ಮಧ್ಯಪ್ರಾಚ್ಯ ಯುದ್ಧ ನಿಲ್ಲಿಸಲು ವಿಶ್ವ ಸಂಸ್ಥೆಯ ಮಕ್ಕಳ ಕಲ್ಯಾಣ ನಿಧಿ ಮನವಿ: ಮಕ್ಕಳ ಮೇಲೆ ಭಾರೀ ಪರಿಣಾಮ
ವ್ಯಾಟಿಕನ್ ವರದಿ
ವಿಶ್ವ ಸಂಸ್ಥೆಯ ಮಕ್ಕಳ ಕಲ್ಯಾಣ ನಿಧಿ, ಮಧ್ಯಪ್ರಾಚ್ಯವನ್ನು ಕಾಡುತ್ತಿರುವ ಹಿಂಸಾಚಾರವನ್ನು ನಿಲ್ಲಿಸಲು ಮತ್ತು ತುರ್ತು ಮಾನವೀಯ ನೆರವಿಗಾಗಿ ಅಡೆತಡೆಯಿಲ್ಲದ ಪ್ರವೇಶವನ್ನು ಒದಗಿಸಲು ಅಂತರರಾಷ್ಟ್ರೀಯ ಸಮುದಾಯವನ್ನು ಮನವಿ ಮಾಡಿದೆ. ಇರಾನ್ ಮತ್ತು ಲೆಬನಾನ್‌ನಲ್ಲಿ ಸ್ಥಳಾಂತರಗೊಂಡಿರುವ 12 ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ತಕ್ಷಣ ಸಹಾಯ ಅಗತ್ಯವಿದೆ ಎಂದು ತಿಳಿಸಿದೆ.
ವಿಶ್ವ ಸಂಸ್ಥೆಯ ಮಕ್ಕಳ ಕಲ್ಯಾಣ ನಿಧಿಯ ಉಪ ಕಾರ್ಯನಿರ್ವಾಹಕ ನಿರ್ದೇಶಕರಾದ ಟೆಡ್ ಚೈಬಾನ್ ಅವರು, “ಮಧ್ಯಪ್ರಾಚ್ಯದೆಲ್ಲೆಡೆ ಒಂದು ಪೀಳಿಗೆಯ ಮಕ್ಕಳು ಇನ್ನಷ್ಟು ಆಳವಾದ ಸಂಕಷ್ಟದೊಳಗೆ ತಳ್ಳಲ್ಪಡುತ್ತಿದ್ದಾರೆ” ಎಂದು ಎಚ್ಚರಿಸಿ, “ಅವರು ಭಾರೀ ಬೆಲೆ ತೆರುತ್ತಿದ್ದಾರೆ” ಎಂದು ಹೇಳಿದರು.
ಸೋಮವಾರ ನ್ಯೂಯಾರ್ಕ್‌ನ ವಿಶ್ವಸಂಸ್ಥೆಯಲ್ಲಿ ನೀಡಿದ ಮಾಹಿತಿ ವೇಳೆ, ಕಳೆದ ಮೂರು ವಾರಗಳಲ್ಲಿ 2,100ಕ್ಕೂ ಹೆಚ್ಚು ಮಕ್ಕಳು ಸಾವಿಗೀಡಾಗಿದ್ದಾರೆ ಅಥವಾ ಗಾಯಗೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಇದರಲ್ಲಿ ಇರಾನ್‌ನಲ್ಲಿ 206 ಮಕ್ಕಳು ಮತ್ತು ಲೆಬನಾನ್‌ನಲ್ಲಿ 118 ಮಕ್ಕಳು ಮೃತಪಟ್ಟಿದ್ದಾರೆ.
ಈ ಸಂಖ್ಯೆಗಳ ಹಿಂದೆ ಇರುವ ನಿಜವಾದ ಮಾನವೀಯ ನೋವಿನ ಮೇಲೆ ಅವರು ಬೆಳಕು ಚೆಲ್ಲಿದರು — “ಈ ಸಂಖ್ಯೆಗಳ ಹಿಂದೆ ಪೋಷಕರು, ಅಜ್ಜ-ಅಜ್ಜಿಗಳು, ಶಿಕ್ಷಕರು, ಸಹೋದರರು ಮತ್ತು ಸಹೋದರಿಯರು ಇದ್ದಾರೆ. ಸಮುದಾಯಗಳು, ನಗರಗಳು, ದೇಶಗಳೇ ಆಘಾತದಲ್ಲಿವೆ.”
ಇದರ ಜೊತೆಗೆ, ನಿರಂತರ ಬಾಂಬ್ ದಾಳಿಗಳ ಪರಿಣಾಮವಾಗಿ ಲಕ್ಷಾಂತರ ಜನರು ತಮ್ಮ ಮನೆಗಳನ್ನು ತೊರೆದು ಓಡುತ್ತಿದ್ದಾರೆ. ಸಂಪೂರ್ಣ ನಗರ ಪ್ರದೇಶಗಳನ್ನು ಖಾಲಿ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಇರಾನ್‌ನಲ್ಲಿ ಸುಮಾರು 32 ಲಕ್ಷ ಜನರು ಸ್ಥಳಾಂತರಗೊಂಡಿದ್ದಾರೆ ಎಂದು ನಿರಾಶ್ರಿತರ ಉನ್ನತ ಆಯುಕ್ತರ ಕಚೇರಿ ಅಂದಾಜಿಸಿದ್ದು, ಇವರಲ್ಲಿ ಸುಮಾರು 8.64 ಲಕ್ಷ ಮಕ್ಕಳು ಸೇರಿದ್ದಾರೆ. ಲೆಬನಾನ್‌ನಲ್ಲಿ 10 ಲಕ್ಷಕ್ಕಿಂತ ಹೆಚ್ಚು ಜನರು ಸ್ಥಳಾಂತರಗೊಂಡಿದ್ದು, ಸುಮಾರು 3.7 ಲಕ್ಷ ಮಕ್ಕಳು ಇದರಲ್ಲಿ ಸೇರಿದ್ದಾರೆ.
ಈ ಹಿಂಸಾಚಾರದ ಪರಿಣಾಮವಾಗಿ ಸುಮಾರು 90,000 ಸಿರಿಯನ್ ನಿರಾಶ್ರಿತರು ಮತ್ತೆ ಸಿರಿಯಾಕ್ಕೆ ಮರಳಬೇಕಾದ ಪರಿಸ್ಥಿತಿ ಉಂಟಾಗಿದೆ. ಜೊತೆಗೆ ಸಾವಿರಾರು ಲೆಬನಾನ್ ನಾಗರಿಕರೂ ತಮ್ಮ ಪ್ರದೇಶಗಳಿಗೆ ಹಿಂದಿರುಗುತ್ತಿದ್ದಾರೆ.
“ಈ ತೀವ್ರತೆ ಹೆಚ್ಚುವ ಮೊದಲೇ ಮಧ್ಯಪ್ರಾಚ್ಯದಲ್ಲಿ ಸುಮಾರು 4.48 ಕೋಟಿ ಮಕ್ಕಳು ಸಂಘರ್ಷಪೀಡಿತ ಪರಿಸ್ಥಿತಿಯಲ್ಲಿ ಬದುಕುತ್ತಿದ್ದರು. ಈಗ ನಡೆಯುತ್ತಿರುವ ಘಟನೆಗಳ ಪರಿಣಾಮವು ಅವರ ಮೇಲೆ ದೀರ್ಘಕಾಲಿಕ ಪರಿಣಾಮ ಬೀರುತ್ತದೆ.”
ಈ ಯುದ್ಧದಲ್ಲಿ ಅನೇಕ ಮನೆಗಳು, ಶಾಲೆಗಳು, ಆಸ್ಪತ್ರೆಗಳು ಹಾಗೂ ಮಕ್ಕಳ ಜೀವನಕ್ಕೆ ಅವಲಂಬಿತ ಮೂಲಸೌಕರ್ಯಗಳು ಹಾನಿಗೊಂಡಿವೆ ಅಥವಾ ನಾಶವಾಗಿವೆ. ಆಹಾರ, ನೀರು, ಔಷಧಿ ಮತ್ತು ಆರೈಕೆ ನೀಡುವ ಪ್ರಯತ್ನಗಳು ನಡೆಯುತ್ತಿದ್ದರೂ, ಅವು ಅಗತ್ಯಕ್ಕೆ ಸಾಲುವುದಿಲ್ಲ ಎಂದು ಅವರು ಹೇಳಿದರು.
ತುರ್ತು ನೆರವು ಯೋಜನೆಗೆ ಅಗತ್ಯವಿರುವ ನಿಧಿಯಲ್ಲಿ 86 ಶೇಕಡಾ ಕೊರತೆ ಇರುವುದನ್ನು ಅವರು ಗಂಭೀರವಾಗಿ ಉಲ್ಲೇಖಿಸಿದರು.
ಮಕ್ಕಳ ಪರವಾಗಿ ಮಾತನಾಡುತ್ತಾ, “ತಕ್ಷಣ ಯುದ್ಧ ವಿರಾಮ ಘೋಷಿಸಬೇಕು, ನಾಗರಿಕರನ್ನು ರಕ್ಷಿಸಬೇಕು, ಮಾನವೀಯ ನೆರವಿಗೆ ಸುರಕ್ಷಿತ ಹಾಗೂ ಅಡೆತಡೆಯಿಲ್ಲದ ಪ್ರವೇಶ ಒದಗಿಸಬೇಕು ಮತ್ತು ತುರ್ತು ಆರ್ಥಿಕ ನೆರವು ನೀಡಬೇಕು” ಎಂದು ಅವರು ಮನವಿ ಮಾಡಿದರು.
ವಿಶ್ವ ಸಂಸ್ಥೆಯ ಮಕ್ಕಳ ಕಲ್ಯಾಣ ನಿಧಿ 1946ರಲ್ಲಿ ಸ್ಥಾಪನೆಯಾಗಿ, ವಿಶ್ವದಾದ್ಯಂತ ಮಕ್ಕಳ ಮತ್ತು ತಾಯಂದಿರ ಅಭಿವೃದ್ಧಿ ಹಾಗೂ ರಕ್ಷಣೆಗೆ ಕಾರ್ಯನಿರ್ವಹಿಸುತ್ತಿದೆ. 190ಕ್ಕೂ ಹೆಚ್ಚು ದೇಶಗಳಲ್ಲಿ ಕಾರ್ಯನಿರ್ವಹಿಸುವ ಈ ಸಂಸ್ಥೆ ಮಕ್ಕಳ ಆರೋಗ್ಯ, ಪೌಷ್ಟಿಕತೆ, ಶಿಕ್ಷಣ ಮತ್ತು ರಕ್ಷಣೆಯ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತದೆ.
ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).