ಪ್ಯಾಲೆಸ್ತೀನ್ ಲೂಥರನ್ ಸಮುದಾಯ: ಕ್ರೈಸ್ತ ವಿದ್ಯಾರ್ಥಿನಿಯ ಬಂಧನದಿಂದ ‘ತೀವ್ರ ಕಳವಳ’
ಲೇಖಕರು: ಜೋಸೆಫ್ ತಲ್ಲೊಚ್
ಪವಿತ್ರ ಭೂಮಿಯ ಇವಾಂಜೆಲಿಕಲ್ ಲೂಥರನ್ ಧರ್ಮಸಭೆಯು, ಕ್ರೈಸ್ತ ವಿಶ್ವವಿದ್ಯಾಲಯ ವಿದ್ಯಾರ್ಥಿನಿ ನತಾಲಿ ಅಬು ದಯ್ಯೆಹ್ ಅವರ ಬಂಧನದಿಂದ “ತೀವ್ರ ಕಳವಳಗೊಂಡಿದೆ” ಎಂದು ತಿಳಿಸಿದೆ. ಇವಾಂಜೆಲಿಕಲ್ ಲೂಥರನ್ ಧರ್ಮಸಭೆಯ ಸದಸ್ಯೆಯಾಗಿರುವ ಮತ್ತು ಪಶ್ಚಿಮ ದಂಡೆಯ ಬಿರ್ಜೈತ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡುತ್ತಿರುವ ನತಾಲಿ ಅಬು ದಯ್ಯೆಹ್ ಅವರನ್ನು, ಇನ್ನೂ ಮೂವರು ಪ್ಯಾಲೆಸ್ತೀನ್ ಮಹಿಳೆಯರೊಂದಿಗೆ ಮಂಗಳವಾರ ಬೆಳಿಗ್ಗೆ ಬಂಧಿಸಲಾಗಿದೆ ಎಂದು AFP ವರದಿ ಮಾಡಿದೆ.
ಒಂದು ಪ್ರಕಟಣೆಯಲ್ಲಿ, ಜೋರ್ಡಾನ್ ಮತ್ತು ಪವಿತ್ರ ಭೂಮಿಯ ಇವಾಂಜೆಲಿಕಲ್ ಲೂಥರನ್ ಧರ್ಮಸಭೆಯ ಧರ್ಮಾಧ್ಯಕ್ಷರಾದ ಇಮಾದ್ ಹದ್ದಾದ್ ಅವರು, “ಈ ಸುದ್ದಿಯಿಂದಲೂ ಹಾಗೂ ಅಬು ದಯ್ಯೆಹ್ ಅವರನ್ನು ಎಲ್ಲಿಗೆ ಕರೆದೊಯ್ಯಲಾಗಿದೆ ಎಂಬುದು ಅವರ ಕುಟುಂಬಕ್ಕೆ ಇನ್ನೂ ತಿಳಿದಿಲ್ಲ ಎಂಬ ಸುದ್ದಿಯಿಂದಲೂ ಧರ್ಮಸಭೆಯ ಸಮುದಾಯವು ಆಳವಾದ ಆಘಾತ ಮತ್ತು ಭಯಕ್ಕೆ ಒಳಗಾಗಿದೆ” ಎಂದು ಹೇಳಿದ್ದಾರೆ.
ಅಬು ದಯ್ಯೆಹ್ ಅವರು ಈಗ “ಆರೋಪ ಅಥವಾ ವಿಚಾರಣೆಯಿಲ್ಲದೆ ಇಸ್ರಾಯೇಲಿ ಬಂಧನದಲ್ಲಿರುವ ಸಾವಿರಾರು ಪ್ಯಾಲೆಸ್ತೀನಿಯರ” ಸಾಲಿಗೆ ಸೇರುವಂತಾಗಿದೆ ಎಂಬುದು ತಮ್ಮನ್ನು “ತೀವ್ರ ಕಳವಳಗೊಳಿಸಿದೆ” ಎಂದು ಧರ್ಮಾಧ್ಯಕ್ಷ ಹದ್ದಾದ್ ತಿಳಿಸಿದ್ದಾರೆ.
“ಇದು ಒಂದು ಪ್ರತ್ಯೇಕ ಘಟನೆ ಅಲ್ಲ,” ಎಂದು Save West Bank Christians ಅಭಿಯಾನದ ವ್ಯವಸ್ಥಾಪಕರಾಗಿರುವ ಪ್ಯಾಲೆಸ್ತೀನ್ ಮಾನವ ಹಕ್ಕುಗಳ ಹೋರಾಟಗಾರ ಇಹಾಬ್ ಹಸನ್ ಹೇಳಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಮೂರು ಬಾರಿ ಬಂಧನಕ್ಕೊಳಗಾಗಿರುವ ಬಿರ್ಜೈತ್ ವಿಶ್ವವಿದ್ಯಾಲಯದ ಮತ್ತೊಬ್ಬ ಕ್ರೈಸ್ತ ವಿದ್ಯಾರ್ಥಿನಿ ಲಯಾನ್ ನಾಸರ್ ಅವರ ಪ್ರಕರಣವನ್ನು ಅವರು ಉಲ್ಲೇಖಿಸಿದರು.
“ಇದು ಒಂದು ಮಾದರಿಯಾಗಿದೆ,” ಎಂದು ಹಸನ್ ವ್ಯಾಟಿಕನ್ ನ್ಯೂಸ್‌ಗೆ ತಿಳಿಸಿದ್ದಾರೆ. “ವಿಶ್ವವಿದ್ಯಾಲಯದ ಚಟುವಟಿಕೆಗಳ ಕಾರಣದಿಂದ [ನಾಸರ್] ಅವರಿಗೆ ಎಂಟು ತಿಂಗಳ ಕಾರಾಗೃಹ ಶಿಕ್ಷೆ ವಿಧಿಸಲಾಗಿತ್ತು. ನತಾಲಿ ಅಬು ದಯ್ಯೆಹ್ ಅವರೂ ಈಗ ಅದೇ ಹಾದಿಯನ್ನು ಅನುಸರಿಸುವಂತಾಗಬಹುದು.”
AFP ಪ್ರಕಾರ, “ಭಯೋತ್ಪಾದಕ ಚಟುವಟಿಕೆಗಳನ್ನು ಉತ್ತೇಜಿಸಿದ ಶಂಕೆಯ ಮೇರೆಗೆ” ಈ ನಾಲ್ವರು ಮಹಿಳೆಯರನ್ನು ಬಂಧಿಸಲಾಗಿದೆ ಎಂದು ಇಸ್ರಾಯೇಲಿ ಸೇನೆ ತಿಳಿಸಿದೆ. ಮತ್ತೊಂದೆಡೆ, ಬಿರ್ಜೈತ್ ವಿಶ್ವವಿದ್ಯಾಲಯವು ಈ ಬಂಧನಗಳನ್ನು “ಪ್ಯಾಲೆಸ್ತೀನ್ ಶಿಕ್ಷಣ ಮತ್ತು ವಿದ್ಯಾರ್ಥಿಗಳ ಶಿಕ್ಷಣ ಮುಂದುವರಿಸುವ ಹಕ್ಕನ್ನು ಗುರಿಯಾಗಿಸಿಕೊಂಡಿರುವ ಇಸ್ರಾಯೇಲಿನ ವ್ಯವಸ್ಥಿತ ನೀತಿಗಳ” ಭಾಗವೆಂದು ಟೀಕಿಸಿದೆ.
ಈ ಬಂಧನಗಳು, ಜನವರಿಯಲ್ಲಿ ಬಿರ್ಜೈತ್ ವಿಶ್ವವಿದ್ಯಾಲಯದ ಮೇಲೆ ನಡೆದ ಪ್ರಮುಖ ಇಸ್ರಾಯೇಲಿ ಸೇನಾ ಕಾರ್ಯಾಚರಣೆಯ ನಂತರ ಸಂಭವಿಸಿವೆ. ಆ ಕಾರ್ಯಾಚರಣೆಯ ವೇಳೆ ಸೈನಿಕರು ಅಶ್ರುವಾಯು, ಶಬ್ದ ಸ್ಫೋಟಕಗಳು ಮತ್ತು ಜೀವಂತ ಗುಂಡುಗಳನ್ನು ಬಳಸಿದ್ದರು.
ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).