ಹುಡುಕಿ

TOPSHOT-BRAZIL-WEATHER-CLIMATE-LANDSLIDE TOPSHOT-BRAZIL-WEATHER-CLIMATE-LANDSLIDE  (AFP or licensors)

ಬ್ರೆಜಿಲ್‌ನಲ್ಲಿ ಭಾರೀ ಮಳೆ: ಹಲವಾರು ಜನರು ನಾಪತ್ತೆ

ಆಗ್ನೇಯ ಬ್ರೆಜಿಲ್‌ನಲ್ಲಿ ಸುರಿದ ಭಾರೀ ಮಳೆಯಿಂದ ಕನಿಷ್ಠ 30 ಮಂದಿ ಸಾವನ್ನಪ್ಪಿದ್ದು, ಇನ್ನೂ ಹಲವರು ನಾಪತ್ತೆಯಾಗಿರುವುದಾಗಿ ವರದಿಯಾಗಿದೆ.

ಲೇಖಕರು: ಕ್ರಿಸ್ಟೊಫರ್ ವೆಲ್ಸ್

ಮಿನಾಸ್ ಜೆರೈಸಿನ ದಕ್ಷಿಣ ಭಾಗದಲ್ಲಿರುವ ಜುಯಿಸ್ ದಿ ಫೋರಾ ನಗರದಲ್ಲಿ ಭಾರೀ ಮಳೆಯ ಪರಿಣಾಮವಾಗಿ ನೂರಾರು ಜನರು ವಾಸಸ್ಥಳ ಕಳೆದುಕೊಂಡ ಹಿನ್ನೆಲೆ, ಬ್ರೆಜಿಲ್ ಸರ್ಕಾರ ತುರ್ತು ವಿಪತ್ತು ಸ್ಥಿತಿಯನ್ನು ಘೋಷಿಸಿದೆ.

ಸ್ಥಳೀಯ ಅಧಿಕಾರಿಗಳ ಮಾಹಿತಿ ಪ್ರಕಾರ, ತೀವ್ರ ಹವಾಮಾನದಿಂದ ಕನಿಷ್ಠ 30 ಮಂದಿ ಮೃತಪಟ್ಟಿದ್ದು, 39 ಮಂದಿ ಇನ್ನೂ ನಾಪತ್ತೆಯಾಗಿದ್ದಾರೆ. ಭಾರೀ ಮಳೆ ಪರಿಣಾಮವಾಗಿ ಪ್ರವಾಹ ಹಾಗೂ ಭೂಕುಸಿತಗಳು ಸಂಭವಿಸಿದ್ದು, ವಿಶೇಷ ರಕ್ಷಣಾ ತಂಡಗಳು ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸುತ್ತಾ ನಾಪತ್ತೆಯಾದವರಿಗಾಗಿ ಹುಡುಕಾಟ ಮುಂದುವರೆಸಿವೆ.

ಬ್ರೆಜಿಲ್ ರಾಷ್ಟ್ರಪತಿ ಲೂಯಿಸ್ ಇನಾಸಿಯೋ ಲುಲಾ ಡಿಸಿಲ್ವಾ ಅವರು ಸಾಮಾಜಿಕ ಜಾಲತಾಣ X ಮೂಲಕ ಸರ್ಕಾರದ ಕ್ರಮಗಳನ್ನು ವಿವರಿಸಿ, “ಮಾನವೀಯ ನೆರವು ಒದಗಿಸುವುದು, ಮೂಲಭೂತ ಸೇವೆಗಳ ಪುನಃಸ್ಥಾಪನೆ, ಅಂಗವಿಕಲರಿಗೆ ಸಹಾಯ ಹಾಗೂ ಪುನರ್ ನಿರ್ಮಾಣಕ್ಕೆ ಬೆಂಬಲ ನೀಡುವುದು ನಮ್ಮ ಮುಖ್ಯ ಗುರಿ” ಎಂದು ತಿಳಿಸಿದ್ದಾರೆ.

ವಿಪತ್ತು ಸ್ಥಿತಿ ಘೋಷಣೆ ಪರಿಹಾರ ಹಾಗೂ ಮಾನವೀಯ ನೆರವನ್ನು ವೇಗವಾಗಿ ತಲುಪಿಸುವ ಉದ್ದೇಶದಿಂದ ಕೈಗೊಳ್ಳಲಾಗಿದೆ ಎಂದು ಬ್ರೆಜಿಲ್ ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.

ಡಿಸೆಂಬರ್‌ನಿಂದ ಮಾರ್ಚ್‌ವರೆಗೆ ನಡೆಯುವ ಮಳೆಗಾಲದಲ್ಲಿ ಬ್ರೆಜಿಲ್‌ನಲ್ಲಿ ಸಾಮಾನ್ಯವಾಗಿ ಭಾರೀ ಮಳೆ, ಪ್ರವಾಹ ಮತ್ತು ಭೂಕುಸಿತಗಳು ಸಂಭವಿಸುತ್ತವೆ. ಆದರೆ ಈ ಫೆಬ್ರವರಿಯಲ್ಲಿ ಜುಯಿಸ್ ದಿ ಫೋರಾ ನಗರದಲ್ಲಿ ಇತಿಹಾಸದಲ್ಲೇ ಅತಿ ಹೆಚ್ಚು ಮಳೆಯಾಗಿದೆ ಎಂದು ನಿವಾಸಿಗಳು ಹೇಳಿದ್ದಾರೆ.

ಬ್ರೆಜಿಲ್ ರಾಷ್ಟ್ರೀಯ ಹವಾಮಾನ ಸಂಸ್ಥೆ ಮಂಗಳವಾರ ಮಿನಾಸ್ ಜೆರೈಸು ಮತ್ತು ರಿಯೊ ದಿ ಜನೈರೊ ಸೇರಿ 14 ರಾಜ್ಯಗಳ ಕೆಲವು ಭಾಗಗಳಲ್ಲಿ ಭಾರೀ ಮಳೆಯ ಎಚ್ಚರಿಕೆ ಪ್ರಕಟಿಸಿದೆ.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

 

25 ಫೆಬ್ರವರಿ 2026, 11:49