ಹುಡುಕಿ

ವಿಶ್ವ ಬ್ಯಾಂಕ್‌ನ ಅಭಿವೃದ್ಧಿ ಹಣಕಾಸು ವಿಭಾಗದ ಉಪಾಧ್ಯಕ್ಷರಾದ ಅಕಿ ನಿಶಿಯೋ ವಿಶ್ವ ಬ್ಯಾಂಕ್‌ನ ಅಭಿವೃದ್ಧಿ ಹಣಕಾಸು ವಿಭಾಗದ ಉಪಾಧ್ಯಕ್ಷರಾದ ಅಕಿ ನಿಶಿಯೋ 

ವಿಶ್ವದ ಕಡು ಬಡವರಿಗೆ ಅತ್ಯಗತ್ಯವಾಗಿರುವ ಸ್ಥಳಗಳಲ್ಲೇ ಅಭಿವೃದ್ಧಿ ಕುಂಠಿತವಾಗುತ್ತಿದೆ: ವಿಶ್ವ ಬ್ಯಾಂಕ್ ಅಧಿಕಾರಿ

ಅಂತರರಾಷ್ಟ್ರೀಯ ಸಹಕಾರವು ಹೆಚ್ಚುತ್ತಿರುವ ಒತ್ತಡಗಳನ್ನು ಎದುರಿಸುತ್ತಿರುವ ಈ ಸಂದರ್ಭದಲ್ಲಿ, ವಿಶ್ವ ಬ್ಯಾಂಕ್‌ನ ಅಭಿವೃದ್ಧಿ ಹಣಕಾಸು ವಿಭಾಗದ ಉಪಾಧ್ಯಕ್ಷರಾದ ಅಕಿ ನಿಶಿಯೋ ಅವರು, ಅಭಿವೃದ್ಧಿಯ ಪ್ರಗತಿಯು ಹೆಚ್ಚು ಹೆಚ್ಚು ಅಸಮಾನವಾಗುತ್ತಿದೆ ಎಂದು ಎಚ್ಚರಿಸಿದ್ದಾರೆ. ಕೋವಿಡ್-19 ಸಾಂಕ್ರಾಮಿಕ, ಅಭಿವೃದ್ಧಿ ನೆರವಿನ ಕುಸಿತ, ಸಂಘರ್ಷಗಳು ಮತ್ತು ಹವಾಮಾನ ಬದಲಾವಣೆಯ ಸಂಯುಕ್ತ ಪರಿಣಾಮಗಳಿಂದಾಗಿ ವಿಶ್ವದ ಕೆಲವು ಅತ್ಯಂತ ಬಡ ರಾಷ್ಟ್ರಗಳು ಹಿಂದೆ ಉಳಿಯುತ್ತಿವೆ.

ಲೇಖಕರು: ಫ್ರಾನ್ಸೆಸ್ಕಾ ಮೆರ್ಲೊ

ವಿಶ್ವ ಬ್ಯಾಂಕ್‌ನ ಅಭಿವೃದ್ಧಿ ಹಣಕಾಸು ವಿಭಾಗದ ಉಪಾಧ್ಯಕ್ಷರಾದ ಅಕಿ ನಿಶಿಯೋ ಅವರ ಮಾತಿನಲ್ಲಿ, “ಪ್ರಸ್ತುತ ನಮ್ಮ ಜಗತ್ತು ಎರಡು ವಿಭಿನ್ನ ಮುಖಗಳನ್ನು ಹೊಂದಿದೆ.” ಒಂದೆಡೆ, ಗಮನಾರ್ಹ ಪ್ರಗತಿಯನ್ನು ಸಾಧಿಸುತ್ತಿರುವ ಅನೇಕ ಅಭಿವೃದ್ಧಿಶೀಲ ರಾಷ್ಟ್ರಗಳಿವೆ. ಹೆಚ್ಚು ಮಕ್ಕಳು ಶಾಲೆಗೆ ಹೋಗುತ್ತಿದ್ದಾರೆ, ಹೆಚ್ಚಿನ ಉದ್ಯೋಗಗಳು ಸೃಷ್ಟಿಯಾಗುತ್ತಿವೆ ಮತ್ತು ಆರೋಗ್ಯ ಸೇವೆಗಳ ಲಭ್ಯತೆ ಸುಧಾರಿಸುತ್ತಿದೆ. ಆದರೆ ಮತ್ತೊಂದೆಡೆ, ವಿಶ್ವ ಬ್ಯಾಂಕ್‌ನ ಮುಖ್ಯ ಅರ್ಥಶಾಸ್ತ್ರಜ್ಞರು “ಅಭಿವೃದ್ಧಿ ರಹಿತ ವಲಯ” (development-free zone) ಎಂದು ವರ್ಣಿಸಿರುವ ದೇಶಗಳಿವೆ ಎಂದು ನಿಶಿಯೋ ವ್ಯಾಟಿಕನ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. ಅಲ್ಲಿ ಅಭಿವೃದ್ಧಿಯ ಪ್ರಗತಿಯು ಬಹುತೇಕ ಸ್ಥಗಿತಗೊಂಡಿದೆ.

ವ್ಯಾಟಿಕನ್ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ, ಕೋವಿಡ್-19 ಸಾಂಕ್ರಾಮಿಕದ ಪರಿಣಾಮ ಮತ್ತು ಅಧಿಕೃತ ಅಭಿವೃದ್ಧಿ ನೆರವು (ODA)ಯಲ್ಲಿ ಉಂಟಾದ ದೊಡ್ಡ ಪ್ರಮಾಣದ ಕುಸಿತವು ವಿಶ್ವದ ಅತ್ಯಂತ ದುರ್ಬಲ ರಾಷ್ಟ್ರಗಳ ಮುನ್ನಡೆಯನ್ನು ತೀವ್ರವಾಗಿ ಕುಂಠಿತಗೊಳಿಸಿದೆ ಎಂದು ನಿಶಿಯೋ ಹೇಳುತ್ತಾರೆ. “ನಾವು ಸಾಕಷ್ಟು ಪ್ರಗತಿಯನ್ನು ಕಂಡಿದ್ದೇವೆ,ಆದರೆ ಆ ಪ್ರಗತಿಯು ಬಹಳ ಅಸಮಾನವಾಗಿದೆ.”

ವಿಶ್ವದ ಅತ್ಯಂತ ದುರ್ಬಲ ರಾಷ್ಟ್ರಗಳಿಗೆ ಬೆಂಬಲ

ವಿಶ್ವ ಬ್ಯಾಂಕ್‌ನ ಪ್ರಮುಖ ಅಂಗಸಂಸ್ಥೆಯಾಗಿರುವ ಅಂತರರಾಷ್ಟ್ರೀಯ ಅಭಿವೃದ್ಧಿ ಸಂಘ (IDA), ತನ್ನ ಹೆಚ್ಚಿನ ಪ್ರಯತ್ನಗಳನ್ನು ದುರ್ಬಲ ಮತ್ತು ಸಂಘರ್ಷಪೀಡಿತ ರಾಷ್ಟ್ರಗಳ ಮೇಲೆ ಕೇಂದ್ರೀಕರಿಸಿದೆ. IDA ಒದಗಿಸುವ ಹಣಕಾಸಿನ ಸುಮಾರು 40 ಪ್ರತಿಶತವು ಅತ್ಯಂತ ಅಸ್ಥಿರತೆ ಮತ್ತು ದುರ್ಬಲತೆಯನ್ನು ಎದುರಿಸುತ್ತಿರುವ ರಾಷ್ಟ್ರಗಳಿಗೆ ಮೀಸಲಾಗಿದೆ. ಈ ಪ್ರದೇಶಗಳಲ್ಲಿ ಬಡತನ, ದುರ್ಬಲ ಆಡಳಿತ ವ್ಯವಸ್ಥೆಗಳು ಮತ್ತು ಸಂಘರ್ಷಗಳು ಒಂದಕ್ಕೊಂದು ಬೆರೆತು ಕಾಣಿಸಿಕೊಳ್ಳುತ್ತವೆ. ಇದರಿಂದ ಅಭಿವೃದ್ಧಿಯ ಕಾರ್ಯವು ಅತ್ಯಂತ ಸವಾಲಿನದ್ದಾಗುತ್ತದೆ.

ಆದರೂ, ಈ ರಾಷ್ಟ್ರಗಳಿಗೆ ಬೆಂಬಲ ನೀಡುವುದು ಕೇವಲ ಮಾನವೀಯ ಜವಾಬ್ದಾರಿಯಲ್ಲ, ಜಾಗತಿಕ ಅಗತ್ಯವೂ ಹೌದು ಎಂದು ನಿಶಿಯೋ ಒತ್ತಿ ಹೇಳುತ್ತಾರೆ. “ಈ ರಾಷ್ಟ್ರಗಳಲ್ಲಿ ಯಾವುದಾದರೂ ಒಂದರಲ್ಲಿ ಮತ್ತೊಂದು ಸಾಂಕ್ರಾಮಿಕ ರೋಗ ಕಾಣಿಸಿಕೊಂಡರೆ, ಅದರ ಪರಿಣಾಮವನ್ನು ಇಡೀ ಜಗತ್ತೇ ಅನುಭವಿಸಬೇಕಾಗುತ್ತದೆ.”

ದುರ್ಬಲ ಆರೋಗ್ಯ ವ್ಯವಸ್ಥೆಗಳು ರೋಗಗಳು ಪತ್ತೆಯಾಗದೆ ಹರಡಲು ಅವಕಾಶ ಮಾಡಿಕೊಡುತ್ತವೆ. ಅವು ಗಡಿಗಳನ್ನು ದಾಟಿ ಜಾಗತಿಕ ಬೆದರಿಕೆಗಳಾಗಿ ರೂಪುಗೊಳ್ಳಬಹುದು. ಆದ್ದರಿಂದ ಆರೋಗ್ಯ ಸೇವೆಗಳು, ಮೂಲಸೌಕರ್ಯಗಳು ಮತ್ತು ಮೂಲಭೂತ ಸಾರ್ವಜನಿಕ ಸೇವೆಗಳನ್ನು ಬಲಪಡಿಸುವುದು ಸ್ಥಳೀಯ ಸಮುದಾಯಗಳಿಗೆ ಮಾತ್ರವಲ್ಲ, ಅಂತರರಾಷ್ಟ್ರೀಯ ಸ್ಥಿರತೆಗೂ ಅತ್ಯಗತ್ಯವಾಗಿದೆ ಎಂದು ಅವರು ವಿವರಿಸುತ್ತಾರೆ.

ಆರ್ಥಿಕ ಸೂಚ್ಯಂಕಗಳು ಮಹತ್ವದ್ದಾಗಿದ್ದರೂ, ಅಭಿವೃದ್ಧಿಯ ನಿಜವಾದ ಅಳತೆ ಜನರ ದೈನಂದಿನ ಜೀವನದಲ್ಲಿಯೇ ಕಂಡುಬರುತ್ತದೆ ಎಂದು ವಾದಿಸುತ್ತಾರೆ. ಇತ್ತೀಚೆಗೆ ಕೀನ್ಯಾಕ್ಕೆ ಭೇಟಿ ನೀಡಿದ ಅವರು, 1960ರ ದಶಕದಲ್ಲಿ IDA ನೆರವು ಪಡೆಯಲು ಆರಂಭಿಸಿದ ಬಳಿಕ ಆ ದೇಶ ಸಾಧಿಸಿರುವ ಗಮನಾರ್ಹ ಪ್ರಗತಿಯನ್ನು ಉದಾಹರಣೆಯಾಗಿ ಉಲ್ಲೇಖಿಸುತ್ತಾರೆ. ಅಂದಿನಿಂದ, ಕೀನ್ಯಾದಲ್ಲಿ ಸರಾಸರಿ ಜೀವಿತಾವಧಿಯು ಸುಮಾರು ದ್ವಿಗುಣಗೊಂಡಿದೆ. ಆರೋಗ್ಯ ಸೇವೆಗಳ ಲಭ್ಯತೆಯೂ ಗಣನೀಯವಾಗಿ ವಿಸ್ತರಿಸಿದೆ. “ಇಂತಹ ಮಹತ್ತರ ಬದಲಾವಣೆಗಳನ್ನು ನೋಡಿದಾಗ, ಜನರ ಜೀವನವು ಎಷ್ಟರ ಮಟ್ಟಿಗೆ ಸುಧಾರಿಸಿದೆ ಎಂಬುದನ್ನು ನಿಜವಾಗಿಯೂ ಕಾಣಬಹುದು.”

ಆದಾಗ್ಯೂ, ಈ ಪರಿವರ್ತನೆಯು ಒಂದೇ ಒಂದು ಕ್ಷೇತ್ರದ ಸಾಧನೆಯಲ್ಲ. ಆರೋಗ್ಯ ಕ್ಷೇತ್ರದ ಸುಧಾರಣೆಗಳು ಶಿಕ್ಷಣ, ಮೂಲಸೌಕರ್ಯ ಮತ್ತು ವಿಶ್ವಾಸಾರ್ಹ ಸಾರ್ವಜನಿಕ ಸೇವೆಗಳ ಮೇಲೆ ಅವಲಂಬಿತವಾಗಿವೆ. ಲಸಿಕೆಗಳನ್ನು ಸುರಕ್ಷಿತವಾಗಿ ಸಂರಕ್ಷಿಸಲು ಆಸ್ಪತ್ರೆಗಳಿಗೆ ವಿದ್ಯುತ್ ಅಗತ್ಯ. ರೋಗಿಗಳು ಮತ್ತು ವೈದ್ಯಕೀಯ ಸಾಮಗ್ರಿಗಳನ್ನು ಸಾಗಿಸಲು ರಸ್ತೆಗಳು ಅಗತ್ಯ. ಆರೋಗ್ಯ ಸೇವೆಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಸಮುದಾಯಗಳಿಗೆ ಶಿಕ್ಷಣದ ಅಗತ್ಯವಿದೆ.

ಕೊನೆಗೆ, ಅಭಿವೃದ್ಧಿ ಎಂದರೆ ವಿವಿಧ ಕ್ಷೇತ್ರಗಳು ಒಟ್ಟಾಗಿ ಕಾರ್ಯನಿರ್ವಹಿಸಿ ಜನರು ಅಭಿವೃದ್ಧಿ ಹೊಂದಲು, ಉತ್ತಮ ಜೀವನವನ್ನು ಕಟ್ಟಿಕೊಳ್ಳಲು ಮತ್ತು ತಮ್ಮ ಸಂಪೂರ್ಣ ಸಾಮರ್ಥ್ಯವನ್ನು ಸಾಕಾರಗೊಳಿಸಲು ಅವಕಾಶಗಳನ್ನು ಸೃಷ್ಟಿಸುವ ಪ್ರಕ್ರಿಯೆಯಾಗಿದೆ ಎಂದು ನಿಶಿಯೋ ತಿಳಿಸಿದರು.

ಹವಾಮಾನ ಬದಲಾವಣೆ: ಬಡವರೇ ಹೊರುವ ಭಾರ

ದಿನದಿಂದ ದಿನಕ್ಕೆ ಸ್ಪಷ್ಟವಾಗಿ ಗೋಚರಿಸುತ್ತಿರುವ ಹವಾಮಾನ ಬದಲಾವಣೆಯ ಪರಿಣಾಮಗಳ ಕುರಿತು ಮಾತನಾಡಿದ ನಿಶಿಯೋ, ಹವಾಮಾನ ಬದಲಾವಣೆಗೆ ಅತ್ಯಂತ ಕಡಿಮೆ ಕಾರಣವಾಗಿರುವ ರಾಷ್ಟ್ರಗಳೇ ಅದರ ಅತ್ಯಂತ ಕಠಿಣ ಪರಿಣಾಮಗಳನ್ನು ಅನುಭವಿಸುತ್ತಿವೆ ಎಂಬ ಕಠಿಣ ವಾಸ್ತವವನ್ನು ಒತ್ತಿ ಹೇಳುತ್ತಾರೆ.

ಸೊಮಾಲಿಯಾದಲ್ಲಿ  ಸಂಭವಿಸುತ್ತಿರುವ ಬರ ಮತ್ತು ಪ್ರವಾಹಗಳು ಲಕ್ಷಾಂತರ ಜನರನ್ನು ಸ್ಥಳಾಂತರಗೊಳಿಸಿವೆ. ಇದರಿಂದ ಕುಟುಂಬಗಳು ತಲೆಮಾರುಗಳಿಂದ ಕೃಷಿ ಮಾಡಿಕೊಂಡು ಬಂದ ಭೂಮಿಯನ್ನು ತೊರೆಯುವಂತಾಗಿದೆ. “ಅಭಿವೃದ್ಧಿಶೀಲ ರಾಷ್ಟ್ರಗಳು ಹವಾಮಾನ ಬದಲಾವಣೆಗೆ ಅತ್ಯಂತ ಕಡಿಮೆ ಕೊಡುಗೆ ನೀಡಿವೆ, ಆದರೆ ಅದರ ದುಷ್ಪರಿಣಾಮಗಳ ಬಹುಪಾಲು ಹೊಡೆತವನ್ನು ಅವುಗಳೇ ಅನುಭವಿಸುತ್ತಿವೆ” ಎಂದು ನಿಶಿಯೋ ಹೇಳುತ್ತಾರೆ.

ಕರಾವಳಿ ಸವೆತ, ಸಮುದ್ರಮಟ್ಟದ ಏರಿಕೆ ಮತ್ತು ಹೆಚ್ಚುತ್ತಿರುವ ಅನಿಶ್ಚಿತ ಹವಾಮಾನ ಮಾದರಿಗಳು ಹೊಸ ರೀತಿಯ ದುರ್ಬಲತೆಗಳನ್ನು ಸೃಷ್ಟಿಸುತ್ತಿವೆ. ಈಗಾಗಲೇ ಬಡತನದೊಂದಿಗೆ ಹೋರಾಡುತ್ತಿರುವ ಸಮುದಾಯಗಳಲ್ಲಿ ಈ ಸಮಸ್ಯೆಗಳು ಇನ್ನಷ್ಟು ಗಂಭೀರವಾಗುತ್ತಿವೆ.

IDA ಮೂಲಕ, ವಿಶ್ವ ಬ್ಯಾಂಕ್ ಹವಾಮಾನ ಹೊಂದಾಣಿಕೆ ಯೋಜನೆಗಳಿಗೆ ಬೆಂಬಲ ನೀಡುತ್ತಿದೆ. ಹೆಚ್ಚುತ್ತಿರುವ ಹವಾಮಾನ ಆಘಾತಗಳನ್ನು ಎದುರಿಸಲು ರಾಷ್ಟ್ರಗಳು ಸ್ಥಿತಿಸ್ಥಾಪಕ ಮೂಲಸೌಕರ್ಯಗಳನ್ನು ನಿರ್ಮಿಸಿಕೊಳ್ಳಲು ಮತ್ತು ಸಿದ್ಧತೆಗಳನ್ನು ಕೈಗೊಳ್ಳಲು ನೆರವಾಗುತ್ತಿದೆ. “ಇಂತಹ ಬೆಂಬಲದ ಅಗತ್ಯವು ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಾಗಲಿದೆ,” ಎಂದು ಅವರು ಎಚ್ಚರಿಸುತ್ತಾರೆ.

ಸಾಲ, ಐಕ್ಯತೆ ಮತ್ತು ನೈತಿಕ ಹೊಣೆಗಾರಿಕೆ

ಇತ್ತೀಚಿನ ವರ್ಷಗಳಲ್ಲಿ ಸಾಲದ ಪ್ರಶ್ನೆಯು ಹೆಚ್ಚು ಮಹತ್ವ ಪಡೆದಿದೆ. ವಿಶೇಷವಾಗಿ ಪೂಜ್ಯ ಜಗದ್ಗುರು ಫ್ರಾನ್ಸಿಸ್ ಅವರು ಸಂಕಷ್ಟದಲ್ಲಿರುವ ರಾಷ್ಟ್ರಗಳಿಗೆ ಸಾಲ ಮನ್ನಾ ನೀಡುವಂತೆ ಪುನಃ ಪುನಃ ಕರೆ ನೀಡಿದ್ದರು ಮತ್ತು ಶ್ರೀಮಂತ ರಾಷ್ಟ್ರಗಳು ಬಡ ರಾಷ್ಟ್ರಗಳೊಂದಿಗೆ ಐಕ್ಯತೆಯಿಂದ ನಡೆದುಕೊಳ್ಳಬೇಕೆಂದು ಒತ್ತಾಯಿಸಿದ್ದರು. ಅದೇ ರೀತಿಯಲ್ಲಿ, ಪೂಜ್ಯ ಜಗದ್ಗುರು 14ನೇ ಲಿಯೋ ಅವರೂ ಜಾಗತಿಕ ಉತ್ತರ ಮತ್ತು ಜಾಗತಿಕ ದಕ್ಷಿಣದ ನಡುವಿನ ಅಸಮಾನತೆಗಳ ಕುರಿತು ನಿರಂತರವಾಗಿ ಗಮನ ಸೆಳೆಯುತ್ತಿದ್ದಾರೆ.

ಅಭಿವೃದ್ಧಿಶೀಲ ರಾಷ್ಟ್ರಗಳ ಬಹುಪಾಲು ಭಾಗಗಳಲ್ಲಿ ಸಾಲದ ಬಿಕ್ಕಟ್ಟು ಹೆಚ್ಚುತ್ತಿರುವ ಕಳವಳದ ವಿಷಯವಾಗಿದೆ ಎಂದು ನಿಶಿಯೋ ಒಪ್ಪಿಕೊಳ್ಳುತ್ತಾರೆ. ಆದರೆ IDA ಮೂಲಕ ಒದಗಿಸಲಾಗುವ ರಿಯಾಯಿತಿ ಆಧಾರಿತ ಹಣಕಾಸು ನೆರವು ಮತ್ತು ಅಭಿವೃದ್ಧಿಶೀಲ ಆರ್ಥಿಕತೆಗಳ ಮೇಲೆ ಹೆಚ್ಚಿನ ಹೊರೆ ಉಂಟುಮಾಡುವ ಮಾರುಕಟ್ಟೆ ಆಧಾರಿತ ಸಾಲಗಳ ನಡುವೆ ಅವರು ಸ್ಪಷ್ಟವಾದ ವ್ಯತ್ಯಾಸವನ್ನು ಸೂಚಿಸುತ್ತಾರೆ.

“ಈ ರಾಷ್ಟ್ರಗಳನ್ನು ನಿಜವಾಗಿಯೂ ಕಾಡುತ್ತಿರುವ ಸಾಲವೆಂದರೆ ಹೆಚ್ಚಾಗಿ ರಿಯಾಯಿತಿಯಲ್ಲದ ಹಣಕಾಸು ನೆರವೇ ಆಗಿದೆ,” ಎಂದು ಅವರು ವಿವರಿಸುತ್ತಾರೆ. ಇದಕ್ಕೆ ವಿರುದ್ಧವಾಗಿ, IDA ಸೀಮಿತ ಮರುಪಾವತಿ ಸಾಮರ್ಥ್ಯ ಹೊಂದಿರುವ ರಾಷ್ಟ್ರಗಳಿಗೆ ವಿಶೇಷವಾಗಿ ವಿನ್ಯಾಸಗೊಳಿಸಲಾದ ಅನುದಾನಗಳು ಮತ್ತು ಕಡಿಮೆ ಬಡ್ಡಿದರದ ಹಣಕಾಸು ನೆರವನ್ನು ಒದಗಿಸುತ್ತದೆ.

2025ರಲ್ಲಿ ಮಾತ್ರ IDA, ನೆರವು ಪಡೆಯುವ ರಾಷ್ಟ್ರಗಳಿಗೆ ಸುಮಾರು 21 ಬಿಲಿಯನ್ ಅಮೆರಿಕನ್ ಡಾಲರ್‌ಗಳ ನಿವ್ವಳ ಹಣಕಾಸು ಹರಿವನ್ನು ಒದಗಿಸಿತು. ಇದು ಅತ್ಯಂತ ಅಗತ್ಯವಾದ ದ್ರವ್ಯ ಲಭ್ಯತೆಯನ್ನು ಒದಗಿಸುವುದರ ಜೊತೆಗೆ, ಸರ್ಕಾರಗಳು ಅಗತ್ಯ ಸಾರ್ವಜನಿಕ ಸೇವೆಗಳನ್ನು ನಿರಂತರವಾಗಿ ಒದಗಿಸಲು ನೆರವಾಯಿತು.

ನೆರವು ಪಡೆಯುವ ರಾಷ್ಟ್ರಗಳಿಂದ ದಾನಿ ರಾಷ್ಟ್ರಗಳವರೆಗೆ

ಅಭಿವೃದ್ಧಿ ನೆರವಿನ ಪರಿಣಾಮಕಾರಿತ್ವಕ್ಕೆ ಅತ್ಯಂತ ಬಲವಾದ ಸಾಕ್ಷಿಯೆಂದರೆ, ಒಂದು ಕಾಲದಲ್ಲಿ ನೆರವಿನ ಅಗತ್ಯವಿದ್ದ ಅನೇಕ ರಾಷ್ಟ್ರಗಳು ಇಂದು ಅದನ್ನು ಮೀರಿ ಸ್ವಾವಲಂಬಿಯಾಗಿರುವುದು ಎಂದು ನಿಶಿಯೋ ವಾದಿಸುತ್ತಾರೆ. IDA ಸ್ಥಾಪನೆಯಾದ ನಂತರದಿಂದ 33 ರಾಷ್ಟ್ರಗಳು ಅದರ ನೆರವಿನಿಂದ ಪದವಿ ಪಡೆದಿವೆ. ಆಶ್ಚರ್ಯಕರ ಸಂಗತಿಯೆಂದರೆ, ಅವುಗಳಲ್ಲಿ 25 ರಾಷ್ಟ್ರಗಳು ನಂತರ ದಾನಿಗಳಾಗಿ ಮರಳಿವೆ.

ದಕ್ಷಿಣ ಕೊರಿಯಾ ಇದರ ಅತ್ಯಂತ ಗಮನಾರ್ಹ ಉದಾಹರಣೆಗಳಲ್ಲಿ ಒಂದಾಗಿದೆ. ಒಂದು ಕಾಲದಲ್ಲಿ ವಿಶ್ವದ ಅತ್ಯಂತ ಬಡ ರಾಷ್ಟ್ರಗಳಲ್ಲಿ ಒಂದಾಗಿದ್ದ ಮತ್ತು ಸ್ವತಃ IDA ನೆರವು ಪಡೆದಿದ್ದ ಈ ದೇಶವು, ಇಂದು ಆ ನಿಧಿಗೆ ಅತಿದೊಡ್ಡ ಕೊಡುಗೆದಾರ ರಾಷ್ಟ್ರಗಳಲ್ಲಿ ಒಂದಾಗಿದೆ. “ನಾವು ಅವರನ್ನು ಮರಳಿ ಬರುವಂತೆ ಕೇಳಲಿಲ್ಲ,” ಎಂದು ನಿಶಿಯೋ ಹೇಳುತ್ತಾರೆ. “IDA ಅವರಿಗಾಗಿ ಪರಿಣಾಮಕಾರಿಯಾಗಿ ಕೆಲಸ ಮಾಡಿತು ಎಂಬ ಕಾರಣದಿಂದ, ಅವರು ತಮ್ಮ ಸ್ವಂತ ಇಚ್ಛೆಯಿಂದ ಮರಳಿ ಬಂದರು.”

ಏಷ್ಯಾ ಮತ್ತು ಪೂರ್ವ ಯುರೋಪಿನ ಹಲವಾರು ರಾಷ್ಟ್ರಗಳು ಇದೇ ರೀತಿಯ ಪಥವನ್ನು ಅನುಸರಿಸಿವೆ. ತಮ್ಮ ಆರ್ಥಿಕತೆಯನ್ನು ಬಲಪಡಿಸಿಕೊಂಡ ನಂತರ, ತಾವು ಹಿಂದೆ ಅನುಭವಿಸಿದ್ದ ಸವಾಲುಗಳನ್ನು ಎದುರಿಸುತ್ತಿರುವ ಇತರ ರಾಷ್ಟ್ರಗಳಿಗೆ ನೆರವು ನೀಡಲು ಮುಂದಾಗಿವೆ.

ನಿಶಿಯೋ ಅವರ ದೃಷ್ಟಿಯಲ್ಲಿ, ಈ ಕಥೆಗಳು ಅಭಿವೃದ್ಧಿ ನೆರವಿನ ಕುರಿತು ಬಹುಸಾರಿ ಗಮನಕ್ಕೆ ಬಾರದ ಒಂದು ಪ್ರಮುಖ ಸತ್ಯವನ್ನು ಸೂಚಿಸುತ್ತವೆ: ಅಭಿವೃದ್ಧಿ ನೆರವು ಯಶಸ್ವಿಯಾದಾಗ, ಅದು ಅವಲಂಬನೆಯನ್ನು ಸೃಷ್ಟಿಸುವುದಿಲ್ಲ; ಬದಲಾಗಿ ಸ್ವಾವಲಂಬನೆಯ ನೆಲೆಯನ್ನು ನಿರ್ಮಿಸುತ್ತದೆ.

ಅಂತರರಾಷ್ಟ್ರೀಯ ಸಹಕಾರವು ಒತ್ತಡಕ್ಕೆ ಒಳಗಾಗಿರುವ ಮತ್ತು ನೆರವಿನ ಬಜೆಟ್‌ಗಳು ಕುಗ್ಗುತ್ತಿರುವ ಈ ಕಾಲಘಟ್ಟದಲ್ಲಿ, ಈ ಮಾದರಿಯು ಹಿಂದೆಂದಿಗಿಂತಲೂ ಹೆಚ್ಚು ಮಹತ್ವದ್ದಾಗಿದೆ ಎಂದು ಅವರು ನಂಬುತ್ತಾರೆ. ಅವರ ಅಭಿಪ್ರಾಯದಲ್ಲಿ, ಪ್ರಶ್ನೆಯು ಐಕ್ಯತೆ ಕಾರ್ಯನಿರ್ವಹಿಸುತ್ತದೆಯೇ ಎಂಬುದಲ್ಲ; ಬದಲಾಗಿ, ಅದರಲ್ಲಿ ಹೂಡಿಕೆ ಮಾಡುವ ಇಚ್ಛೆಯನ್ನು ಜಗತ್ತು ಮುಂದುವರಿಸಿಕೊಂಡು ಹೋಗುತ್ತದೆಯೇ ಎಂಬುದಾಗಿದೆ.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

30 ಮೇ 2026, 00:00