ಕಥೋಲಿಕ ವಿಶ್ವವಿದ್ಯಾಲಯಗಳು ಇಂದಿನ ಸಮಸ್ಯೆಗಳನ್ನು ಎದುರಿಸುವ ಮಾರ್ಗವಾಗಿ ಕಲೆಯನ್ನು ಮುಂದಿಡುತ್ತವೆ.
ವ್ಯಾಟಿಕನ್ ವರದಿ
ಮುಂದಿನ ಹಲವು ತಿಂಗಳುಗಳಲ್ಲಿ ವಿಶ್ವದ ವಿವಿಧ ದೇಶಗಳಲ್ಲಿ ಪ್ರದರ್ಶನಗಳು, ಕಲಾಕೃತಿಗಳ ವಿಶೇಷ ನಿಯೋಜನೆಗಳು, ಪ್ರಕಟಣೆಗಳು ಮತ್ತು ಸಾರ್ವಜನಿಕ ಕಾರ್ಯಕ್ರಮಗಳ ಮೂಲಕ ಕಲಾಕೃತಿಗಳನ್ನು ಪ್ರದರ್ಶಿಸಲಾಗುವುದು. ‘ಕಥೋಲಿಕ ವಿಶ್ವವಿದ್ಯಾಲಯಗಳ ಕಲಾ ತ್ರೈವಾರ್ಷಿಕ’ ಎಂದು ಕರೆಯಲ್ಪಡುವ ಈ ಅಂತರರಾಷ್ಟ್ರೀಯ ಉಪಕ್ರಮವನ್ನು ಜಗದ್ಗುರುಗಳ ಅಧಿಕಾರ ಸ್ಥಳದ ಸಂಸ್ಕೃತಿ ಮತ್ತು ಶಿಕ್ಷಣದ ಡಿಕಾಸ್ಟರಿ ಪ್ರೋತ್ಸಾಹಿಸುತ್ತಿದ್ದು, ಕಲಾವಿದರು, ಕಥೋಲಿಕ ವಿಶ್ವವಿದ್ಯಾಲಯಗಳು, ಕ್ಯುರೇಟರ್‌ಗಳು ಮತ್ತು ಸಾಂಸ್ಕೃತಿಕ ಸಂಸ್ಥೆಗಳನ್ನು ಒಂದೆಡೆ ಸೇರಿಸುತ್ತದೆ. ಕಲೆ, ಶೈಕ್ಷಣಿಕ ಸಂಶೋಧನೆ ಮತ್ತು ಸಂವಾದವನ್ನು ಉತ್ತೇಜಿಸುವ ಉದ್ದೇಶದಿಂದ ಆರಂಭಗೊಂಡಿರುವ ಈ ತ್ರೈವಾರ್ಷಿಕವು, ಇಂದಿನ ಜಗತ್ತಿನ ಅತ್ಯಂತ ಪ್ರಸ್ತುತ ಸಮಸ್ಯೆಗಳನ್ನು ಎದುರಿಸುವಲ್ಲಿ ಕಲೆ ವಹಿಸುವ ಪಾತ್ರವನ್ನು ಅನ್ವೇಷಿಸುತ್ತದೆ. 2026–2027ರ ಅವಧಿಯಲ್ಲಿ ನಡೆಯಲಿರುವ ಈ ಕಾರ್ಯಕ್ರಮವು ವೆನಿಸ್‌ನಲ್ಲಿ ಸಮಾರೋಪಗೊಳ್ಳಲಿದೆ.
‘ಎಕ್ಸರ್ಸೈಸಸ್ ಇನ್ ಎಂಪತಿ’ (ಸಹಾನುಭೂತಿಯ ಅಭ್ಯಾಸಗಳು) ಎಂಬ ಹೆಸರಿನ ಮೊದಲ ಆವೃತ್ತಿಯ ಪ್ರದರ್ಶನವು ರಿಯೊ ಡಿ ಜನೈರೊ, ಸ್ಯಾಂಟಿಯಾಗೊ, ಬೊಗೋಟಾ, ಬಾಸ್ಟನ್, ಮಿಲಾನ್, ಲಿಸ್ಬನ್ ಮತ್ತು ಲುವಾಂಡಾ ಸೇರಿದಂತೆ ವಿಶ್ವದ ವಿವಿಧ ನಗರಗಳಲ್ಲಿ ನಡೆಯಲಿದೆ. ವಿವಿಧ ವಿಶ್ವವಿದ್ಯಾಲಯಗಳು ಮತ್ತು ಸಹಭಾಗಿಗಳ ಸಹಕಾರದೊಂದಿಗೆ ನಡೆಯುವ ಈ ಪ್ರದರ್ಶನವು ಉನ್ನತ ಶಿಕ್ಷಣದ ಪಾತ್ರ, ಮಾನವ ಸಂಬಂಧಗಳು ಮತ್ತು ‘ಸಹಾನುಭೂತಿ’ ಎಂಬ ಪರಿಕಲ್ಪನೆಯ ಕುರಿತು ಚಿಂತನೆಗೆ ಅವಕಾಶ ನೀಡಲಿದೆ. ಜಗದ್ಗುರು ಲಿಯೋರವರು ತಮ್ಮ ‘ಮ್ಯಾಗ್ನಿಫಿಕಾ ಹ್ಯೂಮಾನಿಟಾಸ್’ ವಿಶ್ವಪತ್ರಿಕೆಯಲ್ಲಿ, ಕೃತಕ ಬುದ್ಧಿಮತ್ತೆ ಸಹಾನುಭೂತಿ ಮತ್ತು ಅರ್ಥೈಸುವಿಕೆಯನ್ನು ಅನುಕರಿಸಬಹುದಾದರೂ, ಮಾನವರು ಜ್ಞಾನದಲ್ಲಿ ಬೆಳೆಯಲು ಅಗತ್ಯವಾದ ಭಾವನಾತ್ಮಕ, ಸಂಬಂಧಾತ್ಮಕ ಮತ್ತು ಆಧ್ಯಾತ್ಮಿಕ ದೃಷ್ಟಿಕೋನ ಅದರಲ್ಲಿಲ್ಲ ಎಂದು ಒತ್ತಿಹೇಳಿದ್ದಾರೆ.
ಈ ತ್ರೈವಾರ್ಷಿಕದ ಪ್ರಮುಖ ಉದ್ದೇಶಗಳಲ್ಲಿ ಒಂದಾದದ್ದು, ಮೂಲಭೂತವಾಗಿ ಮಾನವೀಯವಾದ ಅಂಶಗಳನ್ನು ಸಂರಕ್ಷಿಸುವ ಕುರಿತು ನಡೆಯುತ್ತಿರುವ ಸಾರ್ವಜನಿಕ ಚರ್ಚೆಯನ್ನು ಇನ್ನಷ್ಟು ಆಳವಾಗಿ ಪರಿಶೀಲಿಸಲು ಅವಕಾಶ ಕಲ್ಪಿಸುವುದು. ಸಂಸ್ಕೃತಿ ಮತ್ತು ಶಿಕ್ಷಣದ ಡಿಕಾಸ್ಟರಿಯ ಪ್ರೀಫೆಕ್ಟ್ ಕಾರ್ಡಿನಲ್ ಜೋಸೆ ಟೊಲೆಂಟಿನೊ ದ ಮೆಂಡೋನ್ಸಾ ರವರು, ಕಥೋಲಿಕ ವಿಶ್ವವಿದ್ಯಾಲಯಗಳು ಸೃಜನಶೀಲತೆ ಮತ್ತು ಪ್ರಭಾವವನ್ನು ಹರಡುವ ಕೇಂದ್ರಗಳಾಗಬೇಕು ಎಂಬ ಜಗದ್ಗುರು ಸಂತ ದ್ವಿತೀಯ ಜಾನ್ ಪಾಲ್ ರವರ ದೃಷ್ಟಿಕೋನವನ್ನು ಸ್ಮರಿಸಿದ್ದಾರೆ. ಅವರ ಪ್ರಕಾರ, ಕಥೋಲಿಕ ವಿಶ್ವವಿದ್ಯಾಲಯಗಳ ಗುರುತು ಮತ್ತು ಸಮಗ್ರ ಶಿಕ್ಷಣದ ದೃಷ್ಟಿಕೋನವನ್ನು ಒಂದೇ ಪದದಲ್ಲಿ ವ್ಯಕ್ತಪಡಿಸಬೇಕಾದರೆ, ಅದು ‘ಸಹಾನುಭೂತಿ’ಯಾಗಿರುತ್ತದೆ. ಈ ಸಹಾನುಭೂತಿಯೇ ಈ ವಿಶ್ವವಿದ್ಯಾಲಯಗಳ ಕಲಾ ಯೋಜನೆಯ ಮೂಲ ಪ್ರೇರಣೆಯಾಗಿದೆ.
ವಿಶ್ವವಿದ್ಯಾಲಯಗಳು ಕೇವಲ ಶಿಕ್ಷಣ ನೀಡುವ ಸಂಸ್ಥೆಗಳಲ್ಲ,ಅವು ಸೃಜನಶೀಲತೆಯನ್ನು ಬೆಳೆಸುವ ಶೈಕ್ಷಣಿಕ ಸಮುದಾಯಗಳಾಗಿವೆ. ಹೊಸ ಆಲೋಚನೆಗಳನ್ನು ಹುಟ್ಟುಹಾಕುವುದು, ಹಿಂದೆ ವಿಭಜಿತವಾಗಿದ್ದ ಅಂಶಗಳನ್ನು ಒಗ್ಗೂಡಿಸುವುದು ಮತ್ತು ಜಗತ್ತಿನ ಹೊಸ ಸಾಧ್ಯತೆಗಳನ್ನು ಕಲ್ಪಿಸಿಕೊಳ್ಳುವುದು ಅವುಗಳ ಪ್ರಮುಖ ಪಾತ್ರವಾಗಿದೆ. ಆದ್ದರಿಂದ ಶಿಕ್ಷಣವನ್ನು ಕೇವಲ ತಾಂತ್ರಿಕ ಪುನರಾವರ್ತನೆಯಾಗಿ ನೋಡುವ ಬದಲು, ಎಲ್ಲರೂ ಸೇರಿ ಹೊಸದನ್ನು ಸೃಷ್ಟಿಸುವ ‘ಸಹ-ಸೃಷ್ಟಿ’ಯ ಪ್ರಕ್ರಿಯೆಯಾಗಿ ನೋಡಬೇಕು. ಜಗದ್ಗುರು ಲಿಯೋರವರು‘ಮ್ಯಾಗ್ನಿಫಿಕಾ ಹ್ಯೂಮಾನಿಟಾಸ್’ನಲ್ಲಿ ವಿಶ್ವವಿದ್ಯಾಲಯಗಳು ಇಂದಿನ ಸಂಕೀರ್ಣ ಜಗತ್ತನ್ನು ಸೃಜನಶೀಲತೆಯಿಂದ ಎದುರಿಸಿ, ಸಮಾಜಗಳನ್ನು ಹೆಚ್ಚು ನ್ಯಾಯಯುತ ಮತ್ತು ಸಹೋದರತ್ವಪೂರ್ಣವಾಗಿಸಲು ಶ್ರಮಿಸಬೇಕು ಎಂದು ಕರೆ ನೀಡಿದ್ದಾರೆ.
ಈ ಮೊದಲ ಕಲಾ ತ್ರೈವಾರ್ಷಿಕದಲ್ಲಿ ಬ್ರೆಜಿಲ್‌ನ ರಿಯೊ ಡಿ ಜನೈರೊ ಕಥೋಲಿಕ ವಿಶ್ವವಿದ್ಯಾಲಯ, ಚಿಲಿಯ ಕಥೋಲಿಕ ವಿಶ್ವವಿದ್ಯಾಲಯ, ಕೊಲಂಬಿಯಾದ ಪೊಂಟಿಫಿಷಿಯಾ ಯುನಿವರ್ಸಿಡಾಡ್ ಜಾವೆರಿಯಾನಾ, ಅಮೆರಿಕದ ಬಾಸ್ಟನ್ ಕಾಲೇಜು, ಇಟಲಿಯ ಮಿಲಾನ್‌ನ ಸೇಕ್ರಡ್ ಹಾರ್ಟ್ ಕಥೋಲಿಕ ವಿಶ್ವವಿದ್ಯಾಲಯ, ಪೋರ್ಚುಗಲ್‌ನ ಕಥೋಲಿಕ ವಿಶ್ವವಿದ್ಯಾಲಯ ಮತ್ತು ಅಂಗೋಲಾದ ಕಥೋಲಿಕ ವಿಶ್ವವಿದ್ಯಾಲಯ ಸೇರಿದಂತೆ ಏಳು ವಿಶ್ವವಿದ್ಯಾಲಯಗಳು ಭಾಗವಹಿಸುತ್ತಿವೆ. ಪ್ರದರ್ಶನಗಳು ಆಗಸ್ಟ್ 27ರಂದು ಬ್ರೆಜಿಲ್‌ನಿಂದ ಆರಂಭವಾಗಿ, ಸೆಪ್ಟೆಂಬರ್‌ನಲ್ಲಿ ಚಿಲಿ, ಕೊಲಂಬಿಯಾ ಮತ್ತು ಅಮೆರಿಕದಲ್ಲಿ ಹಾಗೂ ಅಕ್ಟೋಬರ್‌ನಲ್ಲಿ ಇಟಲಿ, ಪೋರ್ಚುಗಲ್ ಮತ್ತು ಅಂಗೋಲಾದಲ್ಲಿ ಆರಂಭವಾಗಲಿವೆ. ವಿವಿಧ ದೇಶಗಳಲ್ಲಿನ ಪ್ರದರ್ಶನಗಳು ನವೆಂಬರ್ ಅಥವಾ ಡಿಸೆಂಬರ್ 2026ರವರೆಗೆ ನಡೆಯಲಿವೆ.
ಈ ತ್ರೈವಾರ್ಷಿಕದಲ್ಲಿ ‘ಸಹಾನುಭೂತಿ’ಯ ಪರಿಕಲ್ಪನೆಯು ಕಲೆ ಮತ್ತು ನೈತಿಕತೆಯನ್ನು ಪರಸ್ಪರ ಸಂವಾದಕ್ಕೆ ತರುವ ಮಹತ್ವದ ಅವಕಾಶವನ್ನು ಒದಗಿಸುತ್ತದೆ. ಜೊತೆಗೆ ವಿವಿಧ ಜ್ಞಾನಶಾಖೆಗಳ ನಡುವೆ ಅಂತರಶಿಸ್ತೀಯ ಸಂವಾದಕ್ಕೂ ಇದು ದಾರಿ ಮಾಡಿಕೊಡುತ್ತದೆ. ಮತ್ತೊಬ್ಬರನ್ನು ಅರ್ಥಮಾಡಿಕೊಳ್ಳುವುದು, ಅವರ ಅಸ್ತಿತ್ವವನ್ನು ಗೌರವಿಸುವುದು ಮತ್ತು ಪರಸ್ಪರ ಮಾನ್ಯತೆಯನ್ನು ಬೆಳೆಸಿಕೊಳ್ಳುವುದು ಸುಲಭದ ಕೆಲಸವಲ್ಲ; ಆದರೆ ಸಹಾನುಭೂತಿಯ ಈ ತಾಳ್ಮೆಯ ಮತ್ತು ಆಳವಾದ ಅಭ್ಯಾಸವು ಮಾನವರನ್ನು ಇನ್ನಷ್ಟು ಹತ್ತಿರಕ್ಕೆ ತರುತ್ತದೆ. ಈ ಮೂಲಕ ಕಥೋಲಿಕ ವಿಶ್ವವಿದ್ಯಾಲಯಗಳ ಕಲಾ ತ್ರೈವಾರ್ಷಿಕವು ಜಗದ್ಗುರು XIVನೇ ಲಿಯೋರವರು ಮಾನವೀಯತೆ, ಸೃಜನಶೀಲತೆ ಮತ್ತು ಸಹೋದರತ್ವದ ಕರೆಯನ್ನು ಕಾರ್ಯರೂಪಕ್ಕೆ ತರುವ ಪ್ರಯತ್ನವಾಗಿದೆ.