ಹುಡುಕಿ

AI Impact Summit in New Delhi AI Impact Summit in New Delhi  (BHAWIKA CHHABRA)

ಕಾರ್ಮಿಕರಿಗೆ ನೆರವಾಗುವುದಕ್ಕಲ್ಲ, ಅವರನ್ನು ಬದಲಿಸಲು AI ಕಂಪನಿಗಳ ಪ್ರಯತ್ನ

ಕೃತಕ ಬುದ್ಧಿಮತ್ತೆ ಅಭಿವೃದ್ಧಿಯ ಇಂದಿನ ಸ್ಥಿತಿ, ಅದು ಈಗಾಗಲೇ ಮಾನವ ಜೀವನದ ಮೇಲೆ ಬೀರುತ್ತಿರುವ ಪರಿಣಾಮಗಳು ಹಾಗೂ ಮಾನವಕುಲದ ಭವಿಷ್ಯವನ್ನು ರಕ್ಷಿಸುವಲ್ಲಿ ಧರ್ಮದ ಪಾತ್ರದ ಕುರಿತು Future of Life Institute ನ ವಿಲಿಯಂ ಜೋನ್ಸ್ ವ್ಯಾಟಿಕನ್ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನ.

ಲೇಖಕರು: ಜೋಸೆಫ್ ತಲ್ಲೋಕ್

ಬಹು ವರ್ಷಗಳಿಂದ ಕೃತಕ ಬುದ್ಧಿಮತ್ತೆ ಸುರಕ್ಷತಾ ತಜ್ಞರು ಒಂದು ನಿರ್ಣಾಯಕ ಕ್ಷಣದ ಬಗ್ಗೆ ಎಚ್ಚರಿಕೆ ನೀಡುತ್ತಲೇ ಬಂದಿದ್ದಾರೆ. ಅದು ಯಾವಾಗ ಸಂಭವಿಸಬಹುದು ಎಂದರೆ—AI ಮಾದರಿಗಳು ತಾವೇ ತಮ್ಮನ್ನು ಸುಧಾರಿಸಿಕೊಳ್ಳುವ ಮಟ್ಟಕ್ಕೆ ಅಭಿವೃದ್ಧಿಯಾಗುವ ಕ್ಷಣ. ಅಂಥ ಸಂದರ್ಭಗಳಲ್ಲಿ ಅವು ಹೆಚ್ಚು ಸಾಮರ್ಥ್ಯವುಳ್ಳ ಮುಂದಿನ ಮಾದರಿಗಳನ್ನು ನಿರ್ಮಿಸಿ, ಆ ಹೊಸ ಮಾದರಿಗಳು ಮತ್ತೆ ಇದೇ ಪ್ರಕ್ರಿಯೆಯನ್ನು ಮುಂದುವರಿಸುತ್ತವೆ.

ಈ ರೀತಿಯ ಪ್ರಕ್ರಿಯೆಯನ್ನು “Recursive Self-Improvement” ಎಂದು ಕರೆಯಲಾಗುತ್ತದೆ. ತಜ್ಞರ ಎಚ್ಚರಿಕೆಯ ಪ್ರಕಾರ, ಈ ಚಕ್ರವು ನಿಯಂತ್ರಣಕ್ಕೇ ಸಿಗದ ರೀತಿಯಲ್ಲಿ AI ಸಾಮರ್ಥ್ಯವನ್ನು ಘಾತಾಂಕೀಯವಾಗಿ ಹೆಚ್ಚಿಸಬಹುದು. ಅಂತಹ ಬೆಳವಣಿಗೆ ಮಾನವಕುಲಕ್ಕೆ ಗಂಭೀರ ಅಪಾಯವಾಗುವ ಸಾಧ್ಯತೆ ಇದೆ.

ಇತ್ತೀಚೆಗೆ ಉತ್ತಮ ಕೋಡಿಂಗ್ ಸಾಮರ್ಥ್ಯ ಹೊಂದಿರುವ ಹೊಸ AI ಮಾದರಿಗಳು ಬಿಡುಗಡೆಯಾದ ಹಿನ್ನೆಲೆಯಲ್ಲಿ, ಕೆಲ ತಜ್ಞರು ಈ ನಿರ್ಣಾಯಕ ಕ್ಷಣ ಈಗಾಗಲೇ ಬಂದಿದೆಯೇ ಎಂಬ ಪ್ರಶ್ನೆಯನ್ನು ಕೇಳಲು ಆರಂಭಿಸಿದ್ದಾರೆ.

ಅವರಲ್ಲಿ ಒಬ್ಬರು ಲಂಡನ್‌ನ Future of Life Institute ಸಂಸ್ಥೆಯ Futures Program Associate ಆಗಿರುವ ವಿಲಿಯಂ ಜೋನ್ಸ್. ಹೊಸ ತಂತ್ರಜ್ಞಾನಗಳ ಅತಿರೇಕದ ಅಪಾಯಗಳನ್ನು ತಡೆಯುವ ದಿಕ್ಕಿನಲ್ಲಿ ಕಾರ್ಯನಿರ್ವಹಿಸುವ ಈ ಸಂಸ್ಥೆಯ ಪರವಾಗಿ ಅವರು AI ನಿಂದ ಉಂಟಾಗಬಹುದಾದ ಅಪಾಯಗಳು ಹಾಗೂ ಮಾನವಕುಲದ ಭವಿಷ್ಯವನ್ನು ಸುರಕ್ಷಿತಗೊಳಿಸುವಲ್ಲಿ ಧರ್ಮದ ಪಾತ್ರದ ಕುರಿತು ವ್ಯಾಟಿಕನ್ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದರು.

ಕೆಳಗಿನ ಸಂದರ್ಶನವನ್ನು ಪಠ್ಯ ಶೈಲಿ ಮತ್ತು ಸಂಕ್ಷಿಪ್ತತೆಯ ದೃಷ್ಟಿಯಿಂದ ಸಂಪಾದಿಸಲಾಗಿದೆ.

ವ್ಯಾಟಿಕನ್ ಸುದ್ದಿ ಸಂಸ್ಥೆ: ನಿಮ್ಮ ಅಭಿಪ್ರಾಯದಲ್ಲಿ ಈಗ AI ಯ ಸ್ಥಿತಿ ಹೇಗಿದೆ?

ವಿಲಿಯಂ ಜೋನ್ಸ್: ಇದೀಗ ನಾವು ನೋಡುತ್ತಿರುವುದು AI ಕ್ಷೇತ್ರದಲ್ಲಿ   ಬಹುಕಾಲದಿಂದ ಚರ್ಚೆಯಾಗುತ್ತಿದ್ದ ಅನೇಕ ವಿಷಯಗಳು ವಾಸ್ತವವಾಗುತ್ತಿರುವ ಕ್ಷಣವೆಂದು ಹೇಳಬಹುದು. ಅವು ಇನ್ನೂ ದೂರದಲ್ಲಿವೆ ಎಂದು ನಾವು ಭಾವಿಸಿದ್ದೆವು.

ಅವುಗಳಲ್ಲಿ ಪ್ರಮುಖವಾದದ್ದು Recursive Self-Improvement. ಕೆಲವು ವರ್ಷಗಳ ಹಿಂದೆ ಇದು AI ಸುರಕ್ಷತಾ ತಜ್ಞರ ದೊಡ್ಡ ಆತಂಕವಾಗಿತ್ತು. ಅಂದರೆ AI ತಾನೇ ಮುಂದಿನ AI ಮಾದರಿಯನ್ನು ನಿರ್ಮಿಸಿ ತಾನೇ ತನ್ನನ್ನು ಸುಧಾರಿಸಿಕೊಳ್ಳುವ ಮಟ್ಟ ತಲುಪುವುದು.

ಆ ಪ್ರಕ್ರಿಯೆ ಎಷ್ಟು ವೇಗವಾಗಿ ನಡೆಯಬಹುದು, ಎಷ್ಟು ದೂರ ಹೋಗಬಹುದು ಎಂಬುದು ಯಾರಿಗೂ ಸ್ಪಷ್ಟವಿಲ್ಲ. ಮತ್ತು ನಿಜವಾಗಿ ಹೇಳುವುದಾದರೆ, ಆ ಪ್ರಕ್ರಿಯೆಯ ಮೇಲೆ ನಮ್ಮ ನಿಯಂತ್ರಣವೂ ತುಂಬಾ ಕಡಿಮೆ.

ಕಳೆದ ಒಂದು ಅಥವಾ ಎರಡು ತಿಂಗಳಲ್ಲಿ ಬಿಡುಗಡೆಯಾದ Claude Code ಮತ್ತು ಇತರ ವ್ಯವಸ್ಥೆಗಳು ಅನೇಕ ಜನರಿಗೆ ಒಂದು ಸಂಗತಿಯನ್ನು ಸ್ಪಷ್ಟಪಡಿಸಿವೆ. AI ಕಂಪನಿಗಳ ಗುರಿ ಕಾರ್ಮಿಕರಿಗೆ ಸಹಾಯ ಮಾಡುವ ವ್ಯವಸ್ಥೆಗಳನ್ನು ನಿರ್ಮಿಸುವುದಲ್ಲ; ಬದಲಿಗೆ ಅವರನ್ನು ಬದಲಿಸುವ ವ್ಯವಸ್ಥೆಗಳನ್ನು ನಿರ್ಮಿಸುವುದು.

ಈಗ ಇದು ಮುಖ್ಯವಾಗಿ ವೈಟ್-ಕಾಲರ್ ಕ್ಷೇತ್ರಗಳಲ್ಲಿ—ವಿಶೇಷವಾಗಿ ಕೋಡಿಂಗ್‌ನಲ್ಲಿ—ಕಾಣುತ್ತಿದೆ. ಆದರೆ ರೋಬೋಟಿಕ್ಸ್ ಅಭಿವೃದ್ಧಿಯಾಗುತ್ತಿದ್ದಂತೆ ಇದು ಬ್ಲೂ-ಕಾಲರ್ ಉದ್ಯೋಗಗಳಿಗೂ ವಿಸ್ತರಿಸುವ ಸಾಧ್ಯತೆ ಇದೆ.

ಇದರ ಜೊತೆಗೆ ಅಮೇರಿಕಾದಲ್ಲಿ AI ಕಂಪನಿಗಳು ಮತ್ತು ಸರ್ಕಾರದ ನಡುವೆ ಗಂಭೀರ ಚರ್ಚೆಗಳು ನಡೆಯುತ್ತಿವೆ. ಉದಾಹರಣೆಗೆ Anthropic ಸಂಬಂಧಿಸಿದ ವಿವಾದದಲ್ಲಿ, ಪೆಂಟಗನ್ ಸ್ವಯಂಚಾಲಿತ ಘಾತಕ AI ವ್ಯವಸ್ಥೆಗಳು (Autonomous Lethal AI) ಸರ್ಕಾರದ ಬಳಕೆಗೆ ಅತ್ಯಗತ್ಯವೆಂದು ಹೇಳುತ್ತಿದೆ. ಇದು ನಿಜಕ್ಕೂ ಆತಂಕಕಾರಿ ಬೆಳವಣಿಗೆ.

ವ್ಯಾಟಿಕನ್ ಸುದ್ದಿ ಸಂಸ್ಥೆ: AI ಆಡಳಿತದಲ್ಲಿ ಹೊಣೆಗಾರಿಕೆ ಅಗತ್ಯವೆಂಬುದು ಸ್ಪಷ್ಟವಾಗಿದೆ. ಧರ್ಮವು ಇದರಲ್ಲಿ ಯಾವ ಪಾತ್ರ ವಹಿಸಬಹುದು ಎಂದು ನೀವು ಹೇಳುತ್ತೀರಿ?

ವಿಲಿಯಂ ಜೋನ್ಸ್: ನಾನು ಗಮನಿಸಿದ ಒಂದು ವಿಷಯ ಎಂದರೆ ಕಳೆದ ವರ್ಷದಿಂದ ಧಾರ್ಮಿಕ ಬರಹಗಾರರು—ವಿಶೇಷವಾಗಿ ಅಮೇರಿಕಾದಲ್ಲಿ—AI ವಿಷಯವನ್ನು ಹೆಚ್ಚಾಗಿ ಚರ್ಚಿಸಲು ಆರಂಭಿಸಿದ್ದಾರೆ.

ಅವರಿಗೆ ಈ ವಿಷಯದ ಮೇಲೆ ಹೆಚ್ಚಿನ ಗಮನ ಸೆಳೆಯಲು ಕಾರಣವಾದ ಘಟನೆಗಳಲ್ಲೊಂದು ಮಕ್ಕಳ ಆತ್ಮಹತ್ಯೆಗಳು. ಕೆಲವು ಪ್ರಕರಣಗಳಲ್ಲಿ ಮಕ್ಕಳು ಚಾಟ್‌ಬಾಟ್‌ಗಳೊಂದಿಗೆ ದೀರ್ಘಕಾಲ ಸಂಭಾಷಣೆ ನಡೆಸುತ್ತಾ ನಿಜಜಗತ್ತಿನಿಂದ ದೂರವಾಗುತ್ತಿದ್ದರು. ಕೊನೆಗೆ ಆತ್ಮಹತ್ಯೆಗೆ ಮುಂದಾಗಿದ್ದ ಘಟನೆಗಳು ನಡೆದಿವೆ.

ಅಂತಹ ಪ್ರಮುಖ ಪ್ರಕರಣಗಳಲ್ಲಿ ಒಂದರಲ್ಲಿ ತಾಯಿ ಮೆಗನ್ ಗಾರ್ಸಿಯಾ ಬಹಳ ಸ್ಪಷ್ಟವಾಗಿ ಮಾತನಾಡುತ್ತಿರುವ ಸಾಮಾಜಿಕ ಕಾರ್ಯಕರ್ತೆಯಾಗಿದ್ದಾರೆ. ಅವರು ಕಥೋಲಿಕರು. ಕಳೆದ ವರ್ಷ ಅವರು ಪೂಜ್ಯ ಜಗದ್ಗುರುಗಳನ್ನು ಭೇಟಿಯಾಗಿದ್ದರು.

ವಾಷಿಂಗ್ಟನ್ ಡಿಸಿ ಪ್ರದೇಶದಲ್ಲಿ ಧಾರ್ಮಿಕ ಸಂಸ್ಥೆಗಳ ಒಕ್ಕೂಟಗಳು ಕೂಡ ಮೂಡಿಬಂದಿವೆ—ಉದಾಹರಣೆಗೆ National Association of Evangelicals, Institute for Family Studies, ಮತ್ತು ಕೆಲವು ಕಥೋಲಿಕ ಪಂಡಿತರು.

ಒಂದು ಹಂತದಲ್ಲಿ ಫೆಡರಲ್ ಸರ್ಕಾರದಲ್ಲಿ ಲಾಬಿಯಿಸ್ಟ್‌ಗಳು ರಾಜ್ಯಗಳಿಗೆ ಮುಂದಿನ ಹತ್ತು ವರ್ಷಗಳವರೆಗೆ AI ನಿಯಂತ್ರಣ ಕಾನೂನುಗಳನ್ನು ಮಾಡದಂತೆ ತಡೆಯಲು ಯತ್ನಿಸಿದ್ದರು. ಆದರೆ ಅದಕ್ಕೆ ಭಾರಿ ವಿರೋಧ ವ್ಯಕ್ತವಾಯಿತು.

ಕಾರ್ಮಿಕ ಸಂಘಗಳು, ಧಾರ್ಮಿಕ ಸಂಘಟನೆಗಳು, ಮಕ್ಕಳ ನೀತಿ ಕಾರ್ಯಕರ್ತರು ಮತ್ತು AI ಸುರಕ್ಷತಾ ತಜ್ಞರು ಒಟ್ಟಾಗಿ ಈ ಕಂಪನಿಗಳು ನಿಯಂತ್ರಣವಿಲ್ಲದೆ ತುಂಬಾ ಶಕ್ತಿಶಾಲಿಯಾಗುತ್ತಿವೆ ಎಂದು ಎಚ್ಚರಿಸಿದರು.

ಇದರಿಂದ ಮಕ್ಕಳ ಮೇಲೆ ಉಂಟಾಗುತ್ತಿರುವ ಪರಿಣಾಮಗಳತ್ತ ಗಮನ ಸೆಳೆಯಲಾಯಿತು. ನಾವು ಮಾತನಾಡುತ್ತಿರುವುದು ಸಾವಿರಾರು ಪ್ರಕರಣಗಳ ಬಗ್ಗೆ—ಕೆಲ ಯುವಕರು ಮತ್ತು ಅಸುರಕ್ಷಿತ ವ್ಯಕ್ತಿಗಳು ತಿಂಗಳುಗಳ ಕಾಲ ಪ್ರತಿದಿನ ಹಲವು ಗಂಟೆಗಳವರೆಗೆ AI ಜೊತೆ ಮಾತ್ರ ಮಾತನಾಡುತ್ತಾ ಮಾನಸಿಕ ಸಮಸ್ಯೆಗಳಿಗೆ ಒಳಗಾಗುತ್ತಿರುವ ಘಟನೆಗಳ ಬಗ್ಗೆ.

ಚಾಟ್‌ಬಾಟ್ ಸಮಸ್ಯೆ ಧಾರ್ಮಿಕ ಸಮುದಾಯಗಳಿಗೆ ಬಹಳ ಸ್ಪಂದನೀಯವಾಗಿದೆ. ಇದು ಧಾರ್ಮಿಕ ಪ್ರಶ್ನೆ ಕೂಡ ಆಗಿದೆ. ಜೊತೆಗೆ ಇದು ಆಧ್ಯಾತ್ಮಿಕ ಪ್ರಶ್ನೆ ಕೂಡ ಆಗಿದೆ.

ಇದು ಮಾನವರು ಯಾರು ಎಂಬ ಅರಿವಿಗೆ ಸಂಬಂಧಿಸಿದೆ. ಕಥೋಲಿಕ ಧರ್ಮಶಾಸ್ತ್ರದಲ್ಲಿ ಮಾನವ ಸಂಬಂಧಗಳ ಮಹತ್ವ ಮತ್ತು ದೇಹಧಾರಿತ ಸಂಬಂಧಗಳ ಕುರಿತು ಬಹಳ ಬರಹಗಳಿವೆ. ಮಾನವ ಸಮೃದ್ಧಿಗೆ ಅವು ಅವಶ್ಯಕವೆಂದು ಚರ್ಚಿಸಲಾಗಿದೆ.

ಈ ಕಾರಣಗಳಿಂದ ಅನೇಕ ಧಾರ್ಮಿಕ ನಾಯಕರು ಈ ವಿಷಯದಲ್ಲಿ ಹೆಚ್ಚು ತೊಡಗಿಕೊಳ್ಳಲು ಆರಂಭಿಸಿದ್ದಾರೆ.

ವ್ಯಾಟಿಕನ್ ಸುದ್ದಿ ಸಂಸ್ಥೆ:  ಕಥೋಲಿಕ ಧರ್ಮಸಭೆ AI ಕುರಿತು ಸಕ್ರಿಯವಾಗಿ ಮಾತನಾಡುತ್ತಿದೆ. ವ್ಯಾಟಿಕನ್ ಪಾತ್ರವನ್ನು ನೀವು ಹೇಗೆ ನೋಡುತ್ತೀರಿ?

ವಿಲಿಯಂ ಜೋನ್ಸ್: ಮೊದಲಿಗೆ ಹೇಳಬೇಕಾದುದು ಏನೆಂದರೆ AI ಕುರಿತ ಪ್ರತಿಕ್ರಿಯೆಯಲ್ಲಿ ಕಥೋಲಿಕ ಧರ್ಮಸಭೆ ಅನೇಕ ಧರ್ಮಗಳಿಗಿಂತ ಮುಂಚಿತವಾಗಿಯೇ ಕಾರ್ಯನಿರ್ವಹಿಸಿದೆ. ನೀವು ಉಲ್ಲೇಖಿಸಿದ Rome Call for AI Ethics 2020ರಲ್ಲಿ ಪ್ರಕಟವಾಯಿತು. ಅದು ತುಂಬಾ ಆರಂಭಿಕ ಹಂತದಲ್ಲೇ ಬಂದ ಮಹತ್ವದ ದಸ್ತಾವೇಜು.

ಅದರ ನಂತರ ಕಳೆದ ವರ್ಷ ಪ್ರಕಟವಾದ Antiqua et Nova ಎಂಬ ದಾಖಲೆ ಕೂಡ ಮಹತ್ವದ್ದಾಗಿದೆ. ಇತರ ಧಾರ್ಮಿಕ ಸಮುದಾಯಗಳ ಕೆಲವು ಸದಸ್ಯರು ತಮ್ಮಲ್ಲೂ ಇಂತಹ ಮಾರ್ಗದರ್ಶಕ ದಾಖಲೆ ಇದ್ದರೆ ಚೆನ್ನಾಗಿತ್ತು ಎಂದು ಹೇಳಿದ್ದಾರೆ.

ಪ್ರೊಟೆಸ್ಟಂಟ್ ಸಮುದಾಯಗಳಲ್ಲಿ ಕೇಂದ್ರಿತ ವ್ಯವಸ್ಥೆ ಕಡಿಮೆ ಇರುವುದರಿಂದ ವ್ಯಾಟಿಕನ್‌ನಂತೆ ಕಾರ್ಯಾಗಾರಗಳನ್ನು ಆಯೋಜಿಸುವುದು ಅವರಿಗೆ ಕಷ್ಟವಾಗುತ್ತದೆ. ಪೂಜ್ಯ ಜಗದ್ಗುರು 14ನೇ ಲಿಯೋ ತಮ್ಮ  ಸೇವೆಯ ಆರಂಭದಲ್ಲೇ AI ಅನ್ನು ಪ್ರಮುಖ ವಿಷಯಗಳಲ್ಲಿ ಒಂದಾಗಿ ಗುರುತಿಸಿದ್ದಾರೆ.

ಅವರು ತಮ್ಮ ಪೂರ್ವಸ್ಥರಾದ 13ನೇ ಲಿಯೋ ಕೈಗೊಂಡ ಕೈಗಾರಿಕಾ ಕ್ರಾಂತಿಯ ಪ್ರತಿಕ್ರಿಯೆಯನ್ನು ನೆನಪಿಸಿಕೊಂಡರು— Rerum Novarum ಎಂಬ ಸಾಮಾಜಿಕ ಉಪದೇಶ ಪ್ರಕಟಿಸಿದ್ದರು. ಅದೇ ರೀತಿಯಲ್ಲಿ ಇಂದಿನ AI ಕ್ರಾಂತಿಗೆ ಕಥೋಲಿಕ ಸಾಮಾಜಿಕ ಉಪದೇಶದ ಸಂಪತ್ತು ಉಪಯೋಗವಾಗಬೇಕು ಎಂದು ಅವರು ಹೇಳಿದ್ದಾರೆ.

ವ್ಯಾಟಿಕನ್‌ನ ಸಂಸ್ಕೃತಿ ಮತ್ತು ಶಿಕ್ಷಣ ದಿಕಾಸ್ಟರಿ ನಡೆಸಿದ ಕಾರ್ಯಾಗಾರಗಳು ಕೂಡ ಬಹಳ ಪ್ರೇರಣಾದಾಯಕವಾಗಿವೆ. ಅವುಗಳಿಂದ Encountering Artificial Intelligence ಮತ್ತು ನಂತರ Reclaiming Human Agency in the Age of Artificial Intelligence ಎಂಬ ಪುಸ್ತಕಗಳು ಪ್ರಕಟವಾದವು.

ಇಂದಿನ AI ವ್ಯವಸ್ಥೆಗಳು ಹೆಚ್ಚು Agentic ಆಗುತ್ತಿವೆ. ಅಂದರೆ ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಸಾಮರ್ಥ್ಯ ಹೆಚ್ಚುತ್ತಿದೆ. ಇದು ಮಾನವ ಮಧ್ಯಸ್ತಿಕೆಯ ಅರ್ಥವನ್ನು ಪ್ರಶ್ನಿಸುತ್ತದೆ-ತಾಂತ್ರಿಕ ಪ್ರಶ್ನೆಯಷ್ಟೇ ಅಲ್ಲ, ತತ್ವಶಾಸ್ತ್ರೀಯ ಪ್ರಶ್ನೆಯೂ ಆಗಿದೆ. AI ಹೆಚ್ಚು ಉದ್ಯೋಗಗಳನ್ನು ಸ್ವೀಕರಿಸುತ್ತಿರುವಾಗ ಮತ್ತು ಜೀವ-ಮರಣ ಸಂಬಂಧಿಸಿದ ನಿರ್ಧಾರಗಳನ್ನೂ ಮಾಡುತ್ತಿರುವಾಗ ಮಾನವರ ಪಾತ್ರ ಏನು ಎಂಬ ಪ್ರಶ್ನೆ ಎದುರಾಗುತ್ತದೆ.

ಕಥೋಲಿಕ ಧರ್ಮಸಭೆ ಸುಮಾರು ಹತ್ತು ವರ್ಷಗಳಿಂದ ಸ್ವಯಂಚಾಲಿತ ಘಾತಕ ಶಸ್ತ್ರ ವ್ಯವಸ್ಥೆಗಳ ನಿಷೇಧವನ್ನು ಒತ್ತಾಯಿಸುತ್ತಿದೆ. ಇನ್ನೂ ಅಂತಹ ನಿಷೇಧ ಜಾರಿಯಾಗಿಲ್ಲ, ಆದರೆ ನಾಗರಿಕ ಸಮಾಜದಲ್ಲಿ  ಧರ್ಮಸಭೆಯ ನಾಯಕತ್ವಕ್ಕೆ ಬಹಳ ಗೌರವ ದೊರೆತಿದೆ.

 

ವ್ಯಾಟಿಕನ್ ಸುದ್ದಿ ಸಂಸ್ಥೆ: ಜಗದ್ಗುರುಗಳು ಮಕ್ಕಳಿಗೂ AI ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಇದನ್ನು ನೀವು ಹೇಗೆ ನೋಡುತ್ತೀರಿ?

ವಿಲಿಯಂ ಜೋನ್ಸ್: ಕಾಲ ಕಳೆದಂತೆ ಪವಿತ್ರ ತಂದೆ AI ಕುರಿತು ಇನ್ನಷ್ಟು ವಿವಿಧ ಆಯಾಮಗಳಲ್ಲಿ ಮಾತನಾಡುತ್ತಿದ್ದಾರೆ. ಒಂದು ಸಂದರ್ಭದಲ್ಲಿ ಅವರು ಮಕ್ಕಳಿಗೆ ಹೇಳಿದರು: “ನಾಳೆ AI ಇಲ್ಲದಿದ್ದರೂ ನೀವು ಸ್ವತಃ ಯೋಚಿಸಿ ಅನುಭವಿಸಲು ಸಮರ್ಥರಾಗಿರಬೇಕು.”

ಇತ್ತೀಚೆಗೆ ರೋಮ್‌ನ ಗುರುಗಳೊಂದಿಗೆ ಮಾತನಾಡುವಾಗ ಗುರುಗಳು ತಮ್ಮ ಪ್ರವಚನಗಳನ್ನು ಬರೆಯಲು AI ಬಳಸಬಾರದು. ಪ್ರವಚನವು ವೈಯಕ್ತಿಕ ನಂಬಿಕೆಯ ಅಭಿವ್ಯಕ್ತಿಯಾಗಿರಬೇಕು. ಅಂದರೆ ಅವರು ಆಧ್ಯಾತ್ಮಿಕ ಹಾಗೂ ಮಾನವೀಯ ಅಭಿವೃದ್ಧಿಯ ದೃಷ್ಟಿಯಿಂದ ಮಾತನಾಡುತ್ತಿದ್ದಾರೆ. ನಾವು ಎಲ್ಲಾ ಕೆಲಸಗಳನ್ನು AIಗೆ ಒಪ್ಪಿಸಿದರೆ, ಮಾನವರಾಗಿ ಮತ್ತು ಕ್ರೈಸ್ತರಾಗಿ ನಮ್ಮ ಅಭಿವೃದ್ಧಿ ಕುಂಠಿತವಾಗುತ್ತದೆ ಎಂದು ಅವರು ಎಚ್ಚರಿಸುತ್ತಿದ್ದಾರೆ.

ಜಗದ್ಗುರುಗಳು ಚಲನಚಿತ್ರ ನಿರ್ಮಾಪಕರು, ಕಾರ್ಪೊರೇಟ್ ಆಡಳಿತದ ನಾಯಕರು ಮತ್ತು ಸಂಸದರನ್ನು ಕೂಡ ಭೇಟಿಯಾಗಿದ್ದಾರೆ. ಈ ಎಲ್ಲ ಸಂದರ್ಭಗಳಲ್ಲೂ ಒಂದು ವಿಷಯ ಮರುಮರು ಬರುತ್ತಿದೆ—ಮಾನವ ವ್ಯಕ್ತಿಗೌರವವನ್ನು ರಕ್ಷಿಸುವುದು.

AI ಹೆಚ್ಚು ಸ್ವಾಯತ್ತವಾಗುತ್ತಿರುವ ಸಂದರ್ಭದಲ್ಲಿ Artificial General Intelligence (AGI) ಅಥವಾ Artificial Superintelligence ಕುರಿತು ಚರ್ಚೆಗಳು ಇನ್ನಷ್ಟು ಹೆಚ್ಚುತ್ತಿವೆ. ತಂತ್ರಜ್ಞಾನ ಕಂಪನಿಗಳ ನಾಯಕರು ಮಾನವರು ಕೆಲವೇ ವರ್ಷಗಳಲ್ಲಿ ನಿಯಂತ್ರಣದಲ್ಲಿ ಇರಲಾರರು ಎಂದು ಹೇಳುತ್ತಿದ್ದಾರೆ.

ಆ ಸಂದರ್ಭದಲ್ಲಿ ಧರ್ಮಸಭೆಯ ಧ್ವನಿ ಬಹಳ ಮುಖ್ಯ. ಮಾನವರು ದೇವರ ಸೃಷ್ಟಿಯ ಪಾಲಕರಾಗಿಯೇ ಉಳಿಯಬೇಕು, ಮತ್ತು AI ಮಾನವರನ್ನು ಬದಲಿಸುವ ನಿಯಂತ್ರಣರಹಿತ ಶಕ್ತಿಯಾಗದೆ ಒಂದು ಸಾಧನವಾಗಿಯೇ ಉಳಿಯಬೇಕು ಎಂಬ ಸಂದೇಶವನ್ನು ಚರ್ಚ್ ಸ್ಪಷ್ಟವಾಗಿ ನೀಡುತ್ತಿದೆ.


ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

04 ಮಾರ್ಚ್ 2026, 07:57