1980ರಲ್ಲಿ ಇಥಿಯೋಪಿಯಾದಲ್ಲಿ ಸಿವಿಎಂನ ಸೇವಾಕಾರ್ಯ ಆರಂಭ. 1980ರಲ್ಲಿ ಇಥಿಯೋಪಿಯಾದಲ್ಲಿ ಸಿವಿಎಂನ ಸೇವಾಕಾರ್ಯ ಆರಂಭ. 

ಇಟಲಿಯ ಸ್ವಯಂಸೇವಾ ಸಂಸ್ಥೆಯಿಂದ ಇಥಿಯೋಪಿಯಾದ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು

1980ರಿಂದ ಇಥಿಯೋಪಿಯಾದಲ್ಲಿ ಕಾರ್ಯನಿರ್ವಹಿಸುತ್ತಿರುವ ಇಟಲಿಯ ಸ್ವಯಂಸೇವಾ ಸಂಸ್ಥೆಯಾದ ಕೊಮುನಿತಾ ವೊಲೊಂಟಾರಿ ಪೆರ್ ಇಲ್ ಮೊಂಡೊ (CVM) ಸಹಯೋಗದಲ್ಲಿ ಹಾಗೂ ಬಾಸ್ಕೆಟೊ, ಸೆಮೆನ್ ಆರಿ ಮತ್ತು ಗೆಜೆ ಗೋಫಾ ಜಿಲ್ಲೆಗಳ ಆಡಳಿತದ ಸಹಭಾಗಿತ್ವದಲ್ಲಿ ನಿರ್ಮಿಸಲಾದ ಐದು ಕುಡಿಯುವ ನೀರಿನ ಯೋಜನೆಗಳು ಈಗ ಸ್ಥಳೀಯ ಗ್ರಾಮಗಳಿಗೆ ಶುದ್ಧ ನೀರನ್ನು ಒದಗಿಸುತ್ತಿವೆ.

ಲೇಖಕರು: ವಿನ್ಸೆಂಜೊ ಜಿಯಾರ್ಡಿನಾ

ಕೆಲವು ವಾರಗಳ ಹಿಂದೆ ದಕ್ಷಿಣ ಇಥಿಯೋಪಿಯಾದಲ್ಲಿ ಐದು ಕುಡಿಯುವ ನೀರಿನ ಯೋಜನೆಗಳ ನಿರ್ಮಾಣ ಪೂರ್ಣಗೊಂಡ ಹಿನ್ನೆಲೆಯಲ್ಲಿ ಸಂಭ್ರಮಾಚರಣೆ ನಡೆಯಿತು. ಎತ್ತರದ ಪ್ರದೇಶಗಳತ್ತ ಹರಡಿಕೊಂಡಿರುವ ಈ ಗುಡ್ಡಗಾಡು ಪ್ರದೇಶಗಳಲ್ಲಿ ನೀರು ಮತ್ತು ಇಂಧನ ಪ್ರಮುಖ ಸವಾಲುಗಳಾಗಿವೆ. ದೀರ್ಘಕಾಲದ ಬರಗಾಲದಿಂದ ನೀರಿನ ಲಭ್ಯತೆ ದಿನದಿಂದ ದಿನಕ್ಕೆ ಅನಿಶ್ಚಿತವಾಗುತ್ತಿದ್ದು, ಒಂದು ಹನಿ ನೀರನ್ನೂ ವ್ಯರ್ಥ ಮಾಡುವ ಪರಿಸ್ಥಿತಿ ಇಲ್ಲ.

"ಇನ್ನು ಮುಂದೆ 'ಇದು ನಮ್ಮದು' ಎಂಬ ಭಾವನೆಯೊಂದಿಗೆ ಈ ನೀರಿನ ವ್ಯವಸ್ಥೆಯನ್ನು ಪ್ರತಿಯೊಬ್ಬರೂ ಹಾಗೂ ಇಡೀ ಸಮುದಾಯವೂ ತಮ್ಮದೇ ಆಸ್ತಿಯೆಂದು ಪರಿಗಣಿಸಿ ಕಾಪಾಡಿಕೊಳ್ಳುವುದು ಅತ್ಯಗತ್ಯ," ಎಂದು ದಕ್ಷಿಣ ಇಥಿಯೋಪಿಯಾದ ಆರಿ ಜಿಲ್ಲೆಯ ನೀರು ಮತ್ತು ಇಂಧನ ಇಲಾಖೆಯ ಆಡಳಿತಾಧಿಕಾರಿ ಗೆಜಾಚೆವ್ ಬೆಲಾಯ್ ಹೇಳಿದ್ದಾರೆ.

"ಗ್ರಾಮಗಳಲ್ಲಿ ಈ ಸೇವೆ ಕೇವಲ ಇಂದಿಗಷ್ಟೇ ಅಲ್ಲ, ಮುಂದಿನ ಪೀಳಿಗೆಗಳಿಗೂ ನಿರಂತರವಾಗಿ ದೊರೆಯಬೇಕಾದರೆ, ಎಲ್ಲರಲ್ಲೂ ಬಲವಾದ ಹೊಣೆಗಾರಿಕೆಯ ಮನೋಭಾವ ಬೆಳೆಸಿಕೊಳ್ಳಬೇಕು," ಎಂದು ಅವರು ಹೇಳಿದ್ದಾರೆ.

ಹತ್ತು ಕಿಲೋಮೀಟರ್ ಉದ್ದದ ಕೊಳವೆ ಮಾರ್ಗ

ಇಂದು ನಲ್ಲಿಗಳಿಂದ ಹರಿಯುವ ನೀರು ಸುಮಾರು ಹತ್ತು ಕಿಲೋಮೀಟರ್ (6.2 ಮೈಲು) ಉದ್ದದ ಹಾಗೂ ಸುಮಾರು 600 ಮೀಟರ್ ಎತ್ತರದ ಇಳಿಜಾರಿನ ಕೊಳವೆ ಮಾರ್ಗದ ಮೂಲಕ ಗ್ರಾಮಗಳನ್ನು ತಲುಪುತ್ತಿದೆ. ಪರ್ವತದ ಬುಗ್ಗೆಯಿಂದ ಆರಂಭವಾಗುವ ಈ ನೀರು ಸಂಪೂರ್ಣವಾಗಿ ಗುರುತ್ವಾಕರ್ಷಣೆಯ ಬಲದಿಂದಲೇ ಗ್ರಾಮಗಳಿಗೆ ಹರಿಯುತ್ತದೆ. ಆದರೆ ಈ ಯೋಜನೆಯ ಪ್ರತಿಯೊಂದು ಹಂತವೂ ಸುಲಭವಾಗಿ ನೆರವೇರಿದದ್ದಲ್ಲ.

"ಇಲ್ಲಿಯವರೆಗೆ ನಾವು ಬಾಸ್ಕೆಟೊ, ಸೆಮೆನ್ ಆರಿ ಹಾಗೂ ಗೆಜೆ ಗೋಫಾ ಜಿಲ್ಲೆಗಳ ಆಡಳಿತದ ಸಹಯೋಗದಲ್ಲಿ ಐದು ಕುಡಿಯುವ ನೀರಿನ ಯೋಜನೆಗಳನ್ನು ನಿರ್ಮಿಸಿದ್ದೇವೆ," ಎಂದು ಫೊಕ್ಸಿವ್ (FOCSIV) ಒಕ್ಕೂಟದ ಅಂಗಸಂಸ್ಥೆಯಾದ ಸಿವಿಎಂ (ವಿಶ್ವ ಸಮುದಾಯ ಸ್ವಯಂಸೇವಕರು) ಯೋಜನಾ ಸಂಯೋಜಕ ಅತ್ತಿಲಿಯೊ ಅಸ್ಕಾನಿ ತಿಳಿಸಿದ್ದಾರೆ. "ಉದಾಹರಣೆಗೆ ಅಂಗಿಲಾ ಪ್ರದೇಶದಿಂದ ಸುಮಾರು 6,000 ಜನಸಂಖ್ಯೆ ಹೊಂದಿರುವ ನಾಲ್ಕು ಗ್ರಾಮಗಳಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸುವ ಗುರಿ ನಮ್ಮದಾಗಿದೆ."

ಈ ಯೋಜನೆಗೆ ಕಥೋಲಿಕ ಧರ್ಮಸಭೆಗೆ ಮೀಸಲಾಗಿರುವ 8xಮಿಲ್ಲೆ ನಿಧಿಯ ಮೂಲಕ ಇಟಲಿ ಸರ್ಕಾರದ ಬೆಂಬಲ ದೊರೆಯುತ್ತಿದೆ. ಈ ಸೇವೆಯನ್ನು ಉಚಿತವಾಗಿ ಒದಗಿಸಲಾಗುತ್ತಿದೆ, ಏಕೆಂದರೆ ನೀರಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ.

"ಈ ಪ್ರದೇಶದ ಹೆಚ್ಚಿನ ಜನರಿಗೆ ಇನ್ನೂ ಸುರಕ್ಷಿತ ಕುಡಿಯುವ ನೀರಿನ ಸೌಲಭ್ಯ ಲಭ್ಯವಿಲ್ಲ," ಎಂದು ಅಸ್ಕಾನಿ ವಿವರಿಸುತ್ತಾರೆ. "ಕೇವಲ ಶೇಕಡಾ 30ರಿಂದ 40ರಷ್ಟು ಜನರಿಗೆ ಮಾತ್ರ ಶುದ್ಧ ನೀರಿನ ಮೂಲಗಳು ಲಭ್ಯವಿವೆ. ಇದರಿಂದ ನೀರಿನಿಂದ ಹರಡುವ ರೋಗಗಳ ಕಾರಣ ಸಾರ್ವಜನಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತಿದೆ."

ಸಾರ್ವಜನಿಕ ಆರೋಗ್ಯದ ಸವಾಲು

ಇಥಿಯೋಪಿಯಾ ವೇಗವಾಗಿ ಅಭಿವೃದ್ಧಿಯತ್ತ ಸಾಗುತ್ತಿರುವ ರಾಷ್ಟ್ರವಾಗಿದೆ. 2026ರಲ್ಲಿಯೂ ಇದು ಆಫ್ರಿಕಾದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಒಂದಾಗಿದ್ದು, ಅಂತರರಾಷ್ಟ್ರೀಯ ಹಣಕಾಸು ನಿಧಿ (IMF) ದೇಶದ ಒಟ್ಟು ದೇಶೀಯ ಉತ್ಪನ್ನ (GDP) ಶೇಕಡಾ 9.2ರಷ್ಟು ಬೆಳೆಯಲಿದೆ ಎಂದು ಅಂದಾಜಿಸಿದೆ. ವಿದ್ಯುತ್ ಉತ್ಪಾದನೆ ಹಾಗೂ ಕೈಗಾರಿಕಾ ಅಭಿವೃದ್ಧಿಗೆ ನೆರವಾಗುವ ಅಣೆಕಟ್ಟುಗಳ ನಿರ್ಮಾಣವು ಪ್ರಧಾನಮಂತ್ರಿ ಅಬಿಯ್ ಅಹ್ಮದ್ ಅವರ ಸರ್ಕಾರದ ಪ್ರಮುಖ ಆದ್ಯತೆಗಳಲ್ಲಿ ಒಂದಾಗಿದೆ.

ಆದಾಗ್ಯೂ, ಪ್ರಾದೇಶಿಕ ಅಸಮಾನತೆಗಳು ಇನ್ನೂ ಮುಂದುವರಿದಿವೆ. ಬಾಸ್ಕೆಟೊ, ಸೆಮೆನ್ ಆರಿ ಹಾಗೂ ಗೆಜೆ ಗೋಫಾ ಜಿಲ್ಲೆಗಳು ದೇಶದ ಅತ್ಯಂತ ದುರ್ಬಲ ಪ್ರದೇಶಗಳಲ್ಲಿ ಸೇರಿವೆ. ಸುರಕ್ಷಿತ ಕುಡಿಯುವ ನೀರು ಹಾಗೂ ಸಮರ್ಪಕ ನೈರ್ಮಲ್ಯ ವ್ಯವಸ್ಥೆಯ ಕೊರತೆಯಿಂದ ಇಥಿಯೋಪಿಯಾದಲ್ಲಿ ಹರಡುವ ಸಾಂಕ್ರಾಮಿಕ ರೋಗಗಳಲ್ಲಿ ಕನಿಷ್ಠ ಶೇಕಡಾ 60ರಷ್ಟು ಉಂಟಾಗುತ್ತವೆ ಎಂದು ಯುನಿಸೆಫ್ ಅಂದಾಜಿಸಿದ್ದು, ಅತಿಸಾರ ಸಂಬಂಧಿತ ಕಾಯಿಲೆಗಳು ಮಕ್ಕಳ ಸಾವಿಗೆ ಪ್ರಮುಖ ಕಾರಣಗಳಲ್ಲಿ ಒಂದಾಗಿವೆ.

ನೀರಿನ ಲಭ್ಯತೆಗಾಗಿ ಐವತ್ತು ವರ್ಷಗಳ ಬದ್ಧತೆ

ಇಥಿಯೋಪಿಯಾದಲ್ಲಿ ಸಿವಿಎಂನ ಕಾರ್ಯ ನೀರಿನ ಯೋಜನೆಗಳೊಂದಿಗೆ ಆರಂಭವಾಯಿತು. 1980ರಲ್ಲಿ ಸಂಸ್ಥೆಯ ಮೊದಲ ಇಬ್ಬರು ಸ್ವಯಂಸೇವಕರು ನೀರು ಸರಬರಾಜು ಯೋಜನೆಗಳನ್ನು ಜಾರಿಗೊಳಿಸಲು ದೇಶಕ್ಕೆ ಆಗಮಿಸಿದ್ದರು.

ಆರಿ ಜಿಲ್ಲೆಯ ಮತ್ತೊಬ್ಬ ಆಡಳಿತಾಧಿಕಾರಿ ಡೆಗ್ಫೆ ಗೆಟಾಚೆವ್ ಅವರ ಪ್ರಕಾರ, ಆ ಬದ್ಧತೆಯು ಆಗಿದ್ದಷ್ಟೇ ಇಂದಿಗೂ ಮಹತ್ವದ್ದಾಗಿದೆ. "ಶುದ್ಧ ನೀರಿನ ಕೊರತೆಯಿಂದ ಉಂಟಾಗುವ ಮಲೇರಿಯಾ ಹಾಗೂ ಇತರ ಕಾಯಿಲೆಗಳ ಕಾರಣ ನಮ್ಮ ಸಮುದಾಯ ಅನೇಕ ಕಷ್ಟಗಳನ್ನು ಅನುಭವಿಸಿದೆ," ಎಂದು ಅವರು ಹೇಳಿದ್ದಾರೆ.

ನೀರಿನ ಡಬ್ಬಿಯೊಂದಿಗೆ ಸರದಿಯಲ್ಲಿ ನಿಂತಿರುವ ಬುರ್ಟೆ, ತನ್ನ ಇನ್ನೊಂದು ಕೈಯಲ್ಲಿ ಮಗುವನ್ನು ಹಿಡಿದುಕೊಂಡು ಈ ಯೋಜನೆಯ ಪರಿಣಾಮವನ್ನು ಹೀಗೆ ವಿವರಿಸುತ್ತಾರೆ: "ನೀರು ಎಂದರೆ ಜೀವ. ಅದು ಇಲ್ಲದೆ ನಾವು ಬದುಕಲು ಸಾಧ್ಯವಿಲ್ಲ. ಈಗ ನಾವು ಸಂತೋಷವಾಗಿದ್ದೇವೆ—ವಿಶೇಷವಾಗಿ ನಮ್ಮಂತಹ ತಾಯಂದಿರು." ಸೆಫೆರಾ ಗ್ರಾಮದ ನಿವಾಸಿ ಸಡಿಚಾನಾ ಕೂಡ ಭವಿಷ್ಯದ ಬಗ್ಗೆ ಆಶಾವಾದ ವ್ಯಕ್ತಪಡಿಸುತ್ತಾರೆ.

"ಬಹಳ ವರ್ಷಗಳಿಂದ ನಾವು ನದಿಯ ನೀರನ್ನು ಕುಡಿಯುತ್ತಿದ್ದೆವು. ಪ್ರತಿಸಾರಿ ಅನಾರೋಗ್ಯಕ್ಕೆ ಒಳಗಾಗುವ ಅಪಾಯವಿತ್ತು," ಎಂದು ಅವರು ನೆನಪಿಸಿಕೊಳ್ಳುತ್ತಾರೆ. "ಈಗ ಕೊನೆಗೂ ನಮ್ಮ ಗ್ರಾಮದಲ್ಲಿ ಶುದ್ಧ ನೀರು ಹರಿಯುತ್ತಿದೆ. ಇದನ್ನು ನಾವು ಅತ್ಯಂತ ಜವಾಬ್ದಾರಿಯಿಂದ ಸಂರಕ್ಷಿಸುತ್ತೇವೆ."

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

 

28 ಜೂನ್ 2026, 20:12