ಇಂಡೋನೇಷ್ಯಾ: ಭೂಕಂಪದ ಬಳಿಕ 8,000ಕ್ಕೂ ಹೆಚ್ಚು ಮಕ್ಕಳ ಶಿಕ್ಷಣಕ್ಕೆ ಅಡ್ಡಿ
ವ್ಯಾಟಿಕನ್ ವರದಿ
ಆಗಸ್ಟ್ 15, ಶನಿವಾರದಂದು ಇಂಡೋನೇಷ್ಯಾದಲ್ಲಿ, ವಿಶೇಷವಾಗಿ ಫ್ಲೊರೆಸ್ ದ್ವೀಪದಲ್ಲಿ ಸಂಭವಿಸಿದ 7.7 ತೀವ್ರತೆಯ ಭೂಕಂಪದಿಂದ ಮೃತಪಟ್ಟವರ ಸಂಖ್ಯೆ ಕನಿಷ್ಠ 68ಕ್ಕೆ ಏರಿದೆ. 213 ಮಂದಿ ಗಾಯಗೊಂಡಿದ್ದಾರೆ. ಸುಮಾರು 13,000 ಜನರು ತಮ್ಮ ಮನೆಗಳನ್ನು ತೊರೆದು ಸ್ಥಳಾಂತರಗೊಳ್ಳುವಂತಾಗಿದೆ. ಭೂಕುಸಿತಗಳಿಂದ ಬಾಧಿತವಾಗಿರುವ ಮತ್ತು ಹೊರಜಗತ್ತಿನ ಸಂಪರ್ಕ ಕಡಿತಗೊಂಡಿರುವ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆಗಳು ಮುಂದುವರಿದಿವೆ. ಆಗಸ್ಟ್ 18ರ ಬೆಳಿಗ್ಗೆ ಸುಮಾತ್ರಾ ಕರಾವಳಿಯ ಸಮುದ್ರದಲ್ಲಿ 6.1 ತೀವ್ರತೆಯ ಮತ್ತೊಂದು ಭೂಕಂಪ ದಾಖಲಾಗಿದೆ. ಇಂಡೋನೇಷ್ಯಾದ ಭೂಭೌತಿಕ ಸಂಸ್ಥೆಯ ಪ್ರಕಾರ, ಭೂಕಂಪವು 29 ಕಿಲೋಮೀಟರ್‌ಗಳಷ್ಟು ಆಳದಲ್ಲಿ ಸಂಭವಿಸಿದೆ.
ಮಕ್ಕಳ ಪರಿಸ್ಥಿತಿ ಕುರಿತು ಆತಂಕ
ಭೂಕಂಪಗಳ ನಂತರ ಮಕ್ಕಳ ಪರಿಸ್ಥಿತಿಯ ಕುರಿತು ವಿಶೇಷ ಆತಂಕ ವ್ಯಕ್ತವಾಗಿದೆ. ಸೇವ್ ದಿ ಚಿಲ್ಡ್ರನ್ ಪ್ರಕಾರ, ಪೂರ್ವ ನುಸಾ ತೆಂಗಾರಾ ಪ್ರಾಂತ್ಯದಲ್ಲಿ 8,000ಕ್ಕೂ ಹೆಚ್ಚು ಮಕ್ಕಳು ಮತ್ತು ಹದಿಹರೆಯದವರು ಶಾಲೆಗೆ ಹಾಜರಾಗಲು ಸಾಧ್ಯವಾಗದೆ, ಅವರ ಸುರಕ್ಷತೆಗೆ ಸಂಬಂಧಿಸಿದ ಅಪಾಯಗಳು ಹೆಚ್ಚುತ್ತಿವೆ. ಭೂಕಂಪ ಮತ್ತು ಅದರ ನಂತರ ಸಂಭವಿಸಿದ ಅನೇಕ ಕಂಪನಗಳಿಂದ 900ಕ್ಕೂ ಹೆಚ್ಚು ಮನೆಗಳು ಹಾನಿಗೊಳಗಾಗಿವೆ. ಇದರ ಜೊತೆಗೆ, ಕನಿಷ್ಠ 87 ಶಾಲೆಗಳು ಮತ್ತು 18 ಆರೋಗ್ಯ ಕೇಂದ್ರಗಳೂ ಹಾನಿಗೊಳಗಾದ ಮೂಲಸೌಕರ್ಯಗಳಲ್ಲಿವೆ.
ಎಲ್ ನಿನೊ ವಿದ್ಯಮಾನಕ್ಕೆ ಸಂಬಂಧಿಸಿದ ಬರಗಾಲದಿಂದ ಹಾಗೂ ಲೆವೊತೋಬಿ ಪರ್ವತಕ್ಕೆ ಸಂಬಂಧಿಸಿದ ಜ್ವಾಲಾಮುಖಿ ಅಪಾಯಗಳಿಂದ ಈಗಾಗಲೇ ಸಂಕಷ್ಟದಲ್ಲಿರುವ ಸಮುದಾಯಗಳ ಮೇಲೆಯೇ ಭೂಕಂಪದ ಪರಿಣಾಮ ಉಂಟಾಗಿದೆ. ಇದರಿಂದ ಮಕ್ಕಳ ಆರೋಗ್ಯ, ಶಿಕ್ಷಣ ಮತ್ತು ಮಾನಸಿಕ-ಸಾಮಾಜಿಕ ಕ್ಷೇಮದ ಮೇಲಿನ ಸಂಕಷ್ಟ ಮತ್ತಷ್ಟು ಗಂಭೀರವಾಗಿದೆ.
“ಅತಿ ಹೆಚ್ಚು ಅಪಾಯದಲ್ಲಿರುವವರಲ್ಲಿ ಮಕ್ಕಳು ಸೇರಿದ್ದಾರೆ”
ಸೇವ್ ದಿ ಚಿಲ್ಡ್ರನ್, ಸ್ಥಳೀಯ ಸಂಸ್ಥೆಯಾದ CIS (Circle of Imagine Society) Timor ಜೊತೆಯಲ್ಲಿ ಕುಟುಂಬಗಳ ಅಗತ್ಯಗಳನ್ನು ಪರಿಶೀಲಿಸುತ್ತಿದ್ದು, ಪರಿಹಾರ ಕಾರ್ಯಗಳನ್ನು ಆರಂಭಿಸಲು ಸಿದ್ಧತೆ ನಡೆಸುತ್ತಿದೆ. ಶಿಕ್ಷಣಕ್ಕೆ ಮರುಪ್ರವೇಶ ಕಲ್ಪಿಸುವುದು ಮತ್ತು ಕುಟುಂಬಗಳ ಜೀವನೋಪಾಯವನ್ನು ಬೆಂಬಲಿಸುವುದು ಸಂಸ್ಥೆಯ ಪ್ರಮುಖ ಆದ್ಯತೆಗಳಾಗಿವೆ.
“ಅತಿ ಹೆಚ್ಚು ಅಪಾಯದಲ್ಲಿರುವವರಲ್ಲಿ ಮಕ್ಕಳು ಸೇರಿದ್ದಾರೆ,” ಎಂದು ಇಂಡೋನೇಷ್ಯಾದ ಸೇವ್ ದಿ ಚಿಲ್ಡ್ರನ್‌ನ ಮಾನವೀಯ ಪ್ರತಿಕ್ರಿಯೆ ಮತ್ತು ಸ್ಥೈರ್ಯ ವಿಭಾಗದ ನಿರ್ದೇಶಕ ಫದ್ಲಿ ಉಸ್ಮಾನ್ ಒತ್ತಿಹೇಳಿದರು. ತಕ್ಷಣದ ಪರಿಹಾರ ಕಾರ್ಯಗಳ ಜೊತೆಗೆ, ನಷ್ಟದ ಅನುಭವ, ಅಪೌಷ್ಟಿಕತೆ, ಬಾಲಕಾರ್ಮಿಕತೆ, ಬಾಲ್ಯವಿವಾಹ ಮತ್ತು ಮಕ್ಕಳ ರಕ್ಷಣೆಗೆ ಸಂಬಂಧಿಸಿದ ಇತರ ಅಪಾಯಗಳನ್ನು ಎದುರಿಸಲು ದೀರ್ಘಕಾಲೀನ ಕ್ರಮಗಳೂ ಅಗತ್ಯವಿದೆ ಎಂದು ಅವರು ಎಚ್ಚರಿಸಿದರು.
ಕರಿತಸ್ ನೆರವಿನ ಕಾರ್ಯಗಳನ್ನು ಸಜ್ಜುಗೊಳಿಸುತ್ತಿದೆ
ಕರಿತಸ್ ಇಂಡೋನೇಷ್ಯಾ, ಭೂಕಂಪದಿಂದ ಬಾಧಿತವಾಗಿರುವ ಧರ್ಮಕ್ಷೇತ್ರಗಳಲ್ಲಿನ ಕಥೋಲಿಕ ಧರ್ಮಸಭೆಯ ಮಾನವೀಯ ನೆರವು ಜಾಲವನ್ನು ಸಜ್ಜುಗೊಳಿಸಿದೆ. ವಿಶೇಷವಾಗಿ ರುಟೆಂಗ್, ಲಾಬುವಾನ್ ಬಾಜೊ, ಕುಪಾಂಗ್, ಮೌಮೆರೆ ಮತ್ತು ಎಂಡೆ ಧರ್ಮಕ್ಷೇತ್ರಗಳೊಂದಿಗೆ ಸಮನ್ವಯ ಸಾಧಿಸಲಾಗುತ್ತಿದೆ. ಸ್ವಯಂಸೇವಕರು ಮತ್ತು ಧರ್ಮಕ್ಷೇತ್ರೀಯ ತಂಡಗಳು ಈಗಾಗಲೇ ಜನರಿಗೆ ನೆರವು ನೀಡುತ್ತಿದ್ದು, ಸ್ಥಳಾಂತರ ಕಾರ್ಯಗಳಲ್ಲಿಯೂ ಪಾಲ್ಗೊಳ್ಳುತ್ತಿವೆ. ಸ್ಥಳೀಯ ಸಮುದಾಯಗಳ ಅಗತ್ಯಗಳ ಕುರಿತು ಧರ್ಮಕೇಂದ್ರಗಳು ಮಾಹಿತಿಯನ್ನು ಸಂಗ್ರಹಿಸುತ್ತಿವೆ. ತುರ್ತಾಗಿ ಅಗತ್ಯವಿರುವ ನೆರವುಗಳಲ್ಲಿ ಕುಡಿಯುವ ನೀರು, ಆಹಾರ, ಆಶ್ರಯ ಸಾಮಗ್ರಿಗಳು, ಸ್ವಚ್ಛತಾ ಕಿಟ್‌ಗಳು, ಆರೋಗ್ಯ ಸೇವೆ ಮತ್ತು ಅತ್ಯಂತ ದುರ್ಬಲ ಸ್ಥಿತಿಯಲ್ಲಿರುವವರಿಗೆ ನೆರವು ಸೇರಿವೆ. ವಿಶೇಷವಾಗಿ ಮಕ್ಕಳು, ವೃದ್ಧರು, ಗರ್ಭಿಣಿಯರು ಮತ್ತು ಅಂಗವಿಕಲರ ಅಗತ್ಯಗಳಿಗೆ ಆದ್ಯತೆ ನೀಡಲಾಗುತ್ತಿದೆ.
“ಒಂದು ಧರ್ಮಸಭೆ, ಒಂದು ಪ್ರತಿಕ್ರಿಯೆ” ಎಂಬ ತತ್ವದ ಆಧಾರದ ಮೇಲೆ ಈ ನೆರವು ಕಾರ್ಯ ನಡೆಯುತ್ತಿದೆ. ಕಾರಿತಾಸ್ ಇಂಡೋನೇಷ್ಯಾದ ನಿರ್ದೇಶಕರಾದ ವಂ.ಗುರು ಫ್ರೆಡಿ ರಾಂತೆ ತರುಕ್ ವಿವರಿಸಿದಂತೆ, ಧರ್ಮಕ್ಷೇತ್ರಗಳು, ಧರ್ಮಕೇಂದ್ರಗಳು, ಸ್ವಯಂಸೇವಕರು ಮತ್ತು ಧರ್ಮಸಭೆಯ ವಿವಿಧ ಸಂಸ್ಥೆಗಳು ಒಟ್ಟಾಗಿ ಸಜ್ಜುಗೊಂಡು “ಮಾನವೀಯ ಪರಿಸ್ಥಿತಿಗೆ ತ್ವರಿತವಾಗಿ ಮತ್ತು ಪರಿಣಾಮಕಾರಿಯಾಗಿ ಪ್ರತಿಕ್ರಿಯಿಸುವಂತೆ” ಕಾರ್ಯನಿರ್ವಹಿಸುತ್ತಿವೆ. ಇದರ ಮೂಲಕ ನೆರವು ಅಗತ್ಯವಿರುವ ಬಾಧಿತ ಸಮುದಾಯಗಳಿಗೆ ಶೀಘ್ರವಾಗಿ ತಲುಪುವಂತೆ ಮಾಡಲಾಗುತ್ತಿದೆ.
ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).