ಹುಡುಕಿ

ಗ್ರೀನ್‌ಅಕಾರ್ಡ್ ಫೋರಂನ ಪ್ರಮುಖ ವಿಷಯ ಪರ್ವತ ಪ್ರದೇಶಗಳು. ಗ್ರೀನ್‌ಅಕಾರ್ಡ್ ಫೋರಂನ ಪ್ರಮುಖ ವಿಷಯ ಪರ್ವತ ಪ್ರದೇಶಗಳು. 

ಗ್ರೀನ್‌ಅಕಾರ್ಡ್ ವೇದಿಕೆ 2026: ಸುಸ್ಥಿರತೆ, ಮಾಧ್ಯಮ ಮತ್ತು ಹಂಚಿಕೊಂಡ ಭವಿಷ್ಯ

40 ದೇಶಗಳಿಂದ 100ಕ್ಕೂ ಹೆಚ್ಚು ಪತ್ರಕರ್ತರು ನಾಲ್ಕು ದಿನಗಳ ಪರಿಸರ,ಆವಿಷ್ಕಾರ ಜವಬ್ದಾರಿಯುತ ಸಂವಾಹನ ಕುರಿತು ಸಂವಾದದಲ್ಲಿ ಭಾಗವಹಿಸಿದ್ದಾರೆ.

ಲೇಖಕರು: ಮರಿಯನ್ ತೋಮರರೋ ಅಂಡ್ ಫ್ರಾನ್ಸೆಸ್ಕ್ಯಾ ಮೆರ್ಲೊ - ಟ್ರೆವಿಸೊ, ಇಟಲಿ

ಇಟಲಿಯ ಉತ್ತರ ಭಾಗದಲ್ಲಿರುವ ಟ್ರೆವಿಸೋ ನಗರದಲ್ಲಿ ಮಾರ್ಚ್ 18ರಂದು ಆರಂಭವಾದ ಗ್ರೀನ್‌ಅಕಾರ್ಡ್ ಆಯೋಜಿಸಿದ 17ನೇ ಅಂತರರಾಷ್ಟ್ರೀಯ ಪ್ರಕೃತಿ ಸಂರಕ್ಷಣಾ ಮಾಹಿತಿಯ ಫೋರಂ ಶನಿವಾರದವರೆಗೆ ನಡೆಯಲಿದೆ. ನಾಲ್ಕು ದಿನಗಳ ಈ ಸಮಾವೇಶದಲ್ಲಿ 40ಕ್ಕೂ ಹೆಚ್ಚು ದೇಶಗಳಿಂದ ಬಂದ 100ಕ್ಕೂ ಹೆಚ್ಚು ಪತ್ರಕರ್ತರು ಭಾಗವಹಿಸಿದ್ದು, ಪರಿಸರ, ನಆವಿಷ್ಕಾರ ಮತ್ತು ಜವಾಬ್ದಾರಿಯುತ ಸಂವಹನದ ಕುರಿತು ವಿಶಾಲ ಚರ್ಚೆಗಳು ನಡೆಯುತ್ತಿವೆ.

ಈ ಫೋರಂನಲ್ಲಿ ವಿವಿಧ ದೇಶಗಳ ಪತ್ರಕರ್ತರೊಂದಿಗೆ ಸರ್ಕಾರದ ಪ್ರತಿನಿಧಿಗಳು, ಆಡಳಿತಾಧಿಕಾರಿಗಳು, ಉದ್ಯಮ ವಲಯದ ಸದಸ್ಯರು, ಶಿಕ್ಷಣ ತಜ್ಞರು ಹಾಗೂ ಸಾಂಸ್ಕೃತಿಕ ಕ್ಷೇತ್ರದ ಪ್ರತಿನಿಧಿಗಳೂ ಭಾಗವಹಿಸುತ್ತಿದ್ದಾರೆ. ಪರಿಸರ ಮತ್ತು ಸಾಮಾಜಿಕ ಸವಾಲುಗಳ ಕುರಿತು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಂವಾದ ನಡೆಸಲು ಈ ವೇದಿಕೆ ಅವಕಾಶ ಒದಗಿಸಿದೆ.

ಈ ವರ್ಷದ ವಿಷಯ “ಸಮಗ್ರ ಭವಿಷ್ಯ ನಿರ್ಮಾಣ – ಭವಿಷ್ಯಕ್ಕಾಗಿ ತವಕಿಸುವ ಹೊಸ ಮಾನವತೆ” ಎಂಬುದಾಗಿದೆ. ಈ ವಿಷಯದ ಆಧಾರದ ಮೇಲೆ ಸಮಾವೇಶದಲ್ಲಿ ಪ್ರಾರಂಭಿಕ ಅಧಿವೇಶನದೊಂದಿಗೆ ಆರು ಪ್ರಮುಖ ವಿಷಯಾಧಾರಿತ ಚರ್ಚೆಗಳು ನಡೆಯುತ್ತಿವೆ. ಸಮಗ್ರ ಪರಿಸರಶಾಸ್ತ್ರ, ಯುರೋಪ್ ಮತ್ತು ಅಮೇರಿಕದ ಸಹಕಾರ, ಸ್ವಚ್ಛ ತಂತ್ರಜ್ಞಾನಗಳು, ಪರ್ವತ ಪ್ರದೇಶಗಳ ಭವಿಷ್ಯ, ದೊಡ್ಡ ಕಾರ್ಯಕ್ರಮಗಳ ಸುಸ್ಥಿರತೆ ಮತ್ತು ಅಸಮಾನತೆಯಿಂದ ವಿಭಜಿತವಾಗಿರುವ ಜಗತ್ತಿನಲ್ಲಿ ಮಾಧ್ಯಮಗಳ ಜವಾಬ್ದಾರಿ ಮೊದಲಾದ ವಿಷಯಗಳು ಪ್ರಮುಖವಾಗಿ ಚರ್ಚೆಗೆ ಬಂದಿವೆ.

ಆರಂಭಕ್ಕೂ ಮುನ್ನ: ನಿರೀಕ್ಷೆ ಮತ್ತು ಜವಾಬ್ದಾರಿಯ ಕರೆಗೆ

ಫೋರಂ ಅಧಿಕೃತವಾಗಿ ಆರಂಭವಾಗುವ ಮೊದಲು, ಗ್ರೀನ್‌ಅಕಾರ್ಡ್ ಸಂಸ್ಥೆಯ ಅಧ್ಯಕ್ಷ ಅಲ್ಫೋನ್ಸೊ ಕೌಟೆರುಚ್ಚಿಯೊ ಅವರು ಈ ವರ್ಷದ ಸಮಾವೇಶದ ಉದ್ದೇಶವನ್ನು ವಿವರಿಸಿದರು.

“ಇಂದಿನ ಅಂತರರಾಷ್ಟ್ರೀಯ ಪರಿಸ್ಥಿತಿ ಹಲವಾರು ಆತಂಕಗಳನ್ನು ಹುಟ್ಟಿಸುತ್ತಿದೆ ಮತ್ತು ಭವಿಷ್ಯ ಅನಿಶ್ಚಿತವಾಗಿರುವಂತೆ ಕಾಣಿಸುತ್ತದೆ,ಆದರೆ ನಾವು ಭವಿಷ್ಯದ ಬಗ್ಗೆ ಭಯವಲ್ಲ, ಭರವಸೆಯೊಂದಿಗೆ ಮಾತನಾಡಬೇಕು. ಹೊಸ ಮಾನವತೆ ತನ್ನನ್ನು ನವೀಕರಿಸಿಕೊಳ್ಳಲು ಸಿದ್ಧವಾಗಿದೆ ಎಂಬ ಸಂದೇಶವನ್ನು ನೀಡಲು ನಾವು ಬಯಸುತ್ತೇವೆ.”

ಯುವಜನರಲ್ಲಿ ಹೆಚ್ಚುತ್ತಿರುವ ಪರಿಸರ ಆತಂಕದ ಬಗ್ಗೆ ಅವರು ವಿಶೇಷವಾಗಿ ಗಮನಸೆಳೆದರು. ಭವಿಷ್ಯದಲ್ಲಿ ಪರಿಸರದ ಸ್ಥಿತಿ ಹದಗೆಡುವ ಭಯದಿಂದ ಉಂಟಾಗುವ ಈ ಮನಸ್ಥಿತಿ, ವಿಶೇಷವಾಗಿ ಯುವ ಪೀಳಿಗೆಯಲ್ಲಿ ಹೆಚ್ಚುತ್ತಿದೆ ಎಂದು ಅವರು ಹೇಳಿದರು. ಈ ಆತಂಕಕ್ಕೆ ಉತ್ತರವಾಗಿ, ಜ್ಞಾನಪೂರ್ಣ ಸಂವಾದ ಮತ್ತು ಕಾರ್ಯೋನ್ಮುಖ ಚಿಂತನೆಗೆ ಉತ್ತೇಜನ ನೀಡುವುದು ಈ ಫೋರಂನ ಉದ್ದೇಶವಾಗಿದೆ.

ಆಹಾರ ವ್ಯವಸ್ಥೆಯಿಂದ “ಆತ್ಮದ ಪರಿಸರಶಾಸ್ತ್ರ”ದವರೆಗೆ

ಮುಂದಿನ ದಿನಗಳಲ್ಲಿ ಫೋರಂನಲ್ಲಿ ವಿವಿಧ ವಿಷಯಗಳ ಕುರಿತು ಚರ್ಚೆಗಳು ನಡೆಯಲಿವೆ. ಸ್ಥಿರ ಕೃಷಿ, ಆಹಾರ ವ್ಯವಸ್ಥೆಗಳು, ನಗರ ಪುನರುತ್ಪಾದನೆ, ಜೀವಸ್ನೇಹಿ ವಾಸ್ತುಶಿಲ್ಪ, ಸುಖಸಂಪತ್ತಿನ ಆರ್ಥಿಕತೆ ಮತ್ತು ಡಿಜಿಟಲ್ ನವೀನತೆ ಮೊದಲಾದ ವಿಷಯಗಳು ಇದರ ಭಾಗವಾಗಿವೆ.

ಆಹಾರ ಸರಪಳಿಯ ವಿಷಯಕ್ಕೆ ವಿಶೇಷ ಮಹತ್ವ ನೀಡಲಾಗಿದ್ದು, ಇದರಲ್ಲಿ ತ್ಯಾಜ್ಯವನ್ನು ಕಡಿಮೆ ಮಾಡುವುದು ಮತ್ತು ಹೆಚ್ಚು ಸುಸ್ಥಿರ ಪದ್ಧತಿಗಳನ್ನು ಉತ್ತೇಜಿಸುವ ಬಗ್ಗೆ ಮಾರ್ಗಗಳ ಕುರಿತು ಮಿಶೆಲಿನ್ ಸ್ಟಾರ್  ಪಡೆದ ಹೆಸರಾಂತ ಶೆಫ್ ಗಳು(ಅಡುಗೆ ಭಟ್ಟರು) ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲಿದ್ದಾರೆ.

ಈ ವಿಷಯಗಳ ಹೊರತಾಗಿ, “ಮನಸ್ಸು ಮತ್ತು ಆತ್ಮದ ಪರಿಸರಶಾಸ್ತ್ರ” ಎಂಬ ವಿಶಿಷ್ಟ ಆಲೋಚನೆಯ ಮೇಲೂ ಚರ್ಚೆ ನಡೆಯಲಿದೆ. ಇದು ಅಸ್ಸಿಸಿಯ ಪವಿತ್ರ ಫ್ರಾನ್ಸಿಸ್ ಅವರು 1225ರಲ್ಲಿ ರಚಿಸಿದ “ಸೃಷ್ಟಿಗಳ ಸ್ತುತಿ ಗೀತೆ”ಯ 800ನೇ ವಾರ್ಷಿಕೋತ್ಸವದ ನೆನಪಿನೊಂದಿಗೆ ಸಂಬಂಧಿಸಿದೆ. ಈ ಸಂದರ್ಭದಲ್ಲಿ ಪಿಯೇತ್ರೊ ಪಾರೋಲಿನ್ ಸಿದ್ಧಪಡಿಸಿರುವ ಸಂದೇಶವನ್ನು, ಪ್ರಧಾನ ಗುರು  ಬೆನಿಯಾಮಿನೊ ಸ್ಟೆಲ್ಲಾ ಅವರು ಓದಲಿದ್ದಾರೆ.

ವಿಭಜಿತ ಜಗತ್ತಿನಲ್ಲಿ ಮಾಧ್ಯಮಗಳ ಪಾತ್ರ

ಈ ಫೋರಂನಲ್ಲಿ ಮತ್ತೊಂದು ಪ್ರಮುಖ ವಿಷಯವೆಂದರೆ ಪರಿಸರ ವಿಷಯಗಳ ಬಗ್ಗೆ ಸರಿಯಾದ ಮಾಹಿತಿಯನ್ನು ನೀಡುವಲ್ಲಿ ಪತ್ರಕರ್ತರ ಜವಾಬ್ದಾರಿ. “ಇಂದು ಸಮಗ್ರ ಪರಿಸರಶಾಸ್ತ್ರದ ಬಗ್ಗೆ ಬಹಳ ಮಾತನಾಡಲಾಗುತ್ತಿದೆ, ಆದರೆ ತಪ್ಪು ಮಾಹಿತಿಯೂ ಸುಲಭವಾಗಿ ಹರಡುತ್ತಿದೆ,” ಎಂದು ಕೌಟೆರುಚ್ಚಿಯೊ ಹೇಳಿದರು.

ಈ ಹಿನ್ನೆಲೆಯಲ್ಲೇ, ವಿವಿಧ ದೇಶಗಳ ಪತ್ರಕರ್ತರು ಸೇರಿ ತಪ್ಪು ಮಾಹಿತಿಯನ್ನು ಹೇಗೆ ತಡೆಗಟ್ಟಬಹುದು ಮತ್ತು ಸಂಶೋಧನೆ ಹಾಗೂ ಜವಾಬ್ದಾರಿಯುತ ವರದಿಗಾರಿಕೆಯಿಂದ ಸತ್ಯವನ್ನು ಹೇಗೆ ಜನರಿಗೆ ತಲುಪಿಸಬಹುದು ಎಂಬುದರ ಕುರಿತು ಚರ್ಚಿಸಲಿದ್ದಾರೆ.

ಪತ್ರಕರ್ತರಿಗೆ ಸರಿಯಾದ ಮಾಹಿತಿ ಮತ್ತು ವಿಶ್ವಾಸಾರ್ಹ ಮಾಹಿತಿಯ ಮೂಲಗಳನ್ನು ಒದಗಿಸುವುದು ಅತ್ಯಂತ ಅಗತ್ಯ ಎಂದು ಅವರು ಹೇಳಿದರು.“ಪತ್ರಕರ್ತರ ಕೆಲಸ ಅಮೂಲ್ಯ. ಅವರು ಸತ್ಯವನ್ನು ಜನರಿಗೆ ತಲುಪಿಸಲು ಅಗತ್ಯವಾದ ಮಾಹಿತಿಯನ್ನು ಪಡೆಯುವಂತೆ ನಾವು ಬೆಂಬಲಿಸಬೇಕು,” ಎಂದು ಅವರು ಒತ್ತಿಹೇಳಿದರು.

ವಿವಿಧ ಕ್ಷೇತ್ರಗಳ ನಡುವೆ ಸಂವಾದ

ಈ ಫೋರಂನಲ್ಲಿ ಉದ್ಯಮ ವಲಯದ ಪ್ರತಿನಿಧಿಗಳಿಗೂ ವಿಶೇಷ ಸ್ಥಾನ ನೀಡಲಾಗಿದೆ. ವಿಶೇಷವಾಗಿ ಇಟಲಿ ಮತ್ತು ಅಮೇರಿಕದ ಕಂಪನಿಗಳ ನಡುವಿನ ಸಂವಾದದ ಮೂಲಕ ಸುಸ್ಥಿರ ಉತ್ಪಾದನೆಯ ಬಗ್ಗೆ ಚರ್ಚೆಗಳು ನಡೆಯುತ್ತಿವೆ.

ವಿಭಿನ್ನ ಕ್ಷೇತ್ರಗಳ ಪ್ರತಿನಿಧಿಗಳನ್ನು ಒಂದೇ ವೇದಿಕೆಗೆ ತರಿಸುವ ಮೂಲಕ, ಪರಿಸರ ಸವಾಲುಗಳಿಗೆ ಒಟ್ಟಾಗಿ ಪರಿಹಾರ ಕಂಡುಹಿಡಿಯುವ ಪ್ರಯತ್ನ ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ. ತಂತ್ರಜ್ಞಾನ ನವೀನತೆ, ಸಾಂಸ್ಕೃತಿಕ ಚಿಂತನೆ ಮತ್ತು ನಿಖರ ಮಾಹಿತಿಯ ಆಧಾರದ ಮೇಲೆ ಭವಿಷ್ಯದ ಕ್ರಮಗಳನ್ನು ರೂಪಿಸಲು ಈ ವೇದಿಕೆ ಮಹತ್ವದ ಹೆಜ್ಜೆಯಾಗಿದೆ.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

18 ಮಾರ್ಚ್ 2026, 18:48