ಹುಡುಕಿ

ವ್ಯಾಟಿಕನ್ ಉದ್ಯಾನವನಗಳಲ್ಲಿರುವ 'ಮಾಟರ್ ಎಕ್ಲೇಸಿಯಾ'  ಮಠದ ಬಳಿಯಿರುವ ಜಗದ್ಗುರುಗಳ ಉದ್ಯಾನವನ. ವ್ಯಾಟಿಕನ್ ಉದ್ಯಾನವನಗಳಲ್ಲಿರುವ 'ಮಾಟರ್ ಎಕ್ಲೇಸಿಯಾ' ಮಠದ ಬಳಿಯಿರುವ ಜಗದ್ಗುರುಗಳ ಉದ್ಯಾನವನ. 

ವ್ಯಾಟಿಕನ್ ಉದ್ಯಾನವನದಲ್ಲಿರುವ ಜಗದ್ಗುರುಗಳ ಉದ್ಯಾನವು ಶೇ. 100ರಷ್ಟು ಸಾವಯವ ಕೃಷಿ ಪದ್ಧತಿಗೆ ಪರಿವರ್ತನೆ.

ಮಧ್ಯಯುಗದಲ್ಲಿ ಜಗದ್ಗುರು IIIನೇ ನಿಕೋಲಸ್ ಒರ್ಸಿನಿ ರವರ ಆದೇಶದ ಮೇರೆಗೆ ಸ್ಥಾಪಿಸಲಾದ ವ್ಯಾಟಿಕನ್ ಉದ್ಯಾನವನದಲ್ಲಿರುವ ಮಾತರ್ ಎಕ್ಲೆಸಿಯೆ ಮಠದ ಪಕ್ಕದ ಜಗದ್ಗುರುಗಳ ಉದ್ಯಾನವು ಶೇ. 100ರಷ್ಟು ಸಾವಯವ ಕೃಷಿ ಪದ್ಧತಿಗೆ ಪರಿವರ್ತನೆಯಾಗಿದೆ. ಜಗದ್ಗುರು ಫ್ರಾನ್ಸಿಸ್ ರವರ ‘ಲೌದಾತೊ ಸಿ’ ವಿಶ್ವಪತ್ರಿಕೆಯಲ್ಲಿ ಪ್ರತಿಪಾದಿಸಿರುವ ಸೃಷ್ಟಿಯ ಸಂರಕ್ಷಣೆಯ ತತ್ವದ ಅನುಸಾರ ಈ ಉದ್ಯಾನವನ್ನು ನಿರ್ವಹಿಸಲಾಗುತ್ತಿದೆ.

ವ್ಯಾಟಿಕನ್ ವರದಿ

ವ್ಯಾಟಿಕನ್ ಉದ್ಯಾನವನದಲ್ಲಿರುವ ಮಾತರ್ ಎಕ್ಲೆಸಿಯೆ ಮಠದ ಪಕ್ಕದಲ್ಲಿರುವ ತರಕಾರಿ ತೋಟವು ಸಂಪೂರ್ಣವಾಗಿ ಸಾವಯವ ಕೃಷಿ ಪದ್ಧತಿಗೆ ಪರಿವರ್ತನೆಯಾಗುತ್ತಿದೆ.

ಜಗದ್ಗುರು ಫ್ರಾನ್ಸಿಸ್ ರವರ ಪರಿಸರ ಕುರಿತ ವಿಶ್ವಪತ್ರಿಕೆ ‘ಲೌದಾತೊ ಸಿ’ಯಲ್ಲಿ ಪ್ರತಿಪಾದಿಸಿರುವ ವಿಧಾನವನ್ನು ಅನುಸರಿಸಿ, ಇಲ್ಲಿ ಕೃಷಿಯ ಉದ್ದೇಶ ಗರಿಷ್ಠ ಪ್ರಮಾಣದಲ್ಲಿ ಉತ್ಪಾದನೆ ಮಾಡುವುದಲ್ಲ; ಬದಲಾಗಿ ಪ್ರತಿಯೊಂದು ಸಸ್ಯದ ಸ್ವಾಭಾವಿಕ ಬೆಳವಣಿಗೆಯ ಚಕ್ರವನ್ನು ಹಾಗೂ ಮಣ್ಣನ್ನು ಗೌರವಿಸುವುದಾಗಿದೆ.

ಕಳೆದ ನವೆಂಬರ್‌ನಲ್ಲಿ ಇಟಲಿಯ ಕೃಷಿ ವಿಜ್ಞಾನಿಗಳು ಮತ್ತು ಅರಣ್ಯ ವೃತ್ತಿಪರರನ್ನುದ್ದೇಶಿಸಿ ಮಾತನಾಡಿದ ಜಗದ್ಗುರು XIVನೇ ಲಿಯೋರವರ ಈ “ಸೃಷ್ಟಿಯ ಸಂರಕ್ಷಣೆಯ ಕಾಳಜಿ”ಯ ಮಹತ್ವವನ್ನು ಒತ್ತಿಹೇಳಿದ್ದರು.

ತಮ್ಮ ಕೆಲಸವನ್ನು “ನಮ್ಮ ತಾಯಿ ಭೂಮಿಯ ಮೇಲಿನ ಮತ್ತು ಭವಿಷ್ಯದ ಪೀಳಿಗೆಗಳ ಮೇಲಿನ ಪ್ರೀತಿಯ ಒಂದು ಪ್ರಾಯೋಗಿಕ ರೂಪ”ವಾಗಿ ಕಾಣುವಂತೆ ಅವರು ಅವರಿಗೆ ಕರೆ ನೀಡಿದರು. ಏಕೆಂದರೆ ಭೂಮಿ “ಸ್ವಾಧೀನಪಡಿಸಿಕೊಳ್ಳುವ ವಸ್ತುವಲ್ಲ, ಬದಲಾಗಿ ಒಂದು ಕೊಡುಗೆ”ಯಾಗಿದೆ. ಅದನ್ನು “ಗೌರವ ಮತ್ತು ವಿವೇಕದಿಂದ” ಕೃಷಿ ಮಾಡುವವರು “ದೇವರ ಸೃಜನಶೀಲ ಕಾರ್ಯದಲ್ಲಿ ಪಾಲ್ಗೊಳ್ಳುತ್ತಾರೆ.”

ಭೂಮಿಯನ್ನು ಗೌರವಿಸುವ ಕೃಷಿ ಪದ್ಧತಿ

ಹಿಂದೆ, ಕ್ಯಾಸ್ಟೆಲ್ ಗಾಂಡೋಲ್ಫೊದಲ್ಲಿರುವ ಪಾಂಟಿಫಿಕಲ್ ವಿಲ್ಲಾಗಳಿಂದ ದೊರೆಯುತ್ತಿದ್ದ ಪ್ರಾಣಿಗಳ ಗೊಬ್ಬರವನ್ನು ಈ ತೋಟದಲ್ಲಿ ಬಳಸಲಾಗುತ್ತಿತ್ತು.

ಈಗ ಪ್ರಮಾಣೀಕರಿಸಲ್ಪಟ್ಟ, ಗುಳಿಗೆ ರೂಪದಲ್ಲಿರುವ ಸಾವಯವ ಗೊಬ್ಬರವನ್ನು ಮಾತ್ರ ಬಳಸಲಾಗುತ್ತಿದೆ. ಯಾವ ಋತು ಎಂಬುದನ್ನು ಹಾಗೂ ಬೆಳೆಸಲಾಗುತ್ತಿರುವ ಸಸ್ಯಗಳ ಅಗತ್ಯಗಳನ್ನು ಆಧರಿಸಿ ಗೊಬ್ಬರವನ್ನು ಆಯ್ಕೆ ಮಾಡಲಾಗುತ್ತದೆ.

ಉತ್ತಮ ಕೃಷಿ ಪದ್ಧತಿಗಳು ಸಸ್ಯ ಸಂರಕ್ಷಣಾ ಉತ್ಪನ್ನಗಳ ಅಗತ್ಯವನ್ನೂ ಕಡಿಮೆ ಮಾಡುತ್ತವೆ. ಏಕೆಂದರೆ ಬೆಳೆಗಳಿಗೆ ಹಾನಿ ಉಂಟುಮಾಡುವ ಮಟ್ಟಕ್ಕಿಂತ ಕಡಿಮೆ ಪ್ರಮಾಣದಲ್ಲಿಯೇ ಕೀಟಗಳ ಸಂಖ್ಯೆ ಮತ್ತು ಚಟುವಟಿಕೆಯನ್ನು ನಿಯಂತ್ರಿಸಲಾಗುತ್ತದೆ.

ಕಡ್ಡಾಯ ಪ್ರಮಾಣೀಕರಣಕ್ಕೆ ಒಳಪಡುವ ಚಿಕಿತ್ಸೆಗಳ ಕುರಿತು ನಿಯಮಾನುಸಾರ ಪ್ರತಿಯೊಂದು ಕ್ರಮವನ್ನೂ “ಹೊಲದ ದಾಖಲಾತಿ ಪುಸ್ತಕದಲ್ಲಿ” ದಾಖಲಿಸಲಾಗುತ್ತದೆ. ಆದರೆ ನೈಸರ್ಗಿಕ ಪದಾರ್ಥಗಳಿಗೆ ನೋಂದಣಿ ಅಗತ್ಯವಿಲ್ಲ.

ಬೆಳೆ ಪರಿವರ್ತನೆ ಸೇರಿದಂತೆ ನಿರ್ದಿಷ್ಟ ತಂತ್ರಗಳನ್ನು ಬಳಸುವ ಮೂಲಕ ಮಣ್ಣಿನ ಫಲವತ್ತತೆಯನ್ನು ಕಾಪಾಡಲಾಗುತ್ತದೆ. ಉದಾಹರಣೆಗೆ, ಹಸಿರು ಬೀನ್ಸ್‌ನಂತಹ ದ್ವಿದಳ ಧಾನ್ಯಗಳು ಸ್ವಾಭಾವಿಕವಾಗಿ ಸಾರಜನಕವನ್ನು ಮಣ್ಣಿನಲ್ಲಿ ಸ್ಥಿರಗೊಳಿಸುತ್ತವೆ.

ಈ ವರ್ಷ ಟೊಮ್ಯಾಟೊ ಗಿಡಗಳ ಮೇಲೆ ಸಮುದ್ರ ಸಸ್ಯಗಳಿಂದ ತಯಾರಿಸಿದ ಗೊಬ್ಬರವನ್ನು ಕೂಡ ಪರೀಕ್ಷಿಸಲಾಗುತ್ತಿದೆ.

ಸಸಿಗಳನ್ನು ಹೊರಗಿನಿಂದ ತರಲಾಗುತ್ತದೆ ಮತ್ತು ಅವುಗಳಿಗೆ ಈಗಾಗಲೇ ನೈಸರ್ಗಿಕ ವಿಧಾನಗಳ ಮೂಲಕ ಚಿಕಿತ್ಸೆ ನೀಡಲಾಗಿದೆ. ಸ್ವಂತ ನರ್ಸರಿಯನ್ನು ನಿರ್ವಹಿಸುವ ಬದಲು ಖರೀದಿಸಿದ ಸಸಿಗಳಿಗೆ ಆದ್ಯತೆ ನೀಡಲಾಗುತ್ತದೆ. ಇದರಿಂದ ಸಸ್ಯರೋಗಗಳು ಹರಡಿ ಇಡೀ ಬೆಳೆಗೆ ಹಾನಿಯಾಗುವ ಅಪಾಯವನ್ನು ಕಡಿಮೆ ಮಾಡಬಹುದು. ಆದಾಗ್ಯೂ, ಸ್ಥಳದಲ್ಲಿಯೇ ಒಂದು ನರ್ಸರಿಯ ಜೊತೆಗೆ ಬೋನ್ಸಾಯಿ ಗಿಡಗಳಿಗಾಗಿ ಹಸಿರುಮನೆ ನಿರ್ಮಿಸುವ ಯೋಜನೆಗಳನ್ನೂ ಈಗಾಗಲೇ ಪರಿಶೀಲಿಸಲಾಗುತ್ತಿದೆ.

ಸನ್ಯಾಸಿನಿಯರೊಂದಿಗೆ ತೋಟಗಾರ ಮತ್ತು ಯುವ ಸಹಾಯಕರು

ಈ ತೋಟದ ಮೇಲ್ವಿಚಾರಣೆಯನ್ನು ವ್ಯಾಟಿಕನ್ ನಗರ-ರಾಜ್ಯದ ಗವರ್ನರೇಟ್‌ನ ಮೂಲಸೌಕರ್ಯ ಮತ್ತು ಸೇವೆಗಳ ನಿರ್ದೇಶನಾಲಯದ ಅಧೀನದಲ್ಲಿರುವ ಉದ್ಯಾನವನಗಳು ಮತ್ತು ಪರಿಸರ ಸೇವಾ ವಿಭಾಗ ನಿರ್ವಹಿಸುತ್ತದೆ. ಈ ವಿಭಾಗಕ್ಕೆ ಅರಣ್ಯ ತಜ್ಞ ಸ್ಟೆಫಾನೊ ಜಿಯಾಂಪಾಲೊ ನೇತೃತ್ವ ವಹಿಸಿದ್ದಾರೆ. ಮೂಲಸೌಕರ್ಯ ಮತ್ತು ಸೇವೆಗಳ ನಿರ್ದೇಶನಾಲಯಕ್ಕೆ ನಿರ್ದೇಶಕ ಸಾಲ್ವತೊರೆ ಫರೀನಾ ನೇತೃತ್ವ ವಹಿಸಿದ್ದಾರೆ.

ಸುಮಾರು 400 ಚದರ ಮೀಟರ್‌ಗಿಂತ ಸ್ವಲ್ಪ ಕಡಿಮೆ ವಿಸ್ತೀರ್ಣದ ನಾಲ್ಕು ಹಂತದ ಭೂಭಾಗದಲ್ಲಿ ಅನುಭವಿ ತೋಟಗಾರ ಗಿಲ್ಬೆರ್ಟೊ ಬಿಯಾಂಕೀ ಪ್ರತಿದಿನ ಈ ತೋಟವನ್ನು ನೋಡಿಕೊಳ್ಳುತ್ತಾರೆ.

ಕೆಲವು ಕಾಲದಿಂದ ಅವರಿಗೆ ಯುವ ಕಾರ್ಮಿಕರ ತಂಡವೂ ಸಹಾಯ ಮಾಡುತ್ತಿದೆ. ಅವರು ತಮ್ಮ ಅಮೂಲ್ಯ ಅನುಭವವನ್ನು ಹಂತಹಂತವಾಗಿ ಈ ಯುವಕರಿಗೆ ಹಂಚಿಕೊಳ್ಳುತ್ತಿದ್ದಾರೆ. ಹೀಗೆ ಸಣ್ಣಪುಟ್ಟ ದೈನಂದಿನ ಕಾರ್ಯಗಳಿಂದ ಕೂಡಿರುವ ಈ ಜ್ಞಾನ ಕಳೆದುಹೋಗದೆ ಸಂರಕ್ಷಿಸಲ್ಪಡುತ್ತಿದೆ. ಶತಮಾನಗಳ ಹಿಂದೆ ಒಂದು ಮಠದಿಂದ ಮತ್ತೊಂದು ಮಠಕ್ಕೆ ಜ್ಞಾನವನ್ನು ಹಸ್ತಾಂತರಿಸಲಾಗುತ್ತಿದ್ದ ರೀತಿಯಂತೆಯೇ ಇದೂ ಮುಂದುವರಿಯುತ್ತಿದೆ.

ತೋಟಗಾರರಿಗೆ ಸಹಾಯ ಮಾಡುವ ಧಾರ್ಮಿಕ ಸನ್ಯಾಸಿನಿಯರು, ಋತು ಹಾಗೂ ಆ ನಿರ್ದಿಷ್ಟ ಸಮಯದಲ್ಲಿ ಭೂಮಿ ನೀಡಬಲ್ಲ ಉತ್ಪನ್ನಗಳನ್ನು ಗಮನದಲ್ಲಿಟ್ಟುಕೊಂಡು, ಯಾವ ಬೆಳೆಗಳು ಅಗತ್ಯವಿದೆ ಎಂಬುದನ್ನು ಕಾಲಕಾಲಕ್ಕೆ ತಿಳಿಸುತ್ತಾರೆ. ಇಂದಿಗೂ ನೀರಾವರಿ ಸಂಪೂರ್ಣವಾಗಿ ಕೈಯಿಂದಲೇ ಮಾಡಲಾಗುತ್ತದೆ.

ಋತುಮಾನಕ್ಕೆ ಅನುಗುಣವಾದ ಉತ್ಪನ್ನಗಳು ಮಾತ್ರ

ತೋಟದ ಕೃಷಿ ವೇಳಾಪಟ್ಟಿ ಋತುಗಳನ್ನು ನಿಕಟವಾಗಿ ಅನುಸರಿಸುತ್ತದೆ. ತಾಜಾ ಬೆಳ್ಳುಳ್ಳಿ, ತುಳಸಿ, ವಿವಿಧ ಸಸಿಗಳು, ಮೆಣಸಿನಕಾಯಿ — ಅವುಗಳಲ್ಲಿ ತೀವ್ರ ಖಾರಕ್ಕೆ ಪ್ರಸಿದ್ಧವಾದ ಪೆರುವಿಯನ್ ತಳಿಯೂ ಸೇರಿದೆ — ಸಿಟ್ರಸ್ ಹಣ್ಣುಗಳು ಮತ್ತು ನವೆಂಬರ್‌ವರೆಗೆ ಮಾಗುವ ಕುಂಬಳಕಾಯಿಗಳನ್ನು ಇಲ್ಲಿ ಬೆಳೆಯಲಾಗುತ್ತದೆ.

ಈ ವರ್ಷ ಸನ್ಯಾಸಿನಿಯರ ಮನವಿಯ ಮೇರೆಗೆ ಮೊದಲ ಬಾರಿಗೆ ಕಿವಿ ಹಣ್ಣಿನ ಗಿಡಗಳನ್ನೂ ನೆಡಲಾಗಿದೆ. ಆಗಸ್ಟ್ ಅಂತ್ಯದಿಂದ ಸೆಪ್ಟೆಂಬರ್ ಆರಂಭದ ನಡುವೆ ಚಳಿಗಾಲದ ಬಿತ್ತನೆ ಪ್ರಾರಂಭವಾಗುತ್ತದೆ. ಇದರಲ್ಲಿ ಸವಾಯ್ ಎಲೆಕೋಸು, ಬ್ರೊಕೊಲಿ, ಪಾಲಕ್ ಸೊಪ್ಪು ಮತ್ತು ಲೆಟ್ಯೂಸ್ ಸೇರಿವೆ.

ಮೇ ತಿಂಗಳು ಈ ತೋಟದಲ್ಲಿ ಅತಿ ಹೆಚ್ಚು ಉತ್ಪಾದನೆಯಾಗುವ ತಿಂಗಳು.

ಬೇಸಿಗೆ ಕಾಲವು ಅತ್ಯಂತ ಕಷ್ಟಕರವಾದ ಋತುವಾಗಿದೆ. ತೀವ್ರವಾದ ಬಿಸಿಲಿನ ಕಾರಣದಿಂದ ಟೊಮ್ಯಾಟೊ, ಬದನೆಕಾಯಿ, ಮೆಣಸಿನಕಾಯಿ, ಹಸಿರು ಬೀನ್ಸ್, ಸೌತೆಕಾಯಿ ಮತ್ತು ಕುಂಬಳಕಾಯಿ ಬೆಳೆಗಳ ಬೆಳವಣಿಗೆಯ ಅವಧಿ ಅಂತ್ಯಗೊಳ್ಳುತ್ತದೆ. ಇವುಗಳಲ್ಲಿ ಪುಲಿಯಾದ ಪ್ರಸಿದ್ಧ ತಳಿಯ ಸೌತೆಕಾಯಿಯೂ ಸೇರಿದೆ.

ತೋಟದಲ್ಲಿರುವ ಸಿಟ್ರಸ್ ಮರಗಳು ಸುಮಾರು 150 ವರ್ಷಗಳಷ್ಟು ಹಳೆಯವು. ವರ್ಷಗಳ ಅವಧಿಯಲ್ಲಿ ಅವುಗಳಿಗೆ ವಿವಿಧ ತಳಿಗಳನ್ನು ಕಸಿ ಮಾಡಲಾಗಿದೆ. ಅವುಗಳಲ್ಲಿ ಕೆಲವು ತಳಿಗಳು ಈಗ ಮಾರುಕಟ್ಟೆಯಲ್ಲಿಯೂ ದೊರೆಯುವುದಿಲ್ಲ.

ಯಾವುದೇ ರಾಸಾಯನಿಕ ಚಿಕಿತ್ಸೆ ನೀಡದೆ ಬೆಳೆಸಲಾಗುವ ಈ ಮರಗಳ ಹಣ್ಣುಗಳನ್ನು ಸಿಪ್ಪೆಯ ಸಮೇತವೂ ತಿನ್ನಬಹುದು. ಕನ್ಯಾ ಸ್ತ್ರೀ ಅವುಗಳನ್ನು ಇಂದಿಗೂ ಜಾಮ್, ಸಕ್ಕರೆಯಲ್ಲಿ ಸಂರಕ್ಷಿಸಿದ ಹಣ್ಣಿನ ಸಿಪ್ಪೆ ಮತ್ತು ಬಿಸ್ಕತ್ ತಯಾರಿಸಲು ಬಳಸುತ್ತಾರೆ. ಅವುಗಳಲ್ಲಿ ಕೆಲವು ಅತಿಥಿಗಳಿಗೆ ನೀಡಲಾಗುತ್ತವೆ ಮತ್ತು ಕೆಲವು ಮಾರಾಟ ಮಾಡಲಾಗುತ್ತವೆ.

ವರ್ಷಗಳ ಈ ಸಣ್ಣ ತೋಟದ ಉತ್ಪನ್ನಗಳನ್ನು ಕಾಸಾ ದೊನೊ ದಿ ಮರಿಯಾ ಮುಂತಾದ ದಾನಧರ್ಮ ಸಂಸ್ಥೆಗಳಿಗೂ ಪೂರೈಸಲಾಗಿದೆ. ಅದರ ಸೇವಾ ಚಟುವಟಿಕೆಗಳನ್ನು ಇದೀಗ ಹೊಸ ಉತ್ಸಾಹ ಮತ್ತು ಬದ್ಧತೆಯೊಂದಿಗೆ ಪುನರುಜ್ಜೀವನಗೊಳಿಸಲಾಗುತ್ತಿದೆ.

800 ವರ್ಷಗಳ ಇತಿಹಾಸ ಹೊಂದಿರುವ ತೋಟ

ಈ ಸಣ್ಣ ತೋಟದ ಇತಿಹಾಸ ಮಧ್ಯಯುಗದವರೆಗೆ ಹಿಂದಕ್ಕೆ ಹೋಗುತ್ತದೆ.

1277ರಿಂದ 1280ರ ನಡುವೆ ಜಗದ್ಗುರು III ನೇ ನಿಕೋಲಸ್  ಒರ್ಸಿನಿ ರವರು ಜಗದ್ಗುರುಗಳ ನಿವಾಸವನ್ನು ಲ್ಯಾಟೆರನ್‌ನಿಂದ ವ್ಯಾಟಿಕನ್‌ಗೆ ಸ್ಥಳಾಂತರಿಸಿದಾಗ, ಹೊಸ ಗೋಡೆಗಳ ಒಳಗೆ ಹಣ್ಣಿನ ತೋಟವೊಂದನ್ನೂ ಮತ್ತು ನಿಜವಾದ ವಿರಿಡಾರಿಯಮ್ — ಹಸಿರು ಉದ್ಯಾನವೊಂದನ್ನೂ ನಿರ್ಮಿಸುವಂತೆ ಆದೇಶಿಸಿದರು. ಪೋಪ್ ನಿವಾಸದ ಅಗತ್ಯಗಳನ್ನು ಪೂರೈಸಲು ನೆರವಾಗುತ್ತಿದ್ದ ಉತ್ಪಾದನಾ ಪ್ರದೇಶವಾಗಿತ್ತು ಅದು.

ಎಂಟು ಶತಮಾನಗಳ ನಂತರವೂ ಆ ಉದ್ದೇಶ ಮರೆಯಾಗಿಲ್ಲ. ಧರ್ಮ ಸಭೆಯ ಹೃದಯಭಾಗದಲ್ಲಿ ಜಗದ್ಗುರುಗಳಿಗಾಗಿ ನಿರಂತರವಾಗಿ ಪ್ರಾರ್ಥಿಸಲು ಸಮರ್ಪಿತವಾದ ಮಠವಾಸಿ ಧಾರ್ಮಿಕ ಕನ್ಯಾ ಸ್ತ್ರೀಯರ ಸಮುದಾಯವೊಂದು ಸದಾ ಇರಬೇಕೆಂಬ ಉದ್ದೇಶದಿಂದ ಜಗದ್ಗುರು ದ್ವಿತೀಯ ಜಾನ್ ಪಾಲ್  ಅವರ ಆಶಯದ ಮೇರೆಗೆ 1992ರಿಂದ 1994ರ ನಡುವೆ ನಿರ್ಮಿಸಲಾದ ಮಠದ ಪಕ್ಕದಲ್ಲಿ ಆ ಪರಂಪರೆ ಬಹುತೇಕ ಅದೇ ರೀತಿಯಲ್ಲಿ ಮುಂದುವರಿದಿದೆ.

ಆರಂಭದಲ್ಲಿ ಈ ಭೂಮಿಯನ್ನು ಕೃಷಿ ಮಾಡುತ್ತಿದ್ದವರು ಸನ್ಯಾಸಿನಿಯರೇ ಆಗಿದ್ದರು.

“ಕೃಷಿ ಮಾಡುವುದು ಕೈಗಳಿಂದ ಮಾಡುವ ಒಂದು ಪ್ರಾರ್ಥನೆ,” ಎಂದು ಆಗ ಮಠದ ಪ್ರಿಯೊರೆಸ್ ಆಗಿದ್ದ ಬೆನೆಡಿಕ್ಟೈನ್ ಅಬ್ಬೆಸ್ ಮರಿಯಾ ಸೋಫಿಯಾ ಚಿಚೆತ್ತಿ ಅವರು 2009ರ ಆಗಸ್ಟ್ 26ರಂದು ಲೋಸ್ಸರ್ವಟೋರ್ ರೊಮಾನೋ ಪತ್ರಿಕೆಗೆ ತಿಳಿಸಿದ್ದರು.

ಜಗದ್ಗುರುಗಳು ಎಮೆರಿಟಸ್ XVI ನೇ ಬೆನೆಡಿಕ್ಟ್ ರವರು ಈ ತೋಟದ ಪ್ರದೇಶದಲ್ಲಿ ನಡೆಯಾಡುವುದನ್ನು ಬಹಳ ಇಷ್ಟಪಡುತ್ತಿದ್ದರು.

18 ಆಗಸ್ಟ್ 2026, 21:15