ಹುಡುಕಿ

ತೆಹ್ರಾನ್‌ನಲ್ಲಿ ನಡೆದ ಸ್ಮರಣೆಯಲ್ಲಿ, ದಾಳಿಯಲ್ಲಿ ಮೃತಪಟ್ಟ ಮೀನಾಬ್ ಶಾಲೆಯ ವಿದ್ಯಾರ್ಥಿಗಳ ಭಾವಚಿತ್ರಗಳ ಪ್ರದರ್ಶನ. ತೆಹ್ರಾನ್‌ನಲ್ಲಿ ನಡೆದ ಸ್ಮರಣೆಯಲ್ಲಿ, ದಾಳಿಯಲ್ಲಿ ಮೃತಪಟ್ಟ ಮೀನಾಬ್ ಶಾಲೆಯ ವಿದ್ಯಾರ್ಥಿಗಳ ಭಾವಚಿತ್ರಗಳ ಪ್ರದರ್ಶನ. 

ಇರಾನ್‌ನಲ್ಲಿ ಅಂತರರಾಷ್ಟ್ರೀಯ ಮಕ್ಕಳ ಕಲ್ಯಾಣ ನಿಧಿ: ಯುದ್ಧ ವಿರಾಮ ಇದ್ದರೂ, ಮಕ್ಕಳ ಮೇಲೆ ಹಿಂಸೆಯ ಪರಿಣಾಮ ದೀರ್ಘಕಾಲಿಕ

ಯುದ್ಧ ವಿರಾಮ ಇಸ್ರಾಯೇಲ್-ಅಮೇರಿಕಾ-ಇರಾನ್ ಯುದ್ದವನ್ನು ತಾತ್ಕಾಲಿವಾಗಿ ತಡೆದಿದ್ದರೂ, ಮಕ್ಕಳ ಮೇಲೆ ಈ ಯುದ್ಧವುಂಟುಮಾಡುತ್ತಿರುವ ಅಪಾಯ ಮತ್ತು ಪರಿಣಾಮ ಇನ್ನೂ ಮುಂದುವರಿಯುತ್ತಲೇ ಇರುತ್ತದೆ ಎಂದು ಅಂತರರಾಷ್ಟ್ರೀಯ ಮಕ್ಕಳ ಕಲ್ಯಾಣ ನಿಧಿ(UNICEF)ಎಚ್ಚರಿಸಿದೆ. ಮಕ್ಕಳು “ಈ ಸಂಘರ್ಷದ ಹೊರೆಯನ್ನು ಹೊರುತ್ತಿದ್ದಾರೆ” ಎಂದು ಸಂಸ್ಥೆ ತಿಳಿಸಿದೆ.

ಲೇಖಕರು: ಕೀಲ್ ಗಸ್ಸಿ

ಇಸ್ರಾಯೇಲ್, ಅಮೆರಿಕಾ ಮತ್ತು ಇರಾನ್ ನಡುವಿನ ಎರಡು ವಾರಗಳ ದಾಳಿಗಳನ್ನು ನಿಲ್ಲಿಸುವ ಒಪ್ಪಂದದ ನಂತರ, ಈ ಸಂಘರ್ಷದಿಂದ ಪರಿಣಾಮಕ್ಕೊಳಗಾದ ದಶಲಕ್ಷಾಂತರ ಮಕ್ಕಳಿಗೆ ಸಹಾಯ ಮಾಡಲು ಅಂತರರಾಷ್ಟ್ರೀಯ ಮಕ್ಕಳ ಕಲ್ಯಾಣ ನಿಧಿ (UNICEF) ತನ್ನ ನೆರವನ್ನು ಹೆಚ್ಚಿಸುತ್ತಿದೆ.

ಫೆಬ್ರವರಿ 28ರಿಂದ, ಹಿಂಸಾಚಾರದಲ್ಲಿ 1,100ಕ್ಕೂ ಹೆಚ್ಚು ಮಕ್ಕಳು ಗಾಯಗೊಂಡಿದ್ದಾರೆ ಅಥವಾ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ—ಇದರೊಳಗೆ ಇರಾನ್‌ನಲ್ಲಿ 200, ಲೆಬನಾನ್‌ನಲ್ಲಿ 91, ಇಸ್ರಾಯೇಲ್‌ನಲ್ಲಿ 4 ಮತ್ತು ಕುವೈತ್‌ನಲ್ಲಿ 1 ಮಗು ಸಾವನ್ನಪ್ಪಿದೆ.

ಯುದ್ಧ ವಿರಾಮವನ್ನು ಸ್ವಾಗತಿಸುವ ಧ್ವನಿಗಳೊಂದಿಗೆ ಸೇರುತ್ತಿರುವ ಅಂತರರಾಷ್ಟ್ರೀಯ ಮಕ್ಕಳ ಕಲ್ಯಾಣ ನಿಧಿ(UNICEF), ಏಪ್ರಿಲ್ 9ರಂದು ಪ್ರಕಟಿಸಿದ ಪ್ರಕಟಣೆಯಲ್ಲಿ, ಈ ದಾಳಿಗಳ ವಿರಾಮವು “ಅತಿಯಾದ ಕಷ್ಟವನ್ನು ಅನುಭವಿಸಿದ ಇರಾನ್‌ನ ಮಕ್ಕಳಿಗೂ ಕುಟುಂಬಗಳಿಗೂ ಭವಿಷ್ಯದ ಭರವಸೆ ನೀಡುವಲ್ಲಿ ಅತ್ಯಂತ ಮಹತ್ವದ್ದಾಗಿದೆ” ಎಂದು ವಿವರಿಸಿದೆ.

ಭದ್ರತೆಯನ್ನು ಅನುಭವಿಸಬೇಕಿದ್ದ ಪ್ರತಿಯೊಂದು ಮಗುವಿಗಾಗಿ

“ಆಕಾಶವು ಮೌನವಾದರೂ ಮತ್ತು ದಾಳಿಗಳು ನಿಂತರೂ, ಮಕ್ಕಳ ಮೇಲೆ ಈ ಹಿಂಸೆಯ ಪರಿಣಾಮ ದೀರ್ಘಕಾಲಿಕವಾಗಿರುತ್ತದೆ ಮತ್ತು ಅದನ್ನು ಕಡಿಮೆ ಅಂದಾಜು ಮಾಡಬಾರದು,” ಎಂದು UNICEF ಪ್ರಕಟಣೆ ತಿಳಿಸುತ್ತದೆ.

ತಮ್ಮ ಜೀವವನ್ನು ಕಳೆದುಕೊಂಡ ಪ್ರತಿಯೊಂದು ಮಗುವನ್ನೂ UNICEF ಸ್ಮರಿಸುತ್ತಿದ್ದು, ಈ ಘಟನೆಗಳಿಂದ ಪರಿಣಾಮಕ್ಕೊಳಗಾದ ಎಲ್ಲರ ಕುರಿತು ಆಳವಾದ ದುಃಖವನ್ನು ವ್ಯಕ್ತಪಡಿಸಿದೆ—“ತಮ್ಮ ಮನೆಗಳಲ್ಲಿ, ತಮ್ಮ ಸಮುದಾಯಗಳಲ್ಲಿ ಮತ್ತು ತಮ್ಮ ತರಗತಿಗಳಲ್ಲಿ ಭದ್ರತೆಯನ್ನು ಅನುಭವಿಸಬೇಕಿದ್ದ ಮಕ್ಕಳು—ಅವರು ಕಲಿಯುತ್ತಾ, ಬೆಳೆಯುತ್ತಾ ಮತ್ತು ಕನಸು ಕಾಣಬೇಕಾಗಿತ್ತು.” ಇದಲ್ಲದೆ, ಜೀವನವೇ ಶಾಶ್ವತವಾಗಿ ಬದಲಾಗಿರುವ ಕುಟುಂಬಗಳು, ಸಮುದಾಯಗಳು ಮತ್ತು ಎಲ್ಲರನ್ನೂ ತಮ್ಮ ಚಿಂತನೆಗಳಲ್ಲಿ ಇಟ್ಟುಕೊಂಡಿರುವುದಾಗಿ UNICEF ತಿಳಿಸಿದೆ.

ಸೋಲದ ಸಹಾಯ ಹಸ್ತ

ಈ ಸಂಘರ್ಷದ ಆರಂಭದಿಂದಲೇ UNICEF ಇರಾನ್‌ನಲ್ಲಿ ತನ್ನ ಸಕ್ರಿಯ ಕಾರ್ಯವನ್ನು ಮುಂದುವರಿಸಿಕೊಂಡಿದ್ದು, ತನ್ನ ಸಹಭಾಗಿಗಳೊಂದಿಗೆ ಕೈಜೋಡಿಸಿ, ದೈಹಿಕ ಮತ್ತು ಮಾನಸಿಕ ಆರೋಗ್ಯ ಸೇವೆಗಳು ಹಾಗೂ ಮನೋಸಾಮಾಜಿಕ ಬೆಂಬಲ ಅಗತ್ಯವಿರುವ ಮಕ್ಕಳಿಗೂ ಕುಟುಂಬಗಳಿಗೂ ನೆರವನ್ನು ಒದಗಿಸುತ್ತಿದೆ.

ಸಂಘರ್ಷದಿಂದ ಪರಿಣಾಮಕ್ಕೊಳಗಾದ ಸಮುದಾಯಗಳಿಗೆ ಅಗತ್ಯ ಸೇವೆಗಳ ಪ್ರವೇಶವನ್ನು ಮರುಸ್ಥಾಪಿಸುವ ಉದ್ದೇಶದಿಂದ, ಸಂಸ್ಥೆ ಪೂರ್ವಸಿದ್ಧ ವೈದ್ಯಕೀಯ ಸಾಮಗ್ರಿಗಳು, ಚರ ಆರೋಗ್ಯ ಘಟಕಗಳು, ಪ್ರಾಥಮಿಕ ಆರೋಗ್ಯ ಸೇವಾ ಗುಡಾರಗಳು ಮತ್ತು ತುರ್ತು ಆರೋಗ್ಯ ಕಿಟ್‌ಗಳನ್ನು ನಿಯೋಜಿಸಿದೆ. ಇದೇ ವೇಳೆ ಮಕ್ಕಳಿಗೂ ಸ್ಥಳೀಯ ಸಮುದಾಯಗಳಿಗೂ ಲಸಿಕೆಗಳು ಮತ್ತು ಮನೋಸಾಮಾಜಿಕ ಬೆಂಬಲವನ್ನು ನೀಡುವ ಕಾರ್ಯವನ್ನು ಮುಂದುವರಿಸಿದೆ.

UNICEF ವರದಿ ಪ್ರಕಾರ, ಮಕ್ಕಳು “ಪ್ರಸ್ತುತದಲ್ಲಿಯೂ ಭವಿಷ್ಯದಲ್ಲಿಯೂ  ಈ ಸಂಘರ್ಷದ ಭಾರವನ್ನು ಹೊರುವವರು ಮಕ್ಕಳೇ”. ಭದ್ರವಾಗಿಯೂ ಮುಕ್ತವಾಗಿಯೂ ಇರಬೇಕಾಗಿದ್ದ ಅವರ ಜೀವನಗಳು, ನಿರಂತರ ಭಯ ಮತ್ತು ಅನಿಶ್ಚಿತತೆಯ ನಡುವೆ ಬದುಕುವ ಸ್ಥಿತಿಗೆ ಬದಲಾಗಿದೆ.

ಮೂಲಭೂತ ಅಗತ್ಯಗಳಿಗೆ ಪ್ರವೇಶವು ಸೀಮಿತವಾಗಿದೆ. ಇರಾನ್ ಆರೋಗ್ಯ ಸಚಿವಾಲಯ ಮತ್ತು ಇರಾನ್ ರೆಡ್ ಕ್ರೆಸೆಂಟ್ ಸೊಸೈಟಿ (IRCS) ವರದಿ ಪ್ರಕಾರ, ದೇಶದಾದ್ಯಂತ 442 ಆರೋಗ್ಯ ಕೇಂದ್ರಗಳು ಹಾನಿಗೊಳಗಾಗಿರುವುದರಿಂದ, 22 ಲಕ್ಷ ಮಕ್ಕಳೂ ಸೇರಿದಂತೆ ಸುಮಾರು ಒಂದು ಕೋಟಿ ಜನರು ಅಗತ್ಯ ಚಿಕಿತ್ಸೆಯನ್ನು ಪಡೆಯಲು ಸಾಧ್ಯವಾಗಿಲ್ಲ.

760ಕ್ಕೂ ಹೆಚ್ಚು ಶಾಲೆಗಳು ಹಾನಿಗೊಳಗಾಗಿವೆ ಅಥವಾ ನಾಶವಾಗಿವೆ, ಇದರಲ್ಲಿ ಶಜರೆ ತಯ್ಯಿಬೆ ಶಾಲೆಯ ಮೇಲಿನ ಮಾರಕ ದಾಳಿ ಸೇರಿದ್ದು, ಅದರಲ್ಲಿ 168 ಹುಡುಗರು ಮತ್ತು ಹುಡುಗಿಯರು ಸಾವನ್ನಪ್ಪಿದರು. ಈ ದಾಳಿಗಳು ಜೆನೀವಾ ಒಪ್ಪಂದಗಳಿಗೆ ಸಂಬಂಧಿಸಿದ ಹೆಚ್ಚುವರಿ ಪ್ರೋಟೋಕಾಲ್ I (1977) ರ ಕಲಂ 77ಕ್ಕೆ ವಿರುದ್ಧವಾಗಿವೆ, ಅಲ್ಲಿ “ಮಕ್ಕಳಿಗೆ ವಿಶೇಷ ಗೌರವ ನೀಡಬೇಕು ಮತ್ತು ಯಾವುದೇ ವಿಧದ ಅಸಭ್ಯ ದಾಳಿಗಳಿಂದ ಅವರನ್ನು ರಕ್ಷಿಸಬೇಕು” ಎಂದು ಹೇಳಲಾಗಿದೆ.

ಇದಲ್ಲದೆ, ಮಕ್ಕಳ ಬದುಕಿಗೆ ಅಗತ್ಯವಾದ ನಾಗರಿಕ ಮೂಲಸೌಕರ್ಯಗಳ ಮೇಲೆ ದಾಳಿ ಮಾಡುವುದನ್ನು ಅಂತಾರಾಷ್ಟ್ರೀಯ ಮಾನವೀಯ ಕಾನೂನು ಕಟ್ಟುನಿಟ್ಟಾಗಿ ನಿಷೇಧಿಸಿದ್ದರೂ, ಈ ದಾಳಿಗಳು ಮುಂದುವರಿದಿವೆ. ವಿಶೇಷವಾಗಿ ನೀರು ಮತ್ತು ಸ್ವಚ್ಛತಾ ವ್ಯವಸ್ಥೆಗಳ  ನಾಶವು ಮಕ್ಕಳಲ್ಲಿ ರೋಗಗಳ ಅಪಾಯವನ್ನು ಹೆಚ್ಚಿಸುತ್ತದೆ, ಮತ್ತು ವಿದ್ಯುತ್ ಕಡಿತವು ನವಜಾತ ಶಿಶುಗಳು ಮತ್ತು ದುರ್ಬಲ ಮಕ್ಕಳಿಗೆ ಅಗತ್ಯವಾದ ಸಹಾಯವನ್ನು ಅಪಾಯಕ್ಕೆ ಒಳಪಡಿಸುತ್ತದೆ.

ಪ್ರತಿಯೊಂದು ಮಗುವಿಗೂ ಭವಿಷ್ಯ

UNICEF ಪ್ರಕಟಣೆ ತನ್ನ ಬದ್ಧತೆಯನ್ನು ಮತ್ತೊಮ್ಮೆ ದೃಢಪಡಿಸುತ್ತಿದ್ದು, ಸಂಸ್ಥೆಯ ನೆರವನ್ನು ,“ದೇಶ ಮಟ್ಟದ ಸಹಕಾರ ಕಾರ್ಯಕ್ರಮಕ್ಕೆ ಅನುಗುಣವಾಗಿ.” ಇನ್ನಷ್ಟು ವಿಸ್ತರಿಸುವುದಾಗಿ ಆಶ್ವಾಸನೆ ನೀಡಿದೆ. ಅಂದರೆ, ಪರಿಣಾಮಕ್ಕೊಳಗಾದ ಪ್ರದೇಶಗಳಲ್ಲಿ ಆರೋಗ್ಯ ಮತ್ತು ಪೋಷಣಾ ಸೇವೆಗಳು, ಶಿಕ್ಷಣ, ಮಕ್ಕಳ ರಕ್ಷಣೆ, ನೀರು, ಸ್ವಚ್ಛತೆ ಮತ್ತು ಸ್ವಚ್ಛತೆಯ ಅಭ್ಯಾಸಗಳು (WASH), ತುರ್ತು ಪ್ರತಿಕ್ರಿಯೆ ಮತ್ತು ಸಾಮಾಜಿಕ ರಕ್ಷಣೆಗಳನ್ನು ಖಚಿತಪಡಿಸುವುದಕ್ಕೆ ಅದು ಬದ್ಧವಾಗಿದೆ.

ಅದರ ಧ್ಯೇಯವೆಂದರೆ “ಮಕ್ಕಳು ಮತ್ತು ಕುಟುಂಬಗಳು ಚೇತರಿಸಿಕೊಳ್ಳಲು ಮತ್ತು ಮರುನಿರ್ಮಾಣ ಮಾಡಲು ಅಗತ್ಯವಾದ ಆರೈಕೆ, ರಕ್ಷಣೆ ಮತ್ತು ಬೆಂಬಲವನ್ನು ಪಡೆಯುವಂತೆ ಖಚಿತಪಡಿಸುವುದು.” ಏಕೆಂದರೆ, UNICEF ವಿಶ್ವಕ್ಕೆ ನೆನಪಿಸುವಂತೆ, “ಪ್ರತಿಯೊಂದು ಮಗುವಿಗೂ ಶಾಂತಿಯ ಹಕ್ಕು ಇದೆ. ಪ್ರತಿಯೊಂದು ಮಗುವಿಗೂ ಭವಿಷ್ಯದ ಹಕ್ಕು ಇದೆ.”

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

09 ಏಪ್ರಿಲ್ 2026, 17:23