ಹುಡುಕಿ

ಸೊಗಾಂಗ್ ವಿಶ್ವವಿದ್ಯಾಲಯ. ಸೊಗಾಂಗ್ ವಿಶ್ವವಿದ್ಯಾಲಯ. 

ಮೊದಲ ಕ್ರೈಸ್ತ–ಕನ್ಫ್ಯೂಷಿಯನ್ ಸಂವಾದಗೋಷ್ಠಿಗೆ ಸಿಯೋಲ್ ಆತಿಥ್ಯ ವಹಿಸಲಿದೆ.

ಅಂತರಧರ್ಮೀಯ ಸಂವಾದಕ್ಕಾಗಿ ಇರುವ ಡಿಕಾಸ್ಟರಿ, ಕ್ರೈಸ್ತ ಮತ್ತು ಕನ್ಫ್ಯೂಷಿಯನ್ ಧರ್ಮಗಳ ನಾಯಕರು ಹಾಗೂ ವಿದ್ವಾಂಸರನ್ನು ಒಂದೆಡೆ ಸೇರಿಸಿ, ಈ ಎರಡೂ ಪರಂಪರೆಗಳು ಹೆಚ್ಚು ನ್ಯಾಯಸಮ್ಮತ, ಶಾಂತಿಯುತ ಮತ್ತು ಮಾನವೀಯ ಜಗತ್ತಿನ ನಿರ್ಮಾಣಕ್ಕೆ ಹೇಗೆ ಸಹಕರಿಸಬಲ್ಲವು ಎಂಬುದನ್ನು ಅನ್ವೇಷಿಸಲಿದೆ.

ವ್ಯಾಟಿಕನ್ ವರದಿ 

ಕ್ರೈಸ್ತ ಮತ್ತು ಕನ್ಫ್ಯೂಷಿಯನ್ ಧರ್ಮಗಳ ಧಾರ್ಮಿಕ ನಾಯಕರು, ವಿದ್ವಾಂಸರು ಹಾಗೂ ಪ್ರತಿನಿಧಿಗಳು ಆಗಸ್ಟ್ 4–5ರಂದು ಸಿಯೋಲ್‌ನ ಸೊಗಾಂಗ್ ವಿಶ್ವವಿದ್ಯಾಲಯದಲ್ಲಿ ಮೊದಲ ಕ್ರೈಸ್ತ–ಕನ್ಫ್ಯೂಷಿಯನ್ ಸಂವಾದಗೋಷ್ಠಿಗಾಗಿ ಒಂದಾಗಿ ಸೇರುವರು.

ಈ ಕಾರ್ಯಕ್ರಮವನ್ನು ಅಂತರಧರ್ಮೀಯ ಸಂವಾದಕ್ಕಾಗಿ ಇರುವ ಡಿಕಾಸ್ಟರಿ, ಕೊರಿಯಾ ಕಥೋಲಿಕ ಬಿಷಪ್‌ಗಳ ಸಮ್ಮೇಳನ, ಸೊಗಾಂಗ್ ವಿಶ್ವವಿದ್ಯಾಲಯ ಹಾಗೂ ಕೊರಿಯನ್ ಕನ್ಫ್ಯೂಷಿಯನ್ ಅಕಾಡೆಮಿಯ ಸಹಯೋಗದೊಂದಿಗೆ ಆಯೋಜಿಸುತ್ತಿದೆ.

“ಹೊಸ ಸ್ವರ್ಗ, ಹೊಸ ಭೂಮಿ ಮತ್ತು ದಾತೋಂಗ್ (ಮಹಾ ಸಾಮರಸ್ಯ, ಮಹಾ ಏಕತೆ): ಆದರ್ಶ ಸಮಾಜ ನಿರ್ಮಾಣಕ್ಕಾಗಿ ಕ್ರೈಸ್ತ–ಕನ್ಫ್ಯೂಷಿಯನ್ ಸಂವಾದ” ಎಂಬ ಧ್ಯೇಯವಿಷಯದಡಿ ಈ ಸಂವಾದಗೋಷ್ಠಿ ನಡೆಯಲಿದೆ.

ಶನಿವಾರ ಬಿಡುಗಡೆಗೊಂಡ ಪ್ರಕಟಣೆಯ ಪ್ರಕಾರ, ಇಂದಿನ ಸಮಾಜ ಎದುರಿಸುತ್ತಿರುವ ಕೆಲವು ಅತ್ಯಂತ ತುರ್ತು ಸವಾಲುಗಳಿಗೆ ಕ್ರೈಸ್ತ ಧರ್ಮ ಮತ್ತು ಕನ್ಫ್ಯೂಷಿಯನ್ ಧರ್ಮಗಳು ಜಂಟಿಯಾಗಿ ಹೇಗೆ ಸ್ಪೂರ್ತಿದಾಯಕ ಪ್ರತಿಕ್ರಿಯೆಗಳನ್ನು ನೀಡಬಲ್ಲವು ಎಂಬುದನ್ನು ಭಾಗವಹಿಸುವವರು ಅನ್ವೇಷಿಸಲಿದ್ದಾರೆ.

ಈ ಎರಡೂ ಪರಂಪರೆಗಳು ವಿಭಿನ್ನ ಧಾರ್ಮಿಕ ಮತ್ತು ತಾತ್ವಿಕ ಮೂಲಭೂತ ತತ್ವಗಳಲ್ಲಿ ಬೇರೂರಿವೆ ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.

ಆದಾಗ್ಯೂ, ಮಾನವ ಘನತೆ, ನೈತಿಕ ಸಮಗ್ರತೆ, ಜವಾಬ್ದಾರಿಯುತ ನಾಯಕತ್ವ ಮತ್ತು ಸಾಮಾನ್ಯ ಒಳಿತಿನ ಕುರಿತು ಈ ಎರಡೂ ಧಾರ್ಮಿಕ ಪರಂಪರೆಗಳು ಸಮಾನ ಕಾಳಜಿಯನ್ನು ಹೊಂದಿವೆ ಎಂದು ಅದು ತಿಳಿಸಿದೆ.

ವಿಶೇಷವಾಗಿ ಸಾಮಾಜಿಕ ವಿಭಜನೆ, ನೈತಿಕ ಅನಿಶ್ಚಿತತೆ, ಪರಿಸರದ ಹಾನಿ ಮತ್ತು ಶಾಂತಿಗೆ ಎದುರಾಗಿರುವ ಬೆದರಿಕೆಗಳು ಕುರಿತು ಚರ್ಚೆಗಳು ನಡೆಯಲಿವೆ.

ಶಿಕ್ಷಣ, ನೈತಿಕ ರೂಪುಗೊಳಿಸುವಿಕೆ ಮತ್ತು ಶಾಂತಿ ನಿರ್ಮಾಣ ಕ್ಷೇತ್ರಗಳಲ್ಲಿ ಕ್ರೈಸ್ತ–ಕನ್ಫ್ಯೂಷಿಯನ್ ಸಹಕಾರವನ್ನು ಮುಂದುವರಿಸುವಂತೆ ಕರೆ ನೀಡುವುದರೊಂದಿಗೆ ಈ ಸಂವಾದಗೋಷ್ಠಿ ಮುಕ್ತಾಯಗೊಳ್ಳುವ ನಿರೀಕ್ಷೆಯಿದೆ ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.

ಕ್ರೈಸ್ತ ಧರ್ಮ ಮತ್ತು ಕನ್ಫ್ಯೂಷಿಯನ್ ಧರ್ಮದ ಅನುಯಾಯಿಗಳ ನಡುವಿನ ಸಂವಾದದ ದೀರ್ಘಕಾಲೀನ ಪರಂಪರೆಗೆ ಈ ಸಭೆಯು ನಾಂದಿಯಾಗಲಿ ಎಂಬ ಆಶಯವನ್ನು ಆಯೋಜಕರು ವ್ಯಕ್ತಪಡಿಸಿದ್ದಾರೆ.

01 ಆಗಸ್ಟ್ 2026, 10:52