ಹುಡುಕಿ

ಕಾರ್ಡಿನಲ್ ಪಿಯೆಟ್ರೋ ಪರೋಲಿನ್ ಪ್ರಭೋಧನೆಯನ್ನು ನೀಡುತ್ತಾರೆ. ಕಾರ್ಡಿನಲ್ ಪಿಯೆಟ್ರೋ ಪರೋಲಿನ್ ಪ್ರಭೋಧನೆಯನ್ನು ನೀಡುತ್ತಾರೆ.  (AFP or licensors)

ಕಾರ್ಡಿನಲ್ ಪರೋಲಿನ್ ರವರು ವಿಶ್ವದಾದ್ಯಂತ ಹಿಂಸೆಗೆ ಒಳಗಾಗುತ್ತಿರುವ ಕ್ರೈಸ್ತರಿಗಾಗಿ ಪ್ರಾರ್ಥಿಸಿದರು.

ಸಿಸಿಲಿಯ ಕ್ಯಾಟಾನಿಯಾದಲ್ಲಿ ಸಂತ ಅಗಾಥಾ ರವರ ಪವಿತ್ರ ಅವಶೇಷಗಳ ವರ್ಗಾವಣೆಯ ಒಂಬತ್ತನೇ ಶತಮಾನೋತ್ಸವದ ಅಂಗವಾಗಿ ನಡೆದ ಪಾಂಟಿಫಿಕಲ್ ಬಲಿಪೂಜೆಯ ಸಂದರ್ಭದಲ್ಲಿ ನೀಡಿದ ಧರ್ಮೋಪದೇಶದಲ್ಲಿ, ಕಾರ್ಡಿನಲ್ ಪಿಯೆತ್ರೊ ಪರೋಲಿನ್ ರವರು ವಿಶ್ವದಾದ್ಯಂತ ಹಿಂಸೆಗೆ ಒಳಗಾಗುತ್ತಿರುವ ಅನೇಕ ಕ್ರೈಸ್ತರಿಗಾಗಿ ಪ್ರಾರ್ಥಿಸುವಂತೆ ವಿಶ್ವಾಸಿಗಳಿಗೆ ಕರೆ ನೀಡಿದರು.

ವ್ಯಾಟಿಕನ್ ವರದಿ

ಜಗದ್ಗುರುಗಳ ಅಧಿಕಾರ ಸ್ಥಳದ ರಾಜ್ಯ ಕಾರ್ಯದರ್ಶಿ ಕಾರ್ಡಿನಲ್ ಪಿಯೆತ್ರೊ ಪರೋಲಿನ್ ರವರು, ಸಿಸಿಲಿಯ ಕ್ಯಾಟಾನಿಯಾದಲ್ಲಿ ಸಂತ ಅಗಾಥಾ ರವರಿಗೆ ಸಮರ್ಪಿತ ಜುಬಿಲಿಯ ಸಮಾರೋಪದ ಅಂಗವಾಗಿ ಆಗಸ್ಟ್ 17ರ ಸಂಜೆ ನಡೆದ ಪವಿತ್ರ ಬಲಿಪೂಜೆಗೆ ಅಧ್ಯಕ್ಷತೆ ವಹಿಸಿದರು.

ಸಂತ ಅಗಾಥಾ ರವರಿಗೆ ಸಮರ್ಪಿತ ಕ್ಯಾಟಾನಿಯಾ ಕ್ಯಾಥೆಡ್ರಲ್‌ನಲ್ಲಿ ನಡೆದ ಈ ಯೂಕರಿಸ್ಟಿಕ್ ಆಚರಣೆಯು, ಅವರ ಪವಿತ್ರ ಅವಶೇಷಗಳನ್ನು ಕಾನ್ಸ್ಟಾಂಟಿನೋಪಲ್‌ನಿಂದ ಕ್ಯಾಟಾನಿಯಾಗೆ ವರ್ಗಾಯಿಸಿದ ಘಟನೆಯ ಒಂಬತ್ತನೇ ಶತಮಾನೋತ್ಸವವನ್ನು ಸ್ಮರಿಸಿತು.

ತಮ್ಮ ಸಂದೇಶದ ಮೂಲಕ ಆಧ್ಯಾತ್ಮಿಕವಾಗಿ ಈ ಸಂತೋಷದಲ್ಲಿ ಪಾಲ್ಗೊಂಡಿದ್ದ ಜಗದ್ಗುರು XIVನೇ ಲಿಯೋರವರು ಆಶೀರ್ವಾದ ಮತ್ತು ಪ್ರೀತಿಯನ್ನು “ಪ್ರೀತಿಯ ಸಿಸಿಲಿ ನಾಡಿಗೆ” ತಂದುಕೊಟ್ಟಿರುವುದಾಗಿ ಕಾರ್ಡಿನಲ್ ಪರೋಲಿನ್ ರವರು ಹೇಳಿದರು. ತಮ್ಮ ಪಾಲಕ ಸಂತೆಯ ಪ್ರಾಚೀನ ಭಕ್ತಿಯ ಸುತ್ತ ಒಟ್ಟುಗೂಡಿದ್ದ ಕ್ಯಾಟಾನಿಯಾ ನಾಗರಿಕರ ಸಂತೋಷದಲ್ಲಿ ಜಗದ್ಗುರುಗಳು ಕೂಡ ಆಧ್ಯಾತ್ಮಿಕವಾಗಿ ಪಾಲ್ಗೊಂಡರು.

“ಈ ವಾರ್ಷಿಕೋತ್ಸವವನ್ನು ಆಚರಿಸುವುದು,” ಎಂದು ಕಾರ್ಡಿನಲ್ ರವರು  ಒತ್ತಿಹೇಳಿದರು, “ಶತಮಾನಗಳಾದ್ಯಂತ ಪ್ರಭು ತನ್ನ ಧರ್ಮ ಸಭೆಗೆ ನಂಬಿಗಸ್ತನಾಗಿದ್ದಾನೆ ಎಂಬುದನ್ನು ಗುರುತಿಸುವುದಾಗಿದೆ. ಆತನು ಪರೀಕ್ಷೆಗಳ ಸಂದರ್ಭದಲ್ಲಿ ಧರ್ಮ ಸಭೆಯನ್ನು ಬೆಂಬಲಿಸಿದ್ದಾನೆ, ಸಂಕಷ್ಟಗಳಲ್ಲಿ ಅವಳನ್ನು ಶುದ್ಧೀಕರಿಸಿದ್ದಾನೆ ಮತ್ತು ಸಂತರ ಸಾಕ್ಷ್ಯದ ಮೂಲಕ ಅವಳು ನಿರಂತರವಾಗಿ ಹೊಸದಾಗಿ ಅರಳುವಂತೆ ಮಾಡಿದ್ದಾನೆ.”

ತಮ್ಮ ಧರ್ಮೋಪದೇಶದಲ್ಲಿ ಜಗದ್ಗುರುಗಳ ಅಧಿಕಾರ ಸ್ಥಳದ ರಾಜ್ಯ ಕಾರ್ಯದರ್ಶಿ, “ಪ್ರಪಂಚದ ವಿವಿಧ ಭಾಗಗಳಲ್ಲಿ ಚದರಿಹೋಗಿ, ಪ್ರಭುವಿನ ನಾಮಕ್ಕಾಗಿ ಮತ್ತು ಅವರ ಸುವಾರ್ತೆಯ ನಿಮಿತ್ತ ಹಿಂಸೆಯನ್ನು ಅನುಭವಿಸುತ್ತಿರುವ ನಮ್ಮ ಅನೇಕ ಸಹೋದರ ಸಹೋದರಿಯರಿಗಾಗಿ” ಪ್ರಾರ್ಥಿಸುವಂತೆ ಬಲವಾದ ಕರೆ ನೀಡಿದರು.

ಬಲಿಪೂಜೆಯ ಬಳಿಕ, ಸಂತ ಅಗಾಥಾರವರ ಪವಿತ್ರ ಅವಶೇಷಗಳನ್ನು ಹೊತ್ತ ಮೆರವಣಿಗೆಯು ಐತಿಹಾಸಿಕ ನಗರ ಕೇಂದ್ರದ ಕೆಲವು ಪ್ರಮುಖ ಬೀದಿಗಳಲ್ಲಿ ಸಾಗಿತು.

ಸ್ಮರಣೆಯ ವಸ್ತುಸಂಗ್ರಹಾಲಯಗಳಲ್ಲಿ ಬಂಧಿಯಾಗದ ಪಾವಿತ್ರ್ಯ

“ಸಂತ ಅಗಾಥಾರವರು ಕೇವಲ ಕ್ಯಾಟಾನಿಯಾದ ಇತಿಹಾಸಕ್ಕೆ ಸೇರಿದವರು ಅಲ್ಲ ಅವರು ದೇವರ ಇಂದಿನ ಕಾಲಕ್ಕೂ ಸೇರಿದವರು ಮತ್ತು ತಮ್ಮ ಜನರೊಂದಿಗೆ ಇಂದಿಗೂ ನಡೆಯುತ್ತಿದ್ದಾರೆ,” ಎಂದು ಕಾರ್ಡಿನಲ್ ಪರೋಲಿನ್ ರವರು ಮುಂದುವರಿಸಿದರು.

ಸಂತ ಅಗಸ್ಟಿನ್ ಮತ್ತು ತೆರ್ಥುಲಿಯನ್ ರವರ ಮಾತುಗಳನ್ನು ಉಲ್ಲೇಖಿಸಿದ ಅವರು, ಹುತಾತ್ಮರ ಮಹತ್ವವನ್ನು ಸ್ಮರಿಸಿದರು. ಸಂತ ಅಗಸ್ಟಿನ್ ಬೋಧಿಸಿದಂತೆ, ಅವರ ಸಂಕಟಕ್ಕಾಗಿ ಮಾತ್ರವಲ್ಲ, ಅವರು ಕೊನೆಯವರೆಗೂ ನಂಬಿಗಸ್ತರಾಗಿ ಉಳಿದದ್ದಕ್ಕಾಗಿ ಅವರನ್ನು ಕೊಂಡಾಡಬೇಕು. ಕಾರ್ತೇಜಿನ ಕ್ರೈಸ್ತ ಧರ್ಮಾಪಾಲಕ ತೆರ್ಥುಲಿಯನ್ ವಿವರಿಸಿದಂತೆ, “ಹುತಾತ್ಮರ ರಕ್ತವು ಸೋಲಿನ ಸಂಕೇತವಲ್ಲ; ಅದು ಧರ್ಮ ಸಭೆಯು ನಿರಂತರವಾಗಿ ಹೊಸದಾಗಿ ಅರಳುವ ಬೀಜವಾಗಿದೆ.”

ಆದ್ದರಿಂದ ಜಗದ್ಗುರುಗಳ ಪ್ರತಿನಿಧಿ ಕಾರ್ಡಿನಲ್ ಪರೋಲಿನ್, ಇಂದಿನ ಕಾಲದಲ್ಲಿಯೂ ನಂಬಿಕೆಗೆ ಪ್ರೇರಣೆಯಾಗಬಲ್ಲ ಮಹಿಳೆಯಾಗಿ ಸಂತ ಅಗಾಥಾಳನ್ನು ನೋಡುವಂತೆ ಆಹ್ವಾನಿಸಿದರು. ಏಕೆಂದರೆ ಅವರು “ಸ್ಮರಣೆಯ ವಸ್ತುಸಂಗ್ರಹಾಲಯಗಳಲ್ಲಿ ಬಂಧಿಯಾಗದ, ಬದಲಾಗಿ ನಂಬಿಕೆ, ನಿರೀಕ್ಷೆ ಮತ್ತು ಪ್ರೀತಿಯನ್ನು ನಿರಂತರವಾಗಿ ಹುಟ್ಟಿಸುವ ಪಾವಿತ್ರ್ಯವನ್ನು” ಪ್ರತಿಬಿಂಬಿಸುತ್ತಾರೆ.

ಎಲ್ಲವೂ ಕಳೆದುಹೋದಂತೆ ಕಂಡರೂ ದೇವರು ನಂಬಿಗಸ್ತನಾಗಿರುತ್ತಾನೆ

ಆ ದಿನದ ಧಾರ್ಮಿಕ ಆಚರಣೆಯ ಬೈಬಲ್ ವಾಚನಗಳಾದ ಏಳು ಮಕಬಾಯ ಸಹೋದರರು ಮತ್ತು ಅವರ ತಾಯಿಯ ಹುತಾತ್ಮತ್ವದ ಘಟನೆ ಹಾಗೂ ಪ್ರೇಷಿತರ ಪೌಲನ ಪತ್ರವನ್ನು ಕುರಿತು ಮಾತನಾಡಿದ ಕಾರ್ಡಿನಲ್ ಪರೋಲಿನ್ ರವರು, ಕ್ರಿಸ್ತನಿಗೆ ಸೇರಿದವರಾಗಿರುವುದು ಯಾವುದೇ ರೀತಿಯ ರಾಜಿಗೆ ಒಳಗಾಗುವ ಪ್ರಲೋಭನೆಗಿಂತ ಮೇಲಾದದ್ದು ಎಂದು ಒತ್ತಿಹೇಳಿದರು.

ಇದು ಸಂತ ಅಗಾಥಾಳ ಜೀವನದಲ್ಲಿಯೂ ಸ್ಪಷ್ಟವಾಗಿ ಕಾಣುತ್ತದೆ. ಅವರ ಹುತಾತ್ಮತ್ವವು “ಮೊದಲನೆಯದಾಗಿ ಅವರು ಅನುಭವಿಸಿದ ಹಿಂಸೆಯ ಕಥೆಯಲ್ಲ, ಯಾವುದೇ ಹಿಂಸೆಯೂ ನಂದಿಸಲು ಸಾಧ್ಯವಾಗದ ಪ್ರೀತಿಯ ಅಭಿವ್ಯಕ್ತಿಯಾಗಿದೆ.”

ಇದೇ ಸಂಗತಿ ಪೌಲನಲ್ಲಿಯೂ ಕಾಣಿಸಿತು. ಅವರು ತಪ್ಪುಗ್ರಹಿಕೆ, ಹಿಂಸೆ ಮತ್ತು ದೌರ್ಬಲ್ಯಗಳನ್ನು ಅನುಭವಿಸಿದರೂ, “ಆಶ್ಚರ್ಯಕರವಾದ ಪ್ರಶಾಂತತೆಯಿಂದ ಕ್ರಿಸ್ತನನ್ನು ಸಾರುವುದನ್ನು” ಮುಂದುವರಿಸಿದರು.

ಅಧಿಕಾರ ದೇವರಿಗೆ ಸೇರಿದ್ದು, ಮನುಷ್ಯರಿಗೆ ಅಲ್ಲ

ಕಾರ್ಡಿನಲ್ ಪರೋಲಿನ್ ರವರ ಚಿಂತನೆ ಧರ್ಮ ಸಭೆಯತ್ತ ತಿರುಗಿತು. ಧರ್ಮ ಸಭೆ “ತನ್ನದೇ ಸಾಮರ್ಥ್ಯದಿಂದ ಬದುಕುವುದಿಲ್ಲ, ದೇವರ ಕೃಪೆಯಿಂದ ಬದುಕುತ್ತದೆ. ಅವಳ ಸದಸ್ಯರ ಸಾಮರ್ಥ್ಯಗಳ ಮೇಲೆ ಅವಳು ಸ್ಥಾಪಿತವಾಗಿಲ್ಲ, ಮಾನವ ದೌರ್ಬಲ್ಯಗಳ ಮೂಲಕವೂ ನಿರಂತರವಾಗಿ ಕಾರ್ಯನಿರ್ವಹಿಸುವ ಪ್ರಭುವಿನ ನಂಬಿಗಸ್ತಿಕೆಯ ಮೇಲೆ ಅವಳು ಸ್ಥಾಪಿತಳಾಗಿದ್ದಾಳೆ,” ಎಂದು ಅವರು ವಿವರಿಸಿದರು.

ನಂತರ ಅವರು ಪವಿತ್ರ ಗ್ರಂಥದಾದ್ಯಂತ ಕೇಳಿಬರುವ ಕರೆಯತ್ತ ಮರಳಿದರು: “ಭಯಪಡಬೇಡಿ.”

“ಇದು ಕೇವಲ ಮಾನಸಿಕ ಧೈರ್ಯ ತುಂಬುವ ಮಾತಲ್ಲ, ನಮ್ಮ ಕ್ರೈಸ್ತ ಜೀವನದ ಮೂಲಾಧಾರವೇ ಇದಾಗಿದೆ. ಪರೀಕ್ಷೆಗಳು ಮತ್ತು ಸಂಕಟಗಳಿಂದ ಮುಕ್ತವಾದ ಜೀವನವನ್ನು ಯೇಸು ವಾಗ್ದಾನ ಮಾಡುವುದಿಲ್ಲ, ಅದಕ್ಕಿಂತಲೂ ಮಹತ್ತರವಾದುದನ್ನು ಅವರು ವಾಗ್ದಾನ ಮಾಡುತ್ತಾರೆ,” ಎಂದು ಕಾರ್ಡಿನಲ್ ರವರು ಹೇಳಿದರು.

ನಂತರ ವಿಶ್ವದ ಅನೇಕ ಭಾಗಗಳಲ್ಲಿ ಹಿಂಸೆಗೆ ಒಳಗಾಗುತ್ತಿರುವ ಕ್ರೈಸ್ತರ ಕುರಿತು ಕಾರ್ಡಿನಲ್ ಪರೋಲಿನ್ ರವರು ಮಾತನಾಡಿದರು:

“ಆದ್ದರಿಂದ, ಈ ಸಂದರ್ಭದಲ್ಲಿ, ಪ್ರಪಂಚದ ವಿವಿಧ ಭಾಗಗಳಲ್ಲಿ ಚದರಿಹೋಗಿ ಪ್ರಭುವಿನ ನಾಮಕ್ಕಾಗಿ ಮತ್ತು ಅವರ ಸುವಾರ್ತೆಯ ನಿಮಿತ್ತ ಹಿಂಸೆಯನ್ನು ಅನುಭವಿಸುತ್ತಿರುವ ನಮ್ಮ ಎಲ್ಲ ಸಹೋದರ ಸಹೋದರಿಯರನ್ನು ಸ್ಮರಿಸಿ ಅವರಿಗಾಗಿ ಪ್ರಾರ್ಥಿಸೋಣ. ಆದರೆ, ಒಂದು ರೀತಿಯಲ್ಲಿ ಹೇಳುವುದಾದರೆ, ನಾವೂ ಕರೆಯಲ್ಪಟ್ಟಿರುವ ರಕ್ತರಹಿತ ಹುತಾತ್ಮತ್ವವೂ ಇದೆ ಎಂಬುದನ್ನು ಮರೆಯಬಾರದು,” ಎಂದು ಅವರು ಹೇಳಿದರು.

ದೈನಂದಿನ ಪಾವಿತ್ರ್ಯ — ನಂಬಿಗಸ್ತಿಕೆಯ ಹುತಾತ್ಮತ್ವ

ಹೀಗಾಗಿ ಕ್ರಿಸ್ತನ ಮೇಲಿನ ಷರತ್ತುರಹಿತ ಪ್ರೀತಿಯನ್ನು ವ್ಯಕ್ತಪಡಿಸಲು ಎರಡು ಮಾರ್ಗಗಳಿವೆ: ರಕ್ತದ ಹುತಾತ್ಮತ್ವ, ಮತ್ತು ಬಹುಶಃ ಅಷ್ಟಾಗಿ ಗೋಚರಿಸದ, ಪ್ರತಿಯೊಬ್ಬರೂ ತಮ್ಮ ದೈನಂದಿನ ಜೀವನದಲ್ಲಿ ಅನುಭವಿಸಬಹುದಾದ “ನಂಬಿಗಸ್ತಿಕೆಯ ದೈನಂದಿನ ಹುತಾತ್ಮತ್ವ.”

ಉದಾಹರಣೆಯಾಗಿ ಕಾರ್ಡಿನಲ್ ರವರು, ಸಂಕಷ್ಟಗಳ ನಡುವೆಯೂ ತಮ್ಮ ಪ್ರೀತಿಯನ್ನು ಕಾಪಾಡಿಕೊಳ್ಳುವ ದಂಪತಿಗಳು,ತಮ್ಮ ಮಕ್ಕಳನ್ನು ಕ್ರೈಸ್ತ ನಂಬಿಕೆಯಲ್ಲಿ ಬೆಳೆಸುವ ತಂದೆ-ತಾಯಿಗಳು, ಬಾಹ್ಯ ಪ್ರದರ್ಶನದ ಸಂಸ್ಕೃತಿಗೆ ಮಣಿಯಲು ನಿರಾಕರಿಸುವ ಯುವಜನರು, ತಮ್ಮ ಜೀವನವನ್ನು ಉದಾರವಾಗಿ ಅರ್ಪಿಸುವ ಪುರೋಹಿತರು ಮತ್ತು ಸಮರ್ಪಿತ ಪುರುಷರು ಹಾಗೂ ಮಹಿಳೆಯರು, ವಿಶ್ವಾಸದಿಂದ ತಮ್ಮ ಸಂಕಟಗಳನ್ನು ದೇವರಿಗೆ ಅರ್ಪಿಸುವ ವೃದ್ಧರು, ಮತ್ತು ಪ್ರತಿದಿನ ಮೌನವಾಗಿ ರಾಜಿಗಿಂತ ನ್ಯಾಯವನ್ನು, ಅನುಕೂಲಕ್ಕಿಂತ ಸತ್ಯವನ್ನು, ಪ್ರತೀಕಾರಕ್ಕಿಂತ ಕ್ಷಮೆಯನ್ನು ಆಯ್ಕೆಮಾಡುವ ಎಲ್ಲರನ್ನು ಉಲ್ಲೇಖಿಸಿದರು.

ಇದೇ ಎರಡನೇ ವ್ಯಾಟಿಕನ್ ಕೌನ್ಸಿಲ್ ಮಾತನಾಡಿದ ದೈನಂದಿನ ಪಾವಿತ್ರ್ಯವಾಗಿದೆ, ಎಂದು ಜಗದ್ಗುರುಗಳ ಅಧಿಕಾರ ಸ್ಥಳದ ರಾಜ್ಯ ಕಾರ್ಯದರ್ಶಿ ಒತ್ತಿಹೇಳಿದರು.

ಮತ್ತಷ್ಟು ಕೆಟ್ಟದ್ದರಿಂದ ಕೆಟ್ಟದ್ದನ್ನು ಜಯಿಸಲು ಸಾಧ್ಯವಿಲ್ಲ

ಕೊನೆಯಲ್ಲಿ, ಕ್ಯಾಟಾನಿಯಾ ನಂಬಿಕೆ, ಸಂಸ್ಕೃತಿ, ಜನಭಕ್ತಿ ಮತ್ತು ದಾನಶೀಲತೆಯ ಅಪಾರ ಪರಂಪರೆಯನ್ನು ಹೊಂದಿದೆ ಎಂದು ಕಾರ್ಡಿನಲ್ ಪರೋಲಿನ್ ರವರು ಹೇಳಿದರು. ಈ ಪರಂಪರೆಯನ್ನು ವ್ಯರ್ಥಗೊಳಿಸಬಾರದು ಅಥವಾ ಫಲರಹಿತವಾಗಿಸಬಾರದು, ಬದಲಾಗಿ ಅದು ಫಲ ನೀಡುವಂತೆ ಸಂರಕ್ಷಿಸಬೇಕು ಎಂದು ಅವರು ಕರೆ ನೀಡಿದರು.

ಆದ್ದರಿಂದ ಸಂತರ ಬೋಧನೆಯನ್ನು ದೃಢವಾಗಿ ಮನಸ್ಸಿನಲ್ಲಿಟ್ಟುಕೊಂಡು ಕೆಟ್ಟದ್ದನ್ನು ಮತ್ತಷ್ಟು ಕೆಟ್ಟದ್ದರಿಂದ ಜಯಿಸಲು ಸಾಧ್ಯವಿಲ್ಲ, ಬದಲಾಗಿ ಶಿಲುಬೆಯಿಂದ ಹುಟ್ಟುವ ಪ್ರೀತಿಯಿಂದ ಮಾತ್ರ ಅದನ್ನು ಜಯಿಸಬಹುದು. ಆ ಪ್ರೀತಿ ಇತಿಹಾಸವನ್ನು ಒಳಗಿನಿಂದಲೇ ಪರಿವರ್ತಿಸುತ್ತದೆ  ಎಂಬ ಸತ್ಯದ ಆಧಾರದ ಮೇಲೆ, ಈ ಪ್ರದೇಶ ಎದುರಿಸುತ್ತಿರುವ ಅನೇಕ ಸವಾಲುಗಳನ್ನು ಎದುರಿಸಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.

ಅವುಗಳಲ್ಲಿ ಬಡತನ, ಅಸಮಾನತೆ, ತಮ್ಮ ಭವಿಷ್ಯವನ್ನು ಬೇರೆಡೆ ಹುಡುಕಲು ಅನಿವಾರ್ಯವಾಗಿ ವಲಸೆ ಹೋಗುತ್ತಿರುವ ಅನೇಕ ಯುವಜನರ ದುಸ್ಥಿತಿ, ಕುಟುಂಬಗಳು ಎದುರಿಸುತ್ತಿರುವ ಸಂಕಷ್ಟಗಳು ಹಾಗೂ ಹೊಸ ರೂಪಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಭೌತಿಕ ಮತ್ತು ಆಧ್ಯಾತ್ಮಿಕ ಬಡತನ ಸೇರಿವೆ.

18 ಆಗಸ್ಟ್ 2026, 21:09