ಹಾಟ್ ಫೆನ್ಸ್ (ಹೈ ಫೆನ್ಸ್) ಪ್ರಕೃತಿ ಸಂರಕ್ಷಿತ ಪ್ರದೇಶದ ಬಳಿ ಕಾಡ್ಗಿಚ್ಚಿನ ವಿರುದ್ಧ ಕಾರ್ಯಾಚರಣೆ ನಡೆಸುತ್ತಿರುವ ಸಂದರ್ಭದಲ್ಲಿ ಅಗ್ನಿಶಾಮಕ ಸಿಬ್ಬಂದಿಯೊಬ್ಬರು ನೀರಿನ ಕೊಳವೆಯನ್ನು ಹಿಡಿದಿರುವುದು; ಸುಟ್ಟ ಸಸ್ಯವರ್ಗದಿಂದ ಹೊಗೆ ಆವರಿಸಿದೆ (AFP ಅಥವಾ ಪರವಾನಗಿದಾರರು) ಹಾಟ್ ಫೆನ್ಸ್ (ಹೈ ಫೆನ್ಸ್) ಪ್ರಕೃತಿ ಸಂರಕ್ಷಿತ ಪ್ರದೇಶದ ಬಳಿ ಕಾಡ್ಗಿಚ್ಚಿನ ವಿರುದ್ಧ ಕಾರ್ಯಾಚರಣೆ ನಡೆಸುತ್ತಿರುವ ಸಂದರ್ಭದಲ್ಲಿ ಅಗ್ನಿಶಾಮಕ ಸಿಬ್ಬಂದಿಯೊಬ್ಬರು ನೀರಿನ ಕೊಳವೆಯನ್ನು ಹಿಡಿದಿರುವುದು; ಸುಟ್ಟ ಸಸ್ಯವರ್ಗದಿಂದ ಹೊಗೆ ಆವರಿಸಿದೆ (AFP ಅಥವಾ ಪರವಾನಗಿದಾರರು)  (AFP or licensors)

ಜಾಗತಿಕವಾಗಿ ದಾಖಲಾದ ‘ಅತ್ಯಂತ ಉಷ್ಣ ಜುಲೈ’: “ಎಲ್ಲೆಡೆಯಿಂದ ಮೊಳಗುತ್ತಿರುವ ಹವಾಮಾನ ಎಚ್ಚರಿಕೆಯ ಗಂಟೆ ”

ಈ ಬೇಸಿಗೆಯಲ್ಲಿ ಜಗತ್ತು ವ್ಯಾಪಕವಾದ ಉಷ್ಣತೆಯ ಅಲೆಯನ್ನು ಎದುರಿಸುತ್ತಿರುವ ಸಂದರ್ಭದಲ್ಲಿ, ಇಂಗಾಲದ ಬಳಕೆಯಲ್ಲಿ ಬದಲಾವಣೆ, ಕಾಡ್ಗಿಚ್ಚು ನಿರ್ವಹಣೆ ಮತ್ತು ಪೂಜ್ಯ ಜಗದ್ಗುರು ಫ್ರಾನ್ಸಿಸ್ ಅವರು ಲೌದಾತೊ ಸಿ (Laudato si) ವಿಶ್ವಪತ್ರಿಕೆಯಲ್ಲಿ ನೀಡಿದ ಕರೆಯತ್ತ ಮರಳುವ ಅಗತ್ಯತೆ ಹೆಚ್ಚುತ್ತಿದೆ ಎಂದು ವರದಿಗಳು ಸೂಚಿಸುತ್ತಿವೆ.

ಲೇಖಕರು: ಕೀಲ್ಸ್ ಗಸ್ಸಿ

2026ರ ಬೇಸಿಗೆಯು ಒಂದರ ನಂತರ ಮತ್ತೊಂದು ಉಷ್ಣತೆಯ ಅಲೆಯಿಂದ ಗುರುತಿಸಲ್ಪಟ್ಟಿದೆ. ಅಮೆರಿಕದ ರಾಷ್ಟ್ರೀಯ ಸಾಗರ ಮತ್ತು ವಾತಾವರಣ ಆಡಳಿತ ಸಂಸ್ಥೆ (NOAA) ಪ್ರಕಾರ, 1850ರಿಂದ ದಾಖಲಿಸಲಾದ ಜಾಗತಿಕ ಮಟ್ಟದ ಅತ್ಯಂತ ಉಷ್ಣ ಜುಲೈ ಈ ವರ್ಷದ ಜುಲೈ ಆಗಿದ್ದು, 2024ರ ಜುಲೈಗೆ ಸಮಾನವಾಗಿದೆ. ಜಗತ್ತಿನಾದ್ಯಂತ ಜನರು ಮತ್ತು ಸಮಾಜಗಳು ಈ ತಾಪಮಾನ ಏರಿಕೆಯ ಪರಿಣಾಮಗಳನ್ನು ಅನುಭವಿಸಿದವು.

ಜಪಾನ್‌ನಲ್ಲಿ ತಾಪಮಾನ ತೀವ್ರವಾಗಿ ಏರಿದ್ದು, ದೇಶವು ದಾಖಲೆಯ ದೀರ್ಘಾವಧಿಯ 40°C (104°F) ಉಷ್ಣತೆಯ ಸರಣಿಯನ್ನು ಎದುರಿಸುತ್ತಿದೆ. ಜನರು ತೀವ್ರ ಉಷ್ಣತೆಗೆ ಒಳಗಾಗಿದ್ದು, ತಾಪಮಾನ ಉತ್ತರ ಆಫ್ರಿಕಾದಲ್ಲಿ 49°C (120°F) ಸಮೀಪಿಸುತ್ತಿರುವ ಸಂದರ್ಭದಲ್ಲಿ ಆಸ್ಪತ್ರೆಗಳು ಮತ್ತು ವಿದ್ಯುತ್ ವ್ಯವಸ್ಥೆಗಳ ಮೇಲೂ ಒತ್ತಡ ಉಂಟಾಗಿದೆ.

ಯುರೋಪ್ ತನ್ನ ಎರಡನೇ ಅತ್ಯಂತ ಉಷ್ಣ ಜುಲೈಯನ್ನು ಅನುಭವಿಸಿತು. ಇದರ ಪರಿಣಾಮಗಳು ತೀವ್ರವಾಗಿದ್ದವು. ಜೂನ್ ಮಧ್ಯಭಾಗದಿಂದ ದಾಖಲಾಗಿರುವ ಅಸಾಮಾನ್ಯವಾಗಿ ಹೆಚ್ಚಿನ ತಾಪಮಾನದ ದಿನಗಳ ಪರಿಣಾಮವಾಗಿ ಫ್ರಾನ್ಸ್‌ನಲ್ಲಿ 7,300ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ ಎಂದು AFPಯ ವಿಶ್ಲೇಷಣೆ ತಿಳಿಸಿದೆ.

ಪಶ್ಚಿಮ ಯುರೋಪ್‌ನಲ್ಲಿ ಬೇಸಿಗೆಯ ಆರಂಭವೇ ದಾಖಲೆಯ ಅತ್ಯಂತ ಉಷ್ಣವಾಗಿದ್ದು, ಜೂನ್ ಮತ್ತು ಜುಲೈ ತಿಂಗಳಲ್ಲಿ ಪುನರಾವರ್ತಿತ ಉಷ್ಣತೆಯ ಅಲೆಗಳು ಬರಗಾಲ ಮತ್ತು ಕಾಡ್ಗಿಚ್ಚುಗಳಿಗೆ ಕಾರಣವಾದವು. ಬೆಲ್ಜಿಯಂ, ಸ್ಪೇನ್, ಫ್ರಾನ್ಸ್, ಗ್ರೀಸ್ ಮತ್ತು ಇಟಲಿ ಸೇರಿದಂತೆ ಹಲವು ರಾಷ್ಟ್ರಗಳು ಈ ತಿಂಗಳುಗಳಲ್ಲಿ ಕಾಡ್ಗಿಚ್ಚುಗಳ ವಿರುದ್ಧ ಹೋರಾಡಿದವು.

ಶತಮಾನದ ಅಂತ್ಯದ ವೇಳೆಗೆ, ಭೂಮಿಯ ಉಷ್ಣತೆಯನ್ನು ತಡೆಯಲು ಅತ್ಯುತ್ತಮ ಸಾಧ್ಯತೆಯ ಕ್ರಮಗಳನ್ನು ಕೈಗೊಂಡರೂ ಸಹ, ಯುರೋಪ್‌ನಲ್ಲಿ ಕಾಡ್ಗಿಚ್ಚಿನಿಂದ ಸುಡುವ ಪ್ರದೇಶವು ಶೇ.39ರಷ್ಟು ಹೆಚ್ಚಾಗಬಹುದು ಎಂದು ಒಂದು ಅಧ್ಯಯನ ತಿಳಿಸಿದೆ. ಕಾಡ್ಗಿಚ್ಚುಗಳನ್ನು ಉತ್ತಮವಾಗಿ ನಿರ್ವಹಿಸಲು ಗಂಭೀರ ಕ್ರಮಗಳನ್ನು ಕೈಗೊಂಡಾಗ ಮಾತ್ರ ಈ ಪ್ರಮಾಣವನ್ನು ಕಡಿಮೆ ಮಾಡಲು ಸಾಧ್ಯವಾಗುತ್ತದೆ.

ಸಣ್ಣ ಬೆಂಕಿಯಿಂದ ಭೀಕರ ಕಾಡ್ಗಿಚ್ಚಿನವರೆಗೆ

ಯುರೋಪಿನ 2026ರ ಕಾಡ್ಗಿಚ್ಚಿನ ಋತುವು 2025 ಮತ್ತು 2022ರ ನಂತರ ದಾಖಲೆಯ ಇತಿಹಾಸದಲ್ಲಿ ಮೂರನೇ ಅತ್ಯಂತ ಭೀಕರವಾಗುವ ಹಾದಿಯಲ್ಲಿದೆ ಎಂದು ಯುರೋಪಿಯನ್ ಅರಣ್ಯ ಅಗ್ನಿ ಮಾಹಿತಿ ಸೇವೆ ಪ್ರಕಟಿಸಿರುವ ಅಂಕಿಅಂಶಗಳು ತಿಳಿಸುತ್ತವೆ.

ಬಿಸಿಯಾದ, ಒಣ ಮತ್ತು ಬಿರುಗಾಳಿಯ ವಾತಾವರಣ ಹೆಚ್ಚಾಗುತ್ತಿರುವುದರಿಂದ ಸಣ್ಣ ಪ್ರಮಾಣದ ಬೆಂಕಿಗಳೂ ಭೀಕರ ಕಾಡ್ಗಿಚ್ಚುಗಳಾಗಿ ಪರಿವರ್ತನೆಯಾಗುತ್ತಿವೆ. ಇಂಗಾಲದ ಮಾಲಿನ್ಯವು ತಾಪಮಾನವನ್ನು ಮತ್ತಷ್ಟು ಹೆಚ್ಚಿಸುತ್ತಿದೆ.

ಜಾಗತಿಕ ತಾಪಮಾನ ಏರಿಕೆಯ ಅತ್ಯಂತ ಕೆಟ್ಟ ಪರಿಸ್ಥಿತಿಯಲ್ಲಿ, ಕೈಗಾರಿಕಾ ಪೂರ್ವ ಕಾಲಕ್ಕೆ ಹೋಲಿಸಿದರೆ ಭೂಮಿಯ ಸರಾಸರಿ ಉಷ್ಣತೆಯು 3.6°Cನಷ್ಟು ಹೆಚ್ಚಾಗಬಹುದು ಎಂದು ಸಂಶೋಧಕರು ತಿಳಿಸಿದ್ದಾರೆ. ಈ ಪರಿಸ್ಥಿತಿ ಉಂಟಾದರೆ ಕಾಡ್ಗಿಚ್ಚಿನಿಂದ ಸುಡುವ ಪ್ರದೇಶವು ಬಹುತೇಕ ಮೂರು ಪಟ್ಟು ಹೆಚ್ಚಾಗಬಹುದು.

ಕಾಡ್ಗಿಚ್ಚು ನಿರ್ವಹಣೆಯನ್ನು ಸುಧಾರಿಸುವುದರಿಂದ ತಾಪಮಾನ ಏರಿಕೆಯ ಪ್ರಮಾಣವನ್ನು ಶೇ.70ಕ್ಕಿಂತಲೂ ಹೆಚ್ಚು ಕಡಿಮೆ ಮಾಡಲು ನೆರವಾಗಬಹುದು ಎಂದು ಅಧ್ಯಯನಗಳು ತೋರಿಸುತ್ತವೆ. ಆದರೆ ಇಂತಹ ಕ್ರಮಗಳು ಮಾತ್ರ ಹವಾಮಾನ ಬದಲಾವಣೆಯನ್ನು ಸಂಪೂರ್ಣವಾಗಿ ತಡೆಯಲು ಸಾಧ್ಯವಿಲ್ಲ.

ಪಾಟ್ಸ್‌ಡ್ಯಾಮ್ ಹವಾಮಾನ ಪರಿಣಾಮ ಸಂಶೋಧನಾ ಸಂಸ್ಥೆಯ (PIK) ಪರಿಸರ ವ್ಯವಸ್ಥೆ ಸಂಶೋಧಕರೂ ಹಾಗೂ ಅಧ್ಯಯನದ ಪ್ರಮುಖ ಲೇಖಕರೂ ಆದ ಮೈಕ್ ಬಿಲ್ಲಿಂಗ್ ಅವರು, “ನಾವು ಹೆಚ್ಚಿನಹೊಗೆ/ಅನಿಲ  ವಿಸರ್ಜನೆಯ ಹಾದಿಯಲ್ಲೇ ಮುಂದುವರಿದರೆ... ಸುಟ್ಟುಹೋಗುವ ಪ್ರದೇಶದಲ್ಲಿ ಇನ್ನೂ ದೊಡ್ಡ ಪ್ರಮಾಣದ ಹೆಚ್ಚಳವನ್ನು ಕಾಣುತ್ತೇವೆ. ಕಾಡ್ಗಿಚ್ಚು ನಿರ್ವಹಣೆಯು ಹವಾಮಾನ ಶಮನ ಕ್ರಮಗಳಿಗೆ ಪರ್ಯಾಯವಾಗಲು ಸಾಧ್ಯವಿಲ್ಲ,” ಎಂದು ವಿವರಿಸಿದ್ದಾರೆ.

ಕಲ್ಲಿದ್ದಲು, ಅನಿಲ ಮತ್ತು ತೈಲವನ್ನು ಹಿಂದೆ ಬಿಟ್ಟುಬಿಡಿ

“ಹವಾಮಾನ ಎಚ್ಚರಿಕೆಯ ಗಂಟೆ ಎಲ್ಲ ದಿಕ್ಕುಗಳಿಂದಲೂ ಮೊಳಗುತ್ತಿದೆ,” ಎಂದು ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಕಾರ್ಯನಿರ್ವಾಹಕ ಕಾರ್ಯದರ್ಶಿ ಸೈಮನ್ ಸ್ಟೀಲ್ ಜುಲೈ 28ರಂದು ನೀಡಿದ ಹೇಳಿಕೆಯಲ್ಲಿ ಎಚ್ಚರಿಸಿದ್ದಾರೆ.

ಮಾನವಕುಲವು ಕಲ್ಲಿದ್ದಲು, ತೈಲ ಮತ್ತು ಅನಿಲವನ್ನು ಸುಡುವುದಕ್ಕೆ ಹೊಂದಿಕೊಂಡಿರುವುದರಿಂದ ಅದರ ಬೆಲೆ ನಿರಂತರವಾಗಿ ಏರುತ್ತಿದ್ದು, ಹವಾಮಾನದಿಂದ ಉಂಟಾಗುವ ವಿಪತ್ತುಗಳು “ಭಯಾನಕ ಪ್ರಮಾಣವನ್ನು” ತಲುಪಿವೆ ಎಂದು ಅವರು ವಿವರಿಸಿದರು. ಬದಲಾವಣೆಗೆ ಕರೆ ಹಲವು ವರ್ಷಗಳ ಹಿಂದೆಯೇ ನೀಡಲಾಗಿತ್ತು. ಆದರೆ ಪಳೆಯುಳಿಕೆ ಇಂಧನಗಳಿಂದ ಶುದ್ಧ ಇಂಧನದತ್ತ ಸಾಗುವುದು, ಅರಣ್ಯಗಳು ಮತ್ತು ಸಾಗರಗಳನ್ನು ರಕ್ಷಿಸುವುದು ಸೇರಿದಂತೆ ನೈಜ ಕಾರ್ಯಗಳತ್ತ ಬದಲಾವಣೆ ಇನ್ನೂ ಸಾಕಷ್ಟು ವೇಗವಾಗಿ ನಡೆಯುತ್ತಿಲ್ಲ.

ಕಾಡ್ಗಿಚ್ಚು, ಬರಗಾಲ, ತೀವ್ರ ಉಷ್ಣತೆ ಮುಂತಾದವುಗಳು ಇನ್ನು ಮುಂದೆ ಕೇವಲ ಸಿದ್ಧಾಂತಗಳಲ್ಲ. ಅವು “ವೇಗವಾಗಿ ಬಿಸಿಯಾಗುತ್ತಿರುವ ಜಗತ್ತಿನಲ್ಲಿ ಕೋಟ್ಯಂತರ ಜನರು ಅನುಭವಿಸುತ್ತಿರುವ ನೈಜ ವಾಸ್ತವಿಕತೆ” ಎಂದು ಕಾರ್ಯನಿರ್ವಾಹಕ ಕಾರ್ಯದರ್ಶಿ ಹೇಳಿದ್ದಾರೆ . “ಕಲ್ಲಿದ್ದಲು, ತೈಲ ಮತ್ತು ಅನಿಲವನ್ನು ವೇಗವಾಗಿ ಹಿಂದೆ ಬಿಟ್ಟುಬಿಡಿ; ನವೀಕರಿಸಬಹುದಾದ ಇಂಧನವನ್ನು ಹೆಚ್ಚಿಸಿ; ಮತ್ತು ಪರಿಣಾಮಗಳು ಅತ್ಯಂತ ತೀವ್ರವಾಗಿ ತಲುಪಿರುವ ಜನರನ್ನು ರಕ್ಷಿಸಿ” ಎಂದು  ಸ್ಪಷ್ಟವಾದ ಕ್ರಮಕ್ಕೆ ಕರೆ ನೀಡಿದರು.

ಆದರೂ ಭರವಸೆಗೆ ಇನ್ನೂ ಅವಕಾಶವಿದೆ. ಪೂಜ್ಯ ಜಗದ್ಗುರು ಫ್ರಾನ್ಸಿಸ್ ಅವರು 2015ರಲ್ಲಿ ಪ್ರಕಟಿಸಿದ ವಿಶ್ವಪತ್ರಿಕೆ ‘ಲೌದಾತೊ ಸಿ’ಯಲ್ಲಿ (Laudato si), ಹವಾಮಾನ ಬದಲಾವಣೆಯ ಪರಿಸ್ಥಿತಿಯನ್ನು ಎದುರಿಸಿ ಸರಿಪಡಿಸಲು ಇನ್ನೂ ಸಮಯವಿದೆ ಎಂದು ಕರೆ ನೀಡಿದ್ದರು. “ನಮ್ಮೆಲ್ಲರ ಮನೆಯಾದ ಭೂಮಿಯ ನಿರ್ಮಾಣದಲ್ಲಿ ಮಾನವಕುಲವು ಇನ್ನೂ ಒಟ್ಟಾಗಿ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ... ನಿಜವಾಗಿಯೂ, ಬಹಳಷ್ಟು ಮಾಡಬಹುದು!” ಎಂದು ಅವರು ‘ಲೌದಾತೊ ಸಿ’ಯ (Laudato si) 13ನೇ ಪರಿಚ್ಛೇದದಲ್ಲಿ ಹೇಳಿದ್ದಾರೆ.

ಈ ವಿಶ್ವಪತ್ರಿಕೆ ಪ್ರಕಟಗೊಂಡು 10 ವರ್ಷಗಳು ಪೂರ್ಣಗೊಂಡ ಸಂದರ್ಭದಲ್ಲಿ, ಪೂಜ್ಯ ಜಗದ್ಗುರು 14ನೇ ಲಿಯೋ ಅವರು 2025ರ ಅಕ್ಟೋಬರ್‌ನಲ್ಲಿ ಕಾಸಲ್ಗಾಂಡೊಲ್ಫೊದಲ್ಲಿ ನಡೆದ “ಭರವಸೆಯ ಉದಯ” ಸಮ್ಮೇಳನದ ಭಾಗವಹಿಸುವವರನ್ನುದ್ದೇಶಿಸಿ ಮಾತನಾಡಿದರು. ತಮ್ಮ ಪೂರ್ವಾಧಿಕಾರಿಯ ಮಾತುಗಳನ್ನು ಪುನರುಚ್ಚರಿಸುತ್ತಾ, ಜಾಗತಿಕ ಕುಟುಂಬವು ಒಟ್ಟಾಗಿ ಕಾರ್ಯನಿರ್ವಹಿಸಿ “ಸುಸ್ಥಿರ ಮತ್ತು ಸಮಗ್ರ ಅಭಿವೃದ್ಧಿಯನ್ನು ಹುಡುಕುವಂತೆ” ಕರೆ ನೀಡಿದರು.

“ಸಮಾಜದಲ್ಲಿರುವ ಪ್ರತಿಯೊಬ್ಬರೂ, ಸರ್ಕಾರೇತರ ಸಂಸ್ಥೆಗಳು ಮತ್ತು ಜನಜಾಗೃತಿ ಸಂಘಟನೆಗಳ ಮೂಲಕ, ಸರ್ಕಾರಗಳು ಇನ್ನಷ್ಟು ಕಠಿಣ ನಿಯಮಗಳು, ಕ್ರಮಗಳು ಮತ್ತು ನಿಯಂತ್ರಣಗಳನ್ನು ರೂಪಿಸಿ ಜಾರಿಗೆ ತರಲು ಒತ್ತಡ ಹೇರಬೇಕು. ರಾಷ್ಟ್ರೀಯ, ಪ್ರಾದೇಶಿಕ ಮತ್ತು ಸ್ಥಳೀಯ ಮಟ್ಟಗಳಲ್ಲಿ ರಾಜಕೀಯ ನಿರ್ಧಾರ ಪ್ರಕ್ರಿಯೆಯಲ್ಲಿ ನಾಗರಿಕರು ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಆಗ ಮಾತ್ರ ಪರಿಸರಕ್ಕೆ ಉಂಟಾಗಿರುವ ಹಾನಿಯನ್ನು ತಗ್ಗಿಸಲು ಸಾಧ್ಯವಾಗುತ್ತದೆ.”

ಇಂದು, ಹಿಂದೆಂದಿಗಿಂತಲೂ ಹೆಚ್ಚು, ‘ಲೌದಾತೊ ಸಿ’ಯಲ್ಲಿ (Laudato si) ವಿವರಿಸಲಾದ ಪರಿಸರ ಮತ್ತು ಹವಾಮಾನ ಸಂಬಂಧಿತ ವಿಚಾರಗಳು ಪ್ರಸ್ತುತವಾಗಿವೆ. ಅವುಗಳಿಗೆ ತಕ್ಷಣದ ಗಮನ ಮತ್ತು ದೃಢವಾದ ಕಾರ್ಯ ಅಗತ್ಯವಾಗಿದೆ.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

 

20 ಆಗಸ್ಟ್ 2026, 18:43