ಕ್ರೈಸ್ತ–ಕನ್ಫ್ಯೂಷಿಯನ್ ಸಂವಾದ: ಹೆಚ್ಚು ಸಾಮರಸ್ಯಪೂರ್ಣ ಜಗತ್ತನ್ನು ನಿರ್ಮಿಸಲು ಒಟ್ಟಾಗಿ ಕಾರ್ಯನಿರ್ವಹಿಸುವುದು.
ವ್ಯಾಟಿಕನ್ ವರದಿ
ದಕ್ಷಿಣ ಕೊರಿಯಾದ ಸಿಯೋಲ್‌ನ ಸೊಗಾಂಗ್ ಕಥೋಲಿಕ ವಿಶ್ವವಿದ್ಯಾಲಯದಲ್ಲಿ ಆಗಸ್ಟ್ 4ರಂದು ಮೊದಲ ಅಧಿಕೃತ ಕ್ರೈಸ್ತ–ಕನ್ಫ್ಯೂಷಿಯನ್ ಸಂವಾದ ಆರಂಭವಾಯಿತು. ಅಂತರಧರ್ಮೀಯ ಸಂವಾದಕ್ಕಾಗಿ ಇರುವ ಡಿಕಾಸ್ಟರಿಯ ಮುಖ್ಯಸ್ಥ ಕಾರ್ಡಿನಲ್ ಜಾರ್ಜ್ ಜೇಕಬ್ ಕೂವಕಾಡ್ ರವರು ಉದ್ಘಾಟನಾ ಭಾಷಣದಲ್ಲಿ, ಕ್ರೈಸ್ತ ಧರ್ಮದ “ಹೊಸ ಆಕಾಶ ಮತ್ತು ಹೊಸ ಭೂಮಿ” ಎಂಬ ದೃಷ್ಟಿಕೋನ ಹಾಗೂ ಕನ್ಫ್ಯೂಷಿಯನ್ ಪರಂಪರೆಯ “ದಾತೋಂಗ್” (ಮಹಾ ಏಕತೆ/ಮಹಾ ಸಾಮರಸ್ಯ) ಎಂಬ ಆದರ್ಶಗಳು ವಿಭಿನ್ನ ಧಾರ್ಮಿಕ, ತಾತ್ವಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆಗಳಿಂದ ಬಂದಿದ್ದರೂ, ಎರಡೂ ಮಾನವಕುಲದ ಆಳವಾದ ಆಶಯವಾದ ಶಾಂತಿಯುತ, ಎಲ್ಲರನ್ನು ಒಳಗೊಂಡ ಮತ್ತು ಪರಸ್ಪರ ಸಹಕಾರದ ಸಮಾಜವನ್ನು ನಿರ್ಮಿಸುವ ಕನಸನ್ನು ವ್ಯಕ್ತಪಡಿಸುತ್ತವೆ ಎಂದು ಹೇಳಿದರು.
“ಆದರ್ಶ ಸಮಾಜಕ್ಕಾಗಿ ಕ್ರೈಸ್ತ ಧರ್ಮ ಮತ್ತು ಕನ್ಫ್ಯೂಷಿಯನ್ ಧರ್ಮದ ಕೊಡುಗೆ: ಹೊಸ ಆಕಾಶ, ಹೊಸ ಭೂಮಿ ಮತ್ತು ದಾತೋಂಗ್ (ಮಹಾ ಏಕತೆ)” ಎಂಬ ವಿಷಯದಡಿ ನಡೆಯುತ್ತಿರುವ ಈ ಎರಡು ದಿನಗಳ ಸಂವಾದದಲ್ಲಿ ವಿವಿಧ ದೇಶಗಳ ಕನ್ಫ್ಯೂಷಿಯನ್ ಮತ್ತು ಕಥೋಲಿಕ್ ಪಂಡಿತರು, ಧಾರ್ಮಿಕ ನಾಯಕರು ಹಾಗೂ ಅಂತರಧರ್ಮೀಯ ಸಂವಾದದಲ್ಲಿ ತೊಡಗಿರುವವರು ಭಾಗವಹಿಸಿದ್ದಾರೆ. ಸಭೆಯ ಆರಂಭದಲ್ಲಿ ಕ್ರೈಸ್ತ–ಕನ್ಫ್ಯೂಷಿಯನ್ ಸಂವಾದದ ಮಾರ್ಗಸೂಚಿಗಳ ಕರಡು ಮಂಡಿಸಲಾಯಿತು. ಪರಸ್ಪರ ಆಲಿಸುವಿಕೆ ಮತ್ತು ತಿಳುವಳಿಕೆಯ ಪ್ರಯಾಣದಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ ಎಂದು ಕಾರ್ಡಿನಲ್ ಕೂವಕಾಡ್ ರವರು ಹೇಳಿದರು. ಸಭೆಯ ಅಂತ್ಯದಲ್ಲಿ ಮಾರ್ಗಸೂಚಿಗಳ ಅಂತಿಮ ಆವೃತ್ತಿಯನ್ನು ಪ್ರಕಟಿಸಲಾಗುವುದು.
ಕನ್ಫ್ಯೂಷಿಯನ್ ಪರಂಪರೆಯ ದಾತೋಂಗ್ ಆದರ್ಶವು ನೈತಿಕತೆ, ನ್ಯಾಯ, ಜವಾಬ್ದಾರಿ ಮತ್ತು ಸಾಮಾನ್ಯ ಒಳಿತಿನ ಮೇಲೆ ಆಧಾರಿತ ಸಾಮರಸ್ಯಪೂರ್ಣ ಸಮಾಜವನ್ನು ಚಿತ್ರಿಸುತ್ತದೆ. ಅದೇ ರೀತಿ, ಬೈಬಲ್‌ನ ಪ್ರಕಟನೆ ಗ್ರಂಥದಲ್ಲಿ ಕಾಣಿಸುವ “ಹೊಸ ಆಕಾಶ ಮತ್ತು ಹೊಸ ಭೂಮಿ” ಎಂಬ ಕ್ರೈಸ್ತ ದೃಷ್ಟಿಕೋನವು ದೇವರು ಮಾನವರೊಂದಿಗೆ ವಾಸಿಸುವ, ಕಣ್ಣೀರನ್ನು ಒರೆಸುವ ಹಾಗೂ ಸೃಷ್ಟಿಯನ್ನು ನ್ಯಾಯ, ಶಾಂತಿ ಮತ್ತು ಸಹಭಾಗಿತ್ವದಲ್ಲಿ ನವೀಕರಿಸುವ ಭರವಸೆಯನ್ನು ನೀಡುತ್ತದೆ. ವಿಭಿನ್ನ ಹಿನ್ನೆಲೆಗಳಿದ್ದರೂ, ಎರಡೂ ದೃಷ್ಟಿಕೋನಗಳು ಸ್ವಾರ್ಥ, ದಬ್ಬಾಳಿಕೆ ಮತ್ತು ಅನ್ಯಾಯ ಅನಿವಾರ್ಯವಲ್ಲ ಎಂಬ ಆಶಾವಾದವನ್ನು ಸಾರುತ್ತವೆ.
ಆದರೆ ಈ ಪರಿವರ್ತನೆಯ ಮೂಲಭೂತ ಆಧಾರಗಳಲ್ಲಿ ವ್ಯತ್ಯಾಸವಿದೆ. ಕ್ರೈಸ್ತ ಧರ್ಮದಲ್ಲಿ ಮಾನವಕುಲ ಮತ್ತು ಸೃಷ್ಟಿಯ ನವೀಕರಣವು ಕ್ರಿಸ್ತನ ಮೂಲಕ ದೇವರ ವಿಮೋಚನಾ ಕಾರ್ಯದಲ್ಲಿ ಬೇರೂರಿದೆ. ಕನ್ಫ್ಯೂಷಿಯನ್ ಪರಂಪರೆಯಲ್ಲಿ ಸಾಮರಸ್ಯವು ವ್ಯಕ್ತಿಯ ನೈತಿಕ ಪರಿಷ್ಕರಣೆ, ಸಜ್ಜನ ಆಡಳಿತಗಾರರ ಮಾರ್ಗದರ್ಶನ, ಶಿಕ್ಷಣ ಮತ್ತು ಮಾನವ ಸಂಬಂಧಗಳ ನೈತಿಕ ವ್ಯವಸ್ಥೆಯ ಮೂಲಕ ರೂಪುಗೊಳ್ಳುತ್ತದೆ. ಈ ಭಿನ್ನತೆಗಳ ನಡುವೆಯೂ, ಪರಸ್ಪರ ಗೌರವ, ಕಲಿಕೆ ಮತ್ತು ಸಂವಾದದ ಮೂಲಕ ಎರಡೂ ಪರಂಪರೆಗಳು ಒಂದನ್ನೊಂದು ಸಮೃದ್ಧಗೊಳಿಸಬಹುದು ಎಂದು ಕಾರ್ಡಿನಲ್ ಕೂವಕಾಡ್ ರವರು ಒತ್ತಿಹೇಳಿದರು.
ಕಾರ್ಡಿನಲ್ ರವರ ಪ್ರಕಾರ, ಕ್ರೈಸ್ತ ಮತ್ತು ಕನ್ಫ್ಯೂಷಿಯನ್ ಆದರ್ಶಗಳು ನ್ಯಾಯ, ಸಾಮರಸ್ಯ, ಸ್ನೇಹ, ಪರಸ್ಪರ ಕಾಳಜಿ ಮತ್ತು ಪ್ರತಿಯೊಬ್ಬ ವ್ಯಕ್ತಿಯ ಘನತೆಯ ಗೌರವವನ್ನು ಆಧರಿಸಿದ ಸಮಾಜದ ನಿರ್ಮಾಣಕ್ಕೆ ಪ್ರೇರಣೆ ನೀಡುತ್ತವೆ. ವಿಭಜನೆ, ಸಂಘರ್ಷ, ಪರಿಸರ ಬಿಕ್ಕಟ್ಟು ಮತ್ತು ನೈತಿಕ ಗೊಂದಲಗಳಿಂದ ಕೂಡಿರುವ ಇಂದಿನ ಜಗತ್ತಿನಲ್ಲಿ, ಸಾರ್ವತ್ರಿಕ ಸಹೋದರತ್ವ, ಸ್ವರ್ಗದ ಮೇಲಿನ ಗೌರವ ಮತ್ತು ಮಾನವಕುಲದ ಮೇಲಿನ ಪ್ರೀತಿ ಮುಂತಾದ ಹಂಚಿಕೊಂಡ ಮೌಲ್ಯಗಳು ಮಹತ್ವದ ಪ್ರತಿಕ್ರಿಯೆಯಾಗಬಹುದು.
ಈ ಮೊದಲ ಕ್ರೈಸ್ತ–ಕನ್ಫ್ಯೂಷಿಯನ್ ಸಂವಾದವು ಭವಿಷ್ಯದ ಅಂತರಧರ್ಮೀಯ ಸಭೆಗಳಿಗೆ ಮಾದರಿಯಾಗಲಿ ಎಂಬ ಆಶಯವನ್ನು ವ್ಯಕ್ತಪಡಿಸಲಾಯಿತು. ಇದು ಕೇವಲ ಶೈಕ್ಷಣಿಕ ಚರ್ಚೆಯಾಗಿ ಉಳಿಯದೆ, ದೀರ್ಘಕಾಲದ ಸ್ನೇಹ, ಪರಸ್ಪರ ತಿಳುವಳಿಕೆ ಮತ್ತು ಮಾನವಕುಲದ ಸಾಮಾನ್ಯ ಒಳಿತಿಗಾಗಿ ಸಹಕಾರದ ಹೊಸ ಅಧ್ಯಾಯಕ್ಕೆ ನಾಂದಿ ಹಾಡಬೇಕು ಎಂದು ನಾಯಕರು ಹೇಳಿದರು. ಕೊರಿಯಾದಲ್ಲಿ ಕಥೋಲಿಕ್ ಧರ್ಮದ ಆರಂಭಿಕ ವಿಶ್ವಾಸಿಗಳಲ್ಲಿ ಅನೇಕರು ಕನ್ಫ್ಯೂಷಿಯನ್ ಪರಂಪರೆಯಲ್ಲಿ ರೂಪುಗೊಂಡ ಪಂಡಿತರಾಗಿದ್ದರು ಎಂಬುದನ್ನು ಸೊಗಾಂಗ್ ವಿಶ್ವವಿದ್ಯಾಲಯದ ಅಧ್ಯಕ್ಷ ವಂ. ಸ್ವಾಮಿ ಲ್ಯೂಕ್ ಜೋಂಗ್ ಹ್ಯೊಕ್ ಸಿಮ್, ಎಸ್ ಜೆ, ಸ್ಮರಿಸಿದರು. ಇಂದಿನ ಸಾಮಾನ್ಯ ಸವಾಲುಗಳ ಸಂದರ್ಭದಲ್ಲಿ ಆತುರದ ಒಪ್ಪಂದಕ್ಕಿಂತ ಪ್ರಾಮಾಣಿಕ, ತಾಳ್ಮೆಯ ಮತ್ತು ಪರಸ್ಪರ ಗೌರವದ ಸಂವಾದವೇ ಅಗತ್ಯ ಎಂದು ಅವರು ಹೇಳಿದರು.