ಹುಡುಕಿ

2026.01.19 Inondazioni a Xai-Xai e sud del Mozambico 2026.01.19 Inondazioni a Xai-Xai e sud del Mozambico  (Rogério Maduca, Radio Pax (Moçambique))

UK: ಪುನಶಸ್ತ್ರೀಕರಣ ಮತ್ತು ರಕ್ಷಣೆಗೆ ಹೆಚ್ಚಿನ ಸಂಪನ್ಮೂಲ ಒದಗಿಸಲು ಆಫ್ರಿಕಾ ನೆರವು ಕಡಿತ

ಯುರೋಪಿಯನ್ ವಿದೇಶಾಂಗ ಸಂಬಂಧಗಳ ಮಂಡಳಿ (ಯುರೋಪಿಯನ್ ಕೌನ್ಸಿಲ್ ಆನ್ ಫಾರೆನ್ ರಿಲೇಷನ್ಸ್ -ECFR) ಸಂಸ್ಥೆಯ ಆಫ್ರಿಕಾ ಕಾರ್ಯಕ್ರಮದ ನಿರ್ದೇಶಕರಾದ ಅಲೆಕ್ಸ್ ವೈನ್ಸ್, ಆಫ್ರಿಕಾ ದೇಶಗಳಿಗೆ ನೀಡಲಾಗುತ್ತಿದ್ದ ದ್ವಿಪಕ್ಷೀಯ ನಿಧಿಗಳ ಕಡಿತದ ಬಗ್ಗೆ ಮತ್ತು ಇದರ ಪರಿಣಾಮವಾಗಿ ಶಾಲೆಗಳು, ಆಸ್ಪತ್ರೆಗಳು ಹಾಗೂ ಆರೋಗ್ಯ ಸೇವೆಗಳ ಮೇಲೆ ಬೀರುವ ಪರಿಣಾಮದ ಬಗ್ಗೆ ವ್ಯಾಟಿಕನ್ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿ, “ಸಹಾಯವನ್ನು ಹಿಂಪಡೆಯುವುದು,ಅತೀ ದುರ್ಬಲ ಸಮುದಾಯಗಳನ್ನು ಮೂಲಭೂತ ಸೇವೆಗಳಿಲ್ಲದೆ ಬಿಡುವ ಅಪಾಯವನ್ನು ಉಂಟುಮಾಡುತ್ತದೆ”ಎಂದು ಈ ನಿರ್ಧಾರದ ಗಂಭೀರತೆಯನ್ನು ತಿಳಿಸಿದ್ದಾರೆ.

ಲೇಖಕರು: ಡೇವಿಡ್ ಡಿಯೋನಿಸಿ

ಯುನೈಟೆಡ್ ಕಿಂಗ್‌ಡಮ್, ಹೆಚ್ಚುತ್ತಿರುವ ರಕ್ಷಣಾ ವೆಚ್ಚವನ್ನು ಭರಿಸಲು ಆಫ್ರಿಕಾಗೆ ನೀಡುವ ನೆರವನ್ನು 56% ರಷ್ಟು ಕಡಿತಗೊಳಿಸುತ್ತಿದೆ. ಇತ್ತೀಚಿನ ದಿನಗಳಲ್ಲಿ, ಬ್ರಿಟಿಷ್ ಸರ್ಕಾರವು ಪುನಶಸ್ತ್ರೀಕರಣಕ್ಕಾಗಿ £6 ಬಿಲಿಯನ್‌ಗಿಂತ ಹೆಚ್ಚು ಹಣವನ್ನು ಮರುಹಂಚಿಕೆ ಮಾಡಲು ಘೋಷಿಸಿದ್ದು, ಈ ಕಡಿತದ ದೊಡ್ಡ ಭಾಗವು ಜಗತ್ತಿನ ಅತಿ ಬಡ ದೇಶಗಳನ್ನು ತಟ್ಟಲಿದೆ.

2028–2029ರ ವೇಳೆಗೆ ದ್ವಿಪಕ್ಷೀಯ ನಿಧಿ ಸುಮಾರು £900 ಮಿಲಿಯನ್‌ಗಿಂತ ಕಡಿಮೆಯಾಗಲಿದೆ, ಅಂದರೆ 56% ಇಳಿಕೆ. ಇದರ ಪರಿಣಾಮವಾಗಿ ಶಾಲೆಗಳು, ಆಸ್ಪತ್ರೆಗಳು ಮತ್ತು ಅಗತ್ಯ ಸೇವೆಗಳು ಕಡಿಮೆಯಾಗುವ ಸಾಧ್ಯತೆ ಇದೆ.

ದುರ್ಬಲ ಸಮುದಾಯಗಳ ಮೇಲೆ ಪರಿಣಾಮ ಬೀರುವ ಕಡಿತಗಳು

“ಈ ಮಟ್ಟದ ಕಡಿತಗಳು...ಅಸ್ಥಿರತೆಯನ್ನು ಹೆಚ್ಚಿಸುವ ಸಾಧ್ಯತೆ ಇದೆ,” ಎಂದು ಯುರೋಪಿಯನ್ ಕೌನ್ಸಿಲ್ ಆನ್ ಫಾರೆನ್ ರಿಲೇಷನ್ಸ್ (ECFR) ಸಂಸ್ಥೆಯ ಆಫ್ರಿಕಾ ಕಾರ್ಯಕ್ರಮದ ನಿರ್ದೇಶಕರಾದ ಅಲೆಕ್ಸ್ ವೈನ್ಸ್ ವಿವರಿಸುತ್ತಾರೆ.

“UKಯಿಂದ ಕಳುಹಿಸುವ ನೆರವು ಶಾಲೆಗಳು, ಕ್ಲಿನಿಕ್‌ಗಳು ಮತ್ತು ಮಾನವೀಯ ಕಾರ್ಯಕ್ರಮಗಳಂತಹ ಮುಂಚೂಣಿ ಸೇವೆಗಳನ್ನು ಬೆಂಬಲಿಸಿದೆ. ಆ ಸಹಾಯವನ್ನು ಹಿಂಪಡೆಯುವುದು, ದುರ್ಬಲ ಸಮುದಾಯಗಳನ್ನು ಮೂಲಭೂತ ಸೇವೆಗಳಿಲ್ಲದೆ ಕೈ ಬಿಡುವ ಅಪಾಯವನ್ನು ಉಂಟುಮಾಡುತ್ತದೆ. ಈಗಾಗಲೇ ನಡೆಸಿದ ಪರಿಣಾಮ ಅಧ್ಯಯನಗಳು, ಇಥಿಯೋಪಿಯಾ, ದಕ್ಷಿಣ ಸುಡಾನ್ ಮತ್ತು ಸೋಮಾಲಿಯಾ ದೇಶಗಳಲ್ಲಿ ಶಿಕ್ಷಣ ಮತ್ತು ಆರೋಗ್ಯ ಸೇವೆಗಳ ಪ್ರವೇಶ ಕಡಿಮೆಯಾಗುತ್ತಿರುವುದನ್ನು ಸೂಚಿಸುತ್ತಿವೆ. ಇದು ಅಸಮಾಧಾನವನ್ನು ಹೆಚ್ಚಿಸಿ, ಈಗಾಗಲೇ ದುರ್ಬಲವಾಗಿರುವ ರಾಜ್ಯ ವ್ಯವಸ್ಥೆಗಳನ್ನು ಇನ್ನಷ್ಟು ಕುಂದಿಸಬಹುದು.”

ಭದ್ರತೆಗೆ ಎದುರಾಗುವ ಸವಾಲುಗಳು

ಹಾಗಾದರೆ, ಸೋಮಾಲಿಯಾ ಮುಂತಾದ ಅಸ್ಥಿರ ದೇಶಗಳಿಗೆ ನೆರವನ್ನು ಕಡಿತಗೊಳಿಸುವುದು, ಸೈನಿಕ ವೆಚ್ಚದಿಂದ ನಿಯಂತ್ರಿಸಲು ಯತ್ನಿಸುತ್ತಿರುವ ಭದ್ರತಾ ಅಪಾಯಗಳನ್ನೇ ಹೆಚ್ಚಿಸುವುದೇ? ಲಂಡನ್‌ನಲ್ಲಿ ನೆಲೆಯೂರಿರುವ ಸ್ವತಂತ್ರ ಸಂಶೋಧನಾ ಸಂಸ್ಥೆಯಾದ ಚಾಥಮ್ ಹೌಸ್‌ನ ಮಾಜಿ ಕಾರ್ಯನಿರ್ವಾಹಕರಾಗಿದ್ದ ಅಲೆಕ್ಸ್ ವೈನ್ಸ್ ಅವರ ಅಭಿಪ್ರಾಯದಲ್ಲಿ:

“ಈ ಕಡಿತಗಳು ರಕ್ಷಣಾ ವೆಚ್ಚವನ್ನು ಭರಿಸಲು ಅಗತ್ಯವೆಂಬ ಸಮರ್ಥನೆ ತಂತ್ರಜ್ಞಾನದ ದೃಷ್ಟಿಯಿಂದ ಪ್ರಶ್ನಾರ್ಥಕವಾಗಿದೆ. ಅಭಿವೃದ್ಧಿ ವೆಚ್ಚ ಮತ್ತು ಭದ್ರತೆ ಪರಸ್ಪರ ಸಂಬಂಧಿತವಾಗಿವೆ. ಸೋಮಾಲಿಯಾ, ಯೆಮನ್ ಮತ್ತು ಅಫ್ಗಾನಿಸ್ತಾನ ದೇಶಗಳಲ್ಲಿ ನೆರವನ್ನು ಕಡಿತಗೊಳಿಸುವುದು, ಸಂಘರ್ಷಗಳ ಮೂಲ ಕಾರಣಗಳನ್ನು — ದಾರಿದ್ರ್ಯ, ದುರ್ಬಲ ಆಡಳಿತ ಮತ್ತು ಅವಕಾಶಗಳ ಕೊರತೆ — ಇನ್ನಷ್ಟು ತೀವ್ರಗೊಳಿಸುವ ಅಪಾಯವನ್ನು ಹೊಂದಿದೆ.”

“UK ಸರ್ಕಾರದೊಳಗೂ ಹಾಗೂ ಸಂಸತ್ ಸದಸ್ಯರಲ್ಲಿಯೂ ಈ ಬದಲಾವಣೆ ನಿಜವಾಗಿಯೂ ಭದ್ರತೆಯನ್ನು ಬಲಪಡಿಸುತ್ತದೆಯೇ ಎಂಬ ಬಗ್ಗೆ ಅನುಮಾನವಿದೆ. ವಿಶೇಷವಾಗಿ ರಕ್ಷಣಾ ವೆಚ್ಚದ ಯೋಜನೆಗಳಲ್ಲಿ ವಿಳಂಬ ಮತ್ತು ಅನಿಶ್ಚಿತತೆ ಇರುವ ಹಿನ್ನೆಲೆಯಲ್ಲಿ ಈ ಪ್ರಶ್ನೆ ಇನ್ನಷ್ಟು ಗಂಭೀರವಾಗುತ್ತದೆ.”

“ಈ ನೀತಿ, ತಾತ್ಕಾಲಿಕ ಹಣಕಾಸು ಮರುಹಂಚಿಕೆಗೆ ಆದ್ಯತೆ ನೀಡುತ್ತಾ, ದೀರ್ಘಕಾಲೀನ ಸ್ಥಿರತೆಯ ಹೂಡಿಕೆಯನ್ನು ದುರ್ಬಲಗೊಳಿಸುವ ಅಪಾಯವನ್ನು ಉಂಟುಮಾಡುತ್ತದೆ.” ಆಫ್ರಿಕಾಕ್ಕೆ ನೀಡಲಾಗುತ್ತಿದ್ದ ದ್ವಿಪಕ್ಷೀಯ ನೆರವು 2026ರಲ್ಲಿ £818 ಮಿಲಿಯನ್‌ನಿಂದ 2029ರಲ್ಲಿ £677 ಮಿಲಿಯನ್‌ಗೆ ಇಳಿಯಲಿದೆ.

ಅತೀ ಗಂಭೀರ ಪರಿಣಾಮ ಎದುರಿಸುವ ದೇಶಗಳು

ಈ ಕಡಿತದಿಂದ ಅತೀ ಗಂಭೀರ  ಪರಿಣಾಮಗಳನ್ನು ಎದುರಿಸುವ ಆಫ್ರಿಕಾ ದೇಶಗಳು ಮತ್ತು ಪ್ರದೇಶಗಳನ್ನು ಅಲೆಕ್ಸ್ ವೈನ್ಸ್ ಗುರುತಿಸಿದ್ದಾರೆ. “ಅತೀ ಬಡ ಮತ್ತು ನೆರವಿನ ಮೇಲೆ ಹೆಚ್ಚು ಅವಲಂಬಿತವಾಗಿರುವ ಉಪ-ಸಹಾರಾ ಆಫ್ರಿಕಾ ದೇಶಗಳು ಈ ಪರಿಣಾಮವನ್ನು ಹೆಚ್ಚು ಅನುಭವಿಸುವ ಸಾಧ್ಯತೆ ಇದೆ,” ಎಂದು ಅವರು ತಿಳಿಸಿದ್ದಾರೆ. “ಮಲಾವಿ, ಮೊಜಾಂಬಿಕ್, ಸಿಯೆರ್ರಾ ಲಿಯೋನ್ ಮತ್ತು ದಕ್ಷಿಣ ಸುಡಾನ್ ದೇಶಗಳು ವಿಶೇಷವಾಗಿ ಅಪಾಯದಲ್ಲಿವೆ. ಜೊತೆಗೆ ಆಫ್ರಿಕಾದ ಹಾರ್ನ್ ಪ್ರದೇಶದಲ್ಲಿರುವ ದುರ್ಬಲ ರಾಷ್ಟ್ರಗಳೂ ಪರಿಣಾಮಕ್ಕೆ ಒಳಗಾಗುತ್ತವೆ.”

“ಈ ಪ್ರದೇಶಗಳಲ್ಲಿ ನೆರವು ಕಡಿತವು ಸುಲಭವಾಗಿ ಹಿಂತಿರುಗಿಸಲಾಗುವುದಿಲ್ಲ. ಆರೋಗ್ಯ ಸೇವೆಗಳು, ಶಿಕ್ಷಣದ ಪ್ರವೇಶ — ವಿಶೇಷವಾಗಿ ಹುಡುಗಿಯರು ಮತ್ತು ಅಂಗವಿಕಲ ಮಕ್ಕಳಿಗೆ — ಹಾಗೂ ರೋಗ ನಿರೋಧಕ ಕಾರ್ಯಕ್ರಮಗಳಲ್ಲಿ ಕಡಿತವು ಪೀಳಿಗಾಂತರದ ಪರಿಣಾಮವನ್ನು ಉಂಟುಮಾಡಬಹುದು.”

“ಪೋಲಿಯೋ ನಿರ್ಮೂಲನೆ ಮತ್ತು ಮಹಾಮಾರಿ ಸಿದ್ಧತೆಯಂತಹ ಯೋಜನೆಗಳಿಗೆ ನೀಡಲಾಗುತ್ತಿದ್ದ ಬೆಂಬಲವನ್ನು ಕಡಿಮೆ ಮಾಡುವುದು, ದೀರ್ಘಕಾಲಿಕ ದುರ್ಬಲತೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ.”

ಅಭಿವೃದ್ಧಿ ಗುರಿಗಳನ್ನು ಬದಿಗಿಟ್ಟುಬಿಡುವ ಅಪಾಯ

2029ರ ವೇಳೆಗೆ ಸುಮಾರು 70% ನಿಧಿಯನ್ನು ಸಂಘರ್ಷ ಪ್ರದೇಶಗಳಿಗೆ ಹಂಚಿಕೆ ಮಾಡಲಾಗುವುದು. ಹೀಗಾದರೆ, ಬ್ರಿಟನ್‌ನ ವೆಚ್ಚದ ಈ ಉತ್ತರಾಭಿಮುಖ ಬದಲಾವಣೆ, ಆಫ್ರಿಕಾವನ್ನು ತಂತ್ರಾತ್ಮಕ ಅಭಿವೃದ್ಧಿ ಆದ್ಯತೆಯಿಂದ ಸಂಪೂರ್ಣವಾಗಿ ದೂರ ಮಾಡುವುದೇ?

ಅಲೆಕ್ಸ್ ವೈನ್ಸ್ ಅವರ ಅಭಿಪ್ರಾಯದಲ್ಲಿ: “ಸಂಘರ್ಷಪೀಡಿತ ಪ್ರದೇಶಗಳಿಗೆ 70% ನಿಧಿಯನ್ನು ಹಂಚಿಕೆ ಮಾಡುವ ಈ ಬದಲಾವಣೆ, ವ್ಯಾಪಕವಾಗಿ ಸಂಕಷ್ಟ ನಿರ್ವಹಣೆ ಮತ್ತು ಭೌಗೋಳಿಕ ರಾಜಕೀಯ ಆದ್ಯತೆಗಳತ್ತ ತಿರುಗುವಿಕೆಯ ಸೂಚನೆ ಆಗಿದೆ. ಇದರಲ್ಲಿ ಉಕ್ರೇನ್, ಸುಡಾನ್ ಮತ್ತು ಮಧ್ಯಪ್ರಾಚ್ಯ ಪ್ರಮುಖ ಪಾತ್ರವಹಿಸುತ್ತಿವೆ.”

“ಇದು ಆಫ್ರಿಕಾದಿಂದ ಸಂಪೂರ್ಣ ಹಿಂಪಡೆಯುವಿಕೆಯಲ್ಲ. ಆದರೆ ದೀರ್ಘಕಾಲಿಕ ಅಭಿವೃದ್ಧಿ ಕಾರ್ಯಗಳಿಂದ ದೂರ ಸರಿದು, ತ್ವರಿತ ಪ್ರತಿಕ್ರಿಯೆ ಮತ್ತು ಭದ್ರತಾ ಆಧಾರಿತ ವೆಚ್ಚದತ್ತ ಸಾಗುವ ಬದಲಾವಣೆ ಆಗಿದೆ.”

“ಪ್ರಾಯೋಗಿಕವಾಗಿ ನೋಡಿದರೆ, ಇದು ಖಂಡದ ಅನೇಕ ಭಾಗಗಳಲ್ಲಿ ವ್ಯಾಪಕ ಅಭಿವೃದ್ಧಿ ಗುರಿಗಳನ್ನು ಬದಿಗಿಟ್ಟು, ತಕ್ಷಣದ ಅಸ್ಥಿರತೆ ಮತ್ತು ವಲಸೆ ಸಮಸ್ಯೆಗಳ ಮೇಲೆ ಸೀಮಿತ ಗಮನ ನೀಡುವ ಅಪಾಯವನ್ನು ಹೊಂದಿದೆ.”

 

ಬಹುಪಕ್ಷೀಯ ವ್ಯವಸ್ಥೆಗಳು ಕೊರತೆಯನ್ನು ತುಂಬಲು ಅಸಮರ್ಥ

ಕೊನೆಯದಾಗಿ, ಈ ಕಡಿತವನ್ನು ಸಮತೋಲನಗೊಳಿಸಲು ಯಾವುದೇ ಯೋಜನೆ ಇದೆಯೇ ಅಥವಾ UK ಸಂಪೂರ್ಣವಾಗಿ ಈ ಹೊಣೆಗಾರಿಕೆಯನ್ನು ಬಹುಪಕ್ಷೀಯ ಸಂಸ್ಥೆಗಳಿಗೆ ವಹಿಸುತ್ತಿದೆಯೇ ಎಂಬ ಪ್ರಶ್ನೆಯನ್ನು ಅಲೆಕ್ಸ್ ವೈನ್ಸ್ ಪರಿಗಣಿಸಿದ್ದಾರೆ. “ಈ ಕಡಿತವನ್ನು ಸಮತೋಲನಗೊಳಿಸಲು ಪೂರ್ಣ ಪ್ರಮಾಣದ ತಂತ್ರಯೋಜನೆ ಇರುವುದಕ್ಕೆ ಸಾಕ್ಷ್ಯ ಕಡಿಮೆ,” ಎಂದು ಅವರು ಹೇಳಿದ್ದಾರೆ.

“ಬದಲಾಗಿ, UK ತನ್ನ ಸಂಪನ್ಮೂಲಗಳನ್ನು ವಿಶ್ವ ಬ್ಯಾಂಕ್, ಆಫ್ರಿಕಾ ಅಭಿವೃದ್ಧಿ ಬ್ಯಾಂಕ್ ಮತ್ತು Gavi ಮುಂತಾದ ಜಾಗತಿಕ ಆರೋಗ್ಯ ಕಾರ್ಯಕ್ರಮಗಳಂತಹ ಬಹುಪಕ್ಷೀಯ ಮಾರ್ಗಗಳತ್ತ ವರ್ಗಾಯಿಸುತ್ತಿದೆ.” “ಇದರಿಂದ ಕೆಲವು ಮಟ್ಟದ ಸಹಾಯ ಮುಂದುವರಿಯಬಹುದು. ಆದರೆ ನೆಲಮಟ್ಟದಲ್ಲಿ ನಡೆಯುವ ಕಾರ್ಯಕ್ರಮಗಳ ರೂಪುರೇಷೆಯನ್ನು ನಿರ್ಧರಿಸುವಲ್ಲಿ UKಯ ನೇರ ಪಾತ್ರ ಮತ್ತು ಲವಚಿಕತೆ ಕಡಿಮೆಯಾಗುತ್ತದೆ.”

“ಇದಲ್ಲದೆ, ದೇಶೀಯ ಆಶ್ರಯ ವೆಚ್ಚಗಳನ್ನು ಭರಿಸಲು ನೆರವು ನಿಧಿಗಳನ್ನು ಬಳಸುತ್ತಿರುವ ಒತ್ತಡಗಳ ಜೊತೆಗೆ ಈ ಪ್ರಮಾಣದ ಕಡಿತವನ್ನು ಗಮನಿಸಿದರೆ, ದ್ವಿಪಕ್ಷೀಯ ಸಹಾಯದ ಕೊರತೆಯನ್ನು ಬಹುಪಕ್ಷೀಯ ವ್ಯವಸ್ಥೆಗಳು ಸಂಪೂರ್ಣವಾಗಿ ಭರಿಸಲು ಸಾಧ್ಯವಿಲ್ಲ.”

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

 

25 ಮಾರ್ಚ್ 2026, 20:03