ಜಗದ್ಗುರು ಸಂತ ಎರಡನೇ ಜಾನ್ ಪಾಲ್ ಲೂಬ್ಲಿನ್ ಕಥೋಲಿಕ್ ವಿಶ್ವವಿದ್ಯಾಲಯದ (KUL) ಪದವಿಯನ್ನು ಪಡೆದ ಕಾರಾಗೃಹದ ಕೈದಿಗಳು. ಜಗದ್ಗುರು ಸಂತ ಎರಡನೇ ಜಾನ್ ಪಾಲ್ ಲೂಬ್ಲಿನ್ ಕಥೋಲಿಕ್ ವಿಶ್ವವಿದ್ಯಾಲಯದ (KUL) ಪದವಿಯನ್ನು ಪಡೆದ ಕಾರಾಗೃಹದ ಕೈದಿಗಳು. 

ಲೂಬ್ಲಿನ್ ಕಥೋಲಿಕ ವಿಶ್ವವಿದ್ಯಾಲಯದಿಂದ ಕಾರಾಗೃಹದ ಕೈದಿಗಳಿಗೆ ಪದವಿ

ಪೋಲೆಂಡ್‌ನ ಲೂಬ್ಲಿನ್ ಕಾರಾಗೃಹದಲ್ಲಿರುವ ಕೈದಿಗಳಿಗೆ, ಜಗದ್ಗುರು ಸಂತ ಎರಡನೇ ಜಾನ್ ಪಾಲ್ ಲೂಬ್ಲಿನ್ ಕಥೋಲಿಕ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಾಗಿ ಕಾರಾಗೃಹದೊಳಗೇ ನೇರವಾಗಿ ಪೂರ್ಣಾವಧಿ ವಿಶ್ವವಿದ್ಯಾಲಯ ಶಿಕ್ಷಣ ಪಡೆಯುವ ಅವಕಾಶವನ್ನು ನೀಡಲಾಗುತ್ತಿದೆ.

ಲೇಖಕರು: ಮೊನಿಕಾ ಸ್ಟೊಜೋವ್ಸ್ಕಾ – ಲೂಬ್ಲಿನ್

ಶಿಕ್ಷೆಯನ್ನು ಅನುಭವಿಸುತ್ತಿರುವಾಗಲೇ ಉನ್ನತ ಶಿಕ್ಷಣ ಪಡೆಯುವ ಅವಕಾಶ ಕಲ್ಪಿಸಿದಕ್ಕಾಗಿ ಕೈದಿಗಳು ಜಗದ್ಗುರು ಸಂತ ಎರಡನೇ ಜಾನ್ ಪಾಲ್ ಕಥೋಲಿಕ ವಿಶ್ವವಿದ್ಯಾಲಯಕ್ಕೆ (KUL) ಕೃತಜ್ಞತೆ ಸಲ್ಲಿಸಿದ್ದಾರೆ. ಪ್ರತಿಯೊಬ್ಬ ಕೈದಿಯ ಜೀವನ ಕಥೆ ಮತ್ತು ಶಿಕ್ಷೆಯ ಅವಧಿ ವಿಭಿನ್ನವಾಗಿದ್ದರೂ, ಎಲ್ಲರೂ ಅತ್ಯುತ್ತಮ ಶೈಕ್ಷಣಿಕ ಫಲಿತಾಂಶದೊಂದಿಗೆ ಪದವಿ ಪಡೆದಿದ್ದಾರೆ.

ಜೂನ್ 24ರಂದು ಇನ್ನೂ ಏಳು ಕೈದಿಗಳು ಲೂಬ್ಲಿನ್ ಕಾರಾಗೃಹದಲ್ಲೇ ಈ ಪದವಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರು. ಪದವಿ ಪ್ರಬಂಧಗಳ ಮೌಖಿಕ ಪರೀಕ್ಷೆ ಸುಮಾರು ಎರಡು ಗಂಟೆಗಳ ಕಾಲ ನಡೆಯಿತು. ಪ್ರಶ್ನೆಗಳು ಸುಲಭವಾಗಿರಲಿಲ್ಲ. ಪರೀಕ್ಷೆಯು ಎಲ್ಲರಲ್ಲೂ ತೀವ್ರ ಭಾವನೆಗಳನ್ನು ಮೂಡಿಸಿತು.

“ನನಗೆ ಹೆಮ್ಮೆ ಅನಿಸುತ್ತಿದೆ. ಇದು ಅತ್ಯಂತ ಒತ್ತಡದ ಅನುಭವವಾಗಿತ್ತು, ಆದರೆ ಅಪಾರ ಸಂತೋಷವನ್ನೂ ನೀಡಿತು. ನನ್ನ ಜೀವನದಲ್ಲಿ ನಾನು ಏನನ್ನಾದರೂ ಅರ್ಥಪೂರ್ಣವಾಗಿ ಮಾಡುತ್ತಿದ್ದೇನೆ ಎಂಬುದು ನನಗೆ ಭಾವುಕತೆಯನ್ನು ಉಂಟುಮಾಡಿದೆ. ನನ್ನ ಶಿಕ್ಷೆಯ ಅವಧಿ ಇನ್ನೂ ಇರುವುದರಿಂದ, ಕಾರಾಗೃಹದಲ್ಲೇ ಸ್ನಾತಕೋತ್ತರ ಪದವಿಯನ್ನೂ ಪೂರ್ಣಗೊಳಿಸಲು ನನಗೆ ಸಮಯ ಸಿಗುತ್ತದೆ,” ಎಂದು ಪರೀಕ್ಷಾ ಕೊಠಡಿಯಿಂದ ಹೊರಬಂದ ತಕ್ಷಣ ಒಬ್ಬ ಕೈದಿ ಹೇಳಿದರು.

ಪ್ರತಿಯೊಬ್ಬರ ಜೀವನದ ಕಥೆ ಮತ್ತು ಶಿಕ್ಷೆಯ ಅವಧಿ ವಿಭಿನ್ನವಾಗಿದ್ದರೂ, ಎಲ್ಲರೂ ಕುಟುಂಬ ಅಧ್ಯಯನ (Family Studies) ವಿಭಾಗದಲ್ಲಿ ಅತ್ಯುತ್ತಮ ಅಂಕಗಳು ಮತ್ತು ಉನ್ನತ ಶ್ರೇಣಿಯೊಂದಿಗೆ ಪದವಿ ಪಡೆದಿದ್ದಾರೆ.

“ನಮ್ಮ ಪರಿಶ್ರಮದ ಸ್ಪಷ್ಟ ಫಲಿತಾಂಶವನ್ನು ನೋಡುವುದು ಅಪಾರ ಸಂತೋಷವನ್ನು ನೀಡುತ್ತದೆ. ಇದು ಕೇವಲ ಒಂದು ವರ್ಷದ ಅಧ್ಯಯನದ ಸಾರಾಂಶವಲ್ಲ; ವಾಸ್ತವವಾಗಿ ಮೂರು ವರ್ಷಗಳ ಪರಿಶ್ರಮದ ಫಲವಾಗಿದೆ. ಈ ವಿದ್ಯಾರ್ಥಿಗಳು ಈಗ ದ್ವಿತೀಯ ಹಂತದ ಅಧ್ಯಯನಕ್ಕೂ ಮುಂದಾಗಲಿ ಎಂದು ನಾವು ಆಶಿಸುತ್ತೇವೆ,” ಎಂದು ಪದವಿ ಪ್ರಬಂಧಗಳಿಗೆ ಮಾರ್ಗದರ್ಶನ ನೀಡಿದ ಪ್ರಾಧ್ಯಾಪಕ ಹಾಗೂ ಯಾಜಕರಾದ ವಂ. ಗುರು ಮಿರೋಸ್ವಾವ್ ಕಾಲಿನೋವ್ಸ್ಕಿ ಹೇಳಿದರು.

ವಿಶ್ವವಿದ್ಯಾನಿಲಯದಿಂದ ಶೈಕ್ಷಣಿಕ ಮಾನದಂಡಗಳ ನಿಗದಿ

ವಂ. ಗುರು ಕಾಲಿನೋವ್ಸ್ಕಿ ಅವರ ಮಾತಿನಂತೆ, ಈ ಅಧ್ಯಯನವು ಕೈದಿಗಳಿಗೆ ದೊರೆಯುವ ಬಹುಮಾನ ಮಾತ್ರವಲ್ಲ, ಅವರ ಪುನರ್ವಸತಿಗೆ ಪರಿಣಾಮಕಾರಿ ಮಾರ್ಗವೂ ಆಗಿದೆ.

“ನಾವು ಅಧ್ಯಯನಕ್ಕೆ ಅಗತ್ಯವಾದ ವಾತಾವರಣವನ್ನು ನಿರ್ಮಿಸುತ್ತೇವೆ. ವಿಶ್ವವಿದ್ಯಾಲಯದ ಸಿಬ್ಬಂದಿ ಮತ್ತು ಇತರ ಸಮುದಾಯಗಳನ್ನು ಈ ಕಾರ್ಯದಲ್ಲಿ ತೊಡಗಿಸುತ್ತೇವೆ. ಈ ಜನರಿಗೆ ಒಂದು ಅವಕಾಶವನ್ನು ನೀಡುತ್ತೇವೆ; ಆದರೆ ಅದೇ ಸಮಯದಲ್ಲಿ ಕೆಲವು ಮಾನದಂಡಗಳನ್ನೂ ವಿಧಿಸುತ್ತೇವೆ. ಇದರ ಬಗ್ಗೆ ನಾವು ಮಾಧ್ಯಮಗಳಲ್ಲಿಯೂ ಮಾತನಾಡುತ್ತೇವೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದವರಲ್ಲಿ ಸುಮಾರು 80 ಪ್ರತಿಶತ ಜನರು ಮತ್ತೆ ಅಪರಾಧದ ಬದುಕಿಗೆ ಮರಳುವುದಿಲ್ಲ ಎಂಬುದು ನಮಗೆ ತಿಳಿದಿದೆ. ಆದಾಗ್ಯೂ, ಶಿಕ್ಷೆ ಪೂರ್ಣಗೊಂಡ ನಂತರ ಕೈದಿ ಹಿಂದಿರುಗುವ ಕುಟುಂಬ ಮತ್ತು ಸಾಮಾಜಿಕ ವಾತಾವರಣವೂ ಈ ಪುನರ್ವಸತಿ ಪ್ರಕ್ರಿಯೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ,” ಎಂದು KULನ ರೆಕ್ಟರ್ ಹೇಳಿದರು.

ಅಧ್ಯಯನ: ಬಹುಮಾನವೂ, ಪುನರ್ವಸತಿಯ ಪರಿಣಾಮಕಾರಿ ಮಾರ್ಗವೂ

KUL ವಿಶ್ವವಿದ್ಯಾಲಯವು 2013ರಲ್ಲಿ ಕೈದಿಗಳಿಗಾಗಿ ಉನ್ನತ ಶಿಕ್ಷಣ ಕಾರ್ಯಕ್ರಮವನ್ನು ಆರಂಭಿಸಿತು. ಪ್ರಸ್ತುತ ಅದು ಪದವಿ ಹಾಗೂ ಪೂರಕ ಸ್ನಾತಕೋತ್ತರ ಪದವಿ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಇದುವರೆಗೆ 63 ಮಂದಿ ಈ ವಿಶ್ವವಿದ್ಯಾಲಯ ಕಾರ್ಯಕ್ರಮವನ್ನು ಕಾರಾಗೃಹದಲ್ಲೇ ಪೂರ್ಣಗೊಳಿಸಿದ್ದಾರೆ. ಪೋಲೆಂಡ್‌ನ ವಿವಿಧ ಭಾಗಗಳಿಂದ ಬಂದಿರುವ ಮಹಿಳೆಯರೂ ಸೇರಿದಂತೆ ಅನೇಕರು ಈ ಯೋಜನೆಯಲ್ಲಿ ಭಾಗವಹಿಸುತ್ತಿದ್ದಾರೆ.

ಈ ಕಾರ್ಯಕ್ರಮವು ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಗಮನ ಸೆಳೆದಿದೆ. ರೋಮ್‌ನ ಕಾರಾಗೃಹ ಅಧಿಕಾರಿಗಳೂ LUMSA ವಿಶ್ವವಿದ್ಯಾಲಯದ ಸಹಯೋಗದಲ್ಲಿ ಇದೇ ರೀತಿಯ ಶಿಕ್ಷಣ ಕಾರ್ಯಕ್ರಮವನ್ನು ಆರಂಭಿಸುವ ಸಾಧ್ಯತೆಯನ್ನು ಪರಿಶೀಲಿಸುತ್ತಿದ್ದಾರೆ.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

 

26 ಜೂನ್ 2026, 22:24