ಗಾಜಾ ಗಾಜಾ  (ANSA)

ಗಾಜಾದಲ್ಲಿ ಒಂದರ ಹಿಂದೆ ಒಂದರಂತೆ ಉಲ್ಬಣಿಸುತ್ತಿರುವ ಮಾನವೀಯ ಬಿಕ್ಕಟ್ಟುಗಳು

ಸಾಂತೀವ್ರ ಜನದಟ್ಟಣೆ ಮತ್ತು ಹದಗೆಡುತ್ತಿರುವ ಸಾರ್ವಜನಿಕ ಆರೋಗ್ಯ ಪರಿಸ್ಥಿತಿಯ ನಡುವೆಯೂ, ಗಾಜಾದಲ್ಲಿ ಸಾಂಕ್ರಾಮಿಕ ರೋಗಗಳು ಹರಡದಂತೆ ತಡೆಯಲು ಮಾನವೀಯ ನೆರವು ಸಂಸ್ಥೆಗಳು ಶ್ರಮಿಸುತ್ತಿವೆ.

ಲೇಖಕರು: ನೇತನ್ ಮಾರ್ಲೆ

2025ರ ಅಕ್ಟೋಬರ್‌ನಲ್ಲಿ ಕದನ ವಿರಾಮ ಘೋಷಣೆಯಾದ ಬಳಿಕ ಗಾಜಾದಲ್ಲಿ ಅದು ಈಗ “ಕ್ರೂರ ಮತ್ತು ಮಾರಣಾಂತಿಕ ಭ್ರಮೆ”ಯಾಗಿ ಮಾರ್ಪಟ್ಟಿದೆ ಎಂದು UNICEF ವಕ್ತಾರ ಜೇಮ್ಸ್ ಎಲ್ಡರ್ ಹೇಳಿದ್ದಾರೆ. ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಕದನ ವಿರಾಮ ಘೋಷಣೆಯಾದ ನಂತರ 250ಕ್ಕೂ ಹೆಚ್ಚು ಪ್ಯಾಲೆಸ್ತೀನ್ ಮಕ್ಕಳು ಸಾವನ್ನಪ್ಪಿದ್ದಾರೆ.

ಇತ್ತೀಚೆಗೆ ನೀಡಿದ ತಮ್ಮ ಹೇಳಿಕೆಯಲ್ಲಿ, ಪ್ರತಿದಿನ ಕನಿಷ್ಠ ಒಬ್ಬ ಮಗು ಸಾವನ್ನಪ್ಪುತ್ತಿದೆ ಎಂದು ಎಲ್ಡರ್ ತಿಳಿಸಿದ್ದಾರೆ. 400ಕ್ಕೂ ಹೆಚ್ಚು ಮಕ್ಕಳು ಗಾಯಗೊಂಡಿದ್ದು, ಅವರಲ್ಲಿ ಹಲವರು ಜೀವನಪರ್ಯಂತದ ಅಂಗವೈಕಲ್ಯಕ್ಕೆ ಕಾರಣವಾಗುವಂತಹ ಗಂಭೀರ ಗಾಯಗಳನ್ನು ಅನುಭವಿಸಿದ್ದಾರೆ. ಮಕ್ಕಳು ಸುರಕ್ಷಿತವಾಗಿರಬೇಕಾದ ಮನೆಗಳು, ಶಾಲೆಗಳು ಹಾಗೂ ಆಶ್ರಯ ಕೇಂದ್ರಗಳಲ್ಲಿಯೇ ಸಾವನ್ನಪ್ಪುತ್ತಿದ್ದಾರೆ ಎಂದು ಅವರು ಹೇಳಿದರು. ನಿರಂತರ ಹಿಂಸಾಚಾರಕ್ಕೆ ಒಳಗಾಗುತ್ತಿರುವುದರಿಂದ ಅನೇಕ ಮಕ್ಕಳು ತೀವ್ರ ಮಾನಸಿಕ ಆಘಾತಕ್ಕೆ ಒಳಗಾಗಿದ್ದಾರೆ ಎಂಬ ಎಚ್ಚರಿಕೆಯನ್ನೂ ಅವರು ನೀಡಿದರು.

ಈ ನಡುವೆ, ಗಾಜಾದಾದ್ಯಂತ ಮಾನವೀಯ ಪರಿಸ್ಥಿತಿ ಅತ್ಯಂತ ಗಂಭೀರವಾಗಿದೆ. ಜೀವರಕ್ಷಕ ಕಾರ್ಯಾಚರಣೆಗಳಿಗೆ ಅಗತ್ಯವಾದ ಎಂಜಿನ್ ಎಣ್ಣೆ, ಟೈರುಗಳು ಹಾಗೂ ಬಿಡಿಭಾಗಗಳ ತೀವ್ರ ಕೊರತೆ ಎದುರಾಗಿದೆ ಎಂದು ಮಾನವೀಯ ನೆರವು ಸಂಸ್ಥೆಗಳು ವರದಿ ಮಾಡಿವೆ. ಅಂತರರಾಷ್ಟ್ರೀಯ ರೆಡ್ ಕ್ರಾಸ್ ಸಮಿತಿಯ ಪ್ರಕಾರ, ಅಗತ್ಯ ರಾಸಾಯನಿಕಗಳು ಮತ್ತು ಬಿಡಿಭಾಗಗಳ ಕೊರತೆಯಿಂದಾಗಿ 2023ರ ಅಕ್ಟೋಬರ್‌ಗೂ ಮುಂಚಿನ ಮಟ್ಟಕ್ಕೆ ಹೋಲಿಸಿದರೆ ನೀರಿನ ಉತ್ಪಾದನೆ ಸುಮಾರು 40 ಶೇಕಡಾಕ್ಕೆ ಕುಸಿದಿದೆ.

ಗಾಜಾದ ಜನಸಂಖ್ಯೆಯ 70 ಶೇಕಡಕ್ಕೂ ಹೆಚ್ಚು ಜನರು ಈಗ ವಿಶ್ವಸಂಸ್ಥೆಯ ಪ್ಯಾಲೆಸ್ತೀನ್ ನಿರಾಶ್ರಿತರ ಪರಿಹಾರ ಮತ್ತು ಕಾರ್ಯ ಸಂಸ್ಥೆ (UNRWA) ಮತ್ತು ಅದರ ಸಹಭಾಗಿ ಸಂಸ್ಥೆಗಳು ಟ್ಯಾಂಕರ್‌ಗಳ ಮೂಲಕ ಪೂರೈಸುತ್ತಿರುವ ಕುಡಿಯುವ ನೀರನ್ನೇ ಅವಲಂಬಿಸಿದ್ದಾರೆ. ವಿಶ್ವಸಂಸ್ಥೆಯ ಮಕ್ಕಳ ನಿಧಿ (UNICEF) ಪ್ರಕಾರ, 11 ಲಕ್ಷ ಮಕ್ಕಳು ಪ್ರತಿದಿನ ಸುರಕ್ಷಿತ ನೀರಿನ ಲಭ್ಯತೆಯ ಅನಿಶ್ಚಿತತೆಯನ್ನು ಎದುರಿಸುತ್ತಿದ್ದಾರೆ.

ಇನ್ನೊಂದೆಡೆ, ಹಮಾಸ್–ಇಸ್ರಾಯೇಲ್ ಯುದ್ಧದಿಂದ ನಾಶಗೊಂಡಿರುವ ಪ್ರದೇಶಗಳಲ್ಲಿ ತಮ್ಮ ಸಣ್ಣ ಕೃಷಿಭೂಮಿಗಳನ್ನು ಪುನರ್‌ನಿರ್ಮಿಸಲು ಹೋರಾಡುತ್ತಿರುವ ರೈತರಿಗೆ ವಿಶ್ವಸಂಸ್ಥೆ ನೆರವು ನೀಡುತ್ತಿದೆ. ಇಸ್ರಾಯೇಲ್ ಸೇನೆಯ ನಿರಂತರ ಕಾರ್ಯಾಚರಣೆಗಳ ಪರಿಣಾಮವಾಗಿ ರೈತರು “ವೇಗವಾಗಿ ಕುಗ್ಗುತ್ತಿರುವ ಪ್ರದೇಶಗಳಲ್ಲಿ ಸಿಲುಕಿಕೊಂಡಿದ್ದಾರೆ” ಎಂದು ವಿಶ್ವಸಂಸ್ಥೆ ಎಚ್ಚರಿಸಿದೆ.

ಈ ಎಲ್ಲ ಬೆಳವಣಿಗೆಗಳ ನಡುವೆಯೇ, ವಿಶ್ವ ಆಹಾರ ಕಾರ್ಯಕ್ರಮ (WFP) ಗಾಜಾಕ್ಕೆ ಮಾನವೀಯ ನೆರವನ್ನು ಹೆಚ್ಚಿನ ಸಂಖ್ಯೆಯ ಪ್ಯಾಲೆಸ್ತೀನ್ ಜನರಿಗೆ ತಲುಪಿಸಲು ಸುಲಭ ಪ್ರವೇಶ ವ್ಯವಸ್ಥೆ ಕಲ್ಪಿಸುವಂತೆ ತುರ್ತು ಮನವಿ ಮಾಡಿದೆ. ಪ್ರಸ್ತುತ ಇಸ್ರೇಲ್‌ನಿಂದ ಗಾಜಾಕ್ಕೆ ತೆರೆಯಲಾಗಿರುವ ಏಕೈಕ ಪ್ರವೇಶ ದ್ವಾರವೆಂದರೆ ಗಾಜಾ ಪಟ್ಟಿಯ ದಕ್ಷಿಣ ತುದಿಯಲ್ಲಿರುವ ಕೆರೆಮ್ ಶಾಲೋಮ್ ಗಡಿ ದಾಟುವ ಕೇಂದ್ರ ಮಾತ್ರ.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

 

18 ಜುಲೈ 2026, 18:43