ಹುಡುಕಿ

ಸಂಶೋಧಕ ಕ್ರಿಜ್‌ಷ್ಟೋಫ್ ಸ್ಜಾಡೇಜ್ಕೊ ಸಂಶೋಧಕ ಕ್ರಿಜ್‌ಷ್ಟೋಫ್ ಸ್ಜಾಡೇಜ್ಕೊ 

ಹವಾಮಾನ ಸಂಕಟದ ಬಗ್ಗೆ ಯುವಜನರ ಅರಿವು: ಭವಿಷ್ಯ ಹೇಗಿರಬಹುದು?

ಗ್ರೀನ್‌ಅಕಾರ್ಡ್ ಫೋರಂನಲ್ಲಿ ಸಂಶೋಧಕ ಕ್ರಿಜ್‌ಷ್ಟೋಫ್ ಸ್ಜಾಡೇಜ್ಕೊ ಅವರು ಯುವಜನರಲ್ಲಿ ಹವಾಮಾನ ಕುರಿತ ಅರಿವು ಹೆಚ್ಚಾಗುತ್ತಿದ್ದರೂ, ಅನಿಶ್ಚಿತತೆ, ಭಯ ಮತ್ತು ದೀರ್ಘಕಾಲಿಕ ಯೋಜನೆಗಳ ಕೊರತೆಯಿಂದ ಪರಿಣಾಮಕಾರಿಯಾಗಿಲ್ಲ ಎಂಬುದನ್ನು ಎತ್ತಿ ತೋರಿಸಿದ್ದಾರೆ.

ಲೇಖಕರು: ಫ್ರಾನ್ಸೆಸ್ಕಾ ಮೆರ್ಲೊ – ಟ್ರೆವಿಸೊ, ಇಟಲಿ

ಉತ್ತರ ಇಟಲಿಯ ಟ್ರೆವಿಸೊದಲ್ಲಿ ನಡೆಯುತ್ತಿರುವ 17ನೇ ಗ್ರೀನ್‌ಅಕಾರ್ಡ್ ಅಂತರರಾಷ್ಟ್ರೀಯ ಫೋರಂನ ಮೂರನೇ ದಿನದಲ್ಲಿ, ಹವಾಮಾನ ಸಂಕಟದ ಕುರಿತು ನಡೆದ ಚರ್ಚೆಗಳು ನೀತಿ ಮತ್ತು ತಂತ್ರಜ್ಞಾನವನ್ನು ಮೀರಿ ಅದರ ಮಾನಸಿಕ ಪರಿಣಾಮಗಳತ್ತ, ವಿಶೇಷವಾಗಿ ಯುವಜನರ ಮೇಲೆ ಬೀರುತ್ತಿರುವ ಪರಿಣಾಮಗಳತ್ತ ಗಮನ ಹರಿಸಿತು.

ಕ್ರಿಜ್‌ಷ್ಟೋಫ್ ಸ್ಜಾಡೇಜ್ಕೊ ಅವರು ಉತ್ತರ ಇಟಲಿಯ ಮೊಡೆನಾದಲ್ಲಿ ವಿಧಾನಶಾಸ್ತ್ರ ಮತ್ತು ಸಾಂಖ್ಯಿಕ ಶಾಸ್ತ್ರವನ್ನು ಬೋಧಿಸುತ್ತಿದ್ದು, ಮಿಲಾನ್‌ನಲ್ಲಿ ಮಾನಸಿಕ ಆಘಾತಶಾಸ್ತ್ರ ಮತ್ತು ಒತ್ತಡ ನಿರ್ವಹಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ಫೋರಂನಲ್ಲಿ ಭಾಗವಹಿಸಿದವರನ್ನು ಉದ್ದೇಶಿಸಿ ಮಾತನಾಡಿ, ಯುವಜನರು  ಹವಾಮಾನ ಬದಲಾವಣೆಗೆ ಹೇಗೆ ಪ್ರತಿಕ್ರಿಯಿಸುತ್ತಿದ್ದಾರೆ ಎಂಬುದನ್ನು ಪರಿಶೀಲಿಸುವ ಸಂಶೋಧನೆಯನ್ನು ಮಂಡಿಸಿದರು.

ಅವರ ಸಂಶೋಧನಾ ಫಲಿತಾಂಶಗಳು ಸ್ಪಷ್ಟ ಮಾದರಿಯನ್ನು ಸೂಚಿಸುತ್ತವೆ: ಹವಾಮಾನ ಬದಲಾವಣೆಯ ಕುರಿತು ಹೆಚ್ಚು ಅರಿವಿದೆ , ಆದರೆ ಅದು ಭವಿಷ್ಯದ ಬಗ್ಗೆ ವಿಶ್ವಾಸವಾಗಿ ಪರಿವರ್ತನೆಯಾಗುತ್ತಿಲ್ಲ.

ಯುವಜನರ ಅರಿವು

ಕಾರ್ಯಕ್ರಮದಲ್ಲಿ ವ್ಯಾಟಿಕನ್ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಸ್ಜಾಡೇಜ್ಕೊ, “ಯುವಜನರು ತುಂಬಾ ಸಂವೇದನಾಶೀಲರು. ಅವರು ಏನು ನಡೆಯುತ್ತಿದೆ ಎಂಬುದನ್ನು ಅರಿತಿದ್ದಾರೆ” ಎಂದು ಹೇಳಿದರು. ಆದರೆ ಆ ಅರಿವು ಕ್ರಿಯೆಯಿಗಿಂತ ಹೆಚ್ಚು ಭಯವನ್ನು ಉಂಟುಮಾಡುತ್ತಿದೆ. ಅವರ ಸಂಶೋಧನೆಯಲ್ಲಿ, ಭಾಗವಹಿಸಿದವರಲ್ಲಿ, 40 ಪ್ರತಿಶತಕ್ಕಿಂತ ಹೆಚ್ಚು ತಮ್ಮ ಭವಿಷ್ಯದ ಕುರಿತು ನಿರ್ದಿಷ್ಟ ದೃಷ್ಟಿಕೋನವಿಲ್ಲ ಮತ್ತು ದೀರ್ಘಕಾಲಿಕ ಯೋಜನೆಗಳನ್ನು ಮಾಡುತ್ತಿಲ್ಲ.

ಕೆಲವು ಪ್ರತಿಕ್ರಿಯೆಗಳು ಇನ್ನಷ್ಟು ಆಳಕ್ಕೆ ಹೋಗುತ್ತವೆ. ಹವಾಮಾನ ಬದಲಾವಣೆಯು ತಮ್ಮ ಜೀವನದ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂದು ಕೇಳಿದಾಗ, ಭಾಗವಹಿಸಿದವರು ಭವಿಷ್ಯ ಹೇಗಿರಬಹುದು ಎಂಬ ಅನಿಶ್ಚಿತತೆಯಿಂದ ಮಕ್ಕಳನ್ನು ಹೆರಬಾರದು ಅಥವಾ ಕುಟುಂಬ ನಿರ್ಮಿಸಬಾರದು ಎನ್ನುವವರೆಗೂ ಮಾತನಾಡಿದ್ದಾರೆ. ಈ ಪ್ರತಿಕ್ರಿಯೆಗಳನ್ನು ಸ್ಜಾಡೇಜ್ಕೊ “ತುಂಬಾ ದುಃಖಕರ” ಎಂದು ವಿವರಿಸಿದರು, ಯುವಜನರಲ್ಲಿರ ಈ ಮನೋಭಾವದ ಭಾರವನ್ನು ಸೂಚಿಸಿದರು. 

ಹವಾಮಾನ ಬದಲಾವಣೆಯನ್ನು ಪ್ರತ್ಯೇಕವಾಗಿ ಅನುಭವಿಸಲಾಗುವುದಿಲ್ಲ ಎಂಬುದನ್ನೂ ಒತ್ತಿಹೇಳಿದರು. ಯುದ್ಧ ಮತ್ತು ಇತ್ತೀಚಿನ ಜಾಗತಿಕ ಆರೋಗ್ಯ ಸಂಕಟಗಳಂತಹ ಇತರ ಅಂಶಗಳು ವ್ಯಾಪಕ ಅಸ್ಥಿರತೆಯ ಭಾವನೆಗೆ ಕಾರಣವಾಗುತ್ತವೆ. “ಇದು ಒಂದು ದೊಡ್ಡ ಮಿಶ್ರಣವಾಗಿದೆ,” ಎಂದು ಅವರು ವಿವರಿಸಿದರು, ಈ ಎಲ್ಲಾ ಅಂಶಗಳು ಸೇರಿ ಸ್ಪಷ್ಟ ಪ್ರತಿಕ್ರಿಯೆಗೆ ಅವಕಾಶ ನೀಡುವುದಕ್ಕಿಂತ ಅನಿಶ್ಚಿತತೆಯನ್ನು ಹೆಚ್ಚಿಸುತ್ತವೆ ಎಂದು ಸೂಚಿಸಿದರು.

ಈ ಸಂದರ್ಭದಲ್ಲಿ, ಪ್ರಸ್ತುತ ಶಿಕ್ಷಣ ವ್ಯವಸ್ಥೆಗಳು ಸಾಕಷ್ಟು ಪರಿಣಾಮಕಾರಿಯಾಗಿಲ್ಲವೆಂದು ಕಾಣುತ್ತದೆ. ಕೆಲವು ಕಾರ್ಯಕ್ರಮಗಳು ಇದ್ದರೂ, ಅವು ಸಾಮಾನ್ಯವಾಗಿ ವೈಯಕ್ತಿಕ ಶಿಕ್ಷಕರು ಅಥವಾ ಗ್ರೀನ್‌ಪೀಸ್‌ಂತಹ ಸಂಸ್ಥೆಗಳ ಮೂಲಕ ನಡೆಸಲ್ಪಡುತ್ತವೆ, ಆದರೆ ಅವು ವ್ಯಾಪಕವಾಗಿ ಪರಿಣಾಮ ಬೀರುವಷ್ಟು ದೊಡ್ಡ ಮಟ್ಟದಲ್ಲಿಲ್ಲ ಎಂದು ಸ್ಜಾಡೇಜ್ಕೊ ಅಭಿಪ್ರಾಯಪಟ್ಟರು. “ಕಾರ್ಯಕ್ರಮಗಳು ತುಂಬಾ ಕಡಿಮೆ, ಗಮನವೂ ಅಲ್ಪವಾಗಿದೆ,ಹವಾಮಾನ ಕುರಿತು ಶಿಕ್ಷಣ ಇನ್ನೂ ವ್ಯವಸ್ಥಿತವಾಗಿ ಸೇರಿಸಲಾಗಿಲ್ಲ ಎಂದು ಸೂಚಿಸಿದರು.

ಕೇಳಲೇಬೇಕಾದ ಮಾಹಿತಿ

ಈ ಸಮಸ್ಯೆ ಕೇವಲ ಯುವಜನರಿಗೆ ಮಾತ್ರ ಸೀಮಿತವಲ್ಲ. ಸ್ಜಾಡೇಜ್ಕೊ ಪೀಳಿಗೆಗಳ ನಡುವೆ ಇರುವ ಅಂತರವನ್ನು ಉಲ್ಲೇಖಿಸಿ, ಹಿರಿಯ ಪೀಳಿಗೆಗಳು ತಮ್ಮ ಜೀವನಶೈಲಿಯ ಪರಿಸರದ ಮೇಲೆ ಇರುವ ಪರಿಣಾಮವನ್ನು ಗುರುತಿಸುವಲ್ಲಿ ಕಡಿಮೆ ಆಸಕ್ತಿ ತೋರಿಸುತ್ತವೆ. “ಯುವಜನರು ಪರಿಸ್ಥಿತಿಯನ್ನು ಅರಿತಿದ್ದಾರೆ,” ಎಂದು ಅವರು ಹೇಳಿದರು.

“ ನಮ್ಮ ಪೀಳಿಗೆ ಒಂದು ನಿರ್ದಿಷ್ಟ ಜೀವನಶೈಲಿಗೆ ಹೊಂದಿಕೊಂಡಿದೆ.” ಅವರ ಪ್ರಕಾರ, ಸಂಶೋಧನೆ ಪ್ರಮುಖ ಪಾತ್ರ ವಹಿಸುತ್ತದೆ, ಆದರೆ ಅದು ಕೇವಲ ಆರಂಭಿಕ ಹಂತ ಮಾತ್ರ. ದತ್ತಾಂಶಗಳು ಏನು ನಡೆಯುತ್ತಿದೆ ಎಂಬುದನ್ನು ವಿವರಿಸಲು ಮತ್ತು ಜವಾಬ್ದಾರಿಯನ್ನು ಒತ್ತಿಹೇಳಲು ಸಹಾಯ ಮಾಡಬಹುದು, ಆದರೆ ಅದು ಕ್ರಿಯೆಗೆ ದಾರಿ ಮಾಡಿಕೊಡಬೇಕು. ಇದರಲ್ಲಿ ವಿಶೇಷವಾಗಿ ಹಿರಿಯ ಜನರಲ್ಲಿ ಸಾರ್ವಜನಿಕ ಅರಿವು ಹೆಚ್ಚಿಸುವುದು ಮತ್ತು ರಾಜಕೀಯ ಮಟ್ಟದಲ್ಲಿ ತೊಡಗಿಸಿಕೊಳ್ಳುವುದು ಒಳಗೊಂಡಿದೆ.

“ಈ ಎಲ್ಲಾ ಮಾಹಿತಿಯನ್ನು ಸರ್ಕಾರಗಳು ಕೇಳಬೇಕು,” ಎಂದು ಅವರು ಹೇಳಿದರು, ಈ ಸಂಶೋಧನಾ ಫಲಿತಾಂಶಗಳು ಕೇವಲ ಶೈಕ್ಷಣಿಕ ವಲಯದಲ್ಲೇ ಸೀಮಿತವಾಗಬಾರದು ಎಂದು ಒತ್ತಿಹೇಳಿದರು. “ಸರ್ಕಾರಗಳು” ಎಂದು ಬಹುವಚನದಲ್ಲಿ ಅವರು ವಿಶೇಷವಾಗಿ ಉಲ್ಲೇಖಿಸಿದರು. ಅವರ ಅಧ್ಯಯನ ಇಟಲಿಯಲ್ಲಿ ಆಧಾರಿತವಾಗಿದ್ದರೂ, ಇದರ ಪರಿಣಾಮಗಳು ವ್ಯಾಪಕವಾಗಿವೆ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಅಗತ್ಯವಿದೆ ಎಂದು ಅವರು ವಾದಿಸಿದರು. ಸಂಘಟಿತ ಕ್ರಮಗಳ ಅಗತ್ಯವನ್ನೂ ಅವರು ಒತ್ತಿಹೇಳಿದರು. “ನಾವು ಅನೇಕ ದಿಕ್ಕುಗಳಿಂದ ಗಾಡಿಯನ್ನು ಎಳೆಯಬಹುದು, ಆದರೆ ಅದನ್ನು ಒಂದೇ ದಿಕ್ಕಿನಲ್ಲಿ ಎಳೆಯಬೇಕು,” ಎಂದು ಅವರು ಹೇಳಿದರು, ಸರ್ಕಾರಗಳ ನಡುವೆ ಹೆಚ್ಚಿನ ಸಹಕಾರವನ್ನು ಕೋರಿದರು.

ಬೆಂಬಲದ ಅಗತ್ಯ

ಕ್ರಮದ ಕೊರತೆ ಯುವಜನರಲ್ಲಿ ಒಂಟಿತನದ ಭಾವನೆಯನ್ನು ಮತ್ತಷ್ಟು ಗಟ್ಟಿಗೊಳಿಸುವ ಅಪಾಯವಿದೆ ಎಂದು ಅವರು ಎಚ್ಚರಿಸಿದರು. ಅವರ ಸಂಶೋಧನೆಯ ಪ್ರಮುಖ ಕಂಡುಹಿಡಿತಗಳಲ್ಲಿ ಒಂದು, ಅನೇಕ ಯುವಜನರು ತಮಗೆ ಬೆಂಬಲ ನೀಡುವವರಿಲ್ಲ ಎಂಬ ಕುಂಠಿತ ಮನೋಭಾವದಲ್ಲಿದ್ದಾರೆ. ಈ ಸಮಸ್ಯೆಯನ್ನು ಪರಿಹರಿಸುವ ಜವಾಬ್ದಾರಿ ಸಂಸ್ಥೆಗಳ ಮೇಲಿದೆ ಎಂದು ಸೂಚಿಸಿದರು.

ಭವಿಷ್ಯಕ್ಕಾಗಿ, ವಿವಿಧ ದೇಶಗಳು ಮತ್ತು ಸಂಸ್ಕೃತಿಗಳಲ್ಲಿ ಹೆಚ್ಚಿನ ಸಂಶೋಧನೆ ಅಗತ್ಯವಿದೆ ಎಂದು ಸ್ಜಾಡೇಜ್ಕೊ ಅಭಿಪ್ರಾಯಪಟ್ಟರು. ಹವಾಮಾನ ಬದಲಾವಣೆಯನ್ನು ಕೇವಲ ಪರಿಸರ ಸಮಸ್ಯೆಯಾಗಿ ಮಾತ್ರವಲ್ಲ, ಜನರ ಮಾನಸಿಕ ಮತ್ತು ಸಾಮಾಜಿಕ ಕಲ್ಯಾಣದ ಮೇಲೆ ಅದರ ಪರಿಣಾಮದ ದೃಷ್ಟಿಯಿಂದಲೂ ಅಧ್ಯಯನ ಮಾಡಬೇಕು ಎಂದು ಅವರು ಸೂಚಿಸಿದರು. ಪ್ರಸ್ತುತ ಸಂಶೋಧನಾ ಫಲಿತಾಂಶಗಳು ಸಂಪೂರ್ಣವಾಗಿಲ್ಲ. ಸಮಗ್ರ ಅರಿವು ನಿರಂತರ ಮತ್ತು ಅಂತರರಾಷ್ಟ್ರೀಯ ಸಹಯೋಗದ ಸಂಶೋಧನೆಯ ಮೂಲಕವೇ ಸಾಧ್ಯವೆಂದು ಅವರು ತಿಳಿಸಿದರು.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

20 ಮಾರ್ಚ್ 2026, 18:45