SOUTH KOREA PANDEMIC BELIEF CORONAVIRUS COVID-19 SOUTH KOREA PANDEMIC BELIEF CORONAVIRUS COVID-19  (ANSA)

ಫುಕುಶಿಮಾ ದುರಂತದ ವಾರ್ಷಿಕೋತ್ಸವದ ಸ್ಮರಣೆಯ ಹಿನ್ನೆಲೆಯಲ್ಲಿ ದಕ್ಷಿಣ ಕೊರಿಯಾದ ಕಥೋಲಿಕರಿಂದ ಪರಮಾಣು ನಿಶ್ಯಸ್ತ್ರೀಕರಣಕ್ಕೆ ಕರೆ

ಫುಕುಶಿಮಾ ಅಣು ವಿದ್ಯುತ್ ಸ್ಥಾವರ ಸ್ಫೋಟದ 15ನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ, ದಕ್ಷಿಣ ಕೊರಿಯಾದ ರಾಜಧಾನಿ ಸೋಲ್ ನಲ್ಲಿ ಕಥೋಲಿಕರು ಅಣು ವಿದ್ಯುತ್ ಸ್ಥಾವರಗಳ ವಿಸ್ತರಣೆ ಮತ್ತು ಹೊಸ ಯೋಜನೆಗಳ ವಿರುದ್ಧ ಸಾರ್ವಜನಿಕ ಪವಿತ್ರ ಬಲಿಪೂಜೆಗಳ ಸರಣಿಯನ್ನು ಆರಂಭಿಸಿದ್ದಾರೆ.

ಲೇಖಕರು: ವಂ. ಗುರು ಮಾರ್ಕ್ ರಾಬಿನ್ ದೆಸ್ತುರಾ, RCJ

ಕೊರಿಯನ್ ಪರ್ಯಾಯ ದ್ವೀಪದ ನೈಋತ್ಯ ಭಾಗದಲ್ಲಿ, ಫೆಬ್ರವರಿ 13ರಿಂದ ಮಾರ್ಚ್ 6ರವರೆಗೆ ನಡೆಯುವ “ಗ್ವಾಂಗ್ಹ್ವಾಮುನ್ ಅಣು ವಿದ್ಯುತ್ ಸ್ಥಾವರ ವಿರೋಧಿ ಪವಿತ್ರ ಬಲಿಪೂಜೆ” ಕಾರ್ಯಕ್ರಮವು ಮಾರ್ಚ್ 11ರಂದು ನಡೆಯಲಿರುವ ಫುಕುಶಿಮಾ ದುರಂತದ ಸ್ಮರಣೆಗೆ ಮುನ್ನ ರೂಪುಗೊಂಡಿದೆ.

ಈ ಕಾರ್ಯಕ್ರಮದ ಆರಂಭಿಕ ಪವಿತ್ರ ಬಲಿಪೂಜೆ ಸೋಲ್ ನಗರದ ಜೋಂಗ್ನೋ-ಗು ಪ್ರದೇಶದಲ್ಲಿರುವ ಸೆಜೋಂಗ್ ಪ್ರದರ್ಶನ ಕಲಾ ಕೇಂದ್ರದ ಮುಂಭಾಗದಲ್ಲಿ ನೆರವೇರಿತು. ಸರ್ಕಾರದ ಅಣುಶಕ್ತಿ ನೀತಿಗಳ ಕುರಿತು ಆತಂಕ ವ್ಯಕ್ತಪಡಿಸುವ ಧರ್ಮಗುರುಗಳು, ಧಾರ್ಮಿಕ ಸಹೋದರ-ಸಹೋದರಿಯರು ಹಾಗೂ ಸಾಮಾನ್ಯ ಭಕ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.

ಈ ಪವಿತ್ರ ಬಲಿಪೂಜೆಗಳ ಮುಖ್ಯ ಉದ್ದೇಶವೆಂದರೆ ಹಳೆಯ ಅಣು ವಿದ್ಯುತ್ ಸ್ಥಾವರಗಳ ಕಾರ್ಯಾವಧಿ ವಿಸ್ತರಣೆಯನ್ನು ತಡೆಯುವಂತೆಯೂ, ಹೊಸ ಸ್ಥಾವರ ನಿರ್ಮಾಣ ಯೋಜನೆಗಳನ್ನು ಪುನರ್ ಪರಿಶೀಲಿಸುವಂತೆಯೂ ಸರ್ಕಾರ ನಿರ್ಧಾರ ಕೈಗೊಳ್ಳಲಿ ಎಂಬುದಾಗಿದೆ.

ಪ್ರವಾದಾತ್ಮಕ ಸಂಕೇತ

ಆರಂಭಿಕ ಆಚರಣೆಗೆ ವಂ. ಗುರು ಯಾಂಗ್ ಕಿ-ಸೊಕ್ ಅಧ್ಯಕ್ಷತೆ ವಹಿಸಿದರು. ಪ್ರತೀಕಾತ್ಮಕವಾಗಿ, ಕಿರಣೋತ್ಪಾದಕ ತ್ಯಾಜ್ಯವನ್ನು ಪ್ರತಿನಿಧಿಸುವ ಡೊಳ್ಳನ್ನು ತಾತ್ಕಾಲಿಕ ವೇದಿಕೆಯ ಮುಂಭಾಗದಲ್ಲಿ ಇರಿಸಲಾಗಿತ್ತು.

“ಈ ವರ್ಷ ಫುಕುಶಿಮಾ ಅಣು ವಿದ್ಯುತ್ ಸ್ಥಾವರ ಸ್ಫೋಟದ 15ನೇ ವಾರ್ಷಿಕೋತ್ಸವ. ಆದರೂ ಸರ್ಕಾರ ಅಣುಶಕ್ತಿ ವಿಸ್ತರಣೆಯ ನೀತಿಯನ್ನು ಅನುಸರಿಸುತ್ತಿದೆ,” ಎಂದು ಅವರು ಹೇಳಿದರು. ಕೋರಿ ಅಣು ಘಟಕದ ಕಾರ್ಯಾವಧಿ ವಿಸ್ತರಣೆ ಹಾಗೂ ಹೊಸ ಸ್ಥಾವರಗಳ ನಿರ್ಮಾಣ ಯೋಜನೆಗಳನ್ನು ಅವರು ಟೀಕಿಸಿ, ದೀರ್ಘಕಾಲೀನ ಅಪಾಯಗಳ ಬಗ್ಗೆ ಎಚ್ಚರಿಕೆ ನೀಡಿದರು.

“ಕೃತಕ ಬುದ್ಧಿಮತ್ತೆ ಡೇಟಾ ಕೇಂದ್ರಗಳು ಮತ್ತು ಸೆಮಿಕಂಡಕ್ಟರ್ ಕೈಗಾರಿಕೆಗಳಿಗೆ ವಿದ್ಯುತ್ ಪೂರೈಕೆ ಅಗತ್ಯವೆಂದು ಹೇಳಲಾಗುತ್ತಿದೆ. ಆದರೆ ಅಣು ವಿದ್ಯುತ್ ಸ್ಥಾವರಗಳಿಂದ ವಿದ್ಯುತ್ ಪ್ರಸರಣಕ್ಕೆ 14-15 ವರ್ಷಗಳ ಸಮಯ ಬೇಕಾಗುತ್ತದೆ,” ಎಂದು ಅವರು ಹೇಳಿದರು.

ಪರ್ಯಾಯವಾಗಿ, ಅವರು ಪರಿಸರ ಸ್ನೇಹಿ ಶಕ್ತಿಯ ಮೂಲಗಳನ್ನು ಒತ್ತಿ ಹೇಳಿದರು. “ಸೌರ ಮತ್ತು ಗಾಳಿಶಕ್ತಿ ಯೋಜನೆಗಳು ಒಂದರಿಂದ ಮೂರು ವರ್ಷಗಳಲ್ಲಿ ಸ್ಥಾಪಿಸಿ ವಿದ್ಯುತ್ ಉತ್ಪಾದಿಸಬಹುದಾದ ಪರಿಣಾಮಕಾರಿ ಪರ್ಯಾಯಗಳಾಗಿವೆ,” ಎಂದು ಅವರು ಹೇಳಿದರು.

ಜೀವನ-ಮರಣದ ಪ್ರಶ್ನೆ

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಾಂಗ್ವೊನ್ ರಾಷ್ಟ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಎಮೆರಿಟಸ್ ಸೊಂಗ್ ವೋನ್-ಕಿ (ಥಾಮಸ್ ಮೋರ್) ಹಳೆಯ ಅಣು ಸ್ಥಾವರಗಳ ಕಾರ್ಯಾವಧಿ ವಿಸ್ತರಣೆಯ ಅಪಾಯಗಳನ್ನು ವಿವರಿಸಿ, “ಹಳೆಯ ಅಣು ವಿದ್ಯುತ್ ಸ್ಥಾವರಗಳ ಕಾರ್ಯಾವಧಿ ವಿಸ್ತರಣೆ ನನ್ನ ಪ್ರಮುಖ ಆತಂಕವಾಗಿದೆ,” ಎಂದು ಅವರು ಹೇಳಿದರು.

ಕಾರ್ಯಾವಧಿಯ ಅಂತ್ಯದಲ್ಲಿರುವ ಸ್ಥಾವರಗಳನ್ನು ಕೆಲವೊಮ್ಮೆ 80 ಶೇಕಡಾ ಸಾಮರ್ಥ್ಯಕ್ಕೆ ಇಳಿಸಿ ನಂತರ ಸಂಪೂರ್ಣ ಸಾಮರ್ಥ್ಯದಲ್ಲಿ ಕಾರ್ಯಗತಗೊಳಿಸಲಾಗುತ್ತದೆ ಎಂದು ಅವರು ವಿವರಿಸಿದರು. “ಚೆರ್ನೋಬಿಲ್ ದುರಂತ ಇದೇ ರೀತಿಯಲ್ಲಿ ಸಂಭವಿಸಿತು,” ಎಂದು 1986ರ ಸ್ಫೋಟವನ್ನು ಉಲ್ಲೇಖಿಸಿ ಅವರು ಎಚ್ಚರಿಸಿದರು.

“ಅಣು ಸ್ಥಾವರಗಳ ಕಾರ್ಯಾವಧಿ ವಿಸ್ತರಣೆ ಕೊರಿಯಾ ಗಣರಾಜ್ಯಕ್ಕೆ ಜೀವನ-ಮರಣದ ಪ್ರಶ್ನೆಯಾಗಿದೆ,” ಎಂದು ಅವರು ಹೇಳಿದರು. ಪುನರ್ನವೀಕರಿಸಬಹುದಾದ ಶಕ್ತಿಯ ವಿಸ್ತರಣೆಗೆ ಕಾನೂನು ಬೆಂಬಲದ ಕೊರತೆ ಇರುವ ಸಂದರ್ಭದಲ್ಲಿ ಸರ್ಕಾರ ಅಣು ಕೈಗಾರಿಕೆಗೆ ಹೆಚ್ಚಿನ ಬಜೆಟ್ ಮೀಸಲಿಡುತ್ತಿರುವುದನ್ನೂ ಅವರು ಟೀಕಿಸಿದರು.

ಪರಿಸರ ಪರಿವರ್ತನೆಗೆ ಕರೆ

ಸಭಿಕರನ್ನು ಉದ್ದೇಶಿಸಿ ಮಾತನಾಡಿದ ಪ್ರಾಧ್ಯಾಪಕ ಸೊಂಗ್, ಪರಿಸರ ಜಾಗೃತಿಯ ಅಗತ್ಯವನ್ನು ಒತ್ತಿಹೇಳಿದರು. “ಜಾಗತಿಕ ಪರಿಸರ ಸಂಕಟದ ಸಂದರ್ಭದಲ್ಲಿ ಜೀವನದ ಗೌರವವನ್ನು ರಕ್ಷಿಸಲು ಅಣು ವಿದ್ಯುತ್ ಸ್ಥಾವರಗಳ ಅಪಾಯಗಳ ಬಗ್ಗೆ ಜಾಗೃತಿ ಮೂಡಿಸುವ ಪರಿಸರ ಸಂದೇಶವಾಹಕರು ಅಗತ್ಯವಿದ್ದಾರೆ,” ಎಂದು ಅವರು ಹೇಳಿದರು.

“ಹೊಸ ಅಣು ಸ್ಥಾವರಗಳನ್ನು ತಿರಸ್ಕರಿಸುವುದೂ, ಹಳೆಯ ಸ್ಥಾವರಗಳ ಕಾರ್ಯಾವಧಿ ವಿಸ್ತರಣೆಗೆ ವಿರೋಧಿಸುವುದೂ ಪರಿಸರಕ್ಕೆ ನಾವು ಮಾಡಿದ ಹಾನಿಗಳ ಪಶ್ಚಾತ್ತಾಪದ ಪ್ರಾರಂಭವಾಗಿದೆ,” ಎಂದು ಅವರು ಹೇಳಿದರು. ಈ ಚಳವಳಿ ಪರಿಸರದ ಜೊತೆಗೆ ನೈತಿಕ ಹಾಗೂ ಆಧ್ಯಾತ್ಮಿಕ ದೃಷ್ಟಿಕೋನದಲ್ಲಿಯೂ ಜೀವನ ಮತ್ತು ಸೃಷ್ಟಿಯ ರಕ್ಷಣೆಯನ್ನು ಒತ್ತಿ ಹೇಳುತ್ತಿದೆ.

ಮುಂದುವರಿಯುವ ಹೋರಾಟ

ಮಾರ್ಚ್ 11ರಂದು ಫುಕುಶಿಮಾ ದುರಂತದ ವಾರ್ಷಿಕೋತ್ಸವದ ದಿನ ಪರಮಾಣು ನಿಶ್ಯಸ್ತ್ರೀಕರಣಕ್ಕೆ ಸಮರ್ಪಿತ ಪವಿತ್ರ ಬಲಿಪೂಜೆಗೆ ಪೂಜ್ಯ ಧರ್ಮಾಧ್ಯಕ್ಷ ಕಾಂಗ್ ವೂ-ಇಲ್ ಅಧ್ಯಕ್ಷತೆ ವಹಿಸಲಿದ್ದಾರೆ.

ಗ್ವಾಂಗ್ಹ್ವಾಮುನ್ ಪ್ರದೇಶದಲ್ಲಿ ಪರಮಾಣು ವಿರೋಧಿ ಚಟುವಟಿಕೆಗಳು ಮುಂದುವರಿಯಲಿವೆ ಎಂದು ಆಯೋಜಕರು ತಿಳಿಸಿದ್ದಾರೆ. “ಪರಿಸರದ 1000 ಅಪೋಸ್ತಲರನ್ನು ಹುಡುಕೋಣ” ಎಂಬ ಅಭಿಯಾನವನ್ನೂ ಪ್ರಾರಂಭಿಸಲಾಗಿದ್ದು, ನಾಗರಿಕರು ಪರಿಸರ ರಕ್ಷಣೆಗೆ ತೊಡಗಿಕೊಳ್ಳಲು ಆಹ್ವಾನಿಸಲಾಗಿದೆ.

ಫುಕುಶಿಮಾ ದುರಂತದ ಸ್ಮರಣೆಯೊಂದಿಗೆ, ಈ ಪ್ರಾರ್ಥನಾ ಪ್ರತಿಭಟನೆ ವಿಶ್ವಾಸ ಮತ್ತು ಪರಿಸರ ಜವಾಬ್ದಾರಿಯನ್ನು ಒಂದಾಗಿಸುವ ಪ್ರಯತ್ನವಾಗಿದ್ದು, ಸುರಕ್ಷಿತ ಮತ್ತು ಶಾಶ್ವತ ಶಕ್ತಿಯ ಮೂಲಗಳತ್ತ ಪರಿವರ್ತನೆಗೆ ಕರೆ ನೀಡುತ್ತಿದೆ.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

 

27 ಫೆಬ್ರವರಿ 2026, 00:34