ಹುಡುಕಿ

ರೋಮ್‌ನ ಕ್ಯಾಂಪಿಡೋಗ್ಲಿಯೊ (Copyright © Nicola Forenza) ರೋಮ್‌ನ ಕ್ಯಾಂಪಿಡೋಗ್ಲಿಯೊ (Copyright © Nicola Forenza)  (Copyright © Nicola Forenza)

ಪರಮಾಣು ಶಸ್ತ್ರಾಸ್ತ್ರಗಳು ಮತ್ತು ಕೃತಕ ಬುದ್ಧಿಮತ್ತೆ ಕುರಿತು ‘ರೋಮ್ ಘೋಷಣೆ’ಗೆ ನೊಬೆಲ್ ಪ್ರಶಸ್ತಿ ಪುರಸ್ಕೃತರ ಸಹಿ

ನೊಬೆಲ್ ಪ್ರಶಸ್ತಿ ಪುರಸ್ಕೃತರು, ಅಂತರರಾಷ್ಟ್ರೀಯ ತಜ್ಞರು ಮತ್ತು ವಿಜ್ಞಾನಿಗಳು, ಧಾರ್ಮಿಕ ಮುಖಂಡರು ಹಾಗೂ ಮಾಜಿ ರಾಷ್ಟ್ರಾಧ್ಯಕ್ಷರು ಮತ್ತು ಸರ್ಕಾರದ ಮುಖ್ಯಸ್ಥರು ರೋಮ್‌ನ ಕ್ಯಾಂಪಿಡೊಲಿಯೊ ಬೆಟ್ಟದಲ್ಲಿ ‘ಕೃತಕ ಬುದ್ಧಿಮತ್ತೆ ಮತ್ತು ಪರಮಾಣು ಶಸ್ತ್ರಾಸ್ತ್ರಗಳ ಯುಗದಲ್ಲಿ ನಿರಾಯುಧ ಮತ್ತು ನಿರಾಯುಧೀಕರಣದ ಶಾಂತಿಗಾಗಿ ರೋಮ್ ಘೋಷಣೆ’ಗೆ ಸಹಿ ಹಾಕಿದರು. ಪರಮಾಣು ಶಸ್ತ್ರಾಸ್ತ್ರಗಳು ಮತ್ತು ಕೃತಕ ಬುದ್ಧಿಮತ್ತೆಯಿಂದ ಉದ್ಭವಿಸಿರುವ ಅಪಾರ ಸವಾಲುಗಳ ಹಿನ್ನೆಲೆಯಲ್ಲಿ ಈ ಜಂಟಿ ಮನವಿಯು ಅಂತರರಾಷ್ಟ್ರೀಯ ಸಹಕಾರವನ್ನು ಪುನರುಜ್ಜೀವನಗೊಳಿಸುವಂತೆ ಕರೆ ನೀಡುತ್ತದೆ.

ಲೇಖಕರು: ದೆಬೋರ ಕ್ಯಾಸ್ತೆಲ್ಲಾನೋ ಲುಬೋವ್

“ಕೃತಕ ಬುದ್ಧಿಮತ್ತೆ, ಪರಮಾಣು ಮತ್ತು ಸ್ವಾಯತ್ತ ಶಸ್ತ್ರಾಸ್ತ್ರಗಳು, ಹೊಸ ಡಿಜಿಟಲ್ ಪ್ರೋಟೋಕಾಲ್‌ಗಳು ಹಾಗೂ ಉದಯೋನ್ಮುಖ ಡಿಜಿಟಲ್ ಅಭಿವೃದ್ಧಿ ಮಾದರಿಗಳ ಯುಗದಲ್ಲಿ ನಿರಾಯುಧ ಮತ್ತು ನಿರಾಯುಧೀಕರಣದ ಶಾಂತಿಗಾಗಿ ರೋಮ್ ಘೋಷಣೆ” ಎಂಬ ಮಹತ್ವದ ದಾಖಲೆಗೆ ಜುಲೈ 16ರ ಗುರುವಾರ ರೋಮ್‌ನ ಕ್ಯಾಂಪಿಡೊಲಿಯೊ ಬೆಟ್ಟದಲ್ಲಿ ಸಹಿ ಹಾಕಲಾಯಿತು. ಇದರೊಂದಿಗೆ ಕೃತಕ ಬುದ್ಧಿಮತ್ತೆ ಮತ್ತು ಪರಮಾಣು ಯುದ್ಧ ಕುರಿತ ಜಾಗತಿಕ ನೊಬೆಲ್ ಪ್ರಶಸ್ತಿ ಪುರಸ್ಕೃತರ ಮಹಾಸಭೆಯು ಸಮಾರೋಪಗೊಂಡಿತು.

ಶಾಂತಿ ಮತ್ತು ಕೃತಕ ಬುದ್ಧಿಮತ್ತೆ ಕ್ಷೇತ್ರಗಳಲ್ಲಿನ ವಿಶ್ವದ 200ಕ್ಕೂ ಹೆಚ್ಚು ಪ್ರಮುಖ ವ್ಯಕ್ತಿಗಳು ಹಾಗೂ ಅಗ್ರಗಣ್ಯ ಅಂತರರಾಷ್ಟ್ರೀಯ ಸಂಶೋಧನಾ ಸಂಸ್ಥೆಗಳ ಪ್ರತಿನಿಧಿಗಳನ್ನು ಒಟ್ಟುಗೂಡಿಸಿದ ಈ ಮಹಾಸಭೆಗೆ, ಕೃತಕ ಬುದ್ಧಿಮತ್ತೆಯ ಯುಗದಲ್ಲಿ ಮಾನವ ವ್ಯಕ್ತಿಯ ಘನತೆಯನ್ನು ಕಾಪಾಡುವ ಕುರಿತು ಪೋಪ್ ಲಿಯೋ XIV ಅವರ ಮಗ್ನಿಫಿಕಾ ಹುಮಾನಿತಾಸ್ ಎನ್ಸೈಕ್ಲಿಕಲ್ ಪ್ರೇರಣೆಯಾಯಿತು.

ಜುಲೈ 14 ಮತ್ತು 15ರಂದು ಕ್ಯಾಸ್ಟೆಲ್ ಗಾಂಡೋಲ್ಫೊದಲ್ಲಿರುವ ಜಗದ್ಗುರುಗಳ  ನಿವಾಸದ ಉದ್ಯಾನವನದಲ್ಲಿನ ಬೊರ್ಗೊ ಲೌದಾತೋ ಸಿ'ಯಲ್ಲಿ ವ್ಯಾಟಿಕನ್ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು. ಜುಲೈ 16ರಂದು ರೋಮ್ ನಗರಸಭೆಯ ಕ್ಯಾಂಪಿಡೊಲಿಯೊ ಬೆಟ್ಟದಲ್ಲಿನ ವಿಶೇಷ ಅಧಿವೇಶನದೊಂದಿಗೆ ಅದು ಮುಕ್ತಾಯಗೊಂಡಿತು. ಬೆಳಗಿನ ಕಾರ್ಯಕ್ರಮವು ರೋಮ್ ಮೇಯರ್ ರೊಬೆರ್ಟೊ ಗುವಾಲ್ತಿಯೇರಿ ಅವರ ಸ್ವಾಗತ ಭಾಷಣದೊಂದಿಗೆ ಆರಂಭವಾಯಿತು.

ನಂತರ ಚಿಕಾಗೊ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಹಾಗೂ ಎಕ್ಸಿಸ್ಟೆನ್ಶಿಯಲ್ ರಿಸ್ಕ್ ಲ್ಯಾಬ್ (X Lab) ಸ್ಥಾಪಕ ನಿರ್ದೇಶಕರಾದ ಪ್ರಾ. ಡೇನಿಯಲ್ ಹೋಲ್ಜ್ ಮಾತನಾಡಿ, “ಕೆಟ್ಟ ಸುದ್ದಿ ಎಂದರೆ ನಾವು ಅಭೂತಪೂರ್ವ ಅಪಾಯದ ಕಾಲಘಟ್ಟದಲ್ಲಿದ್ದೇವೆ. ಆದರೆ ಒಳ್ಳೆಯ ಸುದ್ದಿ ಎಂದರೆ ಪರಮಾಣು ಶಸ್ತ್ರಾಸ್ತ್ರಗಳು ಮತ್ತು ಕೃತಕ ಬುದ್ಧಿಮತ್ತೆಯಿಂದ ಉಂಟಾಗುವ ಅಪಾಯಗಳನ್ನು ಕಡಿಮೆ ಮಾಡಲು ನಾವು ಮಾಡಬಹುದಾದ ಅನೇಕ ಕಾರ್ಯಗಳಿವೆ” ಎಂದು ಹೇಳಿದರು.

ಕಾರ್ಡಿನಲ್ ರೇನಾ: ಜೀವನ-ಮರಣದ ನಿರ್ಧಾರಗಳನ್ನು ಯಂತ್ರಗಳು ಅಥವಾ ಅಲ್ಗಾರಿದಮ್‌ಗಳು ತೆಗೆದುಕೊಳ್ಳಲು ಸಾಧ್ಯವಿಲ್ಲ

ರೋಮ್ ಧರ್ಮಕ್ಷೇತ್ರದ ವಿಕಾರ್ ಜನರಲ್ ಕಾರ್ಡಿನಲ್ ಬಾಲ್ಡೊ ರೇನಾ ಅವರು, ಈ ರೋಮ್ ಘೋಷಣೆಯು ಇಂದಿನ ಸಂದರ್ಭದಲ್ಲಿ ವಿಶೇಷ ಮಹತ್ವ ಹೊಂದಿದೆ ಎಂದು ಹೇಳಿದರು. “ವೇಗವಾದ ಪರಿವರ್ತನೆಗಳು ಮತ್ತು ಗಂಭೀರ ಅಪಾಯಗಳಿಂದ ಕೂಡಿದ ಈ ಕಾಲದಲ್ಲಿ—ಕೃತಕ ಬುದ್ಧಿಮತ್ತೆ, ಪರಮಾಣು ಶಸ್ತ್ರಾಸ್ತ್ರಗಳು, ಭೌಗೋಳಿಕ ರಾಜಕೀಯ ಅಸ್ಥಿರತೆ, ಬಹುಪಕ್ಷೀಯ ವ್ಯವಸ್ಥೆಯ ಬಿಕ್ಕಟ್ಟು, ಹಾಗೂ ಭಯ, ಪ್ರತಿಬಂಧಕ ಶಕ್ತಿ ಮತ್ತು ಪರಸ್ಪರ ಬೆದರಿಕೆಗಳ ಮೂಲಕ ಭದ್ರತೆಯನ್ನು ಸಾಧಿಸಬೇಕೆಂಬ ಪ್ರಲೋಭನೆಯ ನಡುವೆ—ಈ ಘೋಷಣೆ ಹೊರಬಂದಿದೆ” ಎಂದು  ಹೇಳಿದರು.

ನಾವು ಇತಿಹಾಸದ ನಿರ್ಣಾಯಕ ಘಟ್ಟದಲ್ಲಿ ನಿಂತಿದ್ದೇವೆ ಎಂದು ಕಾರ್ಡಿನಲ್ ರೇನಾ ಹೇಳಿದರು. “ವಿಜ್ಞಾನ ಮತ್ತು ತಂತ್ರಜ್ಞಾನದ ಪ್ರಗತಿಯು ಆರೋಗ್ಯ, ಶಿಕ್ಷಣ, ಸಾರ್ವಜನಿಕ ಆರೋಗ್ಯ, ಪರಿಸರ ಸಂರಕ್ಷಣೆ, ಬಡತನ ನಿರ್ಮೂಲನೆ ಮತ್ತು ಶಾಂತಿ ನಿರ್ಮಾಣಕ್ಕೆ ಅಸಾಧಾರಣ ಅವಕಾಶಗಳನ್ನು ಒದಗಿಸುತ್ತದೆ. ಆದರೆ ಅದೇ ಪ್ರಗತಿಯು ನೈತಿಕತೆ, ಹೊಣೆಗಾರಿಕೆ ಮತ್ತು ಮಾನವ ಘನತೆಯಿಂದ ದೂರವಾದರೆ, ಅದು ಪ್ರಾಬಲ್ಯ, ಬಹಿಷ್ಕಾರ ಮತ್ತು ವಿನಾಶದ ಸಾಧನವಾಗಬಹುದು” ಎಂದು ಎಚ್ಚರಿಸಿ, “ಇಂದು ಮಂಡಿಸಲಾದ ಈ ಘೋಷಣೆಯು ಅತ್ಯಂತ ಸ್ಪಷ್ಟವಾಗಿ ನೆನಪಿಸುತ್ತದೆ: ಮಾನವಕುಲದ ಅಸ್ತಿತ್ವವನ್ನು ನಿರ್ಧರಿಸುವ ತೀರ್ಮಾನಗಳ ಕೇಂದ್ರದಲ್ಲಿ ಯಾವುದೇ ಯಂತ್ರ, ಅಲ್ಗಾರಿದಮ್ ಅಥವಾ ಸ್ವಾಯತ್ತ ವ್ಯವಸ್ಥೆಯನ್ನು ಇರಿಸಲಾಗುವುದಿಲ್ಲ” ಎಂದು ಹೇಳಿದರು.

“ಜೀವನ ಮತ್ತು ಮರಣ, ಶಾಂತಿ ಮತ್ತು ಯುದ್ಧ, ಜನಾಂಗಗಳ ಹಾಗೂ ಮುಂದಿನ ಪೀಳಿಗೆಯ ಭವಿಷ್ಯಕ್ಕೆ ಸಂಬಂಧಿಸಿದ ನಿರ್ಧಾರಗಳು ಸಂಪೂರ್ಣವಾಗಿ ಜವಾಬ್ದಾರಿಯುತ ಮತ್ತು ಅರ್ಥಪೂರ್ಣ ಮಾನವ ನಿಯಂತ್ರಣದಲ್ಲಿಯೇ ಉಳಿಯಬೇಕು” ಎಂದು ಅವರು ಒತ್ತಿಹೇಳಿದರು.

ಕೃತಕ ಬುದ್ಧಿಮತ್ತೆ ಮಾನವನನ್ನು ನಿರ್ಮಾಣಕ್ಕೂ, ವಿನಾಶಕ್ಕೂ ಕೊಂಡೊಯ್ಯಬಲ್ಲದು

ಇದೇ ವೇಳೆ ಮಾನವನ ಸೃಜನಶೀಲತೆಯ ಕುರಿತು ಚಿಂತನೆ ಹಂಚಿಕೊಂಡ ಪಾಂಟಿಫಿಕಲ್ ಅಕಾಡೆಮಿ ಫಾರ್ ಲೈಫ್ ಕುಲಪತಿಗಳಾದ ವಂ. ಗುರು ಆಂಡ್ರಿಯಾ ಸಿಯುಚಿ ಅವರು ಒಂದೆಡೆ ಮಾನವನು ಅದ್ಭುತ ಕೃತಿಗಳನ್ನು ಸೃಷ್ಟಿಸುವ ಸಾಮರ್ಥ್ಯ ಹೊಂದಿದ್ದಾನೆ ಮತ್ತೊಂದೆಡೆ ಅದೇ ಸೃಜನಶೀಲತೆ ಭಾರೀ ವಿನಾಶಕ್ಕೂ ಕಾರಣವಾಗಬಹುದು . ಕೃತಕ ಬುದ್ಧಿಮತ್ತೆ ಮತ್ತು ಪರಮಾಣು ಶಕ್ತಿಯೂ ಇದಕ್ಕೆ ಹೊರತಲ್ಲ ಎಂದು ಅವರು ಹೇಳಿ, “ಕೃತಕ ಬುದ್ಧಿಮತ್ತೆಯು ಮಾನವನನ್ನು ನಿರ್ಮಾಣಕ್ಕೂ ಅಥವಾ ವಿನಾಶಕ್ಕೂ ಪ್ರೇರೇಪಿಸಬಲ್ಲದು” ಎಂದು ಎಚ್ಚರಿಸಿದರು.

ಕಾರ್ಡಿನಲ್ ಸಿಲ್ವಾನೊ ಮಾರಿಯಾ ತೊಮಾಸಿ ಹಾಗೂ ಕೊಲಂಬಿಯಾ ವಿಶ್ವವಿದ್ಯಾಲಯದ ನೊಬೆಲ್ ಶಾಂತಿ ಪ್ರಶಸ್ತಿ ವಿಜೇತೆ ಪ್ರಾ. ಮಾರಿಯಾ ರೆಸ್ಸಾ ಸಹ ಶಸ್ತ್ರಾಸ್ತ್ರ ಸ್ಪರ್ಧೆ ಮತ್ತು ಅಪೂರ್ವ ಅಪಾಯಗಳ ಈ ಕಾಲದಲ್ಲಿ ನೈತಿಕ ದಿಕ್ಸೂಚಿಯ ಅಗತ್ಯತೆಯ ಕುರಿತು ಪರಿಣಾಮಕಾರಿ ಭಾಷಣ ಮಾಡಿದರು.

ಅಪಾಯದಲ್ಲಿರುವ ನಮ್ಮ ಅಸ್ತಿತ್ವ

ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿ ವಿಜೇತ ಹಾಗೂ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಸೈದ್ಧಾಂತಿಕ ಭೌತಶಾಸ್ತ್ರ ವಿಭಾಗದ ಪ್ರಾ. ಡೇವಿಡ್ ಗ್ರೋಸ್ ಮಾತನಾಡಿ, ಪರಮಾಣು ಶಸ್ತ್ರಾಸ್ತ್ರಗಳಿಂದ ಉಂಟಾಗಿರುವ ಅಪಾಯದ ಕುರಿತು ತಮ್ಮ ಆತಂಕವು 30 ವರ್ಷಗಳ ಹಿಂದಿಗಿಂತ ಇಂದು ಬಹಳ ಹೆಚ್ಚಾಗಿದೆ ಎಂದು ಹೇಳಿದರು. ಶಸ್ತ್ರಾಸ್ತ್ರ ನಿಯಂತ್ರಣ ಒಪ್ಪಂದಗಳು ಬಹುತೇಕ ಕಣ್ಮರೆಯಾಗಿವೆ ಮತ್ತು ಈಗ ಒಂಬತ್ತು ರಾಷ್ಟ್ರಗಳು ಪರಮಾಣು ಶಕ್ತಿಯನ್ನು ಹೊಂದಿವೆ. “ನಾವು ವೇಗವಾಗಿ ಸಾಗುತ್ತಿರುವ ಶಸ್ತ್ರಾಸ್ತ್ರ ಸ್ಪರ್ಧೆಯ ಮಧ್ಯದಲ್ಲಿದ್ದೇವೆ” ಎಂದು ಅವರು ಹೇಳಿದರು.

ಈ ಅಪಾಯಗಳು ತಮ್ಮ ಜೀವನದ ಮೇಲೆ ಮಾತ್ರವಲ್ಲ, ತಮ್ಮ ಮಕ್ಕಳ ಮತ್ತು ಮೊಮ್ಮಕ್ಕಳ ಭವಿಷ್ಯದ ಮೇಲೂ ಹೇಗೆ ಪರಿಣಾಮ ಬೀರುತ್ತವೆ ಎಂಬುದರ ಕುರಿತು ಜಗತ್ತಿನ ಜನರು ಇನ್ನು ಮುಂದೆ ಅಜ್ಞಾನಿಗಳಾಗಿ ಉಳಿಯಲು ಸಾಧ್ಯವಿಲ್ಲ ಎಂದು ಅವರು ಎಚ್ಚರಿಸಿದರು.

ಈ ಘೋಷಣೆಯನ್ನು ಉಲ್ಲೇಖಿಸಿದ ಅವರು, ಅದರಲ್ಲಿರುವ ಸಲಹೆಗಳು ಸರಳವಾಗಿದ್ದು, ನಾವು ಅವುಗಳನ್ನು ಹಿಂದೆ ಹಲವಾರು ಬಾರಿ ಕೇಳಿದ್ದೇವೆ ಎಂದರು. “ಪರಮಾಣು ಶಕ್ತಿಯನ್ನು ಹೊಂದಿರುವ ರಾಷ್ಟ್ರಗಳು ಯುದ್ಧ, ಪರಮಾಣು ಯುದ್ಧ ಮತ್ತು ಸಂಪೂರ್ಣ ವಿನಾಶದ ಅಪಾಯವನ್ನು ಕಡಿಮೆ ಮಾಡುವ ನೀತಿಗಳನ್ನು ಅನುಸರಿಸಬೇಕು ಎಂದು ನಾವು ಮನವಿ ಮಾಡುತ್ತೇವೆ.” ಜಗದ್ಗುರುಗಳು, ಧರ್ಮಸಭೆ ಹಾಗೂ ನೈತಿಕ ಪ್ರಜ್ಞೆಯುಳ್ಳ ಪ್ರತಿಯೊಬ್ಬರ ಸಂದೇಶದಿಂದ ಪ್ರೇರಿತರಾಗಿ ನಾವು ಈಗ ಕಾರ್ಯಪ್ರವೃತ್ತರಾಗಬೇಕು ಎಂದು ಅವರು ಕರೆ ನೀಡಿದರು.

“ನಿಮ್ಮ ಮಾನವೀಯತೆಯನ್ನು ನೆನಪಿಸಿಕೊಳ್ಳಿ; ಉಳಿದ ಎಲ್ಲವನ್ನೂ ಮರೆತುಬಿಡಿ” ಎಂದು ನೊಬೆಲ್ ಪ್ರಶಸ್ತಿ ವಿಜೇತರು ಪುನರುಚ್ಚರಿಸಿದರು. ನಮ್ಮ ಉಳಿವು ಹಾಗೂ ಮುಂದಿನ ಪೀಳಿಗೆಯ ಅಸ್ತಿತ್ವವೇ ಇಂದು ಪಣಕ್ಕಿದೆ ಎಂದು ಅವರು ಎಚ್ಚರಿಸಿದರು. ಶಾಂತಿಯ ರಾಯಭಾರಿ ಶೆರಾನ್ ಸ್ಟೋನ್ ಸಹ ಮಾತನಾಡಿ, ಸಾಮಾನ್ಯ ಹಿತ ಮತ್ತು ಪ್ರತಿಯೊಬ್ಬ ಮಾನವ ವ್ಯಕ್ತಿಯ ಘನತೆಗೆ ಗೌರವ ನೀಡುವ ಗುರಿಯಲ್ಲಿ ನಾವು ಒಂದಾಗಬೇಕು ಎಂದರು. ಯಂತ್ರಗಳ ಸಾಮರ್ಥ್ಯ ಹೆಚ್ಚಾಗುತ್ತಿರುವಂತೆ, ಅವುಗಳನ್ನು ನಿರ್ಮಿಸುವವರ ನೈತಿಕ ಜವಾಬ್ದಾರಿಯೂ ಹೆಚ್ಚಾಗಬೇಕು ಎಂದು ಅವರು ಹೇಳಿದರು.

“ಮಾನವ ಘನತೆ ಯಾವುದೇ ಅಲ್ಗಾರಿದಮ್ ಅಲ್ಲ” ಎಂದು ಅವರು ಒತ್ತಿಹೇಳಿದರು.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

16 ಜುಲೈ 2026, 19:48