ಮಧ್ಯಪ್ರಾಚ್ಯ ಸಂಘರ್ಷ (AFP ಅಥವಾ ಪರವಾನಗಿದಾರರು) ಮಧ್ಯಪ್ರಾಚ್ಯ ಸಂಘರ್ಷ (AFP ಅಥವಾ ಪರವಾನಗಿದಾರರು)  (AFP or licensors)

ಮಧ್ಯಪ್ರಾಚ್ಯ ಸಂಘರ್ಷ: ಇನ್ನೂ 2.3 ಕೋಟಿ ಮಕ್ಕಳನ್ನು ಬಡತನದತ್ತ ತಳ್ಳುವ ಅಪಾಯ

ಮಧ್ಯಪ್ರಾಚ್ಯದಲ್ಲಿನ ಸಂಘರ್ಷದಿಂದ ಉಂಟಾದ ಜಾಗತಿಕ ಆರ್ಥಿಕ ಆಘಾತದ ಪರಿಣಾಮವಾಗಿ, ಈ ವರ್ಷದ ಅಂತ್ಯದ ವೇಳೆಗೆ ಹೆಚ್ಚುವರಿಯಾಗಿ 2.3 ಕೋಟಿಗೂ ಅಧಿಕ ಮಕ್ಕಳು ಆದಾಯಾಧಾರಿತ ಬಡತನದ ಅಪಾಯಕ್ಕೆ ಒಳಗಾಗಬಹುದು ಎಂದು UNICEFನ ಹೊಸ ವಿಶ್ಲೇಷಣೆ ಎಚ್ಚರಿಸಿದೆ. ಇದರಿಂದ ಹಲವು ವರ್ಷಗಳ ಅಭಿವೃದ್ಧಿ ಹಿನ್ನಡೆಗೊಂಡು ಅಸಮಾನತೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.

ಲೇಖಕರು: ದೆಬೋರ ಕ್ಯಾಸ್ತೆಲ್ಲಾನೋ ಲುಬೋವ್

“ಮಧ್ಯಪ್ರಾಚ್ಯದಲ್ಲಿ ಉಲ್ಬಣಗೊಳ್ಳುತ್ತಿರುವ ಸಂಘರ್ಷದ ಬೆಲೆಯನ್ನು ಮಕ್ಕಳು ತೆರುತ್ತಿದ್ದಾರೆ. ಅದರ ಪರಿಣಾಮ ಮಧ್ಯಪ್ರಾಚ್ಯದಾಚೆಯ ಮಕ್ಕಳ ಮೇಲೂ ಬೀಳುತ್ತಿದೆ,” ಎಂದು UNICEFನ ಕಾರ್ಯನಿರ್ವಾಹಕ ನಿರ್ದೇಶಕಿ ಕ್ಯಾಥರಿನ್ ರಸೆಲ್ ಎಚ್ಚರಿಸಿದರು. “ಈ ಪರಿಸ್ಥಿತಿ ಎಷ್ಟು ದೀರ್ಘವಾಗುತ್ತದೆಯೋ, ಅದರ ಪರಿಣಾಮಗಳು ಅಷ್ಟೇ ಗಂಭೀರವಾಗುತ್ತವೆ,” ಎಂದರು.

UNICEF ಗುರುವಾರ ಪ್ರಕಟಿಸಿದ ‘ಆರ್ಥಿಕವಾಗಿ ಬಡ ಕುಟುಂಬಗಳ ಮಕ್ಕಳ ಮೇಲೆ ಮಧ್ಯಪ್ರಾಚ್ಯದಲ್ಲಿನ ಯುದ್ಧದ ಪ್ರಭಾವ’ (The Impact of the War in the Middle East on Children in Monetarily Poor Households) ಎಂಬ ಹೊಸ ವಿಶ್ಲೇಷಣೆಯ ಹಿನ್ನೆಲೆಯಲ್ಲಿ ಅವರು ಈ ಮಾತುಗಳನ್ನು ಹೇಳಿದರು.

167ಕ್ಕೂ ಹೆಚ್ಚು ದೇಶಗಳ ಮಾಹಿತಿಯನ್ನು ಆಧರಿಸಿದ ಈ ವರದಿಯು, ಮಧ್ಯಪ್ರಾಚ್ಯದಲ್ಲಿನ ನಿರಂತರ ಉದ್ವಿಗ್ನತೆ ಹಾಗೂ ಅದಕ್ಕೆ ಸಂಬಂಧಿಸಿದ ಸಮುದ್ರ ಸಾಗಾಣಿಕೆ ಅಡಚಣೆಗಳಿಂದಾಗಿ ಈ ವರ್ಷದ ಅಂತ್ಯದ ವೇಳೆಗೆ ಹೆಚ್ಚುವರಿಯಾಗಿ 2.3 ಕೋಟಿಗೂ ಅಧಿಕ ಮಕ್ಕಳು ಆದಾಯಾಧಾರಿತ ಬಡತನಕ್ಕೆ ತಳ್ಳಲ್ಪಡುವ ಸಾಧ್ಯತೆಯಿದೆ ಎಂದು ಅಂದಾಜಿಸಿದೆ.

 ಹೋರ್ಮುಜ್ ಜಲಸಂಧಿ ಮುಚ್ಚುವಿಕೆಯಿಂದ ಉಂಟಾದ ಸಾಗಾಣಿಕೆ ಅಡಚಣೆ ಸೇರಿದಂತೆ, ಸಂಘರ್ಷದಿಂದ ಹೆಚ್ಚುತ್ತಿರುವ ಆಹಾರ ಮತ್ತು ಇಂಧನದ ಬೆಲೆಗಳು ಹಾಗೂ ವ್ಯಾಪಕ ಆರ್ಥಿಕ ಆಘಾತಗಳು ಕುಟುಂಬಗಳ ಖರೀದಿ ಸಾಮರ್ಥ್ಯವನ್ನು ಕುಗ್ಗಿಸುತ್ತಿವೆ ಎಂದು ವರದಿ ತಿಳಿಸಿದೆ. ಬಡ ಕುಟುಂಬಗಳಲ್ಲಿರುವ ಮಕ್ಕಳು ಈ ಪರಿಸ್ಥಿತಿಯಿಂದ ಅತಿಯಾಗಿ ಬಾಧಿತರಾಗುತ್ತಿದ್ದಾರೆ ಎಂದು ವಿಶ್ವಸಂಸ್ಥೆಯ ಮಕ್ಕಳ ನಿಧಿ (UNICEF) ತಿಳಿಸಿದೆ.

ಜೀವನಪೂರ್ತಿ ಪರಿಣಾಮ ಬೀರುವ ಹಾನಿ

“ವೇಗವಾಗಿ ಏರುತ್ತಿರುವ ಬೆಲೆಗಳಿಂದ ಅನೇಕ ಕುಟುಂಬಗಳಿಗೆ ಆಹಾರ ಮತ್ತು ಶಿಕ್ಷಣ ಕೈಗೆಟುಕದಂತಾಗಿದೆ. ಈಗಾಗಲೇ ಬಡತನದಲ್ಲಿ ಬದುಕುತ್ತಿರುವ ಮಕ್ಕಳಿಗೆ ಈ ಆಘಾತಗಳು ಇನ್ನಷ್ಟು ಅಭಾವವನ್ನು ಉಂಟುಮಾಡುತ್ತವೆ ಮತ್ತು ಜೀವನಪೂರ್ತಿ ಉಳಿಯುವ ಹಾನಿಯನ್ನುಂಟುಮಾಡಬಹುದು,” ಎಂದು ಕ್ಯಾಥರಿನ್ ರಸೆಲ್ ಎಚ್ಚರಿಸಿದರು. UNICEFನ ವರದಿಯು ಎರಡು ಸಾಧ್ಯತೆಯ ಸನ್ನಿವೇಶಗಳನ್ನು ಪರಿಶೀಲಿಸಿದೆ: ಪ್ರತಿಕೂಲ ಬಡತನ ಮತ್ತು ತೀವ್ರ ಬಡತನ.

  • ಪ್ರತಿಕೂಲ ಸನ್ನಿವೇಶದಲ್ಲಿ, ಮಧ್ಯಮ ಮಟ್ಟದ ಆರ್ಥಿಕ ಆಘಾತದಿಂದ ಹೆಚ್ಚುವರಿಯಾಗಿ 1.83 ಕೋಟಿ ಮಕ್ಕಳು ಆದಾಯಾಧಾರಿತ ಬಡತನಕ್ಕೆ ತಳ್ಳಲ್ಪಡುವ ಸಾಧ್ಯತೆಯಿದೆ ಎಂದು ವರದಿ ತಿಳಿಸಿದೆ.

  • ತೀವ್ರ ಸನ್ನಿವೇಶದಲ್ಲಿ, ಬೆಲೆ ಏರಿಕೆ ಮತ್ತು ಆರ್ಥಿಕ ಚಟುವಟಿಕೆಗಳ ದೀರ್ಘಕಾಲದ ಅಡಚಣೆಗಳನ್ನು ಪರಿಗಣಿಸಲಾಗಿದ್ದು, ಯುದ್ಧ ಮುಂದುವರಿದರೆ ಹೆಚ್ಚುವರಿಯಾಗಿ 2.34 ಕೋಟಿ ಮಕ್ಕಳು ಆದಾಯಾಧಾರಿತ ಬಡತನಕ್ಕೆ ಸಿಲುಕುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ.

ಅಂತರರಾಷ್ಟ್ರೀಯ ಸಮುದಾಯಕ್ಕೆ ಮನವಿ

ಈ ಹಿನ್ನೆಲೆಯಲ್ಲಿ, ಮಕ್ಕಳನ್ನು ಈ ಬಿಕ್ಕಟ್ಟಿನ ಅತ್ಯಂತ ಕೆಟ್ಟ ಪರಿಣಾಮಗಳಿಂದ ರಕ್ಷಿಸುವಂತೆ UNICEF ರಾಷ್ಟ್ರೀಯ ಸರ್ಕಾರಗಳು, ದಾನಿ ರಾಷ್ಟ್ರಗಳು ಹಾಗೂ ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಗಳಿಗೆ ಮನವಿ ಮಾಡಿದೆ. ಮಕ್ಕಳು ಅವಲಂಬಿಸಿರುವ ಆರೋಗ್ಯ, ಪೌಷ್ಟಿಕತೆ, ಶಿಕ್ಷಣ ಹಾಗೂ ಮಕ್ಕಳ ರಕ್ಷಣೆಯಂತಹ ಸೇವೆಗಳು ಮತ್ತು ಅಗತ್ಯ ವಸ್ತುಗಳಿಗೆ ದೇಶೀಯ ಹಾಗೂ ಅಂತರರಾಷ್ಟ್ರೀಯ ಹಣಕಾಸು ನೆರವನ್ನು ಕಾಪಾಡುವುದು; ಮಕ್ಕಳಿಗೆ ಸೂಕ್ಷ್ಮವಾಗಿರುವ ನಗದು ವರ್ಗಾವಣೆ ಯೋಜನೆಗಳನ್ನು ಒಳಗೊಂಡ ಸಾಮಾಜಿಕ ರಕ್ಷಣಾ ವ್ಯವಸ್ಥೆಗಳನ್ನು ವಿಸ್ತರಿಸಿ ನಿರಂತರವಾಗಿ ಮುಂದುವರಿಸುವುದು; ಸಹಾಯಧನಗಳನ್ನು ಹಿಂತೆಗೆದುಕೊಳ್ಳುವ ಮೊದಲು ಬೆಂಬಲ ನಿರಂತರವಾಗಿರುವುದನ್ನು ಖಚಿತಪಡಿಸುವುದು; ಹಾಗೂ ಹಣದುಬ್ಬರಕ್ಕೆ ಅನುಗುಣವಾಗಿ ಕನಿಷ್ಠ ವೆಚ್ಚದ ಮಿತಿಯನ್ನು ಹೆಚ್ಚಿಸುವ ಮೂಲಕ ಮಕ್ಕಳು ಮತ್ತು ಕುಟುಂಬಗಳು ಕೈಗೆಟುಕುವ ಅಗತ್ಯ ಸೇವೆಗಳು ಹಾಗೂ ವಸ್ತುಗಳನ್ನು ಅಡೆತಡೆಯಿಲ್ಲದೆ ಪಡೆಯುವಂತೆ ಮಾಡುವುದು ಪ್ರಮುಖ ಕ್ರಮಗಳಾಗಿವೆ.

ಇದರ ಜೊತೆಗೆ, ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ ರಕ್ಷಣೆಯಂತಹ ಅಗತ್ಯ ಸೇವೆಗಳಲ್ಲಿ ದೇಶೀಯ ಹೂಡಿಕೆಯನ್ನು ರಕ್ಷಿಸಲು ಹಣಕಾಸಿನ ಅವಕಾಶವನ್ನು ವಿಸ್ತರಿಸುವಂತೆ UNICEF ಮನವಿ ಮಾಡಿದೆ. ಇದಕ್ಕಾಗಿ, ಆರೋಗ್ಯ, ಶಿಕ್ಷಣ ಅಥವಾ ಸಾಮಾಜಿಕ ರಕ್ಷಣೆಯ ಮೇಲಿನ ವೆಚ್ಚಕ್ಕಿಂತ ಸಾಲ ಮರುಪಾವತಿ ಹೆಚ್ಚು ಇರುವ ದೇಶಗಳಲ್ಲಿ ಸಾಲ ಮರುಪಾವತಿಗೆ ತಾತ್ಕಾಲಿಕ ವಿನಾಯಿತಿ ಅಥವಾ ಸಾಲ ಪುನರ್‌ರಚನೆ ಮಾಡಬೇಕು ಎಂದು ಸೂಚಿಸಿದೆ. ಭವಿಷ್ಯದ ಆಘಾತಗಳ ಸಂದರ್ಭದಲ್ಲಿ ಜಾಗತಿಕ ಸಹಕಾರದ ಮೂಲಕ ಮಕ್ಕಳಿಗೆ ತ್ವರಿತವಾಗಿ ಮತ್ತು ವ್ಯಾಪಕವಾಗಿ ನೆರವು ತಲುಪುವಂತೆ ಮಕ್ಕಳನ್ನು ಕೇಂದ್ರವಾಗಿಟ್ಟ ಸನ್ನದ್ಧತಾ ವ್ಯವಸ್ಥೆಗಳನ್ನು ರೂಪಿಸಿ ಜಾರಿಗೊಳಿಸುವಂತೆ ಸಹ ಕೋರಿದೆ.

ಮಕ್ಕಳ ಜೀವನ ಮತ್ತು ಭವಿಷ್ಯ ಅಪಾಯದಲ್ಲಿ

“ಈ ಬಿಕ್ಕಟ್ಟು ಮಕ್ಕಳ ಜೀವ ಮತ್ತು ಭವಿಷ್ಯವನ್ನು ಅಪಾಯಕ್ಕೆ ತಳ್ಳುತ್ತಿದೆ,” ಎಂದು ವಿಷಾದ ವ್ಯಕ್ತಪಡಿಸಿದ ಕ್ಯಾಥರಿನ್ ರಸೆಲ್, “ವಿಶ್ವವು ತಕ್ಷಣ ಕ್ರಮ ಕೈಗೊಳ್ಳದಿದ್ದರೆ, ಸಂಘರ್ಷ, ಆರ್ಥಿಕ ಅಸ್ಥಿರತೆ ಮತ್ತು ಏರುತ್ತಿರುವ ಬೆಲೆಗಳ ಸಂಯುಕ್ತ ಪರಿಣಾಮವು ಲಕ್ಷಾಂತರ ಮಕ್ಕಳನ್ನು ಇನ್ನಷ್ಟು ತೀವ್ರ ಬಡತನಕ್ಕೆ ತಳ್ಳಲಿದೆ,” ಎಂದು ಅವರು ಎಚ್ಚರಿಸಿದರು. “ಇದರಿಂದ ಕಷ್ಟಪಟ್ಟು ಸಾಧಿಸಿರುವ ಅಭಿವೃದ್ಧಿಯ ಫಲಿತಾಂಶಗಳೇ ಹಿನ್ನಡೆಯಾಗುವ ಸಾಧ್ಯತೆಯಿದೆ,” ಎಂದರು.

(ಮೂಲ: UNICEF)

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

 

17 ಜುಲೈ 2026, 17:54