SCATTIDELGIORNO: Vatican Secretary of State officiates Mass in Guatemala

ಸಿಸಿಲಿಯಲ್ಲಿ ಕಾರ್ಡಿನಲ್ ಪರೋಲಿನ್: ಸಂತ ಅಗಾಥಾ ಅವರ ಸಾಕ್ಷ್ಯವು ಇಂದಿಗೂ ಧರ್ಮ ಸಭೆಗೆ ಮಾತನಾಡುತ್ತದೆ.

ಸಂತ ಅಗಾಥಾ ರವರ ಅವಶೇಷಗಳನ್ನು ಸ್ಥಳಾಂತರಿಸಿದ 900ನೇ ವಾರ್ಷಿಕೋತ್ಸವದ ಆಚರಣೆಗಳಿಗೆ ಜಗದ್ಗುರುಗಳ ಪ್ರತಿನಿಧಿಯಾಗಿ ಸಿಸಿಲಿಗೆ ಭೇಟಿ ನೀಡಿರುವ ಕಾರ್ಡಿನಲ್ ಪರೋಲಿನ್, ಸಂತ ಅಗಾಥಾರವರ ಅಚಲವಾದ ಮತ್ತು ಅಪಾರ ನಂಬಿಕೆಯ ಸಾಕ್ಷ್ಯವನ್ನು ಶ್ಲಾಘಿಸಿದರು.

ವ್ಯಾಟಿಕನ್ ವರದಿ

ಸಂತ ಅಗಾಥಾ ಅವರ ಶಕ್ತಿ “ಕ್ರಿಸ್ತನೊಂದಿಗಿನ ರವರ ಅನ್ಯೋನ್ಯ ಐಕ್ಯತೆಯಿಂದ” ಉದ್ಭವಿಸಿತು. “ಆದ್ದರಿಂದಲೇ ಹಿಂಸೆ, ಬೆದರಿಕೆಗಳು ಅಥವಾ ಅಧಿಕಾರದ ಆಮಿಷಗಳು ಅವರನ್ನು ಎಂದಿಗೂ ಮಣಿಸಲು ಅವರು ಅವಕಾಶ ನೀಡಲಿಲ್ಲ.”

ವ್ಯಾಟಿಕನ್‌ನ ರಾಜ್ಯ ಕಾರ್ಯದರ್ಶಿ ಕಾರ್ಡಿನಲ್ ಪಿಯೆತ್ರೊ ಪರೋಲಿನ್ ರವರು ಆಗಸ್ಟ್ 16, ಭಾನುವಾರ ಸಂಜೆ ಸಿಸಿಲಿಯ ಆಚಿ ಕಾಸ್ಟೆಲ್ಲೊದಲ್ಲಿ ಅಧ್ಯಕ್ಷತೆ ವಹಿಸಿದ್ದ ಪ್ರಾರ್ಥನಾ ಜಾಗರಣೆಯ ಸಂದರ್ಭದಲ್ಲಿ ಈ ಮಾತುಗಳನ್ನು ಹೇಳಿದರು. 900 ವರ್ಷಗಳ ಹಿಂದೆ ಸಂತ ಅಗಾಥಾ ಅವರ ಅವಶೇಷಗಳನ್ನು ಕತಾನಿಯಾಗೆ ಮರಳಿ ತಂದ ಘಟನೆಯ ಸ್ಮರಣಾರ್ಥ ಈ ಪ್ರಾರ್ಥನಾ ಜಾಗರಣೆ ನಡೆಯಿತು.

ಕ್ರಿಸ್ತನಂಬಿಕೆಯನ್ನು ತ್ಯಜಿಸಲು ನಿರಾಕರಿಸಿದ ಕಾರಣ, ರೋಮನ್ ಚಕ್ರವರ್ತಿ ಡೆಷಿಯಸ್ ಕ್ರೈಸ್ತರ ವಿರುದ್ಧ ನಡೆಸಿದ ಹಿಂಸಾಚಾರದ ಸಂದರ್ಭದಲ್ಲಿ ಮೂರನೇ ಶತಮಾನದಲ್ಲಿ ಇನ್ನೂ ಹದಿಹರೆಯದಲ್ಲಿದ್ದ ಸಂತ ಅಗಾಥಾ ಅವರನ್ನು ಹಿಂಸಿಸಿ ಕೊಲ್ಲಲಾಯಿತು. ಅವರ ಮರಣದ ನಂತರ, 11ನೇ ಶತಮಾನದಲ್ಲಿ ಸಾರಾಸೆನ್‌ಗಳ ವಿರುದ್ಧ ಬೈಜಾಂಟೈನ್‌ರು ನಡೆಸಿದ ಸೈನಿಕ ಕಾರ್ಯಾಚರಣೆಯ ಸಂದರ್ಭದಲ್ಲಿ ಅವರ ಪವಿತ್ರ ಅವಶೇಷಗಳನ್ನು ಕಾನ್ಸ್ಟಾಂಟಿನೋಪಲ್‌ಗೆ ಕೊಂಡೊಯ್ಯಲಾಯಿತು.

86 ವರ್ಷಗಳ ಬಳಿಕ ಅವುಗಳನ್ನು ಮತ್ತೆ ಸಿಸಿಲಿಗೆ ತರಲಾಯಿತು. ಪುಲಿಯಾದಲ್ಲಿ ಸ್ವಲ್ಪಕಾಲ ತಂಗಿದ ನಂತರ, ಅವಶೇಷಗಳು ಆಚಿ ಕಾಸ್ಟೆಲ್ಲೊ ತಲುಪಿದವು. ಅಲ್ಲಿಂದ 1126ರ ಆಗಸ್ಟ್ 17ರಂದು ಅವುಗಳನ್ನು ಮೆರವಣಿಗೆಯಲ್ಲಿ ಕತಾನಿಯಾಗೆ ಕೊಂಡೊಯ್ಯಲಾಯಿತು.

ಕ್ರಿಸ್ತನಿಗೆ ನಿಷ್ಠೆಯ ಮಾದರಿ

ಈ ಘಟನೆಯ 900ನೇ ವಾರ್ಷಿಕೋತ್ಸವದ ಕತಾನಿಯಾ ಆಚರಣೆಗಳಿಗೆ ಜಗದ್ಗುರು XIVನೇ ಲಿಯೋರವರು ಕಾರ್ಡಿನಲ್ ಪರೋಲಿನ್ ರವರನ್ನು ತಮ್ಮ ಜಗದ್ಗುರುಗಳ ಪ್ರತಿನಿಧಿಯಾಗಿ ನೇಮಿಸಿದ್ದರು.

ತಮ್ಮ ಧರ್ಮೋಪದೇಶದಲ್ಲಿ ಅವರು, “ಹಲವು ಶತಮಾನಗಳು ಕಳೆದರೂ, ಅಗಾಥಾ ಅವರ ಸಾಕ್ಷ್ಯವು ಇಂದಿಗೂ ಧರ್ಮ ಸಭೆಯೊಂದಿಗೆ ಮಾತನಾಡುತ್ತಲೇ ಇದೆ” ಎಂದು ಒತ್ತಿಹೇಳಿದರು. ಅವರಲ್ಲಿ ಧರ್ಮ ಸಭೆ “ದೇವರೊಂದಿಗೆ ಸದಾ ಐಕ್ಯತೆಯಲ್ಲಿ ಉಳಿದ ಕಾರಣ ಫಲಪ್ರದವಾದ ಜೀವನದ ಫಲವತ್ತತೆಯನ್ನು” ಕಾಣುತ್ತದೆ ಎಂದು ಹೇಳಿದರು.

“ಪ್ರಭುವಿನಲ್ಲಿ ತಮ್ಮ ಬೇರುಗಳನ್ನು ಆಳವಾಗಿ ಬಿಟ್ಟವರು ಅತ್ಯಂತ ಕಠಿಣ ಪರೀಕ್ಷೆಗಳನ್ನೂ ಭರವಸೆಯನ್ನು ಕಳೆದುಕೊಳ್ಳದೆ ಎದುರಿಸಬಲ್ಲರು ಮತ್ತು ಫಲ ನೀಡುವುದನ್ನು ಮುಂದುವರಿಸಬಲ್ಲರು” ಎಂದು ಅವರು ಹೇಳಿದರು.

ಕಾರ್ಡಿನಲ್ ಅವರಿಗೆ ಬರೆದ ಪತ್ರದಲ್ಲಿ ಜಗದ್ಗುರು XIVನೇ ಲಿಯೋರವರು ಕೂಡ, “ಕ್ರಿಸ್ತನಿಗೆ ನಿಷ್ಠೆ ಮತ್ತು ತನ್ನನ್ನೇ ಸಂಪೂರ್ಣವಾಗಿ ಸಮರ್ಪಿಸುವ ಮೂಲಕ ವ್ಯಕ್ತವಾಗುವ ಪ್ರೀತಿಯ ಶ್ರೇಷ್ಠ ಮಾದರಿಯಾದ ಸಂತ ಅಗಾಥಾ ಅವರ ಹುತಾತ್ಮತ್ವದಲ್ಲಿ, ಧರ್ಮ ಸಭೆಯ ಸಮುದಾಯವು ಹಿಂಸೆಯ ಮೇಲಿನ ಕೃಪೆಯ ವಿಜಯವನ್ನು, ಭಯದ ಮೇಲಿನ ನಂಬಿಕೆಯ ವಿಜಯವನ್ನು ಮತ್ತು ಮರಣದ ಮೇಲಿನ ಪ್ರೀತಿಯ ವಿಜಯವನ್ನು ಕಾಣುತ್ತದೆ” ಎಂದು ಒತ್ತಿಹೇಳಿದರು.

ನಂಬಿಕೆಯು ಪರೀಕ್ಷೆಗಳನ್ನು ದೂರಮಾಡುವುದಿಲ್ಲ; ಆದರೆ ನಮಗೆ ಶಕ್ತಿಯನ್ನು ನೀಡುತ್ತದೆ

ಪ್ರಾರ್ಥನಾ ಜಾಗರಣೆಯ ಸಂದರ್ಭದಲ್ಲಿ ಘೋಷಿಸಲಾದ ಕೀರ್ತನೆ 1ನ್ನು ಆಧರಿಸಿ ಚಿಂತಿಸಿದ ರಾಜ್ಯ ಕಾರ್ಯದರ್ಶಿ ಕಾರ್ಡಿನಲ್, ವಿಶೇಷವಾಗಿ 6ನೇ ವಚನ — “ನೀತಿವಂತರ ಮಾರ್ಗವನ್ನು ಪ್ರಭುವು ಕಾಪಾಡುತ್ತಾನೆ” ಎಂಬ ಮಾತಿನ ಮೇಲೆ ಗಮನ ಹರಿಸಿದರು.

ಸಂತ ಅಗಾಥಾ ರವರ ಜೀವನವೇ ತೋರಿಸುವಂತೆ, ನೀತಿವಂತನು “ದುಃಖದಿಂದ ವಿನಾಯಿತಿ ಪಡೆಯುವುದಿಲ್ಲ” ಎಂದು ಅವರು ವಿವರಿಸಿದರು.

“ನಂಬಿಕೆಯು ಪರೀಕ್ಷೆಗಳನ್ನು ದೂರಮಾಡುವುದಿಲ್ಲ, ಆದರೆ ಅವುಗಳನ್ನು ಎದುರಿಸಲು ನಮಗೆ ಹೊಸ ಸಾನ್ನಿಧ್ಯ ಮತ್ತು ಹೊಸ ಶಕ್ತಿಯನ್ನು ನೀಡುತ್ತದೆ” ಎಂದು ಕಾರ್ಡಿನಲ್ ಹೇಳಿದರು.

“ಪ್ರಭುವು,” ಎಂದು ಅವರು ಭರವಸೆ ನೀಡಿದರು, “ತನ್ನ ಮಕ್ಕಳ ಮಾರ್ಗವನ್ನು ತಿಳಿದಿದ್ದಾನೆ, ಅವರ ಹೆಜ್ಜೆಗಳಿಗೆ ಜೊತೆಯಾಗಿದ್ದಾನೆ ಮತ್ತು ಅವರ ಗಾಯಗಳನ್ನೂ ಕೃಪೆಯ ಸ್ಥಳಗಳಾಗಿ ಪರಿವರ್ತಿಸುತ್ತಾನೆ.”

ದೇವರ ವಾಕ್ಯ: ಸ್ವಾತಂತ್ರ್ಯಕ್ಕೆ ಕರೆದೊಯ್ಯುವ ಮಾರ್ಗ

ಕೀರ್ತನೆ 1ರ ಕುರಿತು ತಮ್ಮ ಚಿಂತನೆಯನ್ನು ಮುಂದುವರಿಸಿದ ಕಾರ್ಡಿನಲ್ ಪರೋಲಿನ್, ಪ್ರತಿಯೊಬ್ಬರ ಜೀವನದಲ್ಲೂ ಒಂದು “ಹೋರಾಟ” ನಡೆಯುತ್ತದೆ ಎಂದು ವಿವರಿಸಿದರು ಒಂದೆಡೆ “ಜೀವನದತ್ತ ಕರೆದೊಯ್ಯುವ ದೇವರ ಧ್ವನಿ”; ಮತ್ತೊಂದೆಡೆ “ನಮ್ಮನ್ನು ಆತನಿಂದ ದೂರ ಸೆಳೆಯುವ ಅಪಾಯವಿರುವ ಅನೇಕ ಧ್ವನಿಗಳು.”

ಈ ಧ್ವನಿಗಳು “ಕೆಟ್ಟತನವನ್ನು” ಪ್ರತಿನಿಧಿಸುತ್ತವೆ ಎಂದು ಅವರು ಹೇಳಿದರು. ಕೆಟ್ಟತನವು “ಅನೇಕ ಬಾರಿ ನಾಟಕೀಯ ಕೃತ್ಯಗಳ ಮೂಲಕ ಬರುವುದಿಲ್ಲ, ಬದಲಾಗಿ ಸಣ್ಣ ಸಣ್ಣ ಹೆಜ್ಜೆಗಳ ಮೂಲಕ” — “ಕ್ರಮೇಣ ನಮ್ಮ ಹೃದಯಗಳನ್ನು ಮತ್ತು ನಮ್ಮ ಆಲೋಚನಾ ವಿಧಾನವನ್ನು ಬದಲಾಯಿಸುವ ಅಭ್ಯಾಸಗಳ ಮೂಲಕ” ಬರುತ್ತದೆ.

ಹೀಗೆ, “ದೇವರಿಲ್ಲದೆ ಬದುಕಲು ನಾವು ಒಗ್ಗಿಕೊಳ್ಳುತ್ತೇವೆ, ದೇವರು ಅಗತ್ಯವೇ ಇಲ್ಲ ಎಂಬಂತೆ ಬದುಕುತ್ತೇವೆ. ನಮ್ಮ ಸಮಕಾಲೀನರಲ್ಲಿ ಅನೇಕರ ಸ್ಥಿತಿ ಇದೇ ಆಗಿದೆ. ಇನ್ನು ದೇವರನ್ನು ನಿರಾಕರಿಸುವ ಕಾಳಜಿಯೇ ಇಲ್ಲ, ಬದಲಾಗಿ ದೇವರು ಅಸ್ತಿತ್ವದಲ್ಲೇ ಇಲ್ಲ ಎಂಬಂತೆ ಬದುಕುವ ಪ್ರವೃತ್ತಿ ಕಂಡುಬರುತ್ತದೆ” ಎಂದು ಕಾರ್ಡಿನಲ್ ಗಮನಿಸಿದರು.

ಪ್ರಭುವಿನ ವಾಕ್ಯದಲ್ಲಿ ನಮ್ಮ ಸಂತೋಷವನ್ನು ಕಂಡುಕೊಳ್ಳುವುದು

ಅಂಥವರು ತಮ್ಮ ಜೀವನವನ್ನು “ದೇವರು ನಮ್ಮೊಂದಿಗೆ ಮಾತನಾಡಿಯೇ ಇಲ್ಲದಂತೆ, ದೇವರು ನಮ್ಮನ್ನು ಭೇಟಿಯಾಗಲು ಬಂದೇ ಇಲ್ಲದಂತೆ, ಸಂತೋಷದ ಮಾರ್ಗವನ್ನು ನಮಗೆ ತೋರಿಸಿಯೇ ಇಲ್ಲದಂತೆ” ವ್ಯವಸ್ಥೆ ಮಾಡಿಕೊಂಡು ಬದುಕುತ್ತಾರೆ ಎಂದು ಅವರು ಹೇಳಿದರು.

ಇದಕ್ಕೆ ವಿರುದ್ಧವಾಗಿ, “ಪ್ರಭುವಿನ ನಿಯಮದಲ್ಲಿ ತನ್ನ ಸಂತೋಷವನ್ನು ಕಂಡುಕೊಳ್ಳುವ” ವ್ಯಕ್ತಿ, “ತನ್ನ ಜೀವನದ ಮೂಲವನ್ನು ಎಲ್ಲಿಂದ ಪಡೆಯಬೇಕೆಂದು ತಿಳಿದಿರುವ ವ್ಯಕ್ತಿ”; ಅವನೇ “ನೀತಿವಂತನು” ಎಂದು ಅವರು ಹೇಳಿದರು.

ಅಂಥ ವ್ಯಕ್ತಿಗೆ “ದೇವರ ವಾಕ್ಯವು ಹೊರೆಯಲ್ಲ, ಬದಲಾಗಿ ಒಂದು ಮೂಲ; ಅದು ಸ್ವಾತಂತ್ರ್ಯಕ್ಕೆ ನಿರ್ಬಂಧವಲ್ಲ, ನಿಜವಾದ ಸ್ವಾತಂತ್ರ್ಯಕ್ಕೆ ಕರೆದೊಯ್ಯುವ ಮಾರ್ಗ.”

ದೇವರ ವಾಕ್ಯದ ಕುರಿತು ಧ್ಯಾನಿಸುವ ಮೂಲಕ “ಪವಿತ್ರ ಗ್ರಂಥವು ನಮ್ಮ ಜೀವನವನ್ನು ನಾವು ಗುರುತಿಸಿಕೊಳ್ಳುವ ಕನ್ನಡಿಯಾಗುತ್ತದೆ ಮತ್ತು ನಮ್ಮನ್ನು ಪ್ರಶ್ನಿಸಲು ಪ್ರೇರೇಪಿಸುವ ಧ್ವನಿಯಾಗುತ್ತದೆ” ಎಂದು ಕಾರ್ಡಿನಲ್ ಮುಂದುವರಿಸಿದರು.

“ನಾನು ಯಾವ ಮಾರ್ಗವನ್ನು ಅನುಸರಿಸುತ್ತಿದ್ದೇನೆ? ನನ್ನ ಹೃದಯವನ್ನು ಯಾವ ಮಾತುಗಳು ಮುನ್ನಡೆಸುತ್ತಿವೆ? ನಾನು ನನ್ನ ಸಂತೋಷವನ್ನು ಎಲ್ಲ ಹುಡುಕುತ್ತಿದ್ದೇನೆ?”

ಸಂತ ಅಗಾಥಾ ಅವರಂತೆ ದೇವರಲ್ಲಿ ಬೇರೂರಿರುವುದು

ಕೀರ್ತನೆ 1ರಲ್ಲಿ ನೀತಿವಂತನನ್ನು “ನೀರಿನ ಹೊಳೆಗಳ ಬಳಿಯಲ್ಲಿ ನೆಡಲ್ಪಟ್ಟ ಮರಕ್ಕೆ” ಹೋಲಿಸಲಾಗಿದೆ ಎಂದು ಕಾರ್ಡಿನಲ್ ಪರೋಲಿನ್ ರವರು ಗಮನಿಸಿದರು.

ಅಂಥ ವ್ಯಕ್ತಿಯು “ಆಳವಾದ ಬೇರುಗಳನ್ನು ಹೊಂದಿರುವುದರಿಂದ” ಫಲ ನೀಡುತ್ತಾನೆ. ಆ ಬೇರುಗಳು “ನೀರಿನ ಮೂಲವನ್ನು ತಲುಪುತ್ತವೆ.” ಆ ಮೂಲದಿಂದ ಅವನು “ಶಕ್ತಿಯನ್ನು” ಪಡೆಯುತ್ತಾನೆ ಮತ್ತು ಆದ್ದರಿಂದ ಪ್ರತಿಕೂಲ ಪರಿಸ್ಥಿತಿಗಳಲ್ಲಿಯೂ “ಜೀವಂತನಾಗಿ ಉಳಿಯುತ್ತಾನೆ.”

ಹೀಗಾಗಿ, ಸಂತ ಅಗಾಥಾರವರು “ದೇವರಲ್ಲಿ ಬೇರೂರಿರುವ ಜೀವನದ” ಮಾದರಿಯಾಗಿದ್ದಾರೆ ಎಂದು ಅವರು ಹೇಳಿದರು — “ಬಾಡಿಹೋಗದೆ, ಕಾಲಕ್ರಮೇಣ ಭರವಸೆಯ ಫಲಗಳನ್ನು ನೀಡುತ್ತಲೇ ಇರುವ ಜೀವನ.”

ಕೊನೆಯಲ್ಲಿ ಕಾರ್ಡಿನಲ್, ವಿಶ್ವಾಸಿಗಳನ್ನು “ಪ್ರಭುವಿನಲ್ಲಿ ದೃಢವಾಗಿ ನೆಲೆಗೊಂಡಿರಲು” ಆಹ್ವಾನಿಸಿದರು. ಜೊತೆಗೆ, “ಆಳವಾದ ಬೇರುಗಳನ್ನು ಹೊಂದಿರುವ ಪುರುಷರು ಮತ್ತು ಮಹಿಳೆಯರನ್ನಾಗಿ ನಮ್ಮನ್ನು ರೂಪಿಸಬೇಕೆಂದು” ದೇವರಲ್ಲಿ ಪ್ರಾರ್ಥಿಸುವಂತೆ ಕರೆ ನೀಡಿದರು — “ಭಯ, ಫ್ಯಾಷನ್‌ಗಳು ಮತ್ತು ಭ್ರಮೆಗಳ ಗಾಳಿಗೆ ಕೊಚ್ಚಿಹೋಗದೆ, ಪ್ರಭುವಿನ ವಾಕ್ಯದಲ್ಲಿ ನಮ್ಮ ಜೀವನದ ಮೂಲವನ್ನು ಕಂಡುಕೊಳ್ಳುವವರಾಗಲು” ಅವರು ಪ್ರಾರ್ಥಿಸಬೇಕೆಂದರು.

ಜಗದ್ಗುರುಗಳ ಅಧ್ಯಕ್ಷತೆಯ ಪವಿತ್ರ ಆಚರಣೆ

ಭಾನುವಾರ ಸಂಜೆ ತಡವಾಗಿ ಆಚಿ ಕಾಸ್ಟೆಲ್ಲೊಗೆ ತರಲಾಗಿದ್ದ ಸಂತ ಅಗಾಥಾ ರವರ ಪವಿತ್ರ ಅವಶೇಷಗಳನ್ನು ಪಿಯಾಝಾ ಕಾಸ್ಟೆಲ್ಲೊದಲ್ಲಿ ಸಾರ್ವಜನಿಕ ದರ್ಶನಕ್ಕೆ ಇರಿಸಲಾಗಿದೆ. ಸೋಮವಾರ ಬೆಳಗ್ಗೆಯವರೆಗೆ ಅವುಗಳನ್ನು ಮಾತೃಧಮ೯ಸಭೆಯ ಭಕ್ತಿಪೂರ್ವಕ ವಂದನೆಗಾಗಿ ಇರಿಸಲಾಗುತ್ತದೆ. ನಂತರ ಅವುಗಳನ್ನು ಮತ್ತೆ ಕತಾನಿಯಾಗೆ ಕೊಂಡೊಯ್ಯಲಾಗುತ್ತದೆ.

ಅಲ್ಲಿ ರಾತ್ರಿ 8 ಗಂಟೆಗೆ, ಪಿಯಾಝಾ ದುವೊಮೊದಲ್ಲಿ ಕಾರ್ಡಿನಲ್ ಪರೋಲಿನ್ ರವರ ಅಧ್ಯಕ್ಷತೆಯಲ್ಲಿ ಜಗದ್ಗುರುಗಳ ವಿಶೇಷ ಆಶೀರ್ವಾದ ಮತ್ತು ಜೂಬಿಲಿ ಕ್ಷಮಾದಾನ ನೀಡಲಾಗುವ ಪವಿತ್ರ ಬಲಿಪೂಜೆ ನಡೆಯಲಿದ್ದು, ಸಂತ ಅಗಾಥಾ ರವರ ಅವಶೇಷಗಳನ್ನು ಅಲ್ಲಿಗೆ ತರಲಾಗುತ್ತದೆ.

ಸಿಸಿಲಿಯ ಆರ್ಚ್‌ಬಿಷಪ್‌ಗಳು ಮತ್ತು ಬಿಷಪ್‌ಗಳೊಂದಿಗೆ ಒತ್ರಾಂತೊದ ಆರ್ಚ್‌ಬಿಷಪ್ ಹಾಗೂ ನಾರ್ದೊ-ಗಲ್ಲಿಪೊಲಿಯ ಬಿಷಪ್ ಕೂಡ ಭಾಗವಹಿಸಲಿದ್ದಾರೆ. ಸಂಪ್ರದಾಯದ ಪ್ರಕಾರ ಸಂತ ಅಗಾಥಾ ಅವರ ಅವಶೇಷಗಳು ಈ ಎರಡೂ ಧರ್ಮಪ್ರಾಂತ್ಯಗಳ ಮೂಲಕ ಹಾದುಹೋಗಿದ್ದವು. ಅಲ್ಲದೆ, ಸಿಸಿಲಿಯ ಈ ಹುತಾತ್ಮ ಸಂತೆಯನ್ನು ಸಹ-ಪೋಷಕ ಸಂತೆಯಾಗಿ ಗೌರವಿಸುವ ಸಾನ್ ಮರಿನೊ-ಮಾಂಟೆಫೆಲ್ಟ್ರೊ ಧರ್ಮಪ್ರಾಂತ್ಯದ ಬಿಷಪ್ ಕೂಡ ಈ ಆಚರಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

17 ಆಗಸ್ಟ್ 2026, 18:27