ಬ್ರೆಜಿಲ್‌ನ ಆದಿವಾಸಿ ಆಧ್ಯಾತ್ಮಿಕ ನಾಯಕ ಬೆಂಕಿ ಪಿಯಾಂಕೊ ಅವರಿಗೆ ನೀವಾನೋ ಶಾಂತಿ ಪ್ರಶಸ್ತಿ
ವ್ಯಾಟಿಕನ್ ವರದಿ
43ನೇ ನೀವಾನೋ ಶಾಂತಿ ಪ್ರಶಸ್ತಿಯನ್ನು ಬ್ರೆಜಿಲ್‌ನ ಅಮೆಜಾನ್‌ನಲ್ಲಿರುವ ಅಶಾನಿಂಕಾ ಜನರ ಸ್ಥಳೀಯ ಆಧ್ಯಾತ್ಮಿಕ ನಾಯಕ ಶ್ರೀ ಬೆಂಕಿ ಪಿಯಾಕೊ ಅವರಿಗೆ ನೀಡಲಾಗಿದೆ. ಜಪಾನ್‌ನ ಟೋಕಿಯೊದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ನಿವಾನೋ ಶಾಂತಿ ಪ್ರತಿಷ್ಠಾನವು, "ಸ್ಥಳೀಯ ಭೂಮಿ ಮತ್ತು ಸಂಸ್ಕೃತಿಯನ್ನು ರಕ್ಷಿಸುವಲ್ಲಿ ಮತ್ತು ಕಳೆದ ಹದಿನೈದು ವರ್ಷಗಳಿಂದ ಅರಣ್ಯೀಕರಣ ಮತ್ತು ಪರಿಸರ ಸಂರಕ್ಷಣೆಯಲ್ಲಿ ಪ್ರವರ್ತಕರಾಗಿದ್ದಕ್ಕಾಗಿ ನಿರಂತರ ನಾಯಕತ್ವವನ್ನು" ಗುರುತಿಸಿ ಈ ಪ್ರಶಸ್ತಿಯನ್ನು ನೀಡಿದೆ.
ಪರಿಸರ ಸಂರಕ್ಷಣೆ ಮತ್ತು ಸಮುದಾಯದ ಸೇವೆ
ಬೆಂಕಿ ಪಿಯಾಂಕೊ ಅವರು ಯೊರೆಂಕಾ ತಸೊರೆಂಟ್ಸಿ ಸಂಸ್ಥೆ ಹಾಗೂ ಆದಿವಾಸಿ ಆಯಾಹುವಾಸ್ಕಾ ಸಮಾವೇಶವನ್ನು ಸ್ಥಾಪಿಸಿ ಶಿಕ್ಷಣ, ಸಮುದಾಯ ಆಧಾರಿತ ಪರಿಸರ ಪುನರುಜ್ಜೀವನ ಹಾಗೂ ಪರಂಪರೆಯ ಜ್ಞಾನ ವರ್ಗಾವಣೆಗೆ ಉತ್ತೇಜನ ನೀಡಿದ್ದಾರೆ. ಯುವಕರು ಮತ್ತು ಸ್ಥಳೀಯ ಸಮುದಾಯಗಳನ್ನು ಒಗ್ಗೂಡಿಸಿ ವ್ಯಾಪಕ ಮಟ್ಟದಲ್ಲಿ ಅರಣ್ಯೀಕರಣ ಮತ್ತು ಜೀವ ವೈವಿಧ್ಯ ಸಂರಕ್ಷಣೆಗೆ ಅವರು ಪ್ರೇರೇಪಿಸುತ್ತಿದ್ದಾರೆ.
ಪ್ರಶಸ್ತಿ ಘೋಷಿಸಿದ ಪ್ರಕಟಣೆಯಲ್ಲಿ ನೀವಾನೋ ಶಾಂತಿ ಪ್ರತಿಷ್ಠಾನ, ಬ್ರೆಜಿಲ್ ಮಾತ್ರವಲ್ಲದೆ ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಬೆಂಕಿ ಪಿಯಾಂಕೊ ಅವರು ಪರಿಸರ ಸಂರಕ್ಷಣೆಯ ಪ್ರಮುಖ ಧ್ವನಿಯಾಗಿ ಹೊರಹೊಮ್ಮಿದ್ದಾರೆ ಎಂದು ಉಲ್ಲೇಖಿಸಿದೆ. ಆದಿವಾಸಿ ಆಧ್ಯಾತ್ಮಿಕ ಪರಂಪರೆಯಿಂದ ಪ್ರೇರಿತರಾಗಿ, ವಿಭಿನ್ನ ಸಂಸ್ಕೃತಿಗಳ ನಡುವೆ ಸಂವಾದವನ್ನು ಉತ್ತೇಜಿಸುವ ಕಾರ್ಯದಲ್ಲಿ ಅವರು ತೊಡಗಿಸಿಕೊಂಡಿದ್ದಾರೆ ಎಂದು ಹೇಳಿದೆ.
ಅಮೆಜಾನ್ ಅರಣ್ಯವನ್ನು ಸಂರಕ್ಷಿಸುವುದು, ಆದಿವಾಸಿ ಸಂಸ್ಕೃತಿ ಮತ್ತು ಆಧ್ಯಾತ್ಮಿಕತೆಯನ್ನು ಉಳಿಸುವುದು ಹಾಗೂ ಯುವ ಪೀಳಿಗೆಗೆ ಪ್ರಕೃತಿಯೊಂದಿಗೆ ಸಮನ್ವಯದಿಂದ ಬದುಕುವ ಮಹತ್ವವನ್ನು ತಿಳಿಸುವುದರಲ್ಲಿ ಅವರು ಸಲ್ಲಿಸಿರುವ ಸೇವೆಯನ್ನು ಈ ಪ್ರಶಸ್ತಿ ವಿಶೇಷವಾಗಿ ಗುರುತಿಸಿದೆ.
ಹಾಗೆಯೇ ಹವಾಮಾನ ಬದಲಾವಣೆ ಮತ್ತು ಪರಿಸರ ಸಂಕಷ್ಟಗಳನ್ನು ಎದುರಿಸಲು ಪರಂಪರೆಯ ಜ್ಞಾನ, ಪರಿಸರದ ಹೊಣೆಗಾರಿಕೆ ಹಾಗೂ ಜಾಗತಿಕ ಸಹಕಾರದ ಅಗತ್ಯತೆಯನ್ನು ಒತ್ತಿ ಹೇಳುವಲ್ಲಿ ಅವರ ಕೊಡುಗೆ ಮಹತ್ವದ್ದಾಗಿದೆ ಎಂದು ಪ್ರಶಸ್ತಿ ಸಮಿತಿ ಹೇಳಿದೆ.
ಪ್ರಶಸ್ತಿ ಪ್ರದಾನ ಸಮಾರಂಭ
2026ರ ಮೇ 12ರಂದು ಟೋಕಿಯೊ ನಗರದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಬೆಂಕಿ ಪಿಯಾಂಕೊ ಅವರಿಗೆ ಪ್ರಶಸ್ತಿ ಪತ್ರ, ಟ್ರೋಫಿ ಹಾಗೂ 20 ಮಿಲಿಯನ್ ಯೆನ್(₹ 11643870.00) ಮೊತ್ತವನ್ನು ಪ್ರದಾನ ಮಾಡಲಾಗುತ್ತದೆ.
ನೀವಾನೋ ಶಾಂತಿ ಪ್ರಶಸ್ತಿ
ನೀವಾನೋ ಶಾಂತಿ ಪ್ರತಿಷ್ಠಾನ ಪ್ರತಿವರ್ಷ ಜಾಗತಿಕ ಮಟ್ಟದಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ, ಅಂತರ್ ಧಾರ್ಮಿಕ ಸಹಕಾರವನ್ನು ಉತ್ತೇಜಿಸಿ ವಿಶ್ವಶಾಂತಿಯ ಗುರಿಗೆ ಮಹತ್ವದ ಕೊಡುಗೆ ನೀಡಿದ ವ್ಯಕ್ತಿಗಳು ಅಥವಾ ಸಂಸ್ಥೆಗಳನ್ನು ಗೌರವಿಸಲು ಈ ಪ್ರಶಸ್ತಿಯನ್ನು ನೀಡುತ್ತದೆ.
ಈ ಪ್ರಶಸ್ತಿಯ ಉದ್ದೇಶ ಅಂತರ್ ಧಾರ್ಮಿಕ ಪರಸ್ಪರ ಅರಿವು ಮತ್ತು ಸಹಕಾರವನ್ನು ವೃದ್ಧಿಸುವುದರ ಜೊತೆಗೆ ವಿಶ್ವಶಾಂತಿಗಾಗಿ ಕಾರ್ಯನಿರ್ವಹಿಸುವ ಇನ್ನಷ್ಟು ವ್ಯಕ್ತಿಗಳನ್ನು ಪ್ರೇರೇಪಿಸುವುದಾಗಿದೆ.
ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).