ಹುಡುಕಿ

ಮೆಕ್ಸಿಕೋದಲ್ಲಿ ಶಾಂತಿಗಾಗಿ ರಾಷ್ಟ್ರೀಯ ಸಂವಾದದ ಪ್ರತಿನಿಧಿಗಳೊಂದಿಗೆ ಕಾರ್ಡಿನಲ್ ಪಿಯೆತ್ರೋ ಪರೋಲಿನ್ ರವರು. ಮೆಕ್ಸಿಕೋದಲ್ಲಿ ಶಾಂತಿಗಾಗಿ ರಾಷ್ಟ್ರೀಯ ಸಂವಾದದ ಪ್ರತಿನಿಧಿಗಳೊಂದಿಗೆ ಕಾರ್ಡಿನಲ್ ಪಿಯೆತ್ರೋ ಪರೋಲಿನ್ ರವರು. 

ಕಾರ್ಡಿನಲ್ ಪರೋಲಿನ್ ರವರು: ಇತರರ ನೋವಿನ ಬಗ್ಗೆ ಸಹಾನುಭೂತಿಯಿಂದ ಸ್ಪಂದಿಸುವುದರಿಂದಲೇ ಶಾಂತಿ ಆರಂಭವಾಗುತ್ತದೆ.

ಮೆಕ್ಸಿಕೊ ಪ್ರವಾಸದ ವೇಳೆ, ಕಾರ್ಡಿನಲ್ ಪಿಯೆತ್ರೊ ಪರೋಲಿನ್ ರವರು ಶಾಂತಿಗಾಗಿ ರಾಷ್ಟ್ರೀಯ ಸಂವಾದದ ಪ್ರತಿನಿಧಿಗಳನ್ನು ಭೇಟಿಯಾಗಿ, ಸ್ಥಳೀಯ ಸಮುದಾಯಗಳಲ್ಲಿ ಶಾಂತಿ ನಿರ್ಮಾಣಕ್ಕಾಗಿ ಅವರು ಕೈಗೊಂಡಿರುವ ಪ್ರಯತ್ನಗಳ ಅನುಭವಗಳನ್ನು ನೇರವಾಗಿ ಆಲಿಸಿದರು.

ವ್ಯಾಟಿಕನ್ ವರದಿ

ಆಗಸ್ಟ್ 5, ಬುಧವಾರದಂದು, ಕಾರ್ಡಿನಲ್ ಪಿಯೆತ್ರೊ ಪರೋಲಿನ್ ರವರು ಶಾಂತಿಗಾಗಿ ರಾಷ್ಟ್ರೀಯ ಸಂವಾದದ ಪ್ರತಿನಿಧಿಗಳನ್ನು ಭೇಟಿಯಾಗಿ, ದೇಶದ ವಿವಿಧ ಪ್ರದೇಶಗಳಲ್ಲಿ ಶಾಂತಿಯನ್ನು ಬೆಳೆಸುವ ಕಾರ್ಯದಲ್ಲಿ ತೊಡಗಿರುವವರ ಅನುಭವಗಳನ್ನು ನೇರವಾಗಿ ಆಲಿಸಿದರು ಎಂದು ಮೆಕ್ಸಿಕೊದ ಬಿಷಪ್‌ಗಳ ಸಮಾವೇಶವು ತಿಳಿಸಿದೆ.

ಈ ಸಭೆಯಲ್ಲಿ ಶಿಕ್ಷಣ ತಜ್ಞರು, ಸಾರ್ವಜನಿಕ ಅಧಿಕಾರಿಗಳು, ಧಾರ್ಮಿಕ ನಾಯಕರು, ಕಾಣೆಯಾಗಿರುವ ತಮ್ಮ ಪ್ರೀತಿಪಾತ್ರರನ್ನು ಹುಡುಕುತ್ತಿರುವ ತಾಯಂದಿರು, ಪೊಲೀಸ್ ಅಧಿಕಾರಿಗಳು, ಉದ್ಯಮ ಕ್ಷೇತ್ರದ ನಾಯಕರು ಹಾಗೂ ಸ್ಯಾನ್ ಲೂಯಿಸ್ ಪೊಟೋಸಿ, ಓಆಕ್ಸಾಕಾ, ಕೆರೆತಾರೊ, ಪ್ಯೂಬ್ಲಾ, ಮೆಕ್ಸಿಕೊ ರಾಜ್ಯ ಮತ್ತು ಮೆಕ್ಸಿಕೊ ನಗರಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

ಇತರರ ನೋವಿನ ಬಗ್ಗೆ ಸಹಾನುಭೂತಿ ಹೊಂದುವುದರಿಂದಲೇ ಶಾಂತಿ ಆರಂಭವಾಗುತ್ತದೆ ಎಂದು ಕಾರ್ಡಿನಲ್ ಪರೋಲಿನ್ ರವರು ಒತ್ತಿಹೇಳಿದರು. ಪ್ಯೂಬ್ಲಾ ರಾಜ್ಯದಲ್ಲಿ ಕಾಣೆಯಾಗಿರುವ ತನ್ನ ಮಗನನ್ನು ಹುಡುಕುತ್ತಿರುವ ಒಬ್ಬ ತಾಯಿಯ ಸಾಕ್ಷ್ಯವನ್ನು ಉಲ್ಲೇಖಿಸಿದ ಅವರು, ಶಾಂತಿಯು ಒಂದು ಕುಶಲಕರ್ಮಿಯ ಕೆಲಸದಂತಿದ್ದು ಅದನ್ನು ತಾಳ್ಮೆಯಿಂದ ದಿನದಿಂದ ದಿನಕ್ಕೆ ನಿರ್ಮಿಸಬೇಕಾಗುತ್ತದೆ ಎಂದು ಸ್ಮರಿಸಿದರು. ಶಾಂತಿ ನಿರ್ಮಾಣದ ತಮ್ಮ ಪ್ರಯತ್ನಗಳಲ್ಲಿ ಧೈರ್ಯ ಕಳೆದುಕೊಳ್ಳಬಾರದು ಎಂದು ಅವರು ಸಭಿಕರನ್ನು ಪ್ರೋತ್ಸಾಹಿಸಿದರು. ಹಿಂಸಾಚಾರದಿಂದ ಬಳಲುತ್ತಿರುವ ವಿಶ್ವದ ಇತರ ಭಾಗಗಳಿಗೆ ಈ ಅನುಭವವು ಪ್ರೇರಣೆಯ ಮೂಲವಾಗಬಹುದು ಎಂದೂ ಅವರು ಹೇಳಿದರು.

ಶಾಂತಿ ನಿರ್ಮಾಣದಲ್ಲಿ ಸಹಯೋಗದ ಹಲವು ಉದಾಹರಣೆಗಳನ್ನು ಸಭೆಯಲ್ಲಿ ಹಂಚಿಕೊಳ್ಳಲಾಯಿತು ಎಂದು ಮೆಕ್ಸಿಕೊದ ಬಿಷಪ್‌ಗಳ ಸಮಾವೇಶವು ತಿಳಿಸಿದೆ. ಕಾಣೆಯಾಗಿರುವ ತಮ್ಮ ಪ್ರೀತಿಪಾತ್ರರನ್ನು ಹುಡುಕುತ್ತಿರುವ ಕುಟುಂಬಗಳ ಸಂಘಟನೆಗಳು ಮತ್ತು ಪ್ಯೂಬ್ಲಾ ರಾಜ್ಯದ ಸಾರ್ವಜನಿಕ ಅಧಿಕಾರಿಗಳು ಒಟ್ಟಾಗಿ ಕೈಗೊಂಡ ಪ್ರಯತ್ನಗಳ ಕುರಿತು ಒಂದು ಸಾಕ್ಷ್ಯದಲ್ಲಿ ವಿವರಿಸಲಾಯಿತು. ಶಾಂತಿಗಾಗಿ ರಾಷ್ಟ್ರೀಯ ಸಂವಾದವು ನಾಗರಿಕ ಹಾಗೂ ರಾಜಕೀಯ ನಾಯಕತ್ವವನ್ನು ಬೆಳೆಸುವ ತರಬೇತಿ ವೇದಿಕೆಯಾಗಿ ರೂಪುಗೊಂಡಿದೆ ಎಂಬುದನ್ನೂ ಅದು ತೋರಿಸಿತು.

ಎಕತೇಪೆಕ್‌ನ ಒಬ್ಬ ಪೊಲೀಸ್ ಅಧಿಕಾರಿ, ಶಾಂತಿಯನ್ನು ಉತ್ತೇಜಿಸಲು ಹಾಗೂ ಸಮುದಾಯ ಆಧಾರಿತ ಪೊಲೀಸ್ ವ್ಯವಸ್ಥೆಯ ಮಾದರಿಯನ್ನು ಜಾರಿಗೆ ತರಲು ವಿವಿಧ ಕ್ರೈಸ್ತ ಧರ್ಮ ಸಭೆಗಳ ನಡುವೆ ನಡೆಯುತ್ತಿರುವ ಸಹಕಾರದ ಕುರಿತು ಮಾತನಾಡಿದರು. ಕೆರೆತಾರೊದ ಪ್ರತಿನಿಧಿಗಳು ಸಾಂಪ್ರದಾಯಿಕ ಬಾಲೆರೊ ಎಂಬ ಕಪ್-ಮತ್ತು-ಚೆಂಡಿನ ಆಟಿಕೆಯನ್ನು ಉದಾಹರಣೆಯಾಗಿ ಬಳಸಿಕೊಂಡು, ವಿಭಿನ್ನ ಹಿನ್ನೆಲೆಯ ಜನರನ್ನು ಒಂದಾಗಿಸುವ ಕೊಂಡಿಯಾಗಿ ಶಾಂತಿಗಾಗಿ ರಾಷ್ಟ್ರೀಯ ಸಂವಾದವು ಕಾರ್ಯನಿರ್ವಹಿಸುತ್ತಿದೆ ಎಂಬುದನ್ನು ವಿವರಿಸಿದರು. ಓಆಕ್ಸಾಕಾದ ಪ್ರತಿನಿಧಿಗಳು, ಅಪಾಯ ಹೆಚ್ಚಿರುವ ಪ್ರದೇಶಗಳಲ್ಲಿ ಸೇವೆ ಸಲ್ಲಿಸುತ್ತಿರುವ ಯಾಜಕರಿಗೆ ರಾಷ್ಟ್ರೀಯ ಸಂವಾದವು ಹೇಗೆ ಸಾಂತ್ವನ ಮತ್ತು ಬೆಂಬಲವನ್ನು ಒದಗಿಸಿದೆ ಎಂಬುದನ್ನು ವಿವರಿಸಿದರು. ಸ್ಯಾನ್ ಲೂಯಿಸ್ ಪೊಟೋಸಿಯ ಪ್ರತಿನಿಧಿಯು, ಶಾಂತಿ ನಿರ್ಮಾಣದ ಕಾರ್ಯದಲ್ಲಿ ಇನ್ನಷ್ಟು ಧರ್ಮ ಕೇಂದ್ರಗಳು ಭಾಗವಹಿಸುವಂತೆ ಪ್ರೋತ್ಸಾಹಿಸುವುದು ಎದುರಿನ ಸವಾಲಾಗಿದೆ ಎಂದು ತಿಳಿಸಿದರು.

ಕಾರ್ಡಿನಲ್ ಪಿಯೆತ್ರೊ ಪರೋಲಿನ್ ರವರು ಶಾಂತಿಗಾಗಿ ರಾಷ್ಟ್ರೀಯ ಸಂವಾದದ ಸದಸ್ಯರ ಮಾತುಗಳನ್ನು ಅತ್ಯಂತ ಗಮನವಿಟ್ಟು ಆಲಿಸಿದರು. ತಾಳ್ಮೆಯಿಂದ ಶಾಂತಿಯನ್ನು ನಿರ್ಮಿಸುವ ಈ ದೈನಂದಿನ ಪ್ರಯತ್ನದಲ್ಲಿ ಅವರು ನಿರಂತರವಾಗಿ ಮುಂದುವರಿಯಲು ತೋರಿಸುತ್ತಿರುವ ಬದ್ಧತೆಗೆ ತಮ್ಮ ಐಕ್ಯಮತವನ್ನು ವ್ಯಕ್ತಪಡಿಸಿದರು. ಹಿಂಸಾಚಾರದಿಂದ ಬಳಲುತ್ತಿರುವ ದೇಶದ ಅನೇಕ ಭಾಗಗಳಿಗೆ ಈ ಚಳವಳಿಯು ಭರವಸೆಯ ಮೂಲವಾಗಿದೆ ಎಂದು ಅವರು ಹೇಳಿದರು. ಇದಕ್ಕೆ ಜಗದ್ಗುರುಗಳ ಅಧಿಕಾರ ಸ್ಥಳವು ಬೆಂಬಲವಿದೆ ಎಂದು ಅವರು ದೃಢಪಡಿಸಿದರು.

ತಮ್ಮ ಕಾರ್ಯಕ್ಕೆ ದೊರೆತ ಈ ಮಾನ್ಯತೆಗಾಗಿ ಹಾಗೂ ಶಾಂತಿ ನಿರ್ಮಾಣದ ತಮ್ಮ ಸಾಮೂಹಿಕ ಬದ್ಧತೆಯಲ್ಲಿ ತಮ್ಮೊಂದಿಗೆ ನಿಕಟವಾಗಿ ಇರಲು ಕಾರ್ಡಿನಲ್ ಪರೋಲಿನ್ ರವರು ತೋರಿದ ಇಚ್ಛೆಗಾಗಿ ಸಭಿಕರು ಕೃತಜ್ಞತೆ ವ್ಯಕ್ತಪಡಿಸಿದರು.

07 ಆಗಸ್ಟ್ 2026, 21:31