ಭೌಗೋಳಿಕ-ರಾಜಕೀಯ ಉದ್ವಿಗ್ನತೆಗಳ ನಡುವೆ ಜಾಗತಿಕ ಸೇನಾ ವೆಚ್ಚ ಏರಿಕೆ
ಲೇಖಕರು: ಲಿಂಡಾ ಬೋರ್ಡೊನಿ
ಅಂತರರಾಷ್ಟ್ರೀಯ ಕಾರ್ಯತಂತ್ರ ಅಧ್ಯಯನ ಸಂಸ್ಥೆ (International Institute for Strategic Studies – IISS) ಪ್ರಕಟಿಸಿದ ವಾರ್ಷಿಕ ಮಿಲಿಟರಿ ಬ್ಯಾಲೆನ್ಸ್ 2026 ವರದಿ ಪ್ರಕಾರ, ಸೇನಾ ವೆಚ್ಚದ ಏರಿಕೆಯ ವೇಗವು ಹಿಂದಿನ ವರ್ಷಗಳಿಗಿಂತ ಸ್ವಲ್ಪ ನಿಧಾನಗೊಂಡಿದ್ದರೂ, ಯೂರೋಪ್ ಹಾಗೂ ಏಷ್ಯಾದ ಕೆಲವು ಭಾಗಗಳಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ. ಇದು ಮುಂದುವರಿಯುತ್ತಿರುವ ಭದ್ರತಾ ಆತಂಕಗಳು ಮತ್ತು ಪ್ರಾದೇಶಿಕ ಆದ್ಯತೆಗಳ ಬದಲಾವಣೆಯನ್ನು ಪ್ರತಿಬಿಂಬಿಸುತ್ತದೆ.
ವರದಿ ಪ್ರಕಾರ 2025ರಲ್ಲಿ ಜಾಗತಿಕ ಸೈನಿಕ ವೆಚ್ಚ ಏರಿಕೆಯನ್ನು ಮುಂದುವರಿಸಿಕೊಂಡು ಅಂದಾಜು 2.63 ಟ್ರಿಲಿಯನ್ ಅಮೆರಿಕನ್ ಡಾಲರ್‌ಗೆ ತಲುಪಿದೆ. ಇದು ಹಿಂದಿನ ವರ್ಷದೊಂದಿಗೆ ಹೋಲಿಸಿದರೆ 2.5 ಶೇಕಡಾ ಏರಿಕೆಯಾಗಿದ್ದು, ಉಕ್ರೇನ್ ಮೇಲಿನ ರಷ್ಯಾ ಆಕ್ರಮಣದ ತಕ್ಷಣ ಕಂಡ ತೀವ್ರ ಏರಿಕೆಗಳಿಗಿಂತ ಈ ಬೆಳವಣಿಗೆಯ ವೇಗ ನಿಧಾನವಾಗಿದೆ ಎಂದು ವರದಿ ಸೂಚಿಸಿದೆ.
ಪ್ರಾದೇಶಿಕ ಮಟ್ಟದಲ್ಲಿ ವ್ಯತ್ಯಾಸ ಸ್ಪಷ್ಟವಾಗಿದೆ. ಯೂರೋಪ್‌ನಲ್ಲಿ ಸೇನಾ ವೆಚ್ಚ ಸುಮಾರು 12.6 ಶೇಕಡಾ ಏರಿಕೆಯಾಗಿ ಜಾಗತಿಕ ಸರಾಸರಿಗಿಂತ ಬಹಳ ಹೆಚ್ಚು ದಾಖಲಾಗಿದೆ. ಭದ್ರತಾ ಸಮಸ್ಯೆಗಳು ಹಾಗೂ ನ್ಯಾಟೋ(ಉತ್ತರ ಅಟ್ಲಾಂಟಿಕ್ ಒಪ್ಪಂದ ಸಂಸ್ಥೆ-NATO) ಮೈತ್ರಿ ರಾಷ್ಟ್ರಗಳ ಸೈನಿಕ ಬಲವರ್ಧನೆಗೆ ನೀಡಿದ ಹೊಸ ಬದ್ಧತೆಗಳು ಈ ಏರಿಕೆಗೆ ಕಾರಣವಾಗಿವೆ. ಜರ್ಮನಿ ಈ ಏರಿಕೆಯಲ್ಲಿ ಪ್ರಮುಖ ಪಾತ್ರವಹಿಸಿದ್ದು, 2025ರಲ್ಲಿ ಯೂರೋಪ್ ಜಾಗತಿಕ ಸೇನಾ ವೆಚ್ಚದ 21 ಶೇಕಡಕ್ಕಿಂತ ಹೆಚ್ಚು ಪಾಲು ಹೊಂದಲು ಕಾರಣವಾಗಿದೆ; 2022ರಲ್ಲಿ ಇದು 17 ಶೇಕಡವಾಗಿತ್ತು.
ಇದಕ್ಕೆ ವಿರುದ್ಧವಾಗಿ, ಅಮೆರಿಕದ ಸೇನಾ ಬಜೆಟ್ ಏರಿಕೆಯ ವೇಗ 2025ರಲ್ಲಿ ತಾತ್ಕಾಲಿಕವಾಗಿ ನಿಧಾನಗೊಂಡಿದ್ದರೂ, 2026ರಲ್ಲಿ “ಗೋಲ್ಡನ್ ಡೋಮ್” ಕ್ಷಿಪಣಿ ರಕ್ಷಣಾ ಯೋಜನೆ ಸೇರಿದಂತೆ ಹಲವು ಉಪಕ್ರಮಗಳ ಮೂಲಕ ಸೈನಿಕ ವೆಚ್ಚವನ್ನು 1 ಟ್ರಿಲಿಯನ್ ಡಾಲರ್ ಮೀರಿಸುವ ಯೋಜನೆಗಳು ಪ್ರಸ್ತಾಪದಲ್ಲಿವೆ.
ರಷ್ಯಾದ ಸೇನಾ ವೆಚ್ಚ ಪ್ರಮಾಣದಲ್ಲಿ ಏರಿಕೆಯಾಗುತ್ತಲೇ ಇದ್ದರೂ, ಉಕ್ರೇನ್ ಸಂಘರ್ಷದ ಆರಂಭಿಕ ಹಂತಗಳಲ್ಲಿ ಕಂಡ ತೀವ್ರ ಏರಿಕೆಗೆ ಹೋಲಿಸಿದರೆ ಈಗ ನಿಧಾನಗತಿಯಲ್ಲಿ ಮುಂದುವರಿಯುತ್ತಿದೆ.
ಏಷ್ಯಾದಲ್ಲಿಯೂ ಸೇನಾ ಬಜೆಟ್‌ಗಳು ವಿಸ್ತರಿಸಿಕೊಂಡಿದ್ದು, ಚೀನಾ ಪ್ರಾದೇಶಿಕ ಸೈನಿಕ ವೆಚ್ಚದಲ್ಲಿ ಸುಮಾರು 44 ಶೇಕಡ ಪಾಲು ಹೊಂದಿರುವ ಪ್ರಮುಖ ರಾಷ್ಟ್ರವಾಗಿ ಉಳಿದಿದೆ. ಪ್ರಾದೇಶಿಕ ಭದ್ರತಾ ಸ್ಪರ್ಧೆಯ ಹಿನ್ನೆಲೆಯಲ್ಲಿ ಇತರೆ ರಾಷ್ಟ್ರಗಳೂ ತಮ್ಮ ಸೇನಾ ವೆಚ್ಚವನ್ನು ಹೆಚ್ಚಿಸಿವೆ.
ಮಧ್ಯ ಪೂರ್ವ ಹಾಗೂ ಉತ್ತರ ಆಫ್ರಿಕಾ ಪ್ರದೇಶಗಳಲ್ಲಿಯೂ ಪ್ರಾದೇಶಿಕ ಉದ್ವಿಗ್ನತೆಗಳ ಹಿನ್ನೆಲೆ ಮತ್ತು ಸೈನಿಕ ಸಿದ್ಧತೆಯನ್ನು ಬಲಪಡಿಸುವ ರಾಜ್ಯಗಳ ನಿರ್ಧಾರಗಳಿಂದ ಸೇನಾ ವೆಚ್ಚ ಏರಿಕೆಯಾಗಿದೆ.
ಸೇನಾ ವೆಚ್ಚವನ್ನು ಮಿತಗೊಳಿಸಲು ಪೂಜ್ಯ ಜಗದ್ಗುರುಗಳ ಮನವಿ
ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರು ಸಶಸ್ತ್ರ ಸಂಘರ್ಷಗಳಲ್ಲಿ ಅಪಾರ ಹಣವನ್ನು ಬಳಸುವ ಬಗ್ಗೆ ಎಚ್ಚರಿಕೆ ನೀಡುತ್ತಾ, ಆ ಸಂಪನ್ಮೂಲಗಳನ್ನು ಆರೋಗ್ಯ ವ್ಯವಸ್ಥೆಗಳನ್ನು ಬಲಪಡಿಸಲು ಬಳಸಬೇಕು ಎಂದು ಕರೆ ನೀಡಿದರು.
ಫೆಬ್ರವರಿಯಲ್ಲಿ ಪಾಂಟಿಫಿಕಲ್ ಅಕಾಡೆಮಿ ಫಾರ್ ಲೈಫ್ (Pontifical Academy for Life) ಸದಸ್ಯರೊಂದಿಗೆ ಮಾತನಾಡಿದ ವೇಳೆ, ಯುದ್ಧಗಳು ಆರ್ಥಿಕ, ತಾಂತ್ರಿಕ ಹಾಗೂ ಲಾಜಿಸ್ಟಿಕ್ ಸಾಮರ್ಥ್ಯಗಳನ್ನು ಹೀರಿಕೊಳ್ಳುವ ಪರಿಸ್ಥಿತಿಯಲ್ಲಿ, ಮಾನವ ಜೀವ ರಕ್ಷಣೆ ಮತ್ತು ಸಮರ್ಪಕ ವೈದ್ಯಕೀಯ ಸೇವೆಯನ್ನು ಖಚಿತಪಡಿಸುವತ್ತ ಗಮನ ಹರಿಸುವುದು ಅತ್ಯವಶ್ಯಕ ಎಂದು ಅವರು ತಿಳಿಸಿದರು. ಸಂಘರ್ಷಗಳು ನಾಗರಿಕ ಮೂಲಸೌಕರ್ಯಗಳಾದ ಆಸ್ಪತ್ರೆಗಳನ್ನೂ ಹಾನಿಗೊಳಿಸುತ್ತವೆ ಎಂಬುದನ್ನು ಉಲ್ಲೇಖಿಸಿ, ಇದನ್ನು ಸಾರ್ವಜನಿಕ ಆರೋಗ್ಯದ ಮೇಲೆ ನೇರ ದಾಳಿಯೆಂದು ಅವರು ವಿವರಿಸಿದ್ದಾರೆ.
ಇದೇ ವೇಳೆ ಉದ್ವಿಗ್ನತೆಗಳನ್ನು ತಡೆಗಟ್ಟಲು ಹಾಗೂ ಮಧ್ಯಸ್ಥಿಕೆ ವಹಿಸಲು ಬಹುಪಕ್ಷೀಯ ವ್ಯವಸ್ಥೆಗಳನ್ನು ಮರುಸಕ್ರಿಯಗೊಳಿಸುವ ಅಗತ್ಯವಿದೆ ಎಂದು ಪೂಜ್ಯ ಜಗದ್ಗುರುಗಳು ಒತ್ತಿಹೇಳಿದರು. ಆರೋಗ್ಯವು ವಿಶ್ವವ್ಯಾಪಿ ಹಕ್ಕಾಗಿದ್ದು, ಅದಕ್ಕೆ ಪ್ರವೇಶವನ್ನು ಯಾವುದೇ ರೀತಿಯಲ್ಲಿ ನಿರ್ಬಂಧಿಸಬಾರದು ಎಂಬುದನ್ನು ಅವರು ವಿವರಿಸಿದ್ದಾರೆ.
ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).