ಹುಡುಕಿ

ಬ್ರಿಟಿಷ್ ಪ್ರಧಾನಿ ಕೀರ್ ಸ್ಟಾರ್ಮರ್ ರಾಜೀನಾಮೆ ಬ್ರಿಟಿಷ್ ಪ್ರಧಾನಿ ಕೀರ್ ಸ್ಟಾರ್ಮರ್ ರಾಜೀನಾಮೆ  (ANSA)

ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ರಾಜೀನಾಮೆ; ನಾಯಕತ್ವ ಸ್ಪರ್ಧೆಗೆ ದಾರಿ

ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ದೇಶವನ್ನು ಮುನ್ನಡೆಸಲು ತಮ್ಮ ಪಕ್ಷದ ಬೆಂಬಲವನ್ನು ಕಳೆದುಕೊಂಡಿರುವುದನ್ನು ಒಪ್ಪಿಕೊಂಡ ನಂತರ, ಕೀರ್ ಸ್ಟಾರ್ಮರ್ ಅವರು ಬ್ರಿಟನ್ ಪ್ರಧಾನಮಂತ್ರಿ ಹಾಗೂ ಲೇಬರ್ ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಲೇಖಕರು: ಸೂಸಿ ಹಾಡ್ಜಸ್ - ಲಂಡನ್

ಬ್ರಿಟನ್‌ನ ಮುಂದಿನ ಪ್ರಧಾನಮಂತ್ರಿಯಾಗಿ ಆಂಡಿ ಬರ್ನಮ್ ಅಧಿಕಾರ ವಹಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಗ್ರೇಟರ್ ಮ್ಯಾಂಚೆಸ್ಟರ್‌ನ ಜನಪ್ರಿಯ ಮಾಜಿ ಮೇಯರ್ ಆಗಿರುವ ಅವರು, ಸ್ಟಾರ್ಮರ್ ಅವರ ಉತ್ತರಾಧಿಕಾರಿಯಾಗಿ ಸ್ಪರ್ಧಿಸುವುದಾಗಿ ಈಗಾಗಲೇ ದೃಢಪಡಿಸಿದ್ದಾರೆ.

ಸ್ಟಾರ್ಮರ್ ಅವರ ರಾಜೀನಾಮೆಯೊಂದಿಗೆ, ಕಳೆದ ಹತ್ತು ವರ್ಷಗಳಲ್ಲಿ ಬ್ರಿಟನ್ ತನ್ನ ಏಳನೇ ಪ್ರಧಾನಮಂತ್ರಿಯನ್ನು ಕಾಣುವ ಸನ್ನಿವೇಶ ಎದುರಾಗಿದೆ. ಸುಮಾರು ಎರಡು ಶತಮಾನಗಳ ಅವಧಿಯಲ್ಲಿ ದೇಶದಲ್ಲಿ ಕಂಡುಬಂದ ಅತಿ ಹೆಚ್ಚಿನ ನಾಯಕತ್ವ ಬದಲಾವಣೆ ಇದಾಗಿದೆ.

ಜೀವನಮಟ್ಟ ಸುಧಾರಣೆ, ಸಾರ್ವಜನಿಕ ಸೇವೆಗಳ ಬಲವರ್ಧನೆ ಮತ್ತು ಅಕ್ರಮ ವಲಸೆಯನ್ನು ನಿಯಂತ್ರಿಸುವಲ್ಲಿ ಸರ್ಕಾರಗಳು ಸತತವಾಗಿ ವಿಫಲವಾಗಿವೆ ಎಂಬ ಅಸಮಾಧಾನದಿಂದ ಬಳಲುತ್ತಿರುವ ಮತದಾರರ ಬೆಂಬಲವನ್ನು ಉಳಿಸಿಕೊಳ್ಳಲು ರಾಜಕೀಯ ನಾಯಕರು ಎದುರಿಸುತ್ತಿರುವ ಸಂಕಷ್ಟವನ್ನು ಇದು ತೋರಿಸುತ್ತದೆ.

ಲಂಡನ್‌ನಲ್ಲಿರುವ ತಮ್ಮ ಅಧಿಕೃತ ನಿವಾಸದ ಹೊರಗೆ ರಾಜೀನಾಮೆ ಘೋಷಣೆ ಮಾಡುತ್ತಿದ್ದ ಸ್ಟಾರ್ಮರ್, ತಮ್ಮ ಉತ್ತರಾಧಿಕಾರಿಯನ್ನು ಆಯ್ಕೆ ಮಾಡಲು ನಾಯಕತ್ವ ಸ್ಪರ್ಧೆಯ ವೇಳಾಪಟ್ಟಿಯನ್ನು ನಿಗದಿಪಡಿಸುವಂತೆ ಲೇಬರ್ ಪಕ್ಷದ ಸಂಘಟನಾ ಸಮಿತಿಯನ್ನು ಕೋರಲಿದ್ದೇನೆ ಎಂದು ಹೇಳಿದರು.

ನಾಮಪತ್ರ ಸಲ್ಲಿಕೆ ಜುಲೈ 9ರಂದು ಆರಂಭವಾಗಿ ಜುಲೈ ಮಧ್ಯಭಾಗದಲ್ಲಿ ಮುಕ್ತಾಯಗೊಳ್ಳಲಿದೆ. ಅಧಿಕಾರ ಹಸ್ತಾಂತರ ಪ್ರಕ್ರಿಯೆ ಸುಗಮವಾಗಿ ನಡೆಯಲು ತಮ್ಮಿಂದ ಸಾಧ್ಯವಿರುವ ಎಲ್ಲ ಸಹಕಾರ ನೀಡುವುದಾಗಿ ಹಾಗೂ ತಮ್ಮ ಉತ್ತರಾಧಿಕಾರಿಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಸ್ಟಾರ್ಮರ್ ಭರವಸೆ ನೀಡಿದರು.

ಆ ಉತ್ತರಾಧಿಕಾರಿ ಆಂಡಿ ಬರ್ನಮ್ ಆಗುವ ಸಾಧ್ಯತೆ ಬಹುತೇಕ ಖಚಿತವಾಗಿದೆ. ಪ್ರಧಾನಮಂತ್ರಿಯ ರಾಜೀನಾಮೆಯ ನಂತರ, ಬರ್ನಮ್ ಅವರು ಅಧಿಕೃತವಾಗಿ ತಮ್ಮ ಅಭ್ಯರ್ಥಿತ್ವವನ್ನು ಘೋಷಿಸಿದರು. ಇನ್ನೊಬ್ಬ ಸಂಭಾವ್ಯ ಅಭ್ಯರ್ಥಿಯಾಗಿದ್ದ ಮಾಜಿ ಆರೋಗ್ಯ ಸಚಿವ ವೆಸ್ ಸ್ಟ್ರೀಟಿಂಗ್, ಸ್ವಲ್ಪ ಸಮಯದ ಬಳಿಕ ಬರ್ನಮ್ ಅವರ ನಾಯಕತ್ವದ ಸ್ಪರ್ಧೆಗೆ ತಮ್ಮ ಬೆಂಬಲವನ್ನು ಘೋಷಿಸಿದರು.

ಲೇಬರ್ ಪಕ್ಷದೊಳಗಿನ ಬೆಂಬಲ ಕ್ರಮೇಣ ಕುಸಿಯುತ್ತಿದ್ದ ಕಾರಣ ಸ್ಟಾರ್ಮರ್ ಅವರ ರಾಜೀನಾಮೆಯನ್ನು ಹಲವು ತಿಂಗಳುಗಳಿಂದಲೇ ನಿರೀಕ್ಷಿಸಲಾಗುತ್ತಿತ್ತು. ಮೇ ತಿಂಗಳ ಆರಂಭದಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪಕ್ಷವು ಅನುಭವಿಸಿದ ಭಾರೀ ಸೋಲಿನ ಬಳಿಕ ಅವರ ವಿರುದ್ಧದ ಅಸಮಾಧಾನ ಇನ್ನಷ್ಟು ವೇಗವಾಗಿ ಹೆಚ್ಚಿತು.

ಕಳೆದ ಶುಕ್ರವಾರ ಮೇಕರ್‌ಫೀಲ್ಡ್ ಕ್ಷೇತ್ರದ ಉಪಚುನಾವಣೆಯಲ್ಲಿ ಬರ್ನಮ್ ನಿರೀಕ್ಷೆಗಿಂತ ದೊಡ್ಡ ಗೆಲುವು ಸಾಧಿಸಿದಾಗ ಸ್ಟಾರ್ಮರ್ ಮೇಲಿನ ಒತ್ತಡ ಮತ್ತಷ್ಟು ತೀವ್ರವಾಯಿತು. ಆ ಗೆಲುವಿನಿಂದ ಬರ್ನಮ್ ಮತ್ತೆ ಸಂಸತ್ತಿಗೆ ಮರಳುವಂತಾಯಿತು.

ಬರ್ನಮ್ ಅವರು ನೈಜಲ್ ಫ್ಯಾರೇಜ್ ನೇತೃತ್ವದ ರಿಫಾರ್ಮ್ ಪಕ್ಷದ ಅಭ್ಯರ್ಥಿಯನ್ನು ಸೋಲಿಸಿದರು. ಕಳೆದ ಒಂದು ವರ್ಷಕ್ಕಿಂತಲೂ ಹೆಚ್ಚು ಕಾಲದಿಂದ ಈ ಪಕ್ಷವು ಜನಾಭಿಪ್ರಾಯ ಸಮೀಕ್ಷೆಗಳಲ್ಲಿ ಮುನ್ನಡೆಯಲ್ಲಿದೆ.

ಆ ಗೆಲುವು, ಸಾರ್ವತ್ರಿಕ ಚುನಾವಣೆಯಲ್ಲಿ ಭಾರೀ ಜಯ ಗಳಿಸಿದ ಎರಡು ವರ್ಷಗಳೊಳಗೆಲೇ ಬೆಂಬಲ ಕಳೆದುಕೊಂಡಿರುವ ಲೇಬರ್ ಪಕ್ಷದ ಸ್ಥಿತಿಯನ್ನು ಬರ್ನಮ್ ಬದಲಾಯಿಸಬಲ್ಲರು ಎಂಬ ವಿಶ್ವಾಸವನ್ನು ಪಕ್ಷದ ಸಂಸದರೊಳಗೆ ಮೂಡಿಸಿತು. ತಮ್ಮ ಪಾಲಿಗೆ, ಬರ್ನಮ್ ಅವರು ಬ್ರಿಟನ್‌ಗೆ ಸ್ಥಿರತೆ, ಗಂಭೀರ ನಾಯಕತ್ವ ಮತ್ತು ಜನರಿಗೆ ಅತ್ಯಂತ ಮುಖ್ಯವಾದ ಸಮಸ್ಯೆಗಳ ಮೇಲೆ ನಿರಂತರ ಗಮನವನ್ನು ಒದಗಿಸುವುದಾಗಿ ಭರವಸೆ ನೀಡಿದ್ದಾರೆ.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

 

22 ಜೂನ್ 2026, 18:14