ಯೌಂಡೆಯಲ್ಲಿರುವ ವೃತ್ತದಲ್ಲಿ ಕ್ಯಾಮರೂನಿನ ಮತ್ತು ವ್ಯಾಟಿಕನ್ ಧ್ವಜಗಳು ಯೌಂಡೆಯಲ್ಲಿರುವ ವೃತ್ತದಲ್ಲಿ ಕ್ಯಾಮರೂನಿನ ಮತ್ತು ವ್ಯಾಟಿಕನ್ ಧ್ವಜಗಳು  

ಕ್ಯಾಮರೂನ್ ಜನರು: ಪೂಜ್ಯ ಜಗದ್ಗುರು ಅವರ ಭೇಟಿ ವಿಭಜಿತ ದೇಶಕ್ಕೆ ‘ಚಿಕಿತ್ಸೆ’ ತರಲಿದೆ ಎಂದು ನಿರೀಕ್ಷೆ

ಪೂಜ್ಯ ಜಗದ್ಗುರು ಅವರ ಆಗಮನದ ಮುನ್ನ, ಕ್ಯಾಮರೂನ್‌ನ ಜನರು ವ್ಯಾಟಿಕನ್ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿ, ಅವರ ಭೇಟಿ ವಿಭಿನ್ನ ಸಮುದಾಯಗಳನ್ನು “ಒಟ್ಟಿಗೆ ಬದುಕಲು, ಒಟ್ಟಿಗೆ ಕೆಲಸ ಮಾಡಲು ಮತ್ತು ಹೊಂದಿಕೊಳ್ಳಲು” ಪ್ರೇರೇಪಿಸಬಹುದು ಎಂದು ತಿಳಿಸಿದ್ದಾರೆ.

ಲೇಖಕರು: ಜೋಸೆಫ್ ಟಲ್ಲೋಚ್ – ಯೌಂಡೇ

ಯೌಂಡೇ ನಗರದ ಮಧ್ಯಭಾಗದಲ್ಲಿರುವ ನ್ಗುಲ್ ಜಾಂಬಾ ಅನಾಥಾಶ್ರಮದಲ್ಲಿ, ಅನೇಕ ಮಕ್ಕಳು ಸ್ವಚ್ಛತಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ಮೇಲ್ಭಾಗದಲ್ಲಿ, ಕೈ ಬೀಸುತ್ತಿರುವ ಪೂಜ್ಯ ಜಗದ್ಗುರು ಲಿಯೋ ಅವರ ಚಿತ್ರದ ಬ್ಯಾನರ್ ಕಾಣಿಸುತ್ತದೆ. ಅವರು ಬುಧವಾರ, ಏಪ್ರಿಲ್ 15ರಂದು, ಕ್ಯಾಮರೂನ್‌ಗೆ ಆಗಮಿಸಿದ ಕೆಲವೇ ಗಂಟೆಗಳ ಬಳಿಕ ಈ ಅನಾಥಾಶ್ರಮಕ್ಕೆ ಭೇಟಿ ನೀಡಲಿದ್ದಾರೆ.

“ಇಲ್ಲಿರುವ ಅನೇಕ ಮಕ್ಕಳು ಕಠಿಣ ಹಿನ್ನೆಲೆಯಿಂದ ಬಂದವರು,” ಎಂದು ಅನಾಥಾಶ್ರಮದಲ್ಲಿ ವಾಸವಿದ್ದು, ಸಂಬಂಧಿತ ಶಾಲೆಯ ಮುಖ್ಯ ಶಿಕ್ಷಕಿಯಾಗಿರುವ ಸಹೋದರಿ ಕ್ರಿಸ್ಟಬೆಲ್ ವಿವರಿಸುತ್ತಾರೆ. ಪೂಜ್ಯ ಜಗದ್ಗುರು ಅವರ ಭೇಟಿ “ಮಹತ್ವದ ಕ್ಷಣ”ವಾಗಿರುತ್ತದೆ ಎಂದು ಅವರು ಹೇಳಿ, “ಮಕ್ಕಳು ಪ್ರೀತಿಯನ್ನು ಅನುಭವಿಸುತ್ತಾರೆ… ಮತ್ತು ಧರ್ಮಸಭೆಯ ನಾಯಕತ್ವದಿಂದ ಬೆಂಬಲ ದೊರಕುತ್ತಿದೆ ಎಂಬ ಭಾವನೆ ಹೊಂದುತ್ತಾರೆ” ಎಂದು ತಿಳಿಸಿದ್ದಾರೆ.

ಶಾಂತಿಯ ಸಂದೇಶ

ಅನಾಥಾಶ್ರಮದ ಸಿಬ್ಬಂದಿ ಮಾತ್ರವಲ್ಲ, ಇತರರೂ ಪೂಜ್ಯ ಜಗದ್ಗುರು ಅವರ ಭೇಟಿಯಿಂದ ಧೈರ್ಯ ದೊರೆಯುತ್ತದೆ ಎಂದು ನಿರೀಕ್ಷಿಸುತ್ತಿದ್ದಾರೆ. ಕಳೆದ ವರ್ಷದ ಕೊನೆಯಲ್ಲಿ ನಡೆದ ಚುನಾವಣೆಯ ನಂತರ ಉಂಟಾದ ಹಿಂಸಾಚಾರದಿಂದ ದೇಶ ಇನ್ನೂ ಚೇತರಿಸಿಕೊಳ್ಳುತ್ತಿದೆ; ಆ ಚುನಾವಣೆಯನ್ನು ಹಲವರು ಅಕ್ರಮವಾಗಿದೆ ಎಂದು ಪರಿಗಣಿಸಿದ್ದರು.

“ಪೂಜ್ಯ ಜಗದ್ಗುರು ಅವರ ಶಾಂತಿಯ ಸಂದೇಶವು ಹೆಚ್ಚಿನ ಮಟ್ಟದಲ್ಲಿ ಪರಿಹಾರ ತರಲಿದೆ ಎಂದು ನಾವು ನಂಬುತ್ತೇವೆ,” ಎಂದು ಸ್ಥಳೀಯ ಕಥೋಲಿಕ ಪತ್ರಕರ್ತ ನ್ಗ್ವಾ ಕೊಲಿನ್ ಸೋಹ್ ಹೇಳಿದ್ದಾರೆ. “ಅವರು ಯಾರ ಪಕ್ಷವನ್ನೂ ವಹಿಸದ ವ್ಯಕ್ತಿ.. ರಾಜಕಾರಣಿಯಲ್ಲ, ಆಧ್ಯಾತ್ಮಿಕ ನಾಯಕ; ಕ್ಯಾಮರೂನ್‌ನಲ್ಲಿ ನಾವು ಅದನ್ನೇ ನಿರೀಕ್ಷಿಸುತ್ತಿದ್ದೇವೆ.”

ಈ ದೇಶವು ಈಗಾಗಲೇ ಒಂದು ದಶಕದಿಂದ ಇಂಗ್ಲಿಷ್ ಮತ್ತು ಫ್ರೆಂಚ್ ಭಾಷಿಕರ ನಡುವಿನ ತೀವ್ರ ಸಂಘರ್ಷವನ್ನು ಅನುಭವಿಸುತ್ತಿದೆ. ಉತ್ತರ-ಪಶ್ಚಿಮ ಮತ್ತು ದಕ್ಷಿಣ-ಪಶ್ಚಿಮ ಪ್ರದೇಶಗಳಲ್ಲಿ ಹೆಚ್ಚು ಇರುವ ಇಂಗ್ಲಿಷ್ ಭಾಷಿಕರು, ಫ್ರೆಂಚ್ ಭಾಷಿಕ ಬಹುಮತದಿಂದ ತಮಗೆ ಭೇದಭಾವ ನಡೆಯುತ್ತಿದೆ ಎಂದು ಭಾವಿಸುತ್ತಾರೆ. ಕೆಲವರು ಪ್ರತ್ಯೇಕ ಇಂಗ್ಲಿಷ್ ಭಾಷಿಕ ರಾಷ್ಟ್ರವನ್ನು ನಿರ್ಮಿಸಲು ಶಸ್ತ್ರ ಹಿಡಿದಿದ್ದಾರೆ.

ಪೂಜ್ಯ ಜಗದ್ಗುರು ಎಲ್ಲ ವರ್ಗದ ಕ್ಯಾಮರೂನ್ ಜನರೊಂದಿಗೆ ಮಾತನಾಡಲು ಸಾಧ್ಯವಿದೆ ಎಂದು ಶ್ರೀ ಸೋಹ್ ಅಭಿಪ್ರಾಯಪಟ್ಟಿದ್ದಾರೆ. “ಫ್ರೆಂಚ್ ಭಾಷಿಕರು, ಇಂಗ್ಲಿಷ್ ಭಾಷಿಕರು, ಪ್ರೊಟೆಸ್ಟಂಟ್‌ಗಳು, ಕಥೋಲಿಕರು ಮತ್ತು ಮುಸ್ಲಿಮರು ಎಲ್ಲರೂ ಅವರ ಆಗಮನದ ನಿರೀಕ್ಷೆಯಲ್ಲಿದ್ದಾರೆ. ರೋಮ್ ಧರ್ಮಾಧ್ಯಕ್ಷರು ಅವರನ್ನು “ಒಟ್ಟಿಗೆ ಬದುಕಲು, ಒಟ್ಟಿಗೆ ಕೆಲಸ ಮಾಡಲು ಮತ್ತು ಹೊಂದಿಕೊಳ್ಳಲು” ಪ್ರೇರೇಪಿಸುವರು ಎಂದು ಆಶಿಸುತ್ತಿದ್ದಾರೆ.

ಮರೆಯಲ್ಪಟ್ಟಿರುವ ನೋವು

ಸಾಮಾನ್ಯವಾಗಿ ಕ್ಯಾಮರೂನ್‌ನ ಉತ್ತರ ಭಾಗದ ಆಸ್ಪತ್ರೆಗೆ ಸೇವೆ ಸಲ್ಲಿಸುವ ಸಹೋದರಿ ಕ್ಲೋಡಿನ್ ಬೋಲೂಮ್, ಪೂಜ್ಯ ಜಗದ್ಗುರು ಅವರ ಭೇಟಿಗಾಗಿ ಯೌಂಡೇನಲ್ಲಿ ಇರಲು ಸ್ವಲ್ಪ ವಿರಾಮ ತೆಗೆದುಕೊಂಡಿದ್ದಾರೆ. “ಚುನಾವಣೆಯ ನಂತರ ಇಲ್ಲಿನ ರಾಜಕೀಯ ಪರಿಸ್ಥಿತಿ ಕಠಿಣವಾಗಿದೆ,” ಎಂದು ಅವರು ಹೇಳಿದ್ದಾರೆ. “ಅನೇಕ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ; ಈ ರೀತಿಯಲ್ಲಿ ನಾವು ಮುಂದುವರಿಯಲು ಸಾಧ್ಯವಿಲ್ಲ ಎಂಬ ಭಾವನೆ ಇದೆ.”

ಸಹೋದರಿ ಕ್ಲೋಡಿನ್ ಅವರ ಪ್ರಕಾರ, ಹಲವಾರು ಬಾರಿ ಕ್ಯಾಮರೂನ್ ಜನರಿಗೆ ತಮ್ಮ ಸಮಸ್ಯೆಗಳು ಜಗತ್ತಿಗೆ ಮುಖ್ಯವಲ್ಲವೆಂಬ ಭಾವನೆ ಉಂಟಾಗುತ್ತದೆ. “ಆದರೆ ಪೂಜ್ಯ ಜಗದ್ಗುರು ಬರುತ್ತಿದ್ದಾರೆ ಎಂಬುದನ್ನು ಕೇಳಿದಾಗ, ಜನರ ಮುಖಗಳಲ್ಲಿ ಸಂತೋಷ ಕಾಣಿಸಿತು. ನಾವು ಕೂಡ ಮಾನವರೇ ಎಂಬ ನೆನಪು ಇದರಿಂದ ಬರುತ್ತದೆ” ಎಂದು ಅವರು ಹೇಳಿದ್ದಾರೆ.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

15 ಏಪ್ರಿಲ್ 2026, 17:05