ಹುಡುಕಿ

ಗಾಜಾ ನಗರದ  ಅಪಾರ್ಟ್‌ಮೆಂಟ್ ಮೇಲೆ ಇಸ್ರಾಯೇಲ್ ನಡೆಸಿದ ದಾಳಿಯ ಬಳಿಕ ರಕ್ಷಣಾ ಸಿಬ್ಬಂದಿ ಪರಿಹಾರ ಕಾರ್ಯದಲ್ಲಿ ತೊಡಗಿರುವ ದೃಶ್ಯ ಗಾಜಾ ನಗರದ ಅಪಾರ್ಟ್‌ಮೆಂಟ್ ಮೇಲೆ ಇಸ್ರಾಯೇಲ್ ನಡೆಸಿದ ದಾಳಿಯ ಬಳಿಕ ರಕ್ಷಣಾ ಸಿಬ್ಬಂದಿ ಪರಿಹಾರ ಕಾರ್ಯದಲ್ಲಿ ತೊಡಗಿರುವ ದೃಶ್ಯ 

ಕದನ ವಿರಾಮ ಘೋಷಣೆಯಾಗಿ ಒಂಬತ್ತು ತಿಂಗಳು ಕಳೆದರೂ ಗಾಜಾದಲ್ಲಿ ಮುಂದುವರಿದ ನಾಗರಿಕರ ಸಾವು

ಅಮೆರಿಕದ ಬೆಂಬಲದೊಂದಿಗೆ ಕದನ ವಿರಾಮ ಒಪ್ಪಂದ ಜಾರಿಗೆ ಬಂದು ಒಂಬತ್ತು ತಿಂಗಳುಗಳಾದರೂ, ಗಾಜಾ ಪ್ರದೇಶದ ಮೇಲೆ ನಡೆಯುತ್ತಿರುವ ಮಾರಣಾಂತಿಕ ದಾಳಿಗಳು ಮುಂದುವರಿದಿವೆ. ಮಂಗಳವಾರ ಇಸ್ರಾಯೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಒಂದೇ ಕುಟುಂಬದ ಆರು ಮಂದಿ ಸಾವನ್ನಪ್ಪಿದ್ದಾರೆ.

ಲೇಖಕರು: ಲಿಂಡಾ ಬೋರ್ಡೊನಿ

ಮಂಗಳವಾರ ನಡೆದ ವೈಮಾನಿಕ ದಾಳಿಯಲ್ಲಿ ತಂದೆ, ತಾಯಿ ಮತ್ತು ಅವರ ನಾಲ್ವರು ಮಕ್ಕಳು ನಿದ್ರಿಸುತ್ತಿದ್ದಾಗಲೇ ಸಾವನ್ನಪ್ಪಿದರು. ಗಾಜಾ ನಗರದ ಸಬ್ರಾ ಪ್ರದೇಶದಲ್ಲಿರುವ ಅವರ ಮನೆಯನ್ನು ದಾಳಿಯಿಂದ ಬೆಂಕಿ ಆವರಿಸಿತು. ಈ ದಾಳಿಯನ್ನು ಇಸ್ರಾಯೇಲ್ ಸೇನೆ ದೃಢಪಡಿಸಿದ್ದು, ತಮ್ಮ ಗುರಿ ಹಮಾಸ್ ಸಂಘಟನೆಯ ಒಬ್ಬ ಸದಸ್ಯನಾಗಿದ್ದ ಎಂದು ತಿಳಿಸಿದೆ. ದಾಳಿಯ ಪರಿಣಾಮಗಳ ಕುರಿತು ಇನ್ನೂ ತನಿಖೆ ನಡೆಯುತ್ತಿದೆ ಎಂದು ಸೇನೆ ಹೇಳಿದೆ.

“ಇಲ್ಲಿ ಯಾವುದೇ ನೆಮ್ಮದಿ ಇಲ್ಲ, ಸುರಕ್ಷಿತ ಸ್ಥಳವೂ ಇಲ್ಲ,” ಎಂದು ಮೃತ ಕುಟುಂಬದ ತಾತ ದುಃಖ ವ್ಯಕ್ತಪಡಿಸಿದರು. ದಾಳಿಗೆ ಮುನ್ನ ಯಾವುದೇ ಎಚ್ಚರಿಕೆ ಅಥವಾ ಸೈರನ್ ನೀಡಲಾಗಿರಲಿಲ್ಲ ಎಂದೂ ಅವರು ಹೇಳಿದರು.

ಪ್ಯಾಲೆಸ್ತೀನಿನ ವೈದ್ಯಕೀಯ ಅಧಿಕಾರಿಗಳ ಪ್ರಕಾರ, ಅದೇ ಮಂಗಳವಾರದ ನಂತರ ಗಾಜಾದ ಮಧ್ಯಭಾಗದಲ್ಲಿ ಸಾಗುತ್ತಿದ್ದ ಒಂದು ವಾಹನವನ್ನು ಇಸ್ರಾಯೇಲ್ ರಕ್ಷಣಾ ಪಡೆ (IDF) ಗುರಿಯಾಗಿಸಿಕೊಂಡು ದಾಳಿ ನಡೆಸಿತು. ಈ ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ.

ಗಾಜಾದ ಆರೋಗ್ಯ ಅಧಿಕಾರಿಗಳ ಮಾಹಿತಿಯ ಪ್ರಕಾರ, ಕಳೆದ ಅಕ್ಟೋಬರ್‌ನಲ್ಲಿ ಇಸ್ರಾಯೇಲ್ ಮತ್ತು ಹಮಾಸ್ ನಡುವಿನ ಕದನ ವಿರಾಮ ಜಾರಿಗೆ ಬಂದ ನಂತರದಿಂದ ಇಸ್ರಾಯೇಲ್ ನಡೆಸಿದ ದಾಳಿಗಳಲ್ಲಿ ಮೃತಪಟ್ಟ ಪ್ಯಾಲೆಸ್ತೀನಿಯರ ಸಂಖ್ಯೆ 1,160ಕ್ಕೂ ಅಧಿಕವಾಗಿದೆ. ಇವರಲ್ಲಿ ಹೆಚ್ಚಿನವರು ಸಾಮಾನ್ಯ ನಾಗರಿಕರಾಗಿದ್ದಾರೆ.

ಕದನ ವಿರಾಮವು ಪೂರ್ಣ ಪ್ರಮಾಣದ ಯುದ್ಧವನ್ನು ಸ್ಥಗಿತಗೊಳಿಸಿದರೂ, ಬಹುತೇಕ ಪ್ರತಿದಿನ ನಡೆಯುತ್ತಿರುವ  ಇಸ್ರಾಯೇಲ್‌ನ ದಾಳಿಗಳನ್ನು ಅದು ತಡೆಯಲು ಸಾಧ್ಯವಾಗಿಲ್ಲ. ಈ ದಾಳಿಗಳು ಹಮಾಸ್ ಸಂಘಟನೆಯ ಸದಸ್ಯರನ್ನು ಗುರಿಯಾಗಿಸಿಕೊಂಡಿವೆ ಎಂದು ಇಸ್ರಾಯೇಲ್ ಹೇಳುತ್ತಿದೆ.

ಈಜಿಪ್ಟ್, ಕತಾರ್, ಟರ್ಕಿ ಮತ್ತು ಅಮೆರಿಕ ಸೇರಿದಂತೆ ಹಲವು ಮಧ್ಯಸ್ಥ ರಾಷ್ಟ್ರಗಳು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಸ್ತಾಪಿಸಿರುವ ಗಾಜಾ ಸಂಘರ್ಷ ಅಂತ್ಯಗೊಳಿಸುವ ಯೋಜನೆಯನ್ನು ಮುಂದುವರಿಸಲು ಪ್ರಯತ್ನಿಸುತ್ತಿವೆ. ಆ ಯೋಜನೆಯು ಹಮಾಸ್‌ನ ನಿರಾಯುಧೀಕರಣ ಮತ್ತು ಇಸ್ರಾಯೇಲ್ ಸೇನೆಯ ಹಿಂತೆಗೆತವನ್ನು ಒಳಗೊಂಡಿದೆ. ಆದರೆ ಈ ಪ್ರಯತ್ನಗಳಲ್ಲಿ ಇದುವರೆಗೆ ಗಮನಾರ್ಹ ಪ್ರಗತಿ ಕಂಡುಬಂದಿಲ್ಲ.

ಈ ಯುದ್ಧವು ಹಮಾಸ್ ನೇತೃತ್ವದ ಹೋರಾಟಗಾರರು ದಕ್ಷಿಣ ಇಸ್ರಾಯೇಲ್ ಮೇಲೆ ದಾಳಿ ನಡೆಸಿ 1,200 ಜನರನ್ನು ಹತ್ಯೆ ಮಾಡಿ, ಸುಮಾರು 250 ಮಂದಿಯನ್ನು ಒತ್ತೆಯಾಳುಗಳಾಗಿ ಕರೆದೊಯ್ದ ನಂತರ ಆರಂಭವಾಯಿತು.

ಇದಾದ ಬಳಿಕ ಇಸ್ರಾಯೇಲ್ ನಡೆಸಿದ ಸೇನಾ ಕಾರ್ಯಾಚರಣೆಗಳಲ್ಲಿ 73,000ಕ್ಕೂ ಹೆಚ್ಚು ಪ್ಯಾಲೆಸ್ತೀನಿಯರು ಮೃತಪಟ್ಟಿದ್ದಾರೆ ಎಂದು ಗಾಜಾದ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ಗಾಜಾದ ಸುಮಾರು 20 ಲಕ್ಷ ಜನರು ಈಗ ಕರಾವಳಿಯ ಸಣ್ಣ ಪ್ರದೇಶದಲ್ಲಿ ತಾತ್ಕಾಲಿಕ ಗುಡಾರಗಳು ಅಥವಾ ಹಾನಿಗೊಳಗಾದ ಕಟ್ಟಡಗಳಲ್ಲಿ ವಾಸಿಸುತ್ತಿದ್ದು, ತೀವ್ರ ಮಾನವೀಯ ಸಂಕಷ್ಟವನ್ನು ಎದುರಿಸುತ್ತಿದ್ದಾರೆ.

(ಮೂಲ: ರಾಯಿಟರ್ಸ್)

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

 

21 ಜುಲೈ 2026, 18:16