ಹುಡುಕಿ

ಅಬುಧಾಬಿ  ನಗರದ ದೃಶ್ಯಾವಳಿ ಅಬುಧಾಬಿ ನಗರದ ದೃಶ್ಯಾವಳಿ  (AMR ALFIKY)

2027ರ ಝಾಯೆದ್ ಮಾನವ ಭ್ರಾತೃತ್ವ ಪ್ರಶಸ್ತಿಗೆ ನಾಮನಿರ್ದೇಶನಗಳು ಆರಂಭ

ಜನರ ನಡುವೆ ಶಾಂತಿಯುತ ಸಹಬಾಳ್ವೆಯನ್ನು ಉತ್ತೇಜಿಸಲು ಶ್ರಮಿಸುತ್ತಿರುವ ವ್ಯಕ್ತಿಗಳು ಮತ್ತು ಸಂಸ್ಥೆಗಳನ್ನು ಗೌರವಿಸುವ 2027ರ ಝಾಯೆದ್ ಮಾನವ ಭ್ರಾತೃತ್ವ ಪ್ರಶಸ್ತಿಗೆ ನಾಮನಿರ್ದೇಶನಗಳನ್ನು ಅಕ್ಟೋಬರ್ 1, 2026ರವರೆಗೆ ಸಲ್ಲಿಸಬಹುದು.

ವ್ಯಾಟಿಕನ್ ವರದಿ

ಜನರ ನಡುವೆ ಶಾಂತಿಯುತ ಸಹಬಾಳ್ವೆಯನ್ನು ಉತ್ತೇಜಿಸಲು ಶ್ರಮಿಸುತ್ತಿರುವ ವ್ಯಕ್ತಿಗಳು ಮತ್ತು ಸಂಸ್ಥೆಗಳನ್ನು ಗೌರವಿಸುವ ಝಾಯೆದ್ ಮಾನವ ಭ್ರಾತೃತ್ವ ಪ್ರಶಸ್ತಿಯ ಎಂಟನೇ ಆವೃತ್ತಿಗೆ ನಾಮನಿರ್ದೇಶನಗಳು ಅಧಿಕೃತವಾಗಿ ಆರಂಭಗೊಂಡಿವೆ. 2019ರಲ್ಲಿ ಅಬುಧಾಬಿಯಲ್ಲಿ ಅಲ್-ಅಝರ್‌ನ ಮಹಾ ಇಮಾಮ್ ಅಹ್ಮದ್ ಅಲ್-ತಯ್ಯೆಬ್ ಮತ್ತು ದಿವಂಗತ ಪೂಜ್ಯ ಜಗದ್ಗುರು ಫ್ರಾನ್ಸಿಸ್ ಅವರ ನಡುವೆ ನಡೆದ ಐತಿಹಾಸಿಕ ಭೇಟಿಯ ಬಳಿಕ ಈ ಪ್ರಶಸ್ತಿಯನ್ನು ಸ್ಥಾಪಿಸಲಾಯಿತು. ಆ ಭೇಟಿಯ ಸಂದರ್ಭದಲ್ಲಿ ಇಬ್ಬರು ಧಾರ್ಮಿಕ ನಾಯಕರು ವಿಶ್ವ ಶಾಂತಿ ಮತ್ತು ಸಹಬಾಳ್ವೆಗಾಗಿ ಮಾನವ ಭ್ರಾತೃತ್ವದ ಕುರಿತ ದಾಖಲೆಗೆ ಸಹಿ ಹಾಕಿದರು. 2027ರ ಪ್ರಶಸ್ತಿಗೆ ನಾಮನಿರ್ದೇಶನಗಳನ್ನು 2026ರ ಅಕ್ಟೋಬರ್ 1ರವರೆಗೆ ಝಾಯೆದ್ ಮಾನವ ಭ್ರಾತೃತ್ವ ಪ್ರಶಸ್ತಿಯ ಅಧಿಕೃತ ಅಂತರ್ಜಾಲ ತಾಣದ ಮೂಲಕ ಸಲ್ಲಿಸಬಹುದು.

ಶೇಖ್ ಝಾಯೆದ್ ಅವರ ನೈತಿಕ ಪರಂಪರೆ

ಸಂಯುಕ್ತ ಅರಬ್ ಎಮಿರೇಟ್ಸ್‌ನ ಸ್ಥಾಪಕರಾದ ದಿವಂಗತ ಶೇಖ್ ಝಾಯೆದ್ ಬಿನ್ ಸುಲ್ತಾನ್ ಅಲ್ ನಹ್ಯಾನ್ ಅವರ ಹೆಸರನ್ನು ಹೊಂದಿರುವ ಈ ಪ್ರಶಸ್ತಿಯೊಂದಿಗೆ 10 ಲಕ್ಷ ಅಮೆರಿಕನ್ ಡಾಲರ್‌ಗಳ ನಗದು ಬಹುಮಾನವೂ ಇದೆ. ಇದು ಶೇಖ್ ಝಾಯೆದ್ ಅವರ ನೈತಿಕ ಪರಂಪರೆ, ಮಾನವೀಯತೆ ಮತ್ತು ಇತರರ ಬಗೆಗಿನ ಗೌರವವನ್ನು, ಹಾಗೆಯೇ ಧರ್ಮ, ಲಿಂಗ, ಜನಾಂಗ ಅಥವಾ ರಾಷ್ಟ್ರೀಯತೆಯ ಭೇದವಿಲ್ಲದೆ ಜನರಿಗೆ ಸಹಾಯ ಮಾಡುವ ಅವರ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಪ್ರತಿ ವರ್ಷ ಸಂವಾದ ಮತ್ತು ಐಕ್ಯತೆಗೆ ಕೊಡುಗೆ ನೀಡಿದ ವ್ಯಕ್ತಿಗಳು ಹಾಗೂ ಸಂಸ್ಥೆಗಳನ್ನು ಈ ಪ್ರಶಸ್ತಿ ಗೌರವಿಸುತ್ತದೆ.

ಮಾನವೀಯ ಪ್ರಯತ್ನಗಳಿಗೆ ಗೌರವ

ಒಂದು ಹೇಳಿಕೆಯಲ್ಲಿ ಝಾಯೆದ್ ಮಾನವ ಭ್ರಾತೃತ್ವ ಪ್ರಶಸ್ತಿಯ ಪ್ರಧಾನ ಕಾರ್ಯದರ್ಶಿ ನ್ಯಾಯಮೂರ್ತಿ ಮೊಹಮ್ಮದ್ ಅಬ್ದೆಲ್ಸಲಾಂ ಅವರು ಹೀಗೆ ಹೇಳಿದರು: “ಸ್ವತಂತ್ರ ಜಾಗತಿಕ ಪ್ರಶಸ್ತಿಯ ಎಂಟನೇ ಆವೃತ್ತಿಗೆ ನಾಮನಿರ್ದೇಶನಗಳನ್ನು ಆರಂಭಿಸುವುದು, ಮಾನವೀಯತೆಗೆ ಸೇವೆ ಸಲ್ಲಿಸುವ ಮತ್ತು ವಿಶ್ವದಾದ್ಯಂತ ಮಾನವ ಭ್ರಾತೃತ್ವದ ಮೌಲ್ಯಗಳನ್ನು ಮುಂದುವರಿಸುವ ಮುಂಚೂಣಿ ಮಾನವೀಯ ಪ್ರಯತ್ನಗಳನ್ನು ಗುರುತಿಸಿ ಗೌರವಿಸುವ ಅದರ ಧ್ಯೇಯದ ನಿರಂತರತೆಯನ್ನು ಪ್ರತಿಬಿಂಬಿಸುತ್ತದೆ.”

ಈ ಪ್ರಶಸ್ತಿಯು “ಐತಿಹಾಸಿಕ ಮಾನವ ಭ್ರಾತೃತ್ವದ ದಾಖಲೆಯ ತತ್ವಗಳನ್ನು ವಿಶ್ವದ ಸಮುದಾಯಗಳಲ್ಲಿ ಶಾಶ್ವತ ಪರಿಣಾಮ ಉಂಟುಮಾಡುವ ಪ್ರಾಯೋಗಿಕ ಕಾರ್ಯಕ್ರಮಗಳಾಗಿ ರೂಪಿಸುವ, ವ್ಯಾಪಕ ಪರಿಣಾಮ ಬೀರುವ ಉಪಕ್ರಮಗಳಿಗೆ ನಿರಂತರವಾಗಿ ಬೆಂಬಲ ನೀಡುತ್ತಿದೆ” ಎಂದು ನ್ಯಾಯಮೂರ್ತಿ ಅಬ್ದೆಲ್ಸಲಾಂ ಹೇಳಿದರು.

“ಜಾಗತಿಕ ಮಟ್ಟದಲ್ಲಿ ಮಾನವ ಭ್ರಾತೃತ್ವದ ಮೌಲ್ಯಗಳನ್ನು ಮುಂದುವರಿಸಲು ಅರ್ಥಪೂರ್ಣ ಕೊಡುಗೆ ನೀಡುತ್ತಿರುವ ವ್ಯಕ್ತಿಗಳು ಮತ್ತು ಸಂಸ್ಥೆಗಳಿಂದ ಈ ವರ್ಷ ಹೊಸ ನಾಮನಿರ್ದೇಶನಗಳನ್ನು ಸ್ವೀಕರಿಸಲು ನಾವು ಎದುರು ನೋಡುತ್ತಿದ್ದೇವೆ,” ಎಂದು ತಿಳಿಸಿದರು.

2019ರಿಂದ 20 ಪ್ರಶಸ್ತಿ ಪುರಸ್ಕೃತರು

ಪ್ರಶಸ್ತಿಯ ಏಳನೇ ಆವೃತ್ತಿಯ ಪುರಸ್ಕೃತರಿಗೆ 2026ರ ಫೆಬ್ರವರಿ 4ರಂದು ಅಬುಧಾಬಿಯ ಫೌಂಡರ್ಸ್ ಮೆಮೋರಿಯಲ್ನಲ್ಲಿ ನಡೆದ ಸಮಾರಂಭದಲ್ಲಿ ಗೌರವ ಸಲ್ಲಿಸಲಾಯಿತು. ಅಜರ್‌ಬೈಜಾನ್ ಮತ್ತು ಅರ್ಮೇನಿಯಾ ನಡುವಿನ ಐತಿಹಾಸಿಕ ಶಾಂತಿ ಒಪ್ಪಂದ, ಪ್ಯಾಲೆಸ್ತೀನಿನ ಮಾನವೀಯ ಸಂಸ್ಥೆ ತಆವನ್, ಮತ್ತು ಅಫ್ಘಾನಿಸ್ತಾನದ ಮಹಿಳಾ ಹಕ್ಕುಗಳ ಹೋರಾಟಗಾರ್ತಿ ಜರ್ಖಾ ಯಾಫ್ತಲಿ ಅವರಿಗೆ ಪ್ರಶಸ್ತಿ ನೀಡಲಾಯಿತು. ಶಾಂತಿಯುತ ಸಹಬಾಳ್ವೆ, ಮಾನವೀಯ ನೆರವು ಮತ್ತು ಎಲ್ಲರಿಗೂ ಶಿಕ್ಷಣದ ಕ್ಷೇತ್ರಗಳಲ್ಲಿ ಅವರು ನೀಡಿದ ಕೊಡುಗೆಗಳನ್ನು ಗುರುತಿಸಿ ಈ ಗೌರವ ನೀಡಲಾಯಿತು. 2019ರಿಂದ ಈ ಪ್ರಶಸ್ತಿಯು 20 ದೇಶಗಳ 20 ಪ್ರಶಸ್ತಿ ಪುರಸ್ಕೃತರನ್ನು ಗೌರವಿಸಿದೆ. ಆರೋಗ್ಯ, ಶಿಕ್ಷಣ, ಸುಸ್ಥಿರತೆ, ನಿರಾಶ್ರಿತರ ನೆರವು, ಸಮುದಾಯ ಅಭಿವೃದ್ಧಿ, ಆಹಾರ ನೆರವು ಹಾಗೂ ಯುವಜನರು ಮತ್ತು ಮಹಿಳೆಯರ ಸಬಲೀಕರಣ ಸೇರಿದಂತೆ ವಿವಿಧ ಮಾನವೀಯ ಕ್ಷೇತ್ರಗಳಲ್ಲಿ ಅವರು ನೀಡಿದ ಕೊಡುಗೆಗಳನ್ನು ಪ್ರಶಸ್ತಿ ಗುರುತಿಸಿದೆ.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

 

21 ಆಗಸ್ಟ್ 2026, 20:09