಬೆಳಿಗ್ಗೆ 9:30ಕ್ಕೆ ಆರಂಭಿಸಲಾಯಿತು.

ಪವಿತ್ರ ಬಲಿಪೂಜೆಯ ಸಂದರ್ಭದಲ್ಲಿ ಯಾವುದೇ ಪಶ್ಚಾತ್‌ ಕಂಪನ ಸಂಭವಿಸಲಿಲ್ಲ. ಆದರೆ ಬಲಿಪೂಜೆಗೆ ಮೊದಲು ಮತ್ತು ನಂತರ ಮತ್ತಷ್ಟು ಕಂಪನಗಳು ಸಂಭವಿಸಿದವು ಎಂದು ವರದಿಯಾಗಿದೆ. ಅಡಚಣೆ ಮತ್ತು ಅನಿಶ್ಚಿತತೆಯ ನಡುವೆಯೂ 27 ಗುರುದೀಕ್ಷಾಭ್ಯರ್ಥಿಗಳು  ತಮ್ಮ ಶಾಶ್ವತ ವ್ರತ ಸಮರ್ಪಣೆಯನ್ನು ನೆರವೇರಿಸಿದರು. ಫ್ಲೊರೆಸ್ ಜನರು ಸಂಕಷ್ಟವನ್ನು ಎದುರಿಸುತ್ತಿರುವ ಈ ಸಂದರ್ಭದಲ್ಲಿ ತಮ್ಮ ಮಿಷನರಿ ಕರೆಯನ್ನು ದೇವರ ಕೈಗಳಿಗೆ ಒಪ್ಪಿಸಿದರು.

ಭೂಕಂಪದ ತಕ್ಷಣದ ಪರಿಣಾಮಗಳನ್ನು ಧರ್ಮಸಭೆಯು ಎದುರಿಸುತ್ತಿದ್ದ ಸಂದರ್ಭದಲ್ಲಿ ಈ ಆಚರಣೆಯು ನಂಬಿಕೆ ಮತ್ತು ದೃಢತೆಯ ಪ್ರಬಲ ಸಂಕೇತವಾಗಿ ಪರಿಣಮಿಸಿತು. ಹೊಸದಾಗಿ ಶಾಶ್ವತ ವ್ರತ ಸಮರ್ಪಣೆ ಮಾಡಿದ 27 ದಿವ್ಯವಾಕ್ಯ ಮಿಷನರಿಗಳಿಗೆ ಧರ್ಮಸಭೆಯು ಪ್ರಾರ್ಥನೆ ಮತ್ತು ಶುಭಾಶಯಗಳನ್ನು ಅರ್ಪಿಸಿತು. ಅವರು ತಮ್ಮ ಕರೆಯಲ್ಲೂ ಮಿಷನರಿ ಬದ್ಧತೆಯಲ್ಲೂ ನಿಷ್ಠೆಯಿಂದ ಮುಂದುವರಿಯುವಂತೆ ಪ್ರಾರ್ಥಿಸಲಾಯಿತು. ಅದೇ ಸಂದರ್ಭದಲ್ಲಿ ಫ್ಲೊರೆಸ್ ಜನರಿಗಾಗಿ, ವಿಶೇಷವಾಗಿ ಗಾಯಗೊಂಡವರಿಗಾಗಿ, ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗಾಗಿ ಮತ್ತು ಮನೆ-ಉದ್ಯೋಗ ಜೀವನೋಪಾಯಗಳಿಗೆ ಹಾನಿಯಾದವರಿಗಾಗಿ ಸಮುದಾಯವು ಪ್ರಾರ್ಥಿಸಿತು.

ಗೋಲೊ ಕೋಯೆ ಉತ್ಸವವನ್ನು ರದ್ದುಗೊಳಿಸಿದ ಧರ್ಮಕ್ಷೇತ್ರ

ಭೂಕಂಪ ಸಂಭವಿಸಿದ ಕೆಲವೇ ಗಂಟೆಗಳ ಬಳಿಕ, ಲಬುವಾನ್ ಬಾಜೋ  ಧರ್ಮಕ್ಷೇತ್ರವು 2026ರ ಗೋಲೊ ಕೋಯೆ ಮರಿಯಾ ಅಸ್ಸುಂಪ್ತಾ ನುಸಾಂತಾರ ಉತ್ಸವದ ಉಳಿದ ಕಾರ್ಯಕ್ರಮಗಳನ್ನು ರದ್ದುಗೊಳಿಸುವುದಾಗಿ ಘೋಷಿಸಿತು. ಸಮಾರೋಪದ ಪವಿತ್ರ ಬಲಿಪೂಜೆ, ಸಂಗೀತ ಕಾರ್ಯಕ್ರಮ ಮತ್ತು ಸಾಂಸ್ಕೃತಿಕ ಪ್ರದರ್ಶನಗಳು ಇದರಲ್ಲಿ ಸೇರಿದ್ದವು. ವಿಪತ್ತು ಮತ್ತು ಸಾರ್ವಜನಿಕ ಸುರಕ್ಷತೆಯ ಕುರಿತ ಕಳವಳವನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಧರ್ಮಾಧ್ಯಕ್ಷ ಮ್ಯಾಕ್ಸಿಮಸ್ ರೆಗುಸ್ ತಿಳಿಸಿದರು.

“ಆಚರಣೆಯನ್ನು ಮುಂದುವರಿಸದಿರಲು, ಬದಲಾಗಿ ಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿರುವವರೊಂದಿಗೆ ಒಗ್ಗಟ್ಟಿನಿಂದ ನಿಲ್ಲಲು ಮತ್ತು ಅವರೊಂದಿಗೆ ಸಾಗಲು ನಾವು ನಿರ್ಧರಿಸಿದ್ದೇವೆ, ಕಥೋಲಿಕರು ಶಾಂತವಾಗಿರಬೇಕು, ಅಧಿಕೃತ ಸೂಚನೆಗಳನ್ನು ಪಾಲಿಸಬೇಕು ಮತ್ತು ಉತ್ಸವದ ಆತ್ಮವನ್ನು ಕರುಣೆಯ ನೈಜ ಕಾರ್ಯಗಳಾಗಿ ಪರಿವರ್ತಿಸಬೇಕು ಎಂದು ಧರ್ಮಾಧ್ಯಕ್ಷರು ಮನವಿ ಮಾಡಿದರು.

“ಉತ್ಸವ ನಿಲ್ಲಬಹುದು; ಆದರೆ ಸಹೋದರತ್ವ, ಒಗ್ಗಟ್ಟು ಮತ್ತು ಕಾಳಜಿಯ ಆತ್ಮ ಮುಂದುವರಿಯಲೇಬೇಕು,” ಎಂದು ಅವರು ಹೇಳಿದರು.

ಆಚರಣೆಯ ಬದಲು ಒಗ್ಗಟ್ಟಿನ ಸಾಕ್ಷ್ಯ

ಐದನೇ ವರ್ಷಕ್ಕೆ ಕಾಲಿಟ್ಟಿರುವ ಗೋಲೊ ಕೋಯೆ ಉತ್ಸವವು ಪೂರ್ವ ಇಂಡೋನೇಷ್ಯಾದ ಪ್ರಮುಖ ಕ್ಯಾಥೋಲಿಕ ಮತ್ತು ಸಾಂಸ್ಕೃತಿಕ ಆಚರಣೆಗಳಲ್ಲಿ ಒಂದಾಗಿದೆ. ಈ ವರ್ಷದ “ಒಟ್ಟಾಗಿ ನಡೆದು, ಭೂಮಿಯನ್ನು ಗುಣಪಡಿಸೋಣ” ಎಂಬ ಧ್ಯೇಯವು ಭೂಕಂಪದ ಹಿನ್ನೆಲೆಯಲ್ಲಿ ಇನ್ನಷ್ಟು ಆಳವಾದ ಅರ್ಥವನ್ನು ಪಡೆದುಕೊಂಡಿತು. ಯೋಜಿಸಲಾಗಿದ್ದ ಸಂಭ್ರಮಾಚರಣೆಗಳು ಪ್ರಾರ್ಥನೆ ಮತ್ತು ಒಗ್ಗಟ್ಟಿನ ಕಾರ್ಯಗಳಿಗೆ ದಾರಿ ಮಾಡಿಕೊಟ್ಟವು.

ಭೂಕಂಪವು 1992ರಲ್ಲಿ ಫ್ಲೊರೆಸ್ ದ್ವೀಪವನ್ನು ತತ್ತರಿಸಿದ ಭೀಕರ ಭೂಕಂಪ ಮತ್ತು ಸುನಾಮಿಯ ನೆನಪುಗಳನ್ನೂ ಮರುಜಾಗೃತಗೊಳಿಸಿದೆ. ಆ ದುರಂತದಲ್ಲಿ ಸುಮಾರು 2,500 ಮಂದಿ ಮೃತಪಟ್ಟಿದ್ದರು. ಫ್ಲೊರೆಸ್‌ನಾದ್ಯಂತ ರಕ್ಷಣಾ ಮತ್ತು ಮಾನವೀಯ ಕಾರ್ಯಾಚರಣೆಗಳು ಮುಂದುವರಿಯುತ್ತಿರುವ ಸಂದರ್ಭದಲ್ಲಿ, ಧರ್ಮಸಭೆಯ ಸಮುದಾಯಗಳು ಸುರಕ್ಷತೆ, ಪ್ರಾರ್ಥನೆ ಮತ್ತು ಸಂತ್ರಸ್ತರೊಂದಿಗೆ ಒಗ್ಗಟ್ಟಿಗೆ ಆದ್ಯತೆ ನೀಡುವಂತೆ ಪ್ರೋತ್ಸಾಹಿಸಲಾಗಿದೆ.

ಮುಂದಿನ ಪಶ್ಚಾತ್‌ ಕಂಪನಗಳ ಸಾಧ್ಯತೆ ಇರುವುದರಿಂದ ನಿವಾಸಿಗಳು ಎಚ್ಚರಿಕೆಯಿಂದಿರಬೇಕು, ಹಾನಿಗೊಳಗಾದ ಕಟ್ಟಡಗಳಿಂದ ದೂರವಿರಬೇಕು ಮತ್ತು ಅಧಿಕೃತ ಮಾಹಿತಿಯನ್ನು ಮಾತ್ರ ಅನುಸರಿಸಬೇಕು ಎಂದು ಅಧಿಕಾರಿಗಳು ಸೂಚಿಸಿದ್ದಾರೆ. ಫ್ಲೊರೆಸ್‌ನ ಕಥೋಲಿಕ ಸಮುದಾಯಕ್ಕೆ ಈ ವರ್ಷದ ಪವಿತ್ರ ಕನ್ಯಾಮಾತೆ ಮರಿಯಮ್ಮನ ಸ್ವರ್ಗಾರೋಹಣದ ಮಹೋತ್ಸವವು ಮೊದಲೇ ಯೋಜಿಸಿದ್ದ ಸಂಭ್ರಮಾಚರಣೆಗಳ ಮೂಲಕವಲ್ಲ, ಬದಲಾಗಿ ನಂಬಿಕೆ, ದೃಢತೆ ಮತ್ತು ಸಂಕಷ್ಟದಲ್ಲಿರುವವರೊಂದಿಗೆ ಒಗ್ಗಟ್ಟಿನಿಂದ ನಿಲ್ಲುವ ಕರೆಯಾಗಿ ಪರಿಣಮಿಸಿದೆ.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

 

15 ಆಗಸ್ಟ್ 2026, 17:16