ಹುಡುಕಿ

Pope Francis meets with director Martin Scorsese at the Vatican Pope Francis meets with director Martin Scorsese at the Vatican  (Vatican Media)

ಚಿತ್ರನಿರ್ಮಾಣದಲ್ಲಿನ ವಿಸ್ಮಯದ ಅನುಭವದ ಕುರಿತು ಮಾರ್ಟಿನ್ ಸ್ಕೋರ್ಸೇಸಿ

ಜೂನ್ 25ರಂದು ಮಿಲಾನ್‌ನ ಆಂಟೆಯೊ ಪಲಾಝೊ ಡೆಲ್ ಸಿನೆಮಾದಲ್ಲಿ ನಡೆದ "ಲಾ ಮಿಲನೇಷಿಯಾನಾ" ಕಾರ್ಯಕ್ರಮದಲ್ಲಿ ಅಮೆರಿಕದ ಚಲನಚಿತ್ರ ನಿರ್ದೇಶಕ ಮಾರ್ಟಿನ್ ಸ್ಕೋರ್ಸೇಸಿ ಅವರಿಗೆ ಗೌರವ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಪ್ರದರ್ಶಿಸಲಾದ ವಿಡಿಯೋ ಸಂದೇಶವನ್ನು ಅವರು ಕಳುಹಿಸಿದ್ದರು. ಕಾರ್ಯಕ್ರಮದಲ್ಲಿ ಸಂಸ್ಕೃತಿ ಮತ್ತು ಶಿಕ್ಷಣ ವಿಭಾಗದ ಉಪ ಕಾರ್ಯದರ್ಶಿಗಳಾದ ವಂ. ಗುರು ಅಂತೋನಿಯೊ ಸ್ಪಡಾರೊ ಅವರು ಭಾಗವಹಿಸಿದ್ದರು.

ಲೇಖಕರು: ಮಾರ್ಟಿನ್ ಸ್ಕೋರ್ಸೇಸಿ

ಈಗ ನಾನು ‘ಕ್ರಿಸ್ತರ ಕೊನೆಯ ಶೋಧನೆ’ (ದಿ ಲಾಸ್ಟ್ ಟೆಂಪ್ಟೇಶನ್ ಆಫ್ ಕ್ರೈಸ್ಟ್) ಚಿತ್ರದ ಬಗ್ಗೆ ಯೋಚಿಸಿದಾಗ, ಅದು ನನ್ನ ಇತರ ಚಿತ್ರಗಳಿಗಿಂತ ಭಿನ್ನವಾದ ಕೃತಿಯೆಂದು ನನಗೆ ಅನಿಸುತ್ತದೆ. ಅದು ನಿಜಕ್ಕೂ ವಿಭಿನ್ನವಾಗಿದೆ—ಅತ್ಯಂತ ವಿಶೇಷವೂ ಹೌದು. ಏಕೆಂದರೆ ಯೇಸುವನ್ನು ನೇರವಾಗಿ ಒಂದು ಪಾತ್ರವಾಗಿ ಚಿತ್ರಿಸುವ ಯಾರೇ ಆಗಿರಲಿ, ಅವರು ಒಂದು ರಹಸ್ಯವನ್ನು ಎದುರಿಸುತ್ತಾರೆ. ಅದು ರಹಸ್ಯದ ಕ್ಷೇತ್ರವಾಗಿದೆ. ಅದು ಎಂದಿಗೂ ಸಂಪೂರ್ಣವಾಗಿ ಅರಿಯಲಾಗದ ವಿಷಯವಾಗಿಯೇ ಉಳಿಯುತ್ತದೆ. ಅದು ಯಾವಾಗಲೂ ಒಂದು ಪ್ರಶ್ನೆಯಾಗಿಯೇ ಇರುತ್ತದೆ.

ಆ ಪ್ರಶ್ನೆ ಏನೆಂದರೆ: ಯೇಸುವಿನ ಜೀವನ ಎಂದರೇನು? ಆ ಪ್ರಶ್ನೆಯು ಸಹಜವಾಗಿಯೇ ಇನ್ನೂ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಶುಭಸಂದೇಶಗಳಲ್ಲಿ ವಿವರಿಸಲಾದ ಘಟನೆಗಳು ಯಾವುವು? ನಾವು ಅರ್ಥಮಾಡಿಕೊಳ್ಳುವ ರೀತಿಯಲ್ಲಿ ಅವರ ಜೀವನದ ಕಥೆ ಎಷ್ಟರ ಮಟ್ಟಿಗೆ ನಿರೂಪಣೆಯಾಗಿದೆ? ಯೇಸು ಎಷ್ಟರ ಮಟ್ಟಿಗೆ ಮಾನವರಾಗಿದ್ದರು? ಅವರು ಮಾನವರಾಗಿದ್ದರೇ? ಮತ್ತು ಎಷ್ಟರ ಮಟ್ಟಿಗೆ ದೈವಿಕರಾಗಿದ್ದರು? ಅವರು ಸಂಪೂರ್ಣ ಮಾನವರೂ, ಸಂಪೂರ್ಣ ದೈವಿಕರೂ ಆಗಿದ್ದರು. ಇದೇ ಪ್ರಶ್ನೆಯು ನನ್ನ ದೃಷ್ಟಿಕೋನದ ಕೇಂದ್ರಬಿಂದುವಾಗಿತ್ತು.

ನಾನು ಮೊದಲ ಬಾರಿಗೆ ನಿಕೋಸ್ ಕಝಾಂಟ್ಸಾಕಿಸ್ ಅವರ ಕಾದಂಬರಿಯನ್ನು ಓದಿದಾಗ ನನ್ನನ್ನು ಅತ್ಯಂತ ಆಕರ್ಷಿಸಿದ ಅಂಶವೂ ಇದೇ. ಸಂಪೂರ್ಣ ಮಾನವರೂ, ಸಂಪೂರ್ಣ ದೈವಿಕರೂ ಆಗಿರುವ ಕ್ರಿಸ್ತರು—ಮತ್ತು ಕೊನೆಯ ಶೋಧನೆ ಎಂದರೆ ಸಾಮಾನ್ಯ ಜೀವನವನ್ನು ನಡೆಸುವ ಪ್ರಲೋಭನೆ. ಏಕೆಂದರೆ ಹೆಚ್ಚಿನ ಸಂದರ್ಭಗಳಲ್ಲಿ ಸಾಮಾನ್ಯ ಜೀವನವೇ ದೇವರ ಆಶೀರ್ವಾದದಿಂದ ಕೂಡಿರುತ್ತದೆ.

ನಾನು “ದೃಷ್ಟಿಕೋನ” ಎಂಬ ಪದವನ್ನು ಬಳಸುತ್ತಿದ್ದೇನೆ. ಆದರೆ “ಪ್ರಯತ್ನ” ಎಂಬ ಪದವೇ ಹೆಚ್ಚು ಸೂಕ್ತವಾಗಿರಬಹುದು. ಏಕೆಂದರೆ ನಾವು ಯೇಸುವನ್ನು ಕಾದಂಬರಿ, ಕವಿತೆ, ಸಂಗೀತ, ಚಿತ್ರಕಲೆ ಅಥವಾ ಚಲನಚಿತ್ರದ ಮೂಲಕ ಚಿತ್ರಿಸುವಾಗ, ನಾವೆಲ್ಲರೂ ಮಾಡುತ್ತಿರುವುದು ಒಂದು ಪ್ರಾಮಾಣಿಕ ಪ್ರಯತ್ನವೇ ಆಗಿದೆ.

ಕೊನೆಗೂ ಈ ಚಿತ್ರವನ್ನು ನಿರ್ಮಿಸಲು ಸಾಧ್ಯವಾದಾಗ, ಕೆಲವರು ಇದನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸಿ, ಆಳವಾದ ಪ್ರೀತಿ ಮತ್ತು ನನ್ನ ಬಾಲ್ಯದಿಂದಲೂ ನನ್ನೊಳಗಿದ್ದ ವಿಸ್ಮಯದ ಭಾವನೆಯಿಂದ ಮೂಡಿಬಂದ ಒಂದು ಪ್ರಾಮಾಣಿಕ ಪ್ರಯತ್ನವೆಂದು ಅರ್ಥಮಾಡಿಕೊಳ್ಳುತ್ತಾರೆ ಎಂದು ನಾನು ಆಶಿಸಿದ್ದೆ. ಯೇಸುವಿನ ಕುರಿತು ಒಂದು ಗಂಭೀರ ಮತ್ತು ಅರ್ಥಪೂರ್ಣ ಸಂವಾದವನ್ನು ಆರಂಭಿಸುವುದೇ ನನ್ನ ಉದ್ದೇಶವಾಗಿತ್ತು. ಇಂದಿನ ಕಾಲದಲ್ಲಿ ಯೇಸುವನ್ನು ನಮ್ಮ ಹೃದಯಗಳಲ್ಲಿ, ನಮ್ಮ ಜೀವನದಲ್ಲಿ ಮತ್ತು ನಮ್ಮ ಆತ್ಮದಲ್ಲಿ ಮರುಕಂಡುಕೊಳ್ಳಲು ಈ ಸಂವಾದ ಸಹಾಯ ಮಾಡಬೇಕು ಎಂದು ನಾನು ಬಯಸಿದ್ದೆ.

ಯೇಸುವಿನ ಚಿತ್ರವು ಗೋಡೆಯ ಮೇಲಿನ ಒಂದು ಚಿತ್ರವಾಗಿ ಮಾತ್ರ ಉಳಿಯಬಾರದು; ನಮ್ಮ ಜೀವನದೊಂದಿಗೆ ಯಾವುದೇ ಸಂಬಂಧವಿಲ್ಲದ ಒಂದು ಪ್ರತಿಮೆಯಾಗಿರಬಾರದು ಎಂಬುದು ನನ್ನ ಆಶಯವಾಗಿತ್ತು. ಆದರೆ ಬದಲಾಗಿ ಅದು ದೊಡ್ಡ ವಿವಾದಕ್ಕೆ ಕಾರಣವಾಯಿತು. ನಂತರ ಪೂಜ್ಯ ಜಗದ್ಗುರು ಫ್ರಾನ್ಸಿಸ್ ನನ್ನನ್ನು ಅತ್ಯಂತ ಆತ್ಮೀಯವಾಗಿ ಸ್ವಾಗತಿಸಿದಾಗ, ವ್ಯಾಟಿಕನ್‌ನಲ್ಲಿ ನನಗೆ ಆತ್ಮೀಯ ಸ್ವಾಗತ ದೊರೆತಾಗ ಹಾಗೂ ವಂ. ಗುರು ಅಂತೋನಿಯೊ ಸ್ಪಡಾರೊ ಅವರಲ್ಲಿ ಒಬ್ಬ ಉತ್ತಮ ಸ್ನೇಹಿತನನ್ನು ಕಂಡುಕೊಂಡಾಗ, ಅದು ನನಗೆ ಎಷ್ಟೊಂದು ಮಹತ್ವದ್ದಾಗಿತ್ತು ಎಂಬುದನ್ನು ಮಾತಿನಲ್ಲಿ ಹೇಳಲು ಸಾಧ್ಯವಿಲ್ಲ.

ಆದ್ದರಿಂದ ಈ ಚಿತ್ರದ ಪ್ರದರ್ಶನ ನಡೆಯುತ್ತಿರುವುದು ನನಗೆ ಅಪಾರ ಸಂತೋಷವನ್ನು ನೀಡುತ್ತಿದೆ. ವೈಯಕ್ತಿಕವಾಗಿ ನಿಮ್ಮೊಂದಿಗಿರಲು ಸಾಧ್ಯವಾಗದಿರುವುದಕ್ಕೆ ನನಗೆ ನಿಜವಾಗಿಯೂ ವಿಷಾದವಿದೆ. ಈ ಚಿತ್ರದ ಕುರಿತು ಅದ್ಭುತವಾದ ಪುಸ್ತಕವನ್ನು ಬರೆದ ಪಿಯರ್‌ಲುಯಿಜಿ ಡೆ ಪಾಸ್ಕ್ವಾಲೆ ಅವರಿಗೆ ಹಾಗೂ ತಮ್ಮ ನಿರಂತರ ಸ್ನೇಹಕ್ಕಾಗಿ ವಂ. ಗುರು ಅಂತೋನಿಯೊ ಸ್ಪಡಾರೊ ಅವರಿಗೆ ನಾನು ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸುತ್ತೇನೆ. ಇಂದು ಸಂಜೆ ಈ ಚಿತ್ರವನ್ನು ವೀಕ್ಷಿಸಲು ಬಂದಿರುವ ನಿಮ್ಮೆಲ್ಲರಿಗೂ ನನ್ನ ಧನ್ಯವಾದಗಳು.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

 

26 ಜೂನ್ 2026, 22:27