ಅಫ್ಘಾನಿಸ್ತಾನದಲ್ಲಿ ಹೆಚ್ಚುತ್ತಿರುವ ಸ್ಥಳಾಂತರದಿಂದ ತೀವ್ರಗೊಳ್ಳುತ್ತಿರುವ ಮಾನವೀಯ ಸಂಕಷ್ಟ
ಲೇಖಕರು: ನೇತನ್ ಮಾರ್ಲೆ
2025ನೇ ವರ್ಷದಲ್ಲೇ ಮಾತ್ರ ಇರಾನ್‌ನಿಂದ ಒಂದು ಮಿಲಿಯನ್‌ಗಿಂತ ಹೆಚ್ಚು ಅಫ್ಘಾನಿಗಳು ವಾಪಸಾಗಿದ್ದಾರೆ. ಇದರಿಂದ ಅಫ್ಘಾನಿಸ್ತಾನದ ದುರ್ಬಲ ಸಹಾಯ ವ್ಯವಸ್ಥೆಯ ಮೇಲೆ ಭಾರೀ ಒತ್ತಡ ಉಂಟಾಗಿ, ದೇಶದೊಳಗೇ ಮತ್ತೊಂದು ಸ್ಥಳಾಂತರದ ಚಕ್ರ ಆರಂಭವಾಗಿದೆ. ಬಲವಂತದ ಅಥವಾ ಒತ್ತಡದಡಿ ನಡೆಯುವ ವಾಪಸಾತಿಗಳು ವ್ಯಾಪಕ ಪ್ರದೇಶವನ್ನು ಅಸ್ಥಿರಗೊಳಿಸಬಹುದು ಎಂದು ವಿಶ್ವ ಸಂಸ್ಥೆಯ ನಿರಾಶ್ರಿತರ ಸಂಸ್ಥೆ ಎಚ್ಚರಿಸಿದೆ.
ಇದೀಗ ಇರಾನ್‌ನೊಳಗೆ ಅಮೇರಿಕಾ ಮತ್ತು ಇಸ್ರಾಯೇಲ್ ನಡೆಸುತ್ತಿರುವ ಹೆಚ್ಚು ದಾಳಿಗಳು ಮತ್ತಷ್ಟು ದೊಡ್ಡ ನಿರಾಶ್ರಿತ ಸಂಕಷ್ಟ ಉಂಟಾಗುವ ಭೀತಿಯನ್ನು ಹೆಚ್ಚಿಸಿವೆ.
ವಿದ್ಯುತ್ ವ್ಯವಸ್ಥೆಗಳು ಕುಸಿಯುತ್ತಿವೆ, ನಗರಗಳು ಖಾಲಿಯಾಗುತ್ತಿವೆ ಮತ್ತು ಭದ್ರತಾ ಪರಿಸ್ಥಿತಿ ಹದಗೆಡುತ್ತಿದೆ. ಈ ಹಿನ್ನೆಲೆಯಲ್ಲಿ ಇರಾನ್‌ನಲ್ಲಿರುವ ಲಕ್ಷಾಂತರ ಜನರು — ಇದರಲ್ಲಿ ಹಿಂದಿನ ಸಂಘರ್ಷಗಳಿಂದ ಸ್ಥಳಾಂತರಗೊಂಡ ನಿರಾಶ್ರಿತರೂ ಸೇರಿದ್ದಾರೆ — ಉಳಿಯಬೇಕೋ ಅಥವಾ ಪಲಾಯನಗೊಳ್ಳಬೇಕೋ ಎಂಬ ಕಠಿಣ ಆಯ್ಕೆಯನ್ನು ಎದುರಿಸುತ್ತಿದ್ದಾರೆ. ಇರಾನ್ ಕೇವಲ ಪ್ರಾದೇಶಿಕ ಅಸ್ಥಿರತೆಯಲ್ಲಿ ಸಿಲುಕಿರುವ ಮತ್ತೊಂದು ದೇಶವಲ್ಲ. ಅದು ವಿಶ್ವದಲ್ಲಿಯೇ ಅತಿ ಹೆಚ್ಚು ನಿರಾಶ್ರಿತರಿಗೆ ಆಶ್ರಯ ನೀಡಿರುವ ದೇಶಗಳಲ್ಲಿ ಒಂದಾಗಿದೆ. ಅಂದಾಜು 38 ಲಕ್ಷ ಅಫ್ಘಾನಿಗಳಿಗೆ ಇರಾನ್ ಆಶ್ರಯ ನೀಡಿದೆ. ಇದರಲ್ಲಿ ಸುಮಾರು 7.5 ಲಕ್ಷ ನೋಂದಾಯಿತ ನಿರಾಶ್ರಿತರು ಮತ್ತು ದಶಕಗಳ ಯುದ್ಧದಿಂದ ಪಲಾಯನಗೊಂಡ ಸುಮಾರು 26 ಲಕ್ಷ ದಾಖಲೆರಹಿತ ಅಫ್ಘಾನಿಗಳೂ ಸೇರಿದ್ದಾರೆ.
ಇರಾನ್‌ನಲ್ಲಿರುವ ಅನೇಕ ಅಫ್ಘಾನಿ ನಿರಾಶ್ರಿತರಿಗೆ ಇಂದಿನ ಸಂಕಷ್ಟವು ವರ್ಷಗಳ ಅನಿಶ್ಚಿತತೆಗೆ ಮತ್ತೊಂದು ಹೊರೆ ಸೇರಿಸಿದೆ. ಹಲವರು ದಶಕಗಳಿಂದ ಅಲ್ಲಿ ವಾಸಿಸುತ್ತಿದ್ದರೂ ಶಾಶ್ವತ ಕಾನೂನುಬದ್ಧ ಸ್ಥಾನಮಾನವಿಲ್ಲ. ಆರ್ಥಿಕ ಒತ್ತಡ ಮತ್ತು ರಾಜಕೀಯ ಉದ್ವಿಗ್ನತೆಗಳಿಂದ ವಲಸೆ ನಿಯಮಗಳು ಕಠಿಣವಾಗಿದ್ದು, ದೇಶದಿಂದ ಹೊರಹಾಕುವ ಪ್ರಕರಣಗಳೂ ಹೆಚ್ಚಾಗಿವೆ.
ಇದೇ ಸಮಯದಲ್ಲಿ ಪಾಕಿಸ್ತಾನದಲ್ಲಿಯೂ ಸಮಾನ ಸಂಕಷ್ಟ ಬೆಳೆಯುತ್ತಿದೆ. ಅಲ್ಲಿ ಸುಮಾರು 30 ಲಕ್ಷ ಅಫ್ಘಾನಿ ನಿರಾಶ್ರಿತರು ವಾಸಿಸುತ್ತಿದ್ದಾರೆ. ಕಳೆದ ವರ್ಷದಿಂದ ಇಸ್ಲಾಮಾಬಾದ್ ಸರ್ಕಾರ ದಾಖಲೆರಹಿತ ಅಫ್ಘಾನಿಗಳು ಹಾಗೂ ಅವಧಿ ಮುಗಿದ ತಾತ್ಕಾಲಿಕ ಅನುಮತಿ ಹೊಂದಿರುವವರನ್ನು ದೊಡ್ಡ ಪ್ರಮಾಣದಲ್ಲಿ ದೇಶದಿಂದ ಹೊರಹಾಕಲು ಆರಂಭಿಸಿದೆ. ಇನ್ನು ಮುಂದೆ ಅವರಿಗೆ ಆಶ್ರಯ ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ. ಈಗಾಗಲೇ ಒತ್ತಡದಲ್ಲಿರುವ ಕಾಬೂಲ್ ಸರ್ಕಾರ ಈ ವಾಪಸಾಗುವವರಿಗೆ ನೆಲೆ ನೀಡಲು ಹೋರಾಡುತ್ತಿದೆ — ಇವರಲ್ಲಿ ಮೂರನೇ ಎರಡರಷ್ಟು ಜನರು ಅಫ್ಘಾನಿಸ್ತಾನದ ಗಾಳಿ ಗಂಧ ಇಲ್ಲದವರು
ದಾನಿಗಳ ನೆರವು ಕಡಿತಗಳು ಮತ್ತು ಅಮೇರಿಕಾದ ನೆರವು ಸ್ಥಗಿತಗೊಳಿಸುವಿಕೆಯ ಪರಿಣಾಮವಾಗಿ ಮಾನವೀಯ ನೆರವಿನ ಬಜೆಟ್ ಈಗಾಗಲೇ ತೀವ್ರವಾಗಿ ಕುಗ್ಗಿದೆ. ಇದರ ಪರಿಣಾಮವಾಗಿ ವಾಪಸಾಗುವ ಅನೇಕ ಜನರಿಗೆ ಬದುಕು ಸಾಗಿಸಲು ಕಡಿಮೆ ಆಯ್ಕೆಗಳಷ್ಟೇ ಉಳಿದಿವೆ. ಈ ಪರಿಸ್ಥಿತಿಯಲ್ಲಿ ಕೆಲವರು ಯುರೋಪಿನತ್ತ ಅಪಾಯಕಾರಿ ಪ್ರಯಾಣ ಮಾಡಲು ಪ್ರಯತ್ನಿಸಬಹುದು ಎಂದು ನೆರವು ಸಂಸ್ಥೆಗಳ ಅಧಿಕಾರಿಗಳು ಎಚ್ಚರಿಸುತ್ತಿದ್ದಾರೆ.
ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).