ಆರ್ಚ್‌ಬಿಷಪ್ ಗ್ಯಾಲಘರ್ ರಷ್ಯಾ ಭೇಟಿಯನ್ನು ಆರಂಭಿಸಿದರು.
ವ್ಯಾಟಿಕನ್ ವರದಿ
ಮುಂಬರುವ ದಿನಗಳು ಹಲವು ಮಹತ್ವದ ಸಭೆಗಳಿಂದ ಕೂಡಿರಲಿವೆ. ರಷ್ಯಾದ ಅಧಿಕಾರಿಗಳು, ಮಾಸ್ಕೋ ಪ್ಯಾಟ್ರಿಯಾರ್ಕೇಟ್‌ನ ಪ್ರತಿನಿಧಿಗಳು ಹಾಗೂ ಕಥೊಲಿಕ ಸಮುದಾಯದೊಂದಿಗೆ ಆರ್ಚ್‌ಬಿಷಪ್ ಗ್ಯಾಲಘರ್ ಸಭೆಗಳನ್ನು ನಡೆಸಲಿದ್ದಾರೆ.
ಜಗದ್ಗುರುಗಳ ಅಧಿಕಾರ ಸ್ಥಳದ ರಾಜ್ಯಗಳೊಂದಿಗೆ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳೊಂದಿಗೆ ಸಂಬಂಧಗಳಿಗಾಗಿ ಕಾರ್ಯದರ್ಶಿಯಾಗಿರುವ ಆರ್ಚ್‌ಬಿಷಪ್ ಪಾಲ್ ರಿಚರ್ಡ್ ಗ್ಯಾಲಘರ್ ರವರ ರಷ್ಯಾ ಒಕ್ಕೂಟದ ಭೇಟಿಯ ಕಾರ್ಯಕ್ರಮವನ್ನು ರಾಜ್ಯ ಕಾರ್ಯಾಲಯದ ಟೆರ್ಜಾ ಲೊಜ್ಜಿಯಾ ಖಾತೆಯು ಎಕ್ಸ್‌ನಲ್ಲಿ ಪ್ರಕಟಿಸಿದೆ.
ಆರ್ಚ್‌ಬಿಷಪ್ ಇಂದು ಮಾಸ್ಕೋಗೆ ಆಗಮಿಸಲಿದ್ದು, ಆಗಸ್ಟ್ 28ರಂದು ರೋಮಿಗೆ ಮರಳಲಿದ್ದಾರೆ.
ನಾಳೆ, ಆಗಸ್ಟ್ 25 ಮಂಗಳವಾರ, ಆರ್ಚ್‌ಬಿಷಪ್ ಅವರು ರಷ್ಯಾ ಒಕ್ಕೂಟದ ವಿದೇಶಾಂಗ ಸಚಿವ ಸೆರ್ಗೇಯ್ ಲಾವ್ರೊವ್ ರವರನ್ನು ಭೇಟಿಯಾಗಲಿದ್ದಾರೆ. ಬಳಿಕ ಮಾಸ್ಕೋ ಪ್ಯಾಟ್ರಿಯಾರ್ಕೇಟ್‌ನ ಬಾಹ್ಯ ಧರ್ಮ ಸಭೆಯ ಸಂಬಂಧಗಳ ವಿಭಾಗದ ಅಧ್ಯಕ್ಷ ವೊಲೊಕೊಲಾಮ್ಸ್ಕ್‌ನ ಮೆಟ್ರೊಪಾಲಿಟನ್ ಆಂಥನಿ ರವರನ್ನು ಭೇಟಿ ಮಾಡಲಿದ್ದಾರೆ.
ಮರುದಿನ, ಆಗಸ್ಟ್ 26 ಬುಧವಾರ, ಆರ್ಚ್‌ಬಿಷಪ್ ಗ್ಯಾಲಘರ್ ರವರು ರಷ್ಯಾ ಒಕ್ಕೂಟದ ಅಧ್ಯಕ್ಷರ ವಿದೇಶಾಂಗ ನೀತಿ ಸಲಹೆಗಾರ ಯೂರಿ ಉಶಾಕೊವ್ ಅವರನ್ನು ಭೇಟಿಯಾಗಲಿದ್ದಾರೆ.
ಜಾಗತಿಕ ಮಟ್ಟದಲ್ಲಿ ಅಂತರರಾಷ್ಟ್ರೀಯ ಸಂಬಂಧಗಳು ಅತ್ಯಂತ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿರುವ ಈ ಸಂದರ್ಭದಲ್ಲಿ ಕೂಡ, ಸಂವಾದದ ಮಾರ್ಗವನ್ನು ಮುಂದುವರಿಸಲು ಜಗದ್ಗುರುಗಳ ಅಧಿಕಾರ ಸ್ಥಳದ ದೃಢಸಂಕಲ್ಪ ಹೊಂದಿದೆ ಎಂಬುದನ್ನು ಈ ಕಾರ್ಯಕ್ರಮ ಮತ್ತೊಮ್ಮೆ ದೃಢಪಡಿಸುತ್ತದೆ.
ಆರ್ಚ್‌ಬಿಷಪ್ ಗ್ಯಾಲಘರ್ ರವರ ಭೇಟಿಯು ರಷ್ಯಾದ ಕಥೊಲಿಕ ಸಮುದಾಯವನ್ನು ಭೇಟಿಯಾಗುವ ಅವಕಾಶವನ್ನೂ ಒದಗಿಸಲಿದೆ. ಅವರು ಆಗಸ್ಟ್ 27 ಗುರುವಾರದಂದು ಕಥೊಲಿಕ ಸಮುದಾಯದೊಂದಿಗೆ ಭೇಟಿಯಾಗಲಿದ್ದಾರೆ.
ಆ ದಿನವು ಧರ್ಮಗುರುಗಳು ಹಾಗೂ ಧಾರ್ಮಿಕ ಪುರುಷರು ಮತ್ತು ಮಹಿಳೆಯರೊಂದಿಗೆ ಸಭೆಯ ಮೂಲಕ ಆರಂಭವಾಗಲಿದೆ. ಬಳಿಕ ಮಾಸ್ಕೋದಲ್ಲಿರುವ ಪವಿತ್ರ ಕನ್ಯಾಮರಿಯಮ್ಮನವರ ನಿರ್ಮಲ ಗರ್ಭಧಾರಣೆಯ ಮಹಾದೇವಾಲಯದಲ್ಲಿ ಪವಿತ್ರ ಬಲಿಪೂಜೆ ನೆರವೇರಿಸಲಾಗುವುದು.
ನಂತರ, ರಾಜ್ಯಗಳೊಂದಿಗೆ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳೊಂದಿಗೆ ಸಂಬಂಧಗಳ ಕಾರ್ಯದರ್ಶಿ ಬಿಷಪ್‌ಗಳನ್ನು ಭೇಟಿಯಾಗಲಿದ್ದಾರೆ.
ರಷ್ಯಾದ ಕಥೊಲಿಕ ಧರ್ಮ ಸಭೆ ಸಂಖ್ಯೆಯ ದೃಷ್ಟಿಯಿಂದ ಸಣ್ಣ ಸಮುದಾಯವಾಗಿದ್ದು, ವಿಶಾಲವಾದ ಭೌಗೋಳಿಕ ಪ್ರದೇಶದಾದ್ಯಂತ ಚದುರಿಕೊಂಡಿದೆ. ಇದರ ಧಾರ್ಮಿಕ ಆಡಳಿತ ವ್ಯವಸ್ಥೆಯಲ್ಲಿ ಮಾಸ್ಕೋದಲ್ಲಿರುವ ದೇವಮಾತೆಯ ಮಹಾಧರ್ಮಪ್ರಾಂತ್ಯ, ಸಾರಾತೊವ್‌ನ ಸಂತ ಕ್ಲೆಮೆಂಟ್ ಧರ್ಮಪ್ರಾಂತ್ಯ, ನೊವೊಸಿಬಿರ್ಸ್ಕ್‌ನ ರೂಪಾಂತರ ಧರ್ಮಪ್ರಾಂತ್ಯ ಮತ್ತು ಇರ್ಕುಟ್ಸ್ಕ್‌ನ ಸಂತ ಜೋಸೆಫ್ ಧರ್ಮಪ್ರಾಂತ್ಯಗಳು ಸೇರಿವೆ.
ಆರ್ಚ್‌ಬಿಷಪ್ ಗ್ಯಾಲಘರ್ ರಷ್ಯಾದ ರಾಜಧಾನಿಗೆ ಭೇಟಿ ನೀಡುತ್ತಿರುವುದು ಇದೇ ಮೊದಲಲ್ಲ. ಅವರ ಇತ್ತೀಚಿನ ಭೇಟಿ 2021ರ ನವೆಂಬರ್‌ನಲ್ಲಿ ನಡೆದಿತ್ತು. ಆ ಸಂದರ್ಭದಲ್ಲಿ ಅವರು ಪ್ರಧಾನಮಂತ್ರಿ ಮಿಖಾಯಿಲ್ ಮಿಶುಸ್ಟಿನ್, ವಿದೇಶಾಂಗ ಸಚಿವ ಸೆರ್ಗೇಯ್ ಲಾವ್ರೊವ್ ಹಾಗೂ ಆಗ ಮಾಸ್ಕೋ ಪ್ಯಾಟ್ರಿಯಾರ್ಕೇಟ್‌ನ ಬಾಹ್ಯ ಧರ್ಮ ಸಭೆಯ ಸಂಬಂಧಗಳ ವಿಭಾಗದ ಮುಖ್ಯಸ್ಥರಾಗಿದ್ದ ಮೆಟ್ರೊಪಾಲಿಟನ್ ಹಿಲಾರಿಯನ್ ಅವರನ್ನು ಭೇಟಿಯಾಗಿದ್ದರು.