ಹುಡುಕಿ

2026.03.10 Vietnamese nuns ministry for the Leprosy affected patients 2026.03.10 Vietnamese nuns ministry for the Leprosy affected patients  (© Photo fron Agenzia Fides)

ನಂಬಿಕೆ ಮತ್ತು ದಯೆಯ ಸೇವೆಯಲ್ಲಿ: ಕುಷ್ಟರೋಗ ಬಾಧಿತರೊಂದಿಗೆ ವಿಯೆಟ್ನಾಂ ಧಾರ್ಮಿಕ ಸಹೋದರಿಯರು

ವಿಯೆಟ್ನಾಂನಲ್ಲಿ ಹ್ಯಾನ್ಸನ್ ರೋಗ (ಕುಷ್ಟರೋಗ) ಇನ್ನೂ ಸಾವಿರಾರು ಜನರನ್ನು ಬಾಧಿಸುತ್ತಿರುವ ಸಂದರ್ಭದಲ್ಲೂ, ಧಾರ್ಮಿಕ ಸಹೋದರಿಯರು ನಂಬಿಕೆ ಮತ್ತು ದಯೆಯ ಸೇವೆಯ ಮೂಲಕ ಮೌನವಾದ ಕರುಣೆ ಹಾಗೂ ಸ್ಥೈರ್ಯದ ಉದಾಹರಣೆಯಾಗಿದ್ದಾರೆ.

ಲೇಖಕರು: ಸಹೋದರಿ ಕ್ರಿಸ್ಟಿನ್ ಮಸಿವೋ, CPS 

ವ್ಯಾಟಿಕನ್‌ ಫೀಡೆಸ್ ಸುದ್ದಿ ಸಂಸ್ಥೆ ಪ್ರಕಟಿಸಿದ ಮಾಹಿತಿಯ ಪ್ರಕಾರ, ವಿಯೆಟ್ನಾಂ ಕುಷ್ಟರೋಗ ವಿರುದ್ಧದ ಹೋರಾಟದಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ. 2025ರಲ್ಲಿ ದೇಶದಾದ್ಯಂತ ಕೇವಲ 38 ಹೊಸ ಪ್ರಕರಣಗಳು ಮಾತ್ರ ದಾಖಲಾಗಿದ್ದು, ಇದು ಇದುವರೆಗೆ ದಾಖಲಾಗಿರುವ ಅತಿ ಕಡಿಮೆ ಸಂಖ್ಯೆಯಾಗಿದೆ. ಹಿಂದಿನ ವರ್ಷಗಳೊಂದಿಗೆ ಹೋಲಿಸಿದರೆ ಇದು ದೊಡ್ಡ ಮಟ್ಟದ ಇಳಿಕೆಯಾಗಿದ್ದು, 2012ರಿಂದ 2016ರವರೆಗೆ ದೇಶದಲ್ಲಿ ಸಾವಿರಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿದ್ದವು.

ಈ ಶತಮಾನದಲ್ಲಿ ಕುಷ್ಟರೋಗ ಬಾಧಿತರಿಗಾಗಿ ನಡೆಯುತ್ತಿರುವ ಸೇವೆಯ ಹಿಂದೆ ಪ್ರಮುಖವಾಗಿ ನಿಂತಿರುವವರು ಧಾರ್ಮಿಕ ಸಹೋದರಿಯರು. ಸಮಾಜದಿಂದ ದೂರವಾಗಿದ್ದ ಈ ಜನರಿಗೆ ಗೌರವ, ಭರವಸೆ ಮತ್ತು ಸಮುದಾಯದ ಭಾವನೆಯನ್ನು ಮರಳಿ ನೀಡಲು ಅವರು ತಮ್ಮ ಜೀವನವನ್ನು ಅರ್ಪಿಸಿದ್ದಾರೆ.

ಕುಷ್ಟರೋಗ ವಿರುದ್ಧ ವಿಯೆಟ್ನಾಂ ಸಾಧನೆ

ಆರೋಗ್ಯ ತಜ್ಞರ ಪ್ರಕಾರ ಪರಿಣಾಮಕಾರಿ ಚಿಕಿತ್ಸೆ ಮತ್ತು ಸಮುದಾಯ ಆಧಾರಿತ ಆರೋಗ್ಯ ವ್ಯವಸ್ಥೆಯ ಸುಧಾರಣೆ ಈ ಸಾಧನೆಗೆ ಪ್ರಮುಖ ಕಾರಣವಾಗಿದೆ. ಇಂದು ವಿಯೆಟ್ನಾಂನ ಎಲ್ಲಾ ಪ್ರಾಂತ್ಯಗಳು ಮತ್ತು ನಗರಗಳನ್ನು ಅಧಿಕೃತವಾಗಿ ಕುಷ್ಟರೋಗಮುಕ್ತ ಪ್ರದೇಶಗಳೆಂದು ಘೋಷಿಸಲಾಗಿದೆ; ಪ್ರತಿ ವರ್ಷ ಕೆಲವೇ ಅಪರೂಪದ ಪ್ರಕರಣಗಳು ಮಾತ್ರ ಕಾಣಿಸುತ್ತಿವೆ.

ಆದಾಗ್ಯೂ ದೇಶದಾದ್ಯಂತ ಸುಮಾರು 6,000 ಜನರು ಕುಷ್ಟರೋಗದ ದೀರ್ಘಕಾಲದ ಪರಿಣಾಮಗಳೊಂದಿಗೆ ಬದುಕುತ್ತಿದ್ದಾರೆ. ಹಲವರು ಬ್ಯಾಕ್ಟೀರಿಯಾ ಸೋಂಕಿನಿಂದ ಗುಣಮುಖರಾದರೂ, ರೋಗದಿಂದ ಉಂಟಾದ ಅಂಗವೈಕಲ್ಯ ಅಥವಾ ನಿರಂತರ ನೋವಿನಿಂದ ಇನ್ನೂ ಬಳಲುತ್ತಿದ್ದಾರೆ.

ಕುಷ್ಠರೋಗಿಗಳ ಕಾಲೋನಿಗಳಲ್ಲಿ ಜೀವನ

ಈ ರೋಗದಿಂದ ಬಳಲುತ್ತಿರುವ ಅನೇಕರು ಐತಿಹಾಸಿಕವಾಗಿ “ಕುಷ್ಠರೋಗಿಗಳ ಕಾಲೋನಿ”(ಕುಷ್ಟರೋಗ  ವಸತಿ ಪ್ರದೇಶಗಳು) ಎಂದು ಕರೆಯಲ್ಪಡುವ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. ವಿಯೆಟ್ನಾಂನಲ್ಲಿ ಇಂತಹ ಹತ್ತುಕ್ಕಿಂತ ಹೆಚ್ಚು ಕಾಲೋನಿಗಳಿವೆ. 20ನೇ ಶತಮಾನದ ಆರಂಭದಲ್ಲಿ ಸೋಂಕಿನ ಭಯದಿಂದ ಕುಷ್ಠರೋಗಿಗಳನ್ನು ಸಮಾಜದಿಂದ ಪ್ರತ್ಯೇಕವಾಗಿ ಇರಿಸಲು ಇವುಗಳನ್ನು ಸ್ಥಾಪಿಸಲಾಗಿತ್ತು. ಮಧ್ಯ ವಿಯೆಟ್ನಾಂನಲ್ಲಿ 1929ರಲ್ಲಿ ಸ್ಥಾಪಿತವಾದ ಕ್ವಿ ಹೋವಾ ಹಾಗೂ ದಕ್ಷಿಣದಲ್ಲಿ 1968ರಲ್ಲಿ ಆರಂಭವಾದ ಬಿಯೆನ್ ಹೋವಾ ಮುಂತಾದ ಕೇಂದ್ರಗಳನ್ನು ದೂರದ ಪ್ರದೇಶಗಳಲ್ಲಿ ನಿರ್ಮಿಸಲಾಯಿತು. ಇಂದಿಗೂ ಈ  ಕಾಲೋನಿಗಳಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಕಂಡುಬರುತ್ತದೆ ಮತ್ತು ಸಾಮಾಜಿಕವಾಗಿ ಅವುಗಳು ಬಹುಪಾಲು ಪ್ರತ್ಯೇಕವಾಗಿಯೇ ಉಳಿದಿವೆ.

ಈ ಕೇಂದ್ರಗಳಲ್ಲಿ ವಾಸಿಸುವ ಅನೇಕರು ಮನೋವೈಕಲ್ಯ ಮತ್ತು ನಿರಾಕರಣೆಯ ನೋವನ್ನು ಅನುಭವಿಸಿದ್ದಾರೆ. ಕುಷ್ಟರೋಗ ಕುರಿತು ಬಹುಕಾಲದಿಂದಲೂ ಸಮಾಜದಲ್ಲಿ ಕಳಂಕದ ಭಾವನೆ ಇರುವುದರಿಂದ ಅನೇಕರು ತಿರಸ್ಕಾರ ಮತ್ತು ಭೇದಭಾವವನ್ನು ಎದುರಿಸಿದ್ದಾರೆ. ಕೆಲವು ವಯೋವೃದ್ಧರು ದಶಕಗಳ ಹಿಂದೆ ಈ ರೋಗಕ್ಕೆ ಒಳಗಾಗಿ 50 ಅಥವಾ 60 ವರ್ಷಗಳ ಕಾಲ ಇದೇ ಕಾಲೋನಿಗಳಲ್ಲಿ ಜೀವನ ನಡೆಸುತ್ತಿದ್ದಾರೆ; ಅವರಿಗೆ ಹಿಂದಿರುಗಲು ಕುಟುಂಬ ಅಥವಾ ಮನೆಗಳಿಲ್ಲ.

ಕುಷ್ಟರೋಗದಿಂದ ಗುಣಮುಖಳಾದ ಲೋ ಥಿ ಕೊಕ್ ಇನ್ನೂ ಕಣ್ಣು ಸಮಸ್ಯೆ ಮತ್ತು ಕಾಲುಗಳಲ್ಲಿ ಉಂಟಾದ ವಿಕೃತಿಗಳಿಂದ ಉಂಟಾಗುವ ನೋವಿನಿಂದ ಬಳಲುತ್ತಿದ್ದಾರೆ. ಹಿಂದೆ ತಾನು ಅನುಭವಿಸಿದ ಭಯ ಮತ್ತು ಏಕಾಂತವನ್ನು ಅವರು ನೆನಪಿಸಿಕೊಂಡರು. “ಆ ಸಮಯದಲ್ಲಿ ನಮ್ಮ ಕುಟುಂಬ ತುಂಬಾ ಬಡತನದಲ್ಲಿತ್ತು. ಸೋಂಕು ತಗಲಬಹುದು ಎಂಬ ಭಯದಿಂದ ಯಾರೂ ನಮ್ಮ ಹತ್ತಿರ ಬರಲು ಇಷ್ಟಪಡಲಿಲ್ಲ. ಒಂದು ವೇಳೆ ನಾನು ಕಾಡಿಗೆ ಓಡಿ ಹೋಗಿ ಉಳಿದ ಜೀವನವನ್ನು ಒಂಟಿಯಾಗಿ ಕಳೆಯಬೇಕೆಂದು ಕೂಡ ಯೋಚಿಸಿದ್ದೆ. ಆದರೆ ನನ್ನ ಮಗನ ಬೆಂಬಲದಿಂದ ನನ್ನ ಮನಸ್ಸು ಬದಲಾಗಿದೆ.”

ಕರುಣೆ ಮತ್ತು ಸೇವೆಯ ಸಹೋದರಿಯರು

ಇಂತಹ ಕಠಿಣ ಪರಿಸ್ಥಿತಿಗಳಲ್ಲಿ ಲವರ್ಸ್ ಆಫ್ ದ ಕ್ರಾಸ್(ಶಿಲುಬೆಯ ಪ್ರೇಮಿಗಳು)  ಹಾಗೂ ಮಿಷನರಿ ಫ್ರಾನ್ಸಿಸ್ಕನ್ ಮುಂತಾದ ಧಾರ್ಮಿಕ ಸಂಘಗಳು ರೋಗಿಗಳ ಆರೈಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ಅವರ ಸೇವೆ ವೈದ್ಯಕೀಯ ಚಿಕಿತ್ಸೆಗೆ ಮಾತ್ರ ಸೀಮಿತವಲ್ಲ. ಸಮಾಜದಿಂದ ದೂರವಾಗಿರುವವರಿಗೆ ಅವರು ದಿನನಿತ್ಯದ ನೆರವು, ಮಾನಸಿಕ ಬೆಂಬಲ ಮತ್ತು ಸ್ನೇಹಭಾವವನ್ನು ನೀಡುತ್ತಾರೆ. ವೃದ್ಧರು, ಅನಾಥ ಮಕ್ಕಳು ಮತ್ತು ರೋಗದಿಂದ ಬಾಧಿತರಾದ ಕುಟುಂಬಗಳಿಗೂ ಅವರು ಕಾಳಜಿ ವಹಿಸುತ್ತಿದ್ದಾರೆ.

ಬಿನ್ ದ್ಯೂಂಗ್ ಪ್ರಾಂತ್ಯದ ಬೆನ್ ಸಾನ್ ಕುಷ್ಟರೋಗ ವಸತಿಯಲ್ಲಿ ವಾಸಿಸುತ್ತಿರುವ 78 ವರ್ಷದ ಜೋಸೆಫ್ ಥಾಟ್ “ಇಲ್ಲಿ ನನಗೆ ಬಂಧುಗಳು ಇಲ್ಲ. ಆದರೆ ಸಹೋದರಿಯರು ಮತ್ತು ವಿವಿಧ ಸಂಸ್ಥೆಗಳು ಸಹಾಯ ಮಾಡುತ್ತಿವೆ, ಅದರಿಂದ ಜೀವನ ಸ್ವಲ್ಪ ಸುಲಭವಾಗಿದೆ” ಎಂದು ಹೇಳುತ್ತಾರೆ. ಅವರ ಕಾಲುಗಳನ್ನು ಕತ್ತರಿಸಬೇಕಾಗಿದ್ದು, ಈಗ ಅವರು ಸಹೋದರಿಯರ ನೆರವಿನ ಮೇಲೆ ಅವಲಂಬಿತರಾಗಿದ್ದಾರೆ.

ಕ್ವಿ ಹೋವಾ ವಸತಿಯಲ್ಲಿ ವಾಸಿಸುವ ಇನ್ನೊಬ್ಬ ರೋಗಿ ಸಹೋದರಿಯರನ್ನು ಗೌರವದಿಂದ ಉಲ್ಲೇಖಿಸಿ, “ಸಹೋದರಿಯರು ನಮ್ಮ ಹಕ್ಕುಗಳಿಗಾಗಿ ಹೋರಾಡುತ್ತಾರೆ. ನಾವು ಅವರನ್ನು ಆಳವಾಗಿ ಗೌರವಿಸುತ್ತೇವೆ ಮತ್ತು ಕುಟುಂಬದವರಂತೆ ಕಾಣುತ್ತೇವೆ,” ಎಂದು ಹೇಳಿದರು.

ಮಾನ್ಯತೆ ಪಡೆದ ಸೇವೆ

ವಿಯೆಟ್ನಾಂನಲ್ಲಿ ಕುಷ್ಟರೋಗ ಬಾಧಿತರಿಗಾಗಿ ಕಥೋಲಿಕ ಸಹೋದರಿಯರು ಮಾಡುತ್ತಿರುವ ಸೇವೆಗೆ ಸ್ಥಳೀಯ ಸಮುದಾಯಗಳಷ್ಟೇ ಅಲ್ಲದೆ ರಾಷ್ಟ್ರೀಯ ಅಧಿಕಾರಿಗಳೂ ಮಾನ್ಯತೆ ನೀಡಿದ್ದಾರೆ.

ಇದಕ್ಕೆ ಉದಾಹರಣೆಯಾಗಿ 1957ರಲ್ಲಿ ಜನಿಸಿದ ಸಹೋದರಿ ಆನ್ ನ್ಯುಯೆನ್  ಥಿ ಸುಯಾನ್ ಅವರನ್ನು ಉಲ್ಲೇಖಿಸಬಹುದು. ಅವರು ಬಾಕ್ ನಿನ್ ಪ್ರದೇಶದ ಕ್ವಾ ಕಾಮ್ ಕುಷ್ಟರೋಗ ವಸತಿಯಲ್ಲಿ ಸುಮಾರು ನಾಲ್ಕು ದಶಕಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಜೀವನಪೂರ್ತಿ ಸೇವೆಗೆ ವಿಯೆಟ್ನಾಂ ಅಧ್ಯಕ್ಷರಿಂದ ಮೂರನೇ ದರ್ಜೆಯ ಕಾರ್ಮಿಕ ಪದಕ ಹಾಗೂ ಪ್ರಧಾನಮಂತ್ರಿಯಿಂದ ಪ್ರಶಂಸಾಪತ್ರ ಲಭಿಸಿದೆ.

ವಿಯೆಟ್ನಾಂನ ವ್ಯಾಪಕ ಕಥೋಲಿಕ ಸಮುದಾಯವೂ ಕುಷ್ಟರೋಗ ಬಾಧಿತರ ನೆರವಿಗೆ ಮುಂದಾಗಿದೆ. ಈ ವರ್ಷದ ಫೆಬ್ರವರಿ 5ರಂದು ಚಾಂದ್ರಮಾನ ಹೊಸ ವರ್ಷದ ಸಂದರ್ಭದಲ್ಲಿ ಥಾಯ್ ಬಿನ್ ಧರ್ಮಕ್ಷೇತ್ರದ ವತಿಯಿಂದ ಥಾಯ್ ಸಾ ಧರ್ಮಕೇಂದ್ರದ ಡಾಂಗ್ ಥೋ ಪ್ರಾರ್ಥನಾ ಮಂದಿರದಲ್ಲಿ  ರೋಗಿಗಳಿಗಾಗಿ ವಿಶೇಷ ಸಭೆ ಆಯೋಜಿಸಲಾಯಿತು. ಈ ಕಾರ್ಯಕ್ರಮದಲ್ಲಿ ಅವರಿಗೆ ಒಡನಾಟ, ಉಡುಗೊರೆಗಳು ಮತ್ತು ಸಂತಸದ ಕ್ಷಣಗಳನ್ನು ನೀಡಲಾಯಿತು.

ಆ ಸಂದರ್ಭದಲ್ಲಿ ಪೂಜ್ಯ ಧರ್ಮಾಧ್ಯಕ್ಷರಾದ ಡೊಮಿನಿಕ್ ಡಾಂಗ್ ಕೌ ವಿಶ್ವಾಸಿಗಳಿಗೆ ಕರುಣೆ ಮತ್ತು ಐಕ್ಯತೆಯನ್ನು ತೋರಿಸಲು ಕರೆ ನೀಡಿ, ಇದು ಧರ್ಮಸಭೆಯ ಸಹಭಾಗಿತ್ವವನ್ನು ಬದುಕಿನಲ್ಲಿ ಕಾರ್ಯರೂಪಕ್ಕೆ ತರುವ ಸ್ಪಷ್ಟ ಮಾರ್ಗವೆಂದು ಅವರು ಹೇಳಿದರು.

ಇದೇ ವೇಳೆ ಧರ್ಮಕ್ಷೇತ್ರವು ಕುಷ್ಟರೋಗ ಬಾಧಿತರಿಗಾಗಿ ಹೊಸ ವಸತಿ ಗೃಹವನ್ನು ನಿರ್ಮಿಸುತ್ತಿದ್ದು, ಅವರಿಗೆ ಸುರಕ್ಷತೆ ಮತ್ತು ಗೌರವಯುತ ಜೀವನವನ್ನು ಒದಗಿಸುವ ಉದ್ದೇಶ ಹೊಂದಿದೆ.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

10 ಮಾರ್ಚ್ 2026, 19:09