ಗಾಜಾದಲ್ಲಿ ಮಾನವೀಯ ನೆರವಿಗೆ ಅಡ್ಡಿಪಡಿಸುವುದು ಮಾನವೀಯ ಅಂತರರಾಷ್ಟ್ರೀಯ ಕಾನೂನಿನ ಗಂಭೀರ ಉಲ್ಲಂಘನೆ ಎಂದು ಜಗದ್ಗುರುಗಳ ಅಧಿಕಾರ ಸ್ಥಳವು ಹೇಳಿದೆ.
ವ್ಯಾಟಿಕನ್ ವರದಿ
ಪ್ಯಾಲೆಸ್ಟೀನಿಯನ್ ನಿರಾಶ್ರಿತರಿಗೆ ಜೀವನಾಡಿಯಾಗಿರುವ ಯುಎನ್‌ಆರ್‌ಡಬ್ಲ್ಯುಎಗೆ ತನ್ನ ಆರ್ಥಿಕ ಬೆಂಬಲವನ್ನು ಪುನರುಚ್ಚರಿಸಿದ ಜಗದ್ಗುರುಗಳ ಅಧಿಕಾರ ಸ್ಥಳ.
ಪ್ಯಾಲೆಸ್ಟೀನ್ ನಿರಾಶ್ರಿತರಿಗಾಗಿ ಸಮೀಪದ ಪೂರ್ವದಲ್ಲಿನ ಸಂಯುಕ್ತ ರಾಷ್ಟ್ರಗಳ ಪರಿಹಾರ ಮತ್ತು ಕಾರ್ಯಗಳ ಸಂಸ್ಥೆಗೆ ತನ್ನ ಆರ್ಥಿಕ ಬೆಂಬಲವನ್ನು ಜಗದ್ಗುರುಗಳ ಅಧಿಕಾರ ಸ್ಥಳವು ಮತ್ತೊಮ್ಮೆ ದೃಢಪಡಿಸಿದೆ. ಲಕ್ಷಾಂತರ ಪ್ಯಾಲೆಸ್ಟೀನಿಯನ್ ನಿರಾಶ್ರಿತರಿಗೆ ಈ ಸಂಸ್ಥೆಯು "ಅನಿವಾರ್ಯ ಜೀವನಾಡಿ"ಯಾಗಿದೆ ಎಂದು ಬಣ್ಣಿಸಿರುವ ಜಗದ್ಗುರುಗಳ ಅಧಿಕಾರ ಸ್ಥಳವು, ಅದರ ಮಾನವೀಯ ಸೇವೆಗಳು ಯಾವುದೇ ಅಡೆತಡೆಯಿಲ್ಲದೆ ಮುಂದುವರಿಯುವಂತೆ ಅಂತರರಾಷ್ಟ್ರೀಯ ಸಮುದಾಯವು ಅಗತ್ಯ ಬೆಂಬಲವನ್ನು ನೀಡಬೇಕೆಂದು ಕರೆ ನೀಡಿದೆ.
ಮಂಗಳವಾರ ನಡೆದ ಯುಎನ್‌ಆರ್‌ಡಬ್ಲ್ಯುಎಗೆ ಸ್ವಯಂಪ್ರೇರಿತ ದೇಣಿಗೆಗಳ ಘೋಷಣೆಗಾಗಿ ಸಂಯುಕ್ತ ರಾಷ್ಟ್ರಗಳ ಸಾಮಾನ್ಯ ಸಭೆಯ ತಾತ್ಕಾಲಿಕ ಸಮಿತಿಯ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಜಗದ್ಗುರುಗಳ ಅಧಿಕಾರ ಸ್ಥಳದ ಸಂಯುಕ್ತ ರಾಷ್ಟ್ರಗಳ ಶಾಶ್ವತ ವೀಕ್ಷಕ ನಿಯೋಗ, ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿನ, ವಿಶೇಷವಾಗಿ ಗಾಜಾದಲ್ಲಿನ ಮಾನವೀಯ ಪರಿಸ್ಥಿತಿಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿತು. ಅಲ್ಲಿ ನಾಗರಿಕರು ಇನ್ನೂ ಹಿಂಸಾಚಾರ, ಸ್ಥಳಾಂತರ ಮತ್ತು ತೀವ್ರ ಸಂಕಷ್ಟಗಳನ್ನು ಅನುಭವಿಸುತ್ತಿದ್ದಾರೆ ಎಂದು ಅದು ತಿಳಿಸಿತು.
"ಏಳು ದಶಕಗಳಿಗೂ ಹೆಚ್ಚು ಕಾಲದಿಂದ ಯುಎನ್‌ಆರ್‌ಡಬ್ಲ್ಯುಎ ಶಿಕ್ಷಣ, ಆರೋಗ್ಯ ಸೇವೆ, ಆಹಾರ ನೆರವು ಹಾಗೂ ಸಾಮಾಜಿಕ ಸೇವೆಗಳನ್ನು ಒದಗಿಸುತ್ತಿದೆ" ಎಂದು ಜಗದ್ಗುರುಗಳ ಅಧಿಕಾರ ಸ್ಥಳ ತಿಳಿಸಿತು. ಈ ಸಂಸ್ಥೆಯು ಕೇವಲ ಪ್ರಾಯೋಗಿಕ ನೆರವನ್ನಷ್ಟೇ ಅಲ್ಲ, "ಗೌರವಯುತ ಜೀವನ ನಡೆಸುವ ಅವಕಾಶವನ್ನೂ" ಒದಗಿಸುತ್ತದೆ ಎಂದು ಅದು ಒತ್ತಿಹೇಳಿತು.
ಯುಎನ್‌ಆರ್‌ಡಬ್ಲ್ಯುಎ ಸಿಬ್ಬಂದಿ ಮತ್ತು ಕಟ್ಟಡಗಳ ಮೇಲಿನ ದಾಳಿಗಳನ್ನು ಖಂಡನೆ
ಯುಎನ್‌ಆರ್‌ಡಬ್ಲ್ಯುಎ ಸಿಬ್ಬಂದಿಯ ಹತ್ಯೆ ಹಾಗೂ ನಾಗರಿಕರಿಗೆ ಆಶ್ರಯ ನೀಡುತ್ತಿದ್ದ ಶಾಲೆಗಳು ಸೇರಿದಂತೆ ಸಂಸ್ಥೆಯ ಕಟ್ಟಡಗಳ ಮೇಲಿನ ದಾಳಿಗಳನ್ನು ಜಗದ್ಗುರುಗಳ ಅಧಿಕಾರ ಸ್ಥಳ ಖಂಡಿಸಿತು. ಮಾನವೀಯ ನೆರವು ಕಾರ್ಯಕರ್ತರು ಮತ್ತು ಅವರ ಮೂಲಸೌಕರ್ಯಗಳನ್ನು ರಕ್ಷಿಸಬೇಕೆಂದು ಅದು ಆಗ್ರಹಿಸಿತು. ವಿಶೇಷವಾಗಿ ಗಾಜಾದಲ್ಲಿ ಮಾನವೀಯ ನೆರವು ಸುರಕ್ಷಿತವಾಗಿ ಮತ್ತು ಯಾವುದೇ ಅಡ್ಡಿಯಿಲ್ಲದೆ ತಲುಪುವಂತೆ ಮಾಡಬೇಕೆಂದು ಅದು ಒತ್ತಾಯಿಸಿತು.
"ಈ ರೀತಿಯ ಕೃತ್ಯಗಳು ಈಗಾಗಲೇ ಅತ್ಯಂತ ದುರ್ಬಲ ಪರಿಸ್ಥಿತಿಯಲ್ಲಿ ಬದುಕುತ್ತಿರುವ ಜನರ ಸಂಕಷ್ಟವನ್ನು ಇನ್ನಷ್ಟು ಉಲ್ಬಣಗೊಳಿಸುತ್ತವೆ ಮತ್ತು ಅಂತರರಾಷ್ಟ್ರೀಯ ಮಾನವೀಯ ಕಾನೂನಿನ ಗಂಭೀರ ಉಲ್ಲಂಘನೆಯಾಗಿವೆ" ಎಂದು ಜಗದ್ಗುರುಗಳ ಅಧಿಕಾರ ಸ್ಥಳ ಹೇಳಿತು.
ಈ ಮನವಿಯು, ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಾದ್ಯಂತ ಮಾನವೀಯ ಪರಿಸ್ಥಿತಿಯು ನಿರಂತರವಾಗಿ ಹದಗೆಡುತ್ತಿರುವ ಸಂದರ್ಭದಲ್ಲಿ ಬಂದಿದೆ. 2025ರ ಕೊನೆಯಲ್ಲಿ ಕದನ ವಿರಾಮ ಘೋಷಣೆಯಾದರೂ, ಗಾಜಾದಲ್ಲಿ ಹಿಂಸಾಚಾರ ಮುಂದುವರಿದಿದೆ. ಮತ್ತೊಂದೆಡೆ, ನೆರವು ಸಂಸ್ಥೆಗಳು ಪ್ರವೇಶದ ಮೇಲಿನ ನಿರ್ಬಂಧಗಳು, ಹಣಕಾಸಿನ ಕೊರತೆ ಹಾಗೂ ನಾಗರಿಕ ಮೂಲಸೌಕರ್ಯಗಳಿಗೆ ಉಂಟಾಗಿರುವ ಹಾನಿಯಿಂದ ಪರಿಹಾರ ಕಾರ್ಯಗಳಿಗೆ ತೀವ್ರ ಅಡ್ಡಿಯಾಗುತ್ತಿದೆ ಎಂದು ಎಚ್ಚರಿಸಿವೆ. ಗಾಜಾದ ಜನಸಂಖ್ಯೆಯ ಶೇಕಡಾ 70ಕ್ಕಿಂತಲೂ ಹೆಚ್ಚು ಮಂದಿ ಈಗ ಟ್ಯಾಂಕರ್‌ಗಳ ಮೂಲಕ ಸರಬರಾಜು ಮಾಡಲಾಗುವ ನೀರನ್ನೇ ಅವಲಂಬಿಸಿದ್ದಾರೆ. ಆಶ್ರಯ, ಆರೋಗ್ಯ ಸೇವೆ ಮತ್ತು ನೈರ್ಮಲ್ಯ ಸೌಲಭ್ಯಗಳ ಕೊರತೆಯೂ ತೀವ್ರವಾಗಿದೆ.
ಗಂಭೀರ ಸಂಕಷ್ಟದ ಅಂಚಿನಲ್ಲಿ ಯುಎನ್‌ಆರ್‌ಡಬ್ಲ್ಯುಎ
ಇದೇ ವೇಳೆ, ಸುಮಾರು 100 ಮಿಲಿಯನ್ ಅಮೆರಿಕನ್ ಡಾಲರ್‌ಗಳಷ್ಟು ಹಣಕಾಸಿನ ಕೊರತೆಯಿಂದ ಯುಎನ್‌ಆರ್‌ಡಬ್ಲ್ಯುಎ ಕುಸಿತದ ಅಂಚಿಗೆ ತಲುಪಿದೆ ಎಂದು ಸಂಯುಕ್ತ ರಾಷ್ಟ್ರಗಳ ಮಹಾ ಕಾರ್ಯದರ್ಶಿ ಆಂಟೋನಿಯೊ ಗುಟೆರೇಶ್ ಎಚ್ಚರಿಕೆ ನೀಡಿದ್ದಾರೆ. ಈಗಾಗಲೇ ಸಂಸ್ಥೆಯು ಕೆಲವು ಸೇವೆಗಳನ್ನು ಕಡಿತಗೊಳಿಸಿ, ವೆಚ್ಚ ನಿಯಂತ್ರಣ ಕ್ರಮಗಳನ್ನು ಜಾರಿಗೆ ತಂದಿದೆ. ಆದಾಗ್ಯೂ, ಗಾಜಾ, ಪಶ್ಚಿಮ ದಂಡೆ, ಜೋರ್ಡನ್, ಲೆಬನಾನ್ ಮತ್ತು ಸಿರಿಯಾದಲ್ಲಿರುವ ಲಕ್ಷಾಂತರ ಪ್ಯಾಲೆಸ್ಟೀನಿಯನ್ ನಿರಾಶ್ರಿತರಿಗೆ ತನ್ನ ಸೇವೆಯನ್ನು ಅದು ಮುಂದುವರಿಸುತ್ತಿದೆ.
ಈ ಹಿನ್ನೆಲೆಯಲ್ಲೇ, ಜಗದ್ಗುರುಗಳ ಅಧಿಕಾರ ಸ್ಥಳದ ಯುಎನ್‌ಆರ್‌ಡಬ್ಲ್ಯುಎಗೆ ತನ್ನ ಹಣಕಾಸಿನ ನೆರವನ್ನು ನವೀಕರಿಸುವುದಾಗಿ ಘೋಷಿಸಿತು. ಈ ಕೊಡುಗೆಯು "ಪ್ಯಾಲೆಸ್ಟೀನಿಯನ್ ನಿರಾಶ್ರಿತರೊಂದಿಗೆ ನಮ್ಮ ಐಕ್ಯತೆಯ ಸ್ಪಷ್ಟ ಅಭಿವ್ಯಕ್ತಿ ಹಾಗೂ ಸಂಸ್ಥೆಯ ಮಾನವೀಯ ಧ್ಯೇಯದ ಮೇಲಿನ ವಿಶ್ವಾಸದ ಸಂಕೇತ" ಎಂದು ಅದು ತಿಳಿಸಿತು.
ಯುಎನ್‌ಆರ್‌ಡಬ್ಲ್ಯುಎ ತನ್ನ ಜವಾಬ್ದಾರಿಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸಮರ್ಪಕ, ನಿರೀಕ್ಷಿತ ಹಾಗೂ ದೀರ್ಘಕಾಲಿಕ ಬೆಂಬಲ ಅತ್ಯಗತ್ಯವೆಂದು ಜಗದ್ಗುರುಗಳ ಅಧಿಕಾರ ಸ್ಥಳ ಒತ್ತಿಹೇಳಿತು. ಮಾನವೀಯತೆ, ತಟಸ್ಥತೆ, ನಿಷ್ಪಕ್ಷಪಾತತೆ ಮತ್ತು ಸ್ವಾತಂತ್ರ್ಯದ ಮೂಲತತ್ವಗಳ ಆಧಾರದ ಮೇಲೆ ಸಂಸ್ಥೆಯ ಕಾರ್ಯ ಮುಂದುವರಿಯಬೇಕು ಇದೇ ಅದರ ವಿಶ್ವಾಸಾರ್ಹತೆ ಮತ್ತು ಪರಿಣಾಮಕಾರಿತ್ವವನ್ನು ಕಾಪಾಡುವ ಪ್ರಮುಖ ಅಂಶಗಳಾಗಿವೆ ಎಂದು ಅದು ತಿಳಿಸಿತು.
ತನ್ನ ಭಾಷಣದ ಕೊನೆಯಲ್ಲಿ, 1949ರಲ್ಲಿ ಸಂಯುಕ್ತ ರಾಷ್ಟ್ರಗಳ ಸಾಮಾನ್ಯ ಸಭೆಯಿಂದ ಸ್ಥಾಪಿಸಲ್ಪಟ್ಟ ಯುಎನ್‌ಆರ್‌ಡಬ್ಲ್ಯುಎಯ ಅಧಿಕಾರವ್ಯಾಪ್ತಿಯನ್ನು ಸಂರಕ್ಷಿಸುವ ಮಹತ್ವವನ್ನು ಜಗದ್ಗುರುಗಳ ಅಧಿಕಾರ ಸ್ಥಳ ಪುನರುಚ್ಚರಿಸಿತು. ಸಂಸ್ಥೆಯ ಭವಿಷ್ಯದ ಕುರಿತು ಯಾವುದೇ ಚರ್ಚೆಯು ಏಕಪಕ್ಷೀಯ ಕ್ರಮಗಳ ಮೂಲಕವಲ್ಲ, ಬದಲಾಗಿ ಸಂಯುಕ್ತ ರಾಷ್ಟ್ರಗಳ ಬಹುಪಕ್ಷೀಯ ಚೌಕಟ್ಟಿನೊಳಗೆ ನಡೆಯಬೇಕೆಂದು ಅದು ಸ್ಪಷ್ಟಪಡಿಸಿತು.