ರಿಮಿನಿ ಸಭೆಯಲ್ಲಿ ‘ವ್ಯಾಕುಲ ಸಹೋದರಿಯರ ಸ್ನೇಹ ಮತ್ತು ಭರವಸೆಯ ಸಾಕ್ಷ್ಯ
ಲೇಖಕರು: ಫ್ರಾನ್ಚೆಸ್ಕಾ ಮೆರ್ಲೊ – ರಿಮಿನಿ
ಜನರ ನಡುವಿನ ಸ್ನೇಹಕ್ಕಾಗಿ ನಡೆಯುವ 47ನೇ ರಿಮಿನಿ ಸಭೆಯು ರಿಮಿನಿ ಎಕ್ಸ್‌ಪೋ ಕೇಂದ್ರದಲ್ಲಿ ತನ್ನ ಬಾಗಿಲುಗಳನ್ನು ತೆರೆದಿದೆ. ಆರು ದಿನಗಳ ಕಾಲ ನಡೆಯಲಿರುವ ಪ್ರದರ್ಶನಗಳು, ಚರ್ಚೆಗಳು, ಕಲಾ ಪ್ರದರ್ಶನಗಳು ಮತ್ತು ವಿವಿಧ ಭೇಟಿಗಳಲ್ಲಿ ಸಾವಿರಾರು ಜನರು ಭಾಗವಹಿಸುತ್ತಿದ್ದಾರೆ.
ಈ ವರ್ಷದ ವಿಷಯವನ್ನು ದಾಂತೆ ಅಲಿಘಿಯೇರಿಯ Divine Comedyಯ ಅಂತಿಮ ಪದ್ಯದಿಂದ ತೆಗೆದುಕೊಳ್ಳಲಾಗಿದೆ: “ಸೂರ್ಯನನ್ನೂ ಇತರ ನಕ್ಷತ್ರಗಳನ್ನೂ ಚಅಲುಗಿಸುವ ಪ್ರೀತಿ.” ಆ ಪ್ರೀತಿ — ಊಹಿಸಲೂ ಅಸಾಧ್ಯವಾದ ನೋವಿನ ನಡುವೆಯೂ ಉಳಿದುಕೊಳ್ಳುವ ಅದರ ಸಾಮರ್ಥ್ಯ — ಸಭೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಒಂದೇ ದುರಂತದಿಂದ ಒಂದಾದ ಇಬ್ಬರು ಮಹಿಳೆಯರ ಮೂಲಕ ವ್ಯಕ್ತವಾಯಿತು: ರೊಸಲಿನ್ ಹಮೆಲ್ ಮತ್ತು ನಸ್ಸೆರಾ ಕೆರ್ಮಿಶೆ.
ರೊಸಲಿನ್ ಅವರು 2016ರ ಜುಲೈ 26ರಂದು ಫ್ರಾನ್ಸ್‌ನ ಸೇಂಟ್-ಎಟಿಯೆನ್-ಡು-ರುವ್ರೇ ಚರ್ಚ್‌ನಲ್ಲಿ ಪವಿತ್ರ ಬಲಿಪೂಜೆ ಅರ್ಪಿಸುತ್ತಿದ್ದಾಗ ಹತ್ಯೆಗೀಡಾದ ಗುರು ಜಾಕ್ ಹಮೆಲ್ ಅವರ ಸಹೋದರಿ. ನಸ್ಸೆರಾ ಅವರು ಅವರನ್ನು ಹತ್ಯೆ ಮಾಡಿದ ಇಬ್ಬರು ಯುವಕರಲ್ಲಿ ಒಬ್ಬನಾದ ಅದೆಲ್ ಕೆರ್ಮಿಶೆಯ ತಾಯಿ.
ಒಟ್ಟಾಗಿದ್ದ ಕೊನೆಯ ಸಂಜೆ
ಸಭೆಯ ದೊಡ್ಡ ಸಭಾಂಗಣವೊಂದರಲ್ಲಿ ಮಾತನಾಡಿದ ರೊಸಲಿನ್ ಅವರು, ಜುಲೈ 25ರಂದು ತಮ್ಮ ಕುಟುಂಬದ ಸದಸ್ಯರೊಂದಿಗೆ ತಮ್ಮ ಸಹೋದರನ ಮನೆಗೆ ತೆರಳಿದ್ದನ್ನು ನೆನಪಿಸಿಕೊಂಡರು. ರಜೆಗೆ ತೆರಳುವ ಮೊದಲು ತಮ್ಮ ಅಂತಿಮ ಸೇವಾ ವಾರದಲ್ಲಿ ಅವರೊಂದಿಗೆ ಇರಲು ಕುಟುಂಬದವರು ಅಲ್ಲಿಗೆ ಬಂದಿದ್ದರು. ಆ ಸಂಜೆ, ಮಾನವರು ಪರಸ್ಪರರ ಮೇಲೆ ಎಸಗಬಲ್ಲ ತೀವ್ರ ಹಿಂಸೆಯ ಕುರಿತು ಅವರು ಮಾತನಾಡಿದರು. ಯುವಜನರನ್ನು ಹಿಂಸೆಯೇ ಧರ್ಮ ಎಂದು ನಂಬುವಂತೆ ಪ್ರೇರೇಪಿಸಬಹುದು; ಇದರಿಂದ ಅವರು ಸ್ವತಂತ್ರವಾಗಿ ಯೋಚಿಸುವ ಸಾಮರ್ಥ್ಯವನ್ನೂ, ತಾವು ಹಿಂದೆ ಪ್ರೀತಿಸಿದ್ದವರನ್ನೇ ಗುರುತಿಸುವ ಸಾಮರ್ಥ್ಯವನ್ನೂ ಕಳೆದುಕೊಳ್ಳಬಹುದು ಎಂದು ಧರ್ಮಗುರು ಹಮೆಲ್ ತಮ್ಮ ಸಹೋದರಿಗೆ ತಿಳಿಸಿದ್ದರು.
ಊಟದ ಸಂದರ್ಭದಲ್ಲಿ ಅವರು ರೊಸಲಿನ್ ಅವರಿಗೆ ಸುಂದರವಾಗಿಯೂ ಅಪರೂಪವಾಗಿಯೂ ನೆನಪಿನಲ್ಲಿ ಉಳಿದ ಒಂದು ಮಾತನ್ನು ಹೇಳಿದರು: “ನಿಮ್ಮೊಂದಿಗೆ ಇಲ್ಲಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ.” ಗುರು ಹಮೆಲ್ ಸಾಮಾನ್ಯವಾಗಿ ತಮ್ಮ ಭಾವನೆಗಳನ್ನು ಬಹಿರಂಗವಾಗಿ ವ್ಯಕ್ತಪಡಿಸುತ್ತಿರಲಿಲ್ಲ ಎಂದು ಅವರು ವಿವರಿಸಿದರು. ಆ ಮಾತುಗಳು ತಮ್ಮಿಬ್ಬರ ನಡುವಿನ ಕೊನೆಯ ಮಾತುಗಳಲ್ಲಿ ಕೆಲವು ಆಗಲಿವೆ ಎಂಬುದು ಅವರಿಬ್ಬರಿಗೂ ತಿಳಿದಿರಲಿಲ್ಲ. ಮರುದಿನ ಮುಂಜಾನೆ ಗುರು ಹಮೆಲ್ ಪವಿತ್ರ ಬಲಿಪೂಜೆಗೆ ತೆರಳಲು ಸಿದ್ಧರಾಗುತ್ತಿರುವುದನ್ನು ರೊಸಲಿನ್ ಕೇಳಿದರು. ಬಾಗಿಲಿನ ಕಿರ್‌ಕಿರ್ ಶಬ್ದ ಮತ್ತು ಕಾಫಿಯ ಪರಿಮಳ ಮನೆಯನ್ನು ತುಂಬಿತ್ತು. ಆದರೆ ಕುಟುಂಬದವರು ಹಾಸಿಗೆಯಲ್ಲಿಯೇ ಉಳಿದು, ಅವರು ಮರಳಿ ಬಂದಾಗ ಅವರೊಂದಿಗೆ ಕಾಫಿ ಕುಡಿಯಲು ನಿರ್ಧರಿಸಿದರು.
“ನಾನು ಅವರಿಗಾಗಿ ಬಹಳ ಸಮಯದಿಂದ ಕಾಯುತ್ತಿದ್ದೆ,” ಎಂದು ಅವರು ನೆನಪಿಸಿಕೊಂಡರು. ಆದರೆ ಗುರು ಹಮೆಲ್ ಮತ್ತೆ ಮನೆಗೆ ಮರಳಲಿಲ್ಲ. ಗಂಟೆಗಟ್ಟಲೆ ನಿರೀಕ್ಷೆಯ ಬಳಿಕ, ತಮ್ಮ ಸಹೋದರ ಹತ್ಯೆಗೀಡಾಗಿದ್ದಾರೆ ಎಂಬ ಸುದ್ದಿ ರೊಸಲಿನ್ ಅವರಿಗೆ ತಿಳಿಸಲಾಯಿತು. ಆ ಸುದ್ದಿ ತಮ್ಮೊಳಗೆ ಸ್ಫೋಟ ಸಂಭವಿಸಿದಂತೆ ಅನುಭವವಾಯಿತು. ತಾವು ವಾಸ್ತವದಿಂದ ದೂರವಾಗಿ “ಒಂದು ರೀತಿಯ ಗುಳ್ಳೆಯೊಳಗೆ” ಸಿಲುಕಿದಂತಾಗಿತ್ತು ಎಂದು ಅವರು ಹೇಳಿದರು.
ಮರಳಿ ಬರದ ಮಗನಿಗಾಗಿ ನಿರೀಕ್ಷೆ
ನಸ್ಸೆರಾ ಅವರಿಗೂ ಆ ಬೆಳಗ್ಗೆ ತಮ್ಮ ಮಗ ಸಾಮಾನ್ಯಕ್ಕಿಂತ ಬೇಗ ಎದ್ದಿರುವುದು ಕಾಣಿಸಿತು. ಅವರು ಏಕೆ ಎದ್ದಿದ್ದಾನೆ ಎಂದು ಕೇಳಿ ಮತ್ತೆ ಮಲಗಲು ಹೋದರು. ಸ್ವಲ್ಪ ಸಮಯದ ನಂತರ ಪೊಲೀಸರು ಕರೆ ಮಾಡಿ, ತಮ್ಮ ಮಗ ಮನೆಯಲ್ಲಿದ್ದಾನೆಯೇ ಎಂದು ಕೇಳಿದರು. ಪರಿಶೀಲಿಸಲು ಹೋದಾಗ ಅವನು ಮನೆಯಿಂದ ಹೊರಟಿರುವುದು ಅವರಿಗೆ ತಿಳಿಯಿತು. ದಾಳಿಯ ಸುದ್ದಿ ದೂರದರ್ಶನದಲ್ಲಿ ಪ್ರಸಾರವಾಗತೊಡಗಿದಾಗಲೂ, ತಮ್ಮ ಮಗ ಅದರಲ್ಲಿ ಭಾಗಿಯಾಗಿರಲಾರನೆಂಬ ಆಶೆಯನ್ನು ನಸ್ಸೆರಾ ಬಿಡಲಿಲ್ಲ. ಅವರು ತಮ್ಮ ಮಗಳನ್ನು ಚರ್ಚ್ ಕಡೆಗೆ ಕಳುಹಿಸಿದರು. ಆದರೆ ಆ ಪ್ರದೇಶವನ್ನು ಈಗಾಗಲೇ ಭದ್ರತಾ ಕಾರಣಗಳಿಂದ ಮುಚ್ಚಲಾಗಿತ್ತು. ಗಂಟೆಗಳು ಕಳೆದವು. ಅದೆಲ್ ಶೀಘ್ರದಲ್ಲೇ ಮನೆಗೆ ಮರಳುತ್ತಾನೆ ಎಂಬ ನಂಬಿಕೆಯಲ್ಲಿ ನಸ್ಸೆರಾ ಕಾಯುತ್ತಲೇ ಇದ್ದರು. ಆದರೆ ಮಧ್ಯಾಹ್ನದ ವೇಳೆಯಾದರೂ ಅವನು ಮರಳಿರಲಿಲ್ಲ. ಕೊನೆಗೆ ಅವನೇ ದಾಳಿ ನಡೆಸಿದ್ದಾನೆ ಮತ್ತು ಅವನೂ ಹತ್ಯೆಗೀಡಾಗಿದ್ದಾನೆ ಎಂಬ ಸುದ್ದಿ ಅವರಿಗೆ ತಿಳಿಸಲಾಯಿತು.
ಒಂದೇ ಹಿಂಸಾಚಾರದ ಘಟನೆಯ ಎರಡು ವಿರುದ್ಧ ಬದಿಗಳಲ್ಲಿ ನಿಂತಿದ್ದ ಈ ಇಬ್ಬರು ಮಹಿಳೆಯರು ತಾವು ಪ್ರೀತಿಸಿದ ವ್ಯಕ್ತಿಗಳನ್ನು ಕಳೆದುಕೊಂಡಿದ್ದರು. ಆದರೂ ಆ ಹಿಂಸಾಚಾರವೇ ಅಂತಿಮ ಮಾತಾಗಲು ಅವರು ಅವಕಾಶ ನೀಡಲಿಲ್ಲ. ಕೊನೆಗೆ ಅವರು ಪರಸ್ಪರರನ್ನು ಹುಡುಕಿಕೊಂಡು ಬಂದರು. ರೊಸಲಿನ್ ಮತ್ತು ನಸ್ಸೆರಾ ಈಗ ಸ್ನೇಹಿತರಾಗಿದ್ದಾರೆ. ತಮ್ಮನ್ನು ಅವರು “ದುಃಖದ ಸಹೋದರಿಯರು” ಎಂದು ಕರೆಯುತ್ತಾರೆ. ಪತ್ರಕರ್ತ ಸ್ಯಾಮ್ಯುಯೆಲ್ ಲೀವೆನ್ ಅವರ ನೆರವಿನಿಂದ ತಮ್ಮ ಪಯಣವನ್ನು ಇದೇ ಹೆಸರಿನ ಪುಸ್ತಕದಲ್ಲಿ ವಿವರಿಸಿದ್ದಾರೆ. ಯುದ್ಧ, ದ್ವೇಷ ಮತ್ತು ವಿಭಜನೆಯಿಂದ ಗುರುತಿಸಲ್ಪಟ್ಟ ಜಗತ್ತಿನಲ್ಲಿ ಪ್ರೀತಿ ಇನ್ನೂ ಮಾನವ ಹೃದಯಗಳನ್ನು ಚಲಿಸಬಹುದೇ ಎಂಬ ಪ್ರಶ್ನೆಯನ್ನು ಮುಂದಿಡುವ ರಿಮಿನಿ ಸಭೆಗೆ ಅವರ ಸಾಕ್ಷ್ಯವು ಅತ್ಯಂತ ಶಕ್ತಿಯುತ ಆರಂಭವಾಗಿದೆ.
ಪೂಜ್ಯ ಜಗದ್ಗುರು 14ನೇ ಲಿಯೋ ಅವರ ನಿರೀಕ್ಷೆಯಲ್ಲಿ
ಈಗ ರಿಮಿನಿಯ ಗಮನ ಶನಿವಾರದತ್ತ ತಿರುಗಿದೆ. ಪೂಜ್ಯ ಜಗದ್ಗುರು 14ನೇ ಲಿಯೋ ಅವರು ಸ್ಯಾನ್ ಮರಿನೊ ಗಣರಾಜ್ಯದಲ್ಲಿನ ತಮ್ಮ ಮೇಯಾಳು ಭೇಟಿಯ ಮೊದಲ ಭಾಗವನ್ನು ಪೂರ್ಣಗೊಳಿಸಿದ ಬಳಿಕ ರಿಮಿನಿ ಸಭೆಗೆ ಭೇಟಿ ನೀಡಲಿದ್ದಾರೆ. ಅಲ್ಲಿ, ಅಂಗವೈಕಲ್ಯ ಹೊಂದಿರುವವರಿಗಾಗಿ ಇರುವ ‘Il Colore del Grano’ ಕೇಂದ್ರದ ನಿವಾಸಿಗಳು ಪೂಜ್ಯ ಜಗದ್ಗುರುಗಳಿಗಾಗಿ ಸ್ಯಾನ್ ಮರಿನೊ ಗಣರಾಜ್ಯದ ಬಣ್ಣಗಳಾದ ತಿಳಿ ನೀಲಿ ಮತ್ತು ಬಿಳಿ ಮಣಿಗಳಿಂದ ಜಪಮಾಲೆಯೊಂದನ್ನು ಸಿದ್ಧಪಡಿಸಿದ್ದಾರೆ. ತಮ್ಮ ಆಲೋಚನೆಗಳು ಮತ್ತು ಆಶೆಗಳನ್ನು ಒಳಗೊಂಡ ಪತ್ರವನ್ನೂ ಅವರು ಸಿದ್ಧಪಡಿಸಿದ್ದಾರೆ.
ಅಂಟೋನಿಯಾ ಅವರು ಶಾಂತಿಗಾಗಿ ಮತ್ತು ಬಾಂಬ್ ದಾಳಿಯ ನಡುವೆ ಬದುಕುತ್ತಿರುವ ಮಕ್ಕಳಿಗಾಗಿ ಪ್ರಾರ್ಥಿಸುವಂತೆ ಪೂಜ್ಯ ಜಗದ್ಗುರುಗಳನ್ನು ಕೇಳಲು ಬಯಸುತ್ತಾರೆ. ಇತರರು ಪೂಜ್ಯ ಜಗದ್ಗುರು 2ನೇ ಜಾನ್ ಪಾಲ್ ಅವರು 1982ರಲ್ಲಿ ಸ್ಯಾನ್ ಮರಿನೊಗೆ ನೀಡಿದ ಭೇಟಿಯನ್ನು ನೆನಪಿಸಿಕೊಳ್ಳುತ್ತಾರೆ. ಗಣರಾಜ್ಯದ ಅಧಿಕಾರಿಗಳನ್ನು ಭೇಟಿಯಾಗಿ, ದೇಶದ ಪೋಷಕ ಮತ್ತು ಸ್ಥಾಪಕರಾದ ಸಂತ ಮರಿನೊ ಅವರಿಗೆ ಸಮರ್ಪಿತ ಬಸಿಲಿಕಾದಲ್ಲಿ ಅವರ ಪವಿತ್ರ ಅವಶೇಷಗಳಿಗೆ ಗೌರವ ಸಲ್ಲಿಸಿದ ಬಳಿಕ, ಪೂಜ್ಯ ಜಗದ್ಗುರು 14ನೇ ಲಿಯೋ ರಿಮಿನಿಗೆ ಪ್ರಯಾಣಿಸಲಿದ್ದಾರೆ.
ರಿಮಿನಿ ಸಭೆಯಲ್ಲಿ ಅವರು ಎರಡು ಪ್ರದರ್ಶನಗಳಿಗೆ ಭೇಟಿ ನೀಡಲಿದ್ದಾರೆ. ಮೊದಲನೆಯದು ಸಂತ ಅಗಸ್ಟಿನ್ ಅವರಿಗೆ ಸಮರ್ಪಿತವಾಗಿದ್ದು, ಪೂಜ್ಯ ಜಗದ್ಗುರುಗಳ ಸ್ವಂತ ಆಗಸ್ಟಿನಿಯನ್ ಕರೆಯ ಹೃದಯದಲ್ಲಿರುವ ಅವರ ಆಧ್ಯಾತ್ಮಿಕ ಪರಂಪರೆಯನ್ನು ಪರಿಚಯಿಸುತ್ತದೆ.
ಇನ್ನೊಂದು ಪ್ರದರ್ಶನವು ಫ್ರೆಂಚ್ ಕ್ಯಾಥೊಲಿಕ ಕೈಗಾರಿಕೋದ್ಯಮಿ ಮತ್ತು ಸಾಮಾಜಿಕ ಸುಧಾರಕರಾದ ಲಿಯೋನ್ ಹಾರ್ಮೆಲ್ ಅವರ ಜೀವನವನ್ನು ಪರಿಚಯಿಸುತ್ತದೆ. ಆರ್ಥಿಕ ಜೀವನದ ಕೇಂದ್ರದಲ್ಲಿ ಮಾನವ ಘನತೆಯನ್ನು ಸ್ಥಾಪಿಸಲು ಅವರು ಪ್ರಯತ್ನಿಸಿದ್ದರು. ಬಳಿಕ ಪೂಜ್ಯ ಜಗದ್ಗುರು ಮಕ್ಕಳ ಗ್ರಾಮಕ್ಕೆ ತೆರಳಿ ಅಲ್ಲಿನ ಮಕ್ಕಳನ್ನು ಭೇಟಿಯಾಗಲಿದ್ದಾರೆ. ನಂತರ ಗ್ರ್ಯಾಂಡ್ ಆಡಿಟೋರಿಯಂನಲ್ಲಿ ಸಭೆಯ ಭಾಗವಹಿಸುವವರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಈ ಭಾಷಣವು ಈ ವರ್ಷದ ರಿಮಿನಿ ಸಭೆಯ ಅತ್ಯಂತ ನಿರೀಕ್ಷಿತ ಕ್ಷಣವಾಗಲಿದೆ.
ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).