ಕೀನ್ಯಾ: ಭಾರೀ ಅನಾಹುತ ತಂದ ಪ್ರವಾಹ, ಮೃತರ ಸಂಖ್ಯೆ ಹೆಚ್ಚಳ
ಲೇಖಕರು: ಸಹೋದರಿ ಕ್ರಿಸ್ಟಿನ್ ಮಸಿವೋ, CPS
ಭಾರಿ ಮಳೆಯ ಪರಿಣಾಮ ದೇಶದ ಅನೇಕ ಭಾಗಗಳಲ್ಲಿ ವ್ಯಾಪಕ ನಾಶ ಉಂಟಾಗಿದ್ದು, ಪೊಲೀಸ್ ಹಾಗೂ ಸರ್ಕಾರಿ ಅಧಿಕಾರಿಗಳ ಮಾಹಿತಿಯ ಪ್ರಕಾರ ಕೀನ್ಯಾದಾದ್ಯಂತ ಈಗಾಗಲೇ 45 ಮಂದಿ ಸಾವನ್ನಪ್ಪಿದ್ದಾರೆ. ಈ ಅನಾಹುತ ವಿಶೇಷವಾಗಿ ರಾಜಧಾನಿ ನೈರೋಬಿಯಲ್ಲಿ ತೀವ್ರ ಪರಿಣಾಮ ಬೀರಿದೆ. ನಿರಂತರ ಸುರಿದ ಮಳೆಯಿಂದ ಪ್ರಮುಖ ರಸ್ತೆಗಳು ವೇಗವಾಗಿ ಹರಿಯುವ ನದಿಗಳಂತಾಗಿ, ವಾಹನಗಳನ್ನು ಹೊತ್ತೊಯ್ದು ಮನೆಗಳಿಗೆ ನೀರು ನುಗ್ಗುವಂತಾಗಿದೆ.
ನಾಶ, ಸಾವು ಮತ್ತು ಸ್ಥಳಾಂತರ
ಅಧಿಕಾರಿಗಳ ಮಾಹಿತಿಯ ಪ್ರಕಾರ ಶನಿವಾರ ನೈರೋಬಿಯಲ್ಲಿ 23 ಮಂದಿ ಮೃತಪಟ್ಟಿದ್ದಾರೆ. ಪ್ರವಾಹ ನೀರು ತುಂಬಿದ ಪ್ರದೇಶಗಳಲ್ಲಿ ಶೋಧ ಕಾರ್ಯ ಮುಂದುವರಿದಿರುವುದರಿಂದ ಮೃತರ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ. ಪೊಲೀಸ್ ವಕ್ತಾರ ಮೈಕೆಲ್ ಮುಶಿರಿ ಅವರು ಇದುವರೆಗೆ 45 ಮಂದಿ ನೀರಲ್ಲಿ ಮುಳುಗಿ ಸಾವನ್ನಪ್ಪಿದ ಪ್ರಕರಣಗಳು ದಾಖಲಾಗಿವೆ ಎಂದು ತಿಳಿಸಿದ್ದಾರೆ. ದೇಶದಾದ್ಯಂತ ಕನಿಷ್ಠ 2,224 ಮಂದಿ ಸ್ಥಳಾಂತರಗೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಆದರೆ ಸ್ಥಳೀಯ ವರದಿಗಳ ಪ್ರಕಾರ ತಮ್ಮ ಮನೆಗಳನ್ನು ತೊರೆಯಬೇಕಾದವರ ಸಂಖ್ಯೆ ಇನ್ನೂ ಹೆಚ್ಚಿನದಾಗಿರಬಹುದು. ಸರ್ಕಾರದ ಅಂದಾಜಿನ ಪ್ರಕಾರ 50,000ಕ್ಕೂ ಹೆಚ್ಚು ಜನರು ಮನೆ ಕಳೆದುಕೊಂಡಿದ್ದು, ನೈರೋಬಿ ಮತ್ತು ಅದರ ಸುತ್ತಮುತ್ತಲ ಪ್ರದೇಶಗಳಲ್ಲಿ ಸಾವಿರಾರು ಕುಟುಂಬಗಳು ಸ್ಥಳಾಂತರಗೊಂಡಿವೆ.
ಕೀನ್ಯಾ ರೆಡ್ ಕ್ರಾಸ್ ಸಂಸ್ಥೆ ಪರಿಸ್ಥಿತಿಯನ್ನು “ವಿಪರೀತ ದುರಂತಕರ” ಎಂದು ವರ್ಣಿಸಿದ್ದು, ಪ್ರವಾಹದಿಂದ ಅನೇಕ (ಕೌಂಟಿ) ಪ್ರದೇಶಗಳಲ್ಲಿ ಮನೆಗಳು, ಕೃಷಿಭೂಮಿ ಹಾಗೂ ಪ್ರಮುಖ ಮೂಲಸೌಕರ್ಯಗಳು ನಾಶವಾಗಿವೆ ಎಂದು ತಿಳಿಸಿದೆ.
“ಮಳೆ ಮುಂದುವರಿದಂತೆ ನೈರೋಬಿ ನದಿಯ ತೀರಗಳು ಕುಸಿದುಬಿದ್ದವು, ವಾಹನಗಳು ನೀರಿನಲ್ಲಿ ಕೊಚ್ಚಿಕೊಂಡು ಹೋದವು ಮತ್ತು ಅಂಗಡಿಗಳೊಳಗೆ ನೀರು ನುಗ್ಗಿ ಆಸ್ತಿಪಾಸ್ತಿಗಳು ಹಾನಿಗೊಳಗಾದವು” ಎಂದು ನಗರದ ರಸ್ತೆ ವ್ಯಾಪಾರಿ ಫ್ರೆಡ್ರಿಕ್ ವಸೊಂಗಾ ಹೇಳಿದರು. ಅದೇ ಪ್ರದೇಶದಲ್ಲಿ ಅಂಗಡಿ ನಡೆಸುತ್ತಿರುವ ಡೆರಿಕ್ ಜುಮಾ ಅವರು ಪ್ರವಾಹದ ವೇಳೆ ತಮ್ಮ ಇಬ್ಬರು ನೆರೆಹೊರೆಯವರು ಸಾವನ್ನಪ್ಪಿದ್ದಾರೆ ಎಂದು ಹೇಳಿದರು. ಅವರಲ್ಲಿ ಒಬ್ಬರು ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿದ್ದಾರೆ.
ಸಾರಿಗೆ ವ್ಯವಸ್ಥೆ ಅಸ್ತವ್ಯಸ್ತ
ಭಾರಿ ಮಳೆಯಿಂದ ಸಾರಿಗೆ ವ್ಯವಸ್ಥೆಯೂ ಭಾರೀ ಅಸ್ತವ್ಯಸ್ತಗೊಂಡಿದೆ. ರಸ್ತೆಗಳು ಹಾನಿಗೊಂಡಿದ್ದು, ಅನೇಕ ಹೆದ್ದಾರಿಗಳು ನೀರಿನಿಂದ ಮುಳುಗಿವೆ.ಮಳೆ ವಿಮಾನ ಸಾರಿಗೆಯ ಮೇಲೂ ಪರಿಣಾಮ ಬೀರಿದ್ದು, ಕೀನ್ಯಾ ಏರ್‌ವೇಸ್ ಸಂಸ್ಥೆ ತೀವ್ರ ಹವಾಮಾನದಿಂದ ನೈರೋಬಿಗೆ ಹೋಗುವ ಕೆಲವು ವಿಮಾನಗಳನ್ನು ಸ್ಥಗಿತಗೊಳಿಸಬೇಕಾಯಿತು ಎಂದು ತಿಳಿಸಿದೆ. ಕೆಲವು ವಿಮಾನಗಳನ್ನು ಕರಾವಳಿ ನಗರವಾದ ಮೊಂಬಾಸಾ ಕಡೆಗೆ ತಿರುಗಿಸಲಾಗಿದೆ. ಅಧಿಕಾರಿಗಳ ಪ್ರಕಾರ ತುರ್ತು ಕಾರ್ಯಾಚರಣೆ ತಂಡಗಳು ಸಾರಿಗೆ ಮಾರ್ಗಗಳನ್ನು ಪುನಃ ಆರಂಭಿಸಲು ಹಾಗೂ ಸಂತ್ರಸ್ತ ಸಮುದಾಯಗಳಿಗೆ ನೆರವು ನೀಡಲು ಕಾರ್ಯನಿರ್ವಹಿಸುತ್ತಿವೆ.
ಇದರ ಮಧ್ಯೆ ಕೆಲ ವಿಮರ್ಶಕರು ನಗರ ಪ್ರದೇಶಗಳಲ್ಲಿ ಸರಿಯಾದ ಒಳಚರಂಡಿ ವ್ಯವಸ್ಥೆಯ ಕೊರತೆ ಮತ್ತು ನಿಯಂತ್ರಣವಿಲ್ಲದ ನಗರ ಅಭಿವೃದ್ಧಿಯೇ ಪ್ರವಾಹದ ಪರಿಣಾಮವನ್ನು ಹೆಚ್ಚಿಸಿದೆ ಎಂದು ಹೇಳಿದ್ದಾರೆ.
ಪೂರ್ವ ಆಫ್ರಿಕಾದ ಹವಾಮಾನ ಧೋರಣೆ
ವಿಜ್ಞಾನಿಗಳು ಪೂರ್ವ ಆಫ್ರಿಕಾ ಪ್ರದೇಶದಲ್ಲಿ ಪ್ರತಿಕೂಲ ಹವಾಮಾನ ಘಟನೆಗಳು ಹೆಚ್ಚಾಗುತ್ತಿರುವುದಾಗಿ ಎಚ್ಚರಿಸಿದ್ದಾರೆ. ಕಳೆದ ಎರಡು ದಶಕಗಳಲ್ಲಿ ಈ ಪ್ರದೇಶದಲ್ಲಿ ಭೀಕರ ಬರ ಹಾಗೂ ಅತಿಯಾದ ಮಳೆ ಎರಡೂ ಹೆಚ್ಚುತ್ತಿರುವುದನ್ನು ಅನೇಕ ಅಧ್ಯಯನಗಳು ಸೂಚಿಸಿವೆ.
ಹವಾಮಾನ ಬದಲಾವಣೆ, ಹದ್ದುಬಸ್ತಿಲ್ಲದ ನಗರೀಕರಣ ಮತ್ತು ಕಳಪೆ ಒಳಚರಂಡಿ ವ್ಯವಸ್ಥೆ, ದುರ್ಬಲ ಮೂಲಸೌಕರ್ಯಗಳ ಸಂಯೋಜನೆಯೇ ನೈರೋಬಿ ಮುಂತಾದ ನಗರಗಳನ್ನು ಪ್ರವಾಹ ಅಪಾಯಕ್ಕೆ ಹೆಚ್ಚು ಒಳಪಡಿಸುತ್ತಿದೆ ಎಂದು ತಜ್ಞರು ಹೇಳಿದ್ದಾರೆ.
ರಕ್ಷಣಾ ಮತ್ತು ನೆರವು ಕಾರ್ಯಾಚರಣೆ
ರಕ್ಷಣಾ ತಂಡಗಳು ಹಾಗೂ ಮಾನವೀಯ ನೆರವು ಸಂಸ್ಥೆಗಳು ಕಾಣೆಯಾಗಿರುವವರಿಗಾಗಿ ಶೋಧ ಕಾರ್ಯ ಮುಂದುವರಿಸುತ್ತಿದ್ದು, ಸ್ಥಳಾಂತರಗೊಂಡ ಕುಟುಂಬಗಳಿಗೆ ನೆರವು ಒದಗಿಸುತ್ತಿವೆ. ಮುಂದಿನ ದಿನಗಳಲ್ಲಿ ಮಳೆ ಮುಂದುವರಿದರೆ ಇನ್ನಷ್ಟು ಪ್ರವಾಹ ಮತ್ತು ಭೂಕುಸಿತಗಳ ಸಂಭವವಿದೆ ಎಂಬ ಆತಂಕದಿಂದ ಅಧಿಕಾರಿಗಳು ಹಲವಾರು (ಕೌಂಟಿ) ಪ್ರದೇಶಗಳಲ್ಲಿ ಸ್ಥಿತಿ ಮತ್ತು ಹವಾಮಾನ ಬದಲಾವಣೆಯ ಮೇಲೆ ತೀವ್ರ ನಿಗಾವಹಿಸುತ್ತಿದ್ದಾರೆ.
ಈ ದುರಂತದ ನಂತರ ಕೀನ್ಯಾ ಸರ್ಕಾರ ಮತ್ತು ನೆರವು ಸಂಸ್ಥೆಗಳ ಗಮನ ಈಗ ತುರ್ತು ನೆರವು ಮತ್ತು ಮನೆ ಕಳೆದುಕೊಂಡ ಸಾವಿರಾರು ಜನರ ಪುನರ್ವಸತಿ ಕಾರ್ಯಗಳತ್ತ ಕೇಂದ್ರೀಕೃತವಾಗಿದೆ.
ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).