ಹುಡುಕಿ

ಪ್ರೊಫೆಸರ್ ಬೆಂಜಮಿನ್ ರೋಸ್ಮನ್ ಪ್ರೊಫೆಸರ್ ಬೆಂಜಮಿನ್ ರೋಸ್ಮನ್ 

AIಯ ಭವಿಷ್ಯವನ್ನು ರೂಪಿಸುವಲ್ಲಿ ಆಫ್ರಿಕಾದ ಧ್ವನಿಗಳೂ ಪಾಲ್ಗೊಳ್ಳಬೇಕು

ಪೂಜ್ಯ ಜಗದ್ಗುರು 14ನೇ ಲಿಯೋ ಅವರ “Magnifica humanitas” ವಿಶ್ವಪತ್ರಿಕೆ ಪ್ರಕಟವಾದ ಹಿನ್ನೆಲೆಯಲ್ಲಿ, ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಆಫ್ರಿಕಾದ ಪ್ರಮುಖ ಧ್ವನಿಗಳಲ್ಲೊಬ್ಬರು, AI ಅಭಿವೃದ್ಧಿಗೆ ಸಂಬಂಧಿಸಿದ ಜಾಗತಿಕ ಚರ್ಚೆಗಳಿಂದ ಆಫ್ರಿಕನ್ನರನ್ನು ಹೊರಗಿಡಬಾರದು ಎಂಬ ತಮ್ಮ ದೃಢ ನಿಲುವನ್ನು ಪುನರುಚ್ಚರಿಸಿದ್ದಾರೆ.

ಲೇಖಕರು: ಲಿಂಡಾ ಬೋರ್ಡೊನಿ

ಕೃತಕ ಬುದ್ಧಿಮತ್ತೆಯು ಜನರು ಕೆಲಸ ಮಾಡುವ, ಸಂವಹನ ನಡೆಸುವ, ಕಲಿಯುವ ಮತ್ತು ನಿರ್ಧಾರಗಳನ್ನು ಕೈಗೊಳ್ಳುವ ವಿಧಾನಗಳನ್ನು ಅಪೂರ್ವ ವೇಗದಲ್ಲಿ ಪರಿವರ್ತಿಸುತ್ತಿರುವ ಸಂದರ್ಭದಲ್ಲಿ, ಒಂದು ಪ್ರಶ್ನೆ ಹೆಚ್ಚು ಹೆಚ್ಚು ತುರ್ತು ಸ್ವರೂಪ ಪಡೆದುಕೊಳ್ಳುತ್ತಿದೆ: ಮಾನವಕುಲವನ್ನೇ ಮರುರೂಪಿಸುತ್ತಿರುವ ಈ ತಂತ್ರಜ್ಞಾನಗಳನ್ನು ರೂಪಿಸುವ ಹಕ್ಕು ಯಾರಿಗೆ ಇದೆ?

ಕೃತಕ ಬುದ್ಧಿಮತ್ತೆ ಸಂಶೋಧನೆಯಲ್ಲಿ ಆಫ್ರಿಕಾದ ಪ್ರಮುಖ ವ್ಯಕ್ತಿಗಳಲ್ಲೊಬ್ಬರಾದ ಪ್ರೊಫೆಸರ್ ಬೆಂಜಮಿನ್ ರೋಸ್ಮನ್ ಅವರ ಉತ್ತರ ಸ್ಪಷ್ಟವಾಗಿದೆ. ಜಗತ್ತಿನ ಸಂಪೂರ್ಣ ಪ್ರದೇಶಗಳೇ ಈ ಸಂವಾದದಿಂದ ಹೊರಗುಳಿದರೆ, AI ಸಾಮಾನ್ಯ ಹಿತವನ್ನು ಉತ್ತೇಜಿಸುವ ಬದಲು ಈಗಾಗಲೇ ಇರುವ ಅಸಮಾನತೆಗಳನ್ನು ಇನ್ನಷ್ಟು ಬಲಪಡಿಸುವ ಅಪಾಯವಿದೆ.

ಪೂಜ್ಯ ಜಗದ್ಗುರು 14ನೇ ಲಿಯೋ ಅವರ “Magnifica humanitas: ಕೃತಕ ಬುದ್ಧಿಮತ್ತೆಯ ಯುಗದಲ್ಲಿ ವ್ಯಕ್ತಿಯನ್ನು ಸಂರಕ್ಷಿಸುವ ಕುರಿತು” ವಿಶ್ವಪತ್ರಿಕೆ ಪ್ರಕಟವಾದ ನಂತರ ಹಾಗೂ ವ್ಯಾಟಿಕನ್‌ನಲ್ಲಿ ನಡೆದ “ಮಾನವ ಮುಖಗಳು ಮತ್ತು ಧ್ವನಿಗಳನ್ನು ಸಂರಕ್ಷಿಸುವುದು” ಎಂಬ ಸಮ್ಮೇಳನದಲ್ಲಿ ಭಾಗವಹಿಸಿದ ಬಳಿಕ ವ್ಯಾಟಿಕನ್ ರೇಡಿಯೊದೊಂದಿಗೆ ಮಾತನಾಡಿದ ರೋಸ್ಮನ್, AI ಒದಗಿಸುವ ಸವಾಲುಗಳು ಮತ್ತು ಅವಕಾಶಗಳು, ಜಾಗತಿಕ ಚರ್ಚೆಗಳಲ್ಲಿ ಆಫ್ರಿಕಾದ ದೃಷ್ಟಿಕೋನಗಳನ್ನು ಒಳಗೊಳ್ಳುವ ಮಹತ್ವ ಹಾಗೂ ವಿಶ್ವಪತ್ರಿಕೆಯಲ್ಲಿ ಪೂಜ್ಯ ಜಗದ್ಗುರುಗಳು ಮಂಡಿಸಿರುವ ನೈತಿಕ ದೃಷ್ಟಿಕೋನದ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

ರೋಸ್ಮನ್ ಅವರು ಜೋಹಾನ್ಸ್‌ಬರ್ಗ್‌ನ ವಿಟ್‌ವಾಟರ್ಸ್‌ರ್ಯಾಂಡ್ ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್ ವಿಜ್ಞಾನ, ಯಂತ್ರ ಕಲಿಕೆ ಮತ್ತು ರೋಬೋಟಿಕ್ಸ್ ವಿಭಾಗದ ಪ್ರಾಧ್ಯಾಪಕರಾಗಿದ್ದಾರೆ. ಜೊತೆಗೆ, ಮಾನವ ಮತ್ತು ಯಂತ್ರಗಳಲ್ಲಿನ ಬುದ್ಧಿಮತ್ತೆಯನ್ನು ಅರ್ಥಮಾಡಿಕೊಳ್ಳಲು ಸಮರ್ಪಿತವಾಗಿರುವ ದಕ್ಷಿಣ ಆಫ್ರಿಕಾದ ಪ್ರಮುಖ ಅಂತರಶಿಸ್ತೀಯ ಸಂಶೋಧನಾ ಕೇಂದ್ರವಾದ (Machine Intelligence and Neural Discovery Institute-MIND) ಯಂತ್ರ ಬುದ್ಧಿಮತ್ತೆ ಮತ್ತು ನರ ಶೋಧ ಸಂಸ್ಥೆಯ ನಿರ್ದೇಶಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

ಈ ಸಂಸ್ಥೆಯು ನರಶಾಸ್ತ್ರ, ವರ್ತನಾ ಮನೋವಿಜ್ಞಾನ, ತತ್ವಶಾಸ್ತ್ರ, ನೈತಿಕತೆ, ಆಡಳಿತ, ಜ್ಞಾನಾತ್ಮಕ ವಿಕಾಸ ಮತ್ತು ಸೃಜನಾತ್ಮಕ ಕಲೆಗಳಂತಹ ವಿವಿಧ ಕ್ಷೇತ್ರಗಳ ಸಂಶೋಧಕರನ್ನು ಒಟ್ಟುಗೂಡಿಸುತ್ತದೆ. “ಕೃತಕವಾಗಿರಲಿ ಅಥವಾ ನೈಸರ್ಗಿಕವಾಗಿರಲಿ, ಬುದ್ಧಿಮತ್ತೆಗೆ ಸಂಬಂಧಿಸಿದ ಮೂಲಭೂತ ಪ್ರಶ್ನೆಗಳ ಕುರಿತು ಆಸಕ್ತಿ ಹೊಂದಿರುವ ವಿವಿಧ ಶೈಕ್ಷಣಿಕ ಕ್ಷೇತ್ರಗಳ ವಿದ್ವಾಂಸರನ್ನು ನಾವು ಒಟ್ಟುಗೂಡಿಸಿದ್ದೇವೆ,” ಎಂದು ರೋಸ್ಮನ್ ಹೇಳುತ್ತಾರೆ.

ಗುರಿಯು ಕೇವಲ ಹೊಸ AI ಅನ್ವಯಿಕೆಗಳನ್ನು ಅಭಿವೃದ್ಧಿಪಡಿಸುವುದಲ್ಲ, ವಿಶೇಷವಾಗಿ ಆಫ್ರಿಕಾಕ್ಕಾಗಿ ಮಾತ್ರವಲ್ಲ, ಇನ್ನಷ್ಟು ಆಳವಾದ ಪ್ರಶ್ನೆಗಳಿಗೆ ಉತ್ತರ ಹುಡುಕುವುದಾಗಿದೆ: “ವಿವಿಧ ರೀತಿಯ ಬುದ್ಧಿವಂತ ಅಸ್ತಿತ್ವಗಳೊಂದಿಗೆ ತೊಡಗಿಸಿಕೊಳ್ಳುವುದು ಎಂದರೆ ಏನು? ಮಾನವರು ಮತ್ತು AI ಪರಸ್ಪರ ಹೇಗೆ ಸಂಬಂಧಿಸಬೇಕು? ಮತ್ತು ಬುದ್ಧಿಮತ್ತೆಯ ಸ್ವರೂಪದ ಕುರಿತು ನಾವು ಏನು ಕಲಿಯಬಹುದು?” ಎಂದು ಅವರು ಪ್ರಶ್ನಿಸಿದ್ದಾರೆ.

AIಯನ್ನು ನಾವು ರೂಪಿಸುತ್ತೇವೆಯೇ, ಅಥವಾ AI ನಮ್ಮನ್ನು ರೂಪಿಸುತ್ತದೆಯೇ?

ರೋಸ್ಮನ್ ಅವರ ದೃಷ್ಟಿಯಲ್ಲಿ, AI ಅಭಿವೃದ್ಧಿಯಲ್ಲಿ ಆಫ್ರಿಕಾದ ಪಾಲ್ಗೊಳ್ಳುವಿಕೆಯು ಕೇವಲ ತಾಂತ್ರಿಕ ವಿಷಯವಲ್ಲ; ಅದು ಸ್ವಾಯತ್ತತೆ ಮತ್ತು ಜವಾಬ್ದಾರಿಯ ಪ್ರಶ್ನೆಯಾಗಿದೆ. “ಇದು ನಿಜವಾಗಿಯೂ ಒಂದು ಮೂಲಭೂತ ಪ್ರಶ್ನೆಯಾಗಿದೆ: ನಾವು AIಯನ್ನು ರೂಪಿಸಬೇಕೇ, ಅಥವಾ AI ನಮ್ಮನ್ನು ರೂಪಿಸಬೇಕೇ?”

AI ಶಿಕ್ಷಣ, ಆರೋಗ್ಯ ಸೇವೆ, ಆಡಳಿತ ಮತ್ತು ಉದ್ಯೋಗ ಸೇರಿದಂತೆ ಸಮಾಜದ ಪ್ರತಿಯೊಂದು ಕ್ಷೇತ್ರದ ಮೇಲೂ ಹೆಚ್ಚುತ್ತಿರುವ ಪ್ರಭಾವ ಬೀರುತ್ತಿರುವ ಈ ಸಮಯದಲ್ಲಿ, ಪ್ರಮುಖ ನಿರ್ಧಾರಗಳು ತೆಗೆದುಕೊಳ್ಳುವ ವೇದಿಕೆಯಲ್ಲಿ ಆಫ್ರಿಕಾಕ್ಕೂ ಸ್ಥಾನ ಇರಬೇಕು ಎಂಬುದು ಅವರ ಪ್ರಸ್ತಾವನೆ.

“ಒಬ್ಬ ಹೆಮ್ಮೆಯ ಆಫ್ರಿಕನ್ನನಾಗಿ, ಈ ಕ್ಷೇತ್ರದಲ್ಲಿ ನಮ್ಮ ಧ್ವನಿಯೂ ಪ್ರತಿನಿಧಿಸಲ್ಪಡಬೇಕು, ಆದರೆ ಆ ಪ್ರತಿನಿಧಿತ್ವವೆಂದರೆ ಕೇವಲ AIಯನ್ನು ಬಳಸಿಕೊಂಡು ತಮ್ಮ ಸಮಸ್ಯೆಗಳನ್ನು ಪರಿಹರಿಸಬಲ್ಲ ಜನರು ನಮ್ಮಲ್ಲಿದ್ದಾರೆ ಎಂಬುದಷ್ಟೇ ಆಗಬಾರದು. ನಾವು ಸಹ ದೊಡ್ಡ ಮೇಜಿನ ಬಳಿ ಕುಳಿತು, ಈ ತಂತ್ರಜ್ಞಾನದ ಅಭಿವೃದ್ಧಿಯನ್ನು ರೂಪಿಸುವಲ್ಲಿ ಮತ್ತು ಅದು ಜನರೊಂದಿಗೆ ಹೇಗೆ ಸಂವಹನ ನಡೆಸಬೇಕು ಎಂಬ ಚಿಂತನೆಗೆ ದಿಕ್ಕು ನೀಡುವಲ್ಲಿ ಭಾಗಿಯಾಗಬೇಕು.” ಈ ಪ್ರಶ್ನೆಯು ತಾಂತ್ರಿಕ ಪರಿಣತಿಯನ್ನು ಮೀರಿದದ್ದಾಗಿದೆ. ಇದು ಮೌಲ್ಯಗಳು, ಸಂಸ್ಕೃತಿ, ಭಾಷೆ ಮತ್ತು ಮಾನವ ಘನತೆಗೆ ಸಂಬಂಧಿಸಿದೆ.

“ನಿಮ್ಮ ಸಂಪೂರ್ಣ ವ್ಯವಸ್ಥೆಯು ಬೇರೆಡೆ ನಿರ್ಮಿಸಲಾದ ಸಾಧನಗಳನ್ನು ಬಳಸುವುದರ ಮೇಲೆ, ಮಾಸಿಕ ಚಂದಾದಾರಿಕೆಗಳನ್ನು ಪಾವತಿಸುವುದರ ಮೇಲೆ ಮತ್ತು ಆ ಮೌಲ್ಯವನ್ನು ವಿದೇಶಗಳಿಗೆ ಕಳುಹಿಸುವುದರ ಮೇಲೆ ಅವಲಂಬಿತವಾಗಿದ್ದರೆ, ಕೆಲವು ಅಪಾಯಗಳಿವೆ,” ಎಂದು ಅವರು ವಿವರಿಸುತ್ತಾರೆ. “ಆ ಸಾಧನಗಳು ನಿಮ್ಮ ಉದ್ದೇಶಗಳಿಗೆ ಅನುಗುಣವಾಗಿ ನಿರ್ಮಿತವಾಗಿರದೇ ಇರಬಹುದು. ಅವು ನಿಮ್ಮ ಸಾಂಸ್ಕೃತಿಕ ಮೌಲ್ಯಗಳು, ನಿಮ್ಮ ಭಾಷೆಗಳು ಅಥವಾ ನಿಮ್ಮ ಸಮಾಜಕ್ಕೆ ಮುಖ್ಯವಾದ ಮೌಲ್ಯಗಳನ್ನು ಪ್ರತಿಬಿಂಬಿಸದೇ ಇರಬಹುದು.” ಈ ಪರಿಸ್ಥಿತಿಯನ್ನು ಹೊಸ ರೀತಿಯ ವಸಾಹತುಶಾಹಿ ಎಂದು ಕರೆಯಲು ರೋಸ್ಮನ್ ಹಿಂಜರಿದರೂ, ಬೇರೆಡೆ ಅಭಿವೃದ್ಧಿಪಡಿಸಲಾದ ತಂತ್ರಜ್ಞಾನಗಳ ಮೇಲಿನ ಅವಲಂಬನೆಯು ಹೊಸ ರೀತಿಯ ದುರ್ಬಲತೆಗಳನ್ನು ಸೃಷ್ಟಿಸಬಹುದು ಎಂದು ಅವರು ಒಪ್ಪಿಕೊಳ್ಳುತ್ತಾರೆ.

“ಇದು ಭೌಗೋಳಿಕ-ರಾಜಕೀಯ ಅಪಾಯಗಳಿಗೆ ಒಳಗಾಗುವಂತಹ ಅವಲಂಬನೆಯನ್ನು ಉಂಟುಮಾಡಬಹುದು,ಅದಕ್ಕಾಗಿಯೇ ಆಫ್ರಿಕಾ ಮಾತ್ರವಲ್ಲ, ಜಗತ್ತಿನ ಪ್ರತಿಯೊಂದು ಸಮುದಾಯವೂ AI ಹೇಗೆ ಅಭಿವೃದ್ಧಿಯಾಗಬೇಕು ಎಂಬುದನ್ನು ರೂಪಿಸುವ ಪ್ರಕ್ರಿಯೆಯಲ್ಲಿ ತನ್ನ ಧ್ವನಿಯನ್ನು ಹೊಂದಿರುವುದು ಅತ್ಯಂತ ಮುಖ್ಯವಾಗಿದೆ.”

ಸಾಮಾಜಿಕ ಮಾಧ್ಯಮಗಳಿಂದ ದೊರೆತ ಪಾಠಗಳು

ಸಾಮಾಜಿಕ ಮಾಧ್ಯಮಗಳ ಅನುಭವದಲ್ಲಿ ರೋಸ್ಮನ್ ಅವರು ಸ್ಪಷ್ಟ ಎಚ್ಚರಿಕೆಗಳನ್ನು ಕಾಣುತ್ತಾರೆ. ಈ ತಂತ್ರಜ್ಞಾನವು ಅನೇಕ ನಿರ್ವಿವಾದ ಪ್ರಯೋಜನಗಳನ್ನು ತಂದಿದ್ದರೂ, ಸಮಾಜದಲ್ಲಿ ಧ್ರುವೀಕರಣ, ಕುತಂತ್ರದ ಪ್ರಭಾವ ಮತ್ತು ಸಾರ್ವಜನಿಕ ನಂಬಿಕೆಯ ಕುಸಿತಕ್ಕೂ ಕಾರಣವಾಗಿದೆ.

“ಸಾಮಾಜಿಕ ಮಾಧ್ಯಮಗಳಿಂದ ಉಂಟಾದ ಹಾನಿಯು ಇಂದಿಗೂ ನನ್ನ ಮನಸ್ಸಿನಲ್ಲಿ ಪ್ರತಿಧ್ವನಿಸುತ್ತದೆ,” ಎಂದು ಅವರು ಹೇಳುತ್ತಾರೆ. ಈ ತಂತ್ರಜ್ಞಾನಗಳಲ್ಲಿ ಯಾವುದೂ ಸ್ವತಃ ಕೆಟ್ಟದ್ದಲ್ಲ ಎಂದು ಅವರು ವಿವರಿಸುತ್ತಾರೆ. ಆದರೆ ಅವುಗಳ ವಿನ್ಯಾಸವು ಅನೇಕ ಬಾರಿ ಮಾನವ ಕಲ್ಯಾಣಕ್ಕೆ ಆದ್ಯತೆ ನೀಡದ ಉದ್ದೇಶಗಳಿಂದ ಪ್ರೇರಿತವಾಗಿರುತ್ತದೆ. “ಅದು ನಮ್ಮ ಗಮನವನ್ನು ಹೇಗೆ ಬದಲಾಯಿಸಿದೆ, ಸಮಾಜದ ಧ್ರುವೀಕರಣವನ್ನು ಹೇಗೆ ಹೆಚ್ಚಿಸಿದೆ ಎಂಬುದು ಮಾನವ ಸಂಬಂಧಗಳ ಸ್ವರೂಪವನ್ನೇ ಬದಲಾಯಿಸಿದೆ.”  

ಇದಕ್ಕಿಂತಲೂ ದೊಡ್ಡ ಮಟ್ಟದಲ್ಲಿ AI ಇದೇ ರೀತಿಯ ಪರಿಣಾಮಗಳನ್ನು ವಿಸ್ತರಿಸಬಹುದೆಂಬುದು ಅವರ ಕಳವಳವಾಗಿದೆ. “ಇದು ಕೇವಲ ಸಾಮಾಜಿಕ ಮಾಧ್ಯಮಗಳ ವಿಷಯವಲ್ಲ. ಇದು ನಮ್ಮ ಕೆಲಸ, ಶಿಕ್ಷಣ ಮತ್ತು ವಾಸ್ತವವಾಗಿ ಎಲ್ಲ ಕ್ಷೇತ್ರಗಳನ್ನೂ ಸ್ಪರ್ಶಿಸುತ್ತಿದೆ.” ಅದೇ ಸಮಯದಲ್ಲಿ, AI ಅಭಿವೃದ್ಧಿಗಾಗಿ ದತ್ತಾಂಶ ಸಂಗ್ರಹಿಸುವ ಸ್ಪರ್ಧೆಯ ರೂಪದಲ್ಲಿ ಮತ್ತೊಂದು ಹೊಸ ಸವಾಲು ಉದಯಿಸುತ್ತಿದೆ ಎಂಬ ಎಚ್ಚರಿಕೆಯನ್ನು ಅವರು ನೀಡುತ್ತಾರೆ. ಅನೇಕ ಆಫ್ರಿಕನ್ ಭಾಷೆಗಳು ಮತ್ತು ಸಾಂಸ್ಕೃತಿಕ ಪರಂಪರೆಗಳು ಇನ್ನೂ ಡಿಜಿಟಲ್ ದತ್ತಾಂಶಗಳಲ್ಲಿ ಸಮರ್ಪಕವಾಗಿ ಪ್ರತಿನಿಧಿಸಲ್ಪಟ್ಟಿಲ್ಲ. ಇಂತಹ ಜ್ಞಾನವನ್ನು ಸಂಗ್ರಹಿಸಿ ಸಂರಕ್ಷಿಸುವುದು ಮಹತ್ವದ್ದಾದರೂ, ತಮ್ಮ ಸಾಂಸ್ಕೃತಿಕ ಪರಂಪರೆಯ ಮಾಲೀಕತ್ವ ಮತ್ತು ನಿಯಂತ್ರಣವನ್ನು ಸಮುದಾಯಗಳು ಕಾಪಾಡಿಕೊಳ್ಳಬೇಕು ಎಂದು ರೋಸ್ಮನ್ ಎಚ್ಚರಿಸುತ್ತಾರೆ.

“ನಾವು ಈ ಎಲ್ಲ ಮಾಹಿತಿಯನ್ನು ಸಂಗ್ರಹಿಸಿ ಅಂತರ್ಜಾಲದಲ್ಲಿ ಹಾಕಿದರೆ, ದೊಡ್ಡ AI ಮಾದರಿಗಳು ಅದನ್ನು ಸುಲಭವಾಗಿ ಸಂಗ್ರಹಿಸಿ ಬಳಸಿಕೊಳ್ಳುವ ಅಪಾಯವಿದೆ,ಅದರ ಪರಿಣಾಮವಾಗಿ, ಜನರು ತಮ್ಮದೇ ದತ್ತಾಂಶದ ಮೇಲಿನ ಸ್ವಾಯತ್ತತೆಯನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ.” ಈ ಕಾರಣಕ್ಕಾಗಿ, AI ಆಡಳಿತ ವ್ಯವಸ್ಥೆಯಲ್ಲಿ ಜಗತ್ತಿನ ಪ್ರತಿಯೊಂದು ಪ್ರದೇಶದ ಧ್ವನಿಗಳೂ ಸೇರಿರಬೇಕು ಎಂದು ಅವರು ವಾದಿಸುತ್ತಾರೆ. “ಸರಿಯಾದ ಪರಿಹಾರವೆಂದರೆ, ಈ ಚರ್ಚೆಯ ಕೇಂದ್ರದಲ್ಲಿಯೇ ಜಗತ್ತಿನ ಪ್ರತಿಯೊಂದು ಭಾಗದಿಂದ ಜನರು ಭಾಗವಹಿಸುವಂತಾಗಬೇಕು” ಎಂದು ಅವರು ಹೇಳುತ್ತಾರೆ.

ದಕ್ಷಿಣ ಆಫ್ರಿಕಾದ ಪಾತ್ರ

ಈ ಸವಾಲನ್ನು ಎದುರಿಸಲು ದಕ್ಷಿಣ ಆಫ್ರಿಕಾ ಸಿದ್ಧವಾಗಿದೆಯೇ ಎಂದು ಕೇಳಿದಾಗ, ರೋಸ್ಮನ್ ಅವರು ಎಚ್ಚರಿಕೆಯ ಆಶಾವಾದವನ್ನು ವ್ಯಕ್ತಪಡಿಸಿದರು.“ಇದು ಸುಲಭದ ವಿಷಯವಲ್ಲ,ಆದರೆ ಒಟ್ಟಾರೆ ಪರಿಣಾಮವನ್ನು ಗಮನಿಸಿದರೆ, ಉತ್ತರ ಹೌದು ಎಂದು ನಾನು ಭಾವಿಸುತ್ತೇನೆ.” ದೇಶದ ಬಲಿಷ್ಠ ಶೈಕ್ಷಣಿಕ ಸಂಸ್ಥೆಗಳು, ಬೆಳೆಯುತ್ತಿರುವ ಪ್ರತಿಭಾವಂತ ಸಂಶೋಧಕರ ಸಮೂಹ ಮತ್ತು ಸಮಾಜದ ಸೇವೆಗೆ ಬದ್ಧವಾಗಿರುವ ಕಂಪನಿಗಳತ್ತ ಅವರು ಗಮನ ಸೆಳೆಯುತ್ತಾರೆ. “ಈ ಕ್ಷೇತ್ರದಲ್ಲಿ ತಮ್ಮ ಧ್ವನಿಯನ್ನು ಕಂಡುಕೊಳ್ಳಲು ಆರಂಭಿಸಿರುವ ಅನೇಕ ಬುದ್ಧಿವಂತ ವ್ಯಕ್ತಿಗಳಿದ್ದಾರೆ,” ಎಂದು ಅವರು ಹೇಳುತ್ತಾರೆ.

ಆದಾಗ್ಯೂ, ಇನ್ನೂ ಸಾಕಷ್ಟು ಕೆಲಸ ಬಾಕಿಯಿದೆ. ಅನೇಕ ವಿಷಯಗಳು ಇನ್ನೂ ಅಸ್ತವ್ಯಸ್ತವಾಗಿವೆ ಮತ್ತು ಗೊಂದಲಮಯವಾಗಿವೆ,” ಎಂದು ಅವರು ಒಪ್ಪಿಕೊಳ್ಳುತ್ತಾರೆ. “ವಿವಿಧ ಸಂಸ್ಥೆಗಳು ಪರಸ್ಪರ ಹಾಗೂ ಸರ್ಕಾರದೊಂದಿಗೆ ಹೇಗೆ ಸಹಕರಿಸುತ್ತವೆ ಎಂಬ ವಿಷಯದಲ್ಲಿ ಇನ್ನೂ ಬಹಳಷ್ಟು ಕೆಲಸ ಮಾಡಬೇಕಾಗಿದೆ.” ಈಗಲೂ ತಡವಾಗಿಲ್ಲ ಎಂಬ ದೃಢ ನಂಬಿಕೆಯನ್ನು ಅವರು ವ್ಯಕ್ತಪಡಿಸುತ್ತಾ, “ಇವೆಲ್ಲವೂ ಅತ್ಯಂತ ತುರ್ತು ವಿಷಯಗಳಾಗಿವೆ. ಆದರೆ ಈ ಕಾರ್ಯವನ್ನು ಸರಿಯಾದ ದಿಕ್ಕಿನಲ್ಲಿ ಮುನ್ನಡೆಸುವ ಸಾಮರ್ಥ್ಯ ಖಂಡಿತವಾಗಿಯೂ ನಮ್ಮಲ್ಲಿದೆ ಎಂದು ನಾನು ನಂಬುತ್ತೇನೆ” ಎಂದು ಅವರು ಹೇಳಿದರು.

ನೈತಿಕ ನಾಯಕತ್ವದ ಅಗತ್ಯ

ಮಾನವ ಘನತೆಯು ಮಾರ್ಗದರ್ಶಕ ತತ್ವವಾಗಿ ಉಳಿಯಬೇಕಾದರೆ, ಬಲಿಷ್ಠ ಆಡಳಿತ ವ್ಯವಸ್ಥೆ ಮತ್ತು ಹೆಚ್ಚಿನ ನೈತಿಕ ಜವಾಬ್ದಾರಿಯ ಅಗತ್ಯ ತುರ್ತಾಗಿ ಇದೆ ಎಂದು ರೋಸ್ಮನ್ ಹೇಳಿದರು. 

“ಈ ಸಮಯದಲ್ಲಿ ಅಗತ್ಯವಿರುವುದು ಬಲವಾದ ಆಡಳಿತ ವ್ಯವಸ್ಥೆ, ನಮಗೆ ಹೆಚ್ಚು ನೈತಿಕ ಜವಾಬ್ದಾರಿಯ ಅಗತ್ಯವಿದೆ.” ಈ ಸಂದೇಶವು ವ್ಯಾಟಿಕನ್‌ನಲ್ಲಿ ನಡೆದ ಸಮ್ಮೇಳನದಲ್ಲಿ ಬಲವಾಗಿ ಪ್ರತಿಧ್ವನಿಸಿತು. ಅಲ್ಲಿ ವಿದ್ವಾಂಸರು, ನೈತಿಕ ತಜ್ಞರು, ಧರ್ಮಸಭೆಯ ನಾಯಕರು ಮತ್ತು ತಂತ್ರಜ್ಞಾನ ಪರಿಣತರು ಒಟ್ಟುಗೂಡಿ, ವೇಗವಾಗಿ ಬದಲಾಗುತ್ತಿರುವ ಡಿಜಿಟಲ್ ಜಗತ್ತಿನಲ್ಲಿ ಮಾನವಕುಲವು ತನ್ನ ಗುರುತನ್ನು ಹೇಗೆ ಸಂರಕ್ಷಿಸಿಕೊಳ್ಳಬಹುದು ಎಂಬುದರ ಕುರಿತು ಚರ್ಚಿಸಿದರು.

ಎಚ್ಚರಿಕೆಯ ಆಶಾವಾದ

ತಮ್ಮನ್ನು ತಾವು “ಸಾಮಾನ್ಯವಾಗಿ ಸಾಕಷ್ಟು ನಿರಾಶಾವಾದಿ ವ್ಯಕ್ತಿ” ಎಂದು ವಿವರಿಸಿಕೊಳ್ಳುವ ರೋಸ್ಮನ್ ಅವರು, ಆದಾಗ್ಯೂ ಆಶಾಭರವನ್ನೇ ಉಳಿಸಿಕೊಂಡಿದ್ದಾರೆ. AI ಅಂತಿಮವಾಗಿ ಮಾನವ ಇತಿಹಾಸದಲ್ಲಿನ ಅತ್ಯಂತ ಮಹತ್ವದ ತಾಂತ್ರಿಕ ಆವಿಷ್ಕಾರವೆಂದು ಸಾಬೀತಾಗಬಹುದು ಎಂದು ಅವರು ನಂಬುತ್ತಾರೆ.

“ಮಾನವಕುಲವಾಗಿ ನಾವು ಮಾಡುವ ಅತ್ಯಂತ ಪ್ರಮುಖ ತಾಂತ್ರಿಕ ಆವಿಷ್ಕಾರ AI ಆಗಿರಬಹುದು,” ಎಂದು ಅವರು ಹೇಳುತ್ತಾರೆ. ಜೊತೆಗೆ, “ಇದರಲ್ಲಿ ಅಪಾರ ಅಭಿವೃದ್ಧಿಯ ಸಾಧ್ಯತೆಗಳಿವೆ, ಆದರೆ ಅಷ್ಟೇ ದೊಡ್ಡ ಪ್ರಮಾಣದ ಅಪಾಯಗಳ ಸಾಧ್ಯತೆಯೂ ಇದೆ” ಎಂದು ಅವರು ಎಚ್ಚರಿಸಿದರು.

ಸರಿಯಾದ ದಿಕ್ಕಿನಲ್ಲಿ ಸಾಗುವುದಕ್ಕಿಂತ ತಪ್ಪು ದಿಕ್ಕಿನಲ್ಲಿ ಹೋಗುವ ಮಾರ್ಗಗಳು ಹೆಚ್ಚಿರಬಹುದು ಎಂಬುದು ಅವರ ಕಳವಳವಾಗಿದೆ. ಆದಾಗ್ಯೂ, ವಿವೇಕ ಮತ್ತು ಜ್ಞಾನವು ನಿರ್ಣಾಯಕ ಪಾತ್ರ ವಹಿಸಬಲ್ಲವು. “ವಿಷಯಗಳನ್ನು ಸರಿಯಾದ ದಿಕ್ಕಿನಲ್ಲಿ ಮುನ್ನಡೆಸಲು ಸಾಮಾನ್ಯವಾಗಿ ಮಾನವರ ವಿವೇಕ ಮತ್ತು ಸ್ಪಷ್ಟ ದೃಷ್ಟಿಯೇ ಅಗತ್ಯವಾಗಿರುತ್ತದೆ.”

ವ್ಯಾಟಿಕನ್‌ನಲ್ಲಿ ನಡೆದ ಸಮ್ಮೇಳನದಲ್ಲಿ ಭಾಗವಹಿಸಿದ ಅನುಭವ ಮತ್ತು ಮರುದಿನ ಪೂಜ್ಯ ಜಗದ್ಗುರು 14ನೇ ಲಿಯೋ ಅವರನ್ನು ಭೇಟಿಯಾದ ಸಂದರ್ಭವನ್ನು ಸ್ಮರಿಸುತ್ತಾ, ಬಹಳ ಸಮಯದ ನಂತರ ತಾವು ಹೆಚ್ಚು ಪ್ರೋತ್ಸಾಹಿತರಾಗಿದ್ದೇನೆ ಎಂದು ರೋಸ್ಮನ್ ಹೇಳುತ್ತಾರೆ.

“ನೀವು ಆಟದೊಳಗಿದ್ದಾಗ ಅದರ ನಿಯಮಗಳನ್ನು ಬದಲಾಯಿಸಲು ಸಾಧ್ಯವಿಲ್ಲ,” ಎಂಬ ತಮ್ಮ ಅಭಿಪ್ರಾಯವನ್ನು ಅವರು ಮತ್ತೊಮ್ಮೆ ತಿಳಿಸಿದರು. ಆದರೆ ಸರ್ಕಾರಗಳು, ಕಂಪನಿಗಳು ಮತ್ತು ಸಮಾಜಗಳನ್ನು ಒಂದು ಸಾಮಾನ್ಯ ನೈತಿಕ ದೃಷ್ಟಿಕೋನದ ಸುತ್ತ ಒಗ್ಗೂಡಿಸಬಲ್ಲ ಧ್ವನಿಗಳು ಆ ನಿಯಮಗಳನ್ನು ಮರುರೂಪಿಸಲು ಸಹಾಯ ಮಾಡಬಹುದು ಎಂದು ಅವರು ನಂಬುತ್ತಾರೆ.

“ಜ್ಞಾನ ಮತ್ತು ನೈತಿಕ ಸ್ಪಷ್ಟತೆಯ ಧ್ವನಿಗಳು ಎಲ್ಲಾ ಪ್ರಮುಖ ಪಾತ್ರಧಾರಿಗಳನ್ನು ಒಂದೇ ಮೇಜಿನ ಸುತ್ತ ಕುಳ್ಳಿರಿಸಿ, ಆಟದ ನಿಯಮಗಳನ್ನು ಸರಿಹೊಂದಿಸಲು ಸಾಧ್ಯವಾದರೆ, ಅದೇ ನಿಜವಾದ ಪ್ರಗತಿಯನ್ನು ಸಾಧಿಸುವ ಮಾರ್ಗವಾಗುತ್ತದೆ.”

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

04 ಜೂನ್ 2026, 11:51