ಪಾನ್ ಡೈಜಿಂಗ್ ರವರ 'ಕೋನ್ಚಿಲಿಯಾಚಿಯೋನೇ 5' ಸ್ಥಾಪನಾ ಕಲಾಕೃತಿ, ಕತ್ತಲೆಯನ್ನು ಮೀರಿ ಓದಲು ಸಂದರ್ಶಕರನ್ನು ಆಹ್ವಾನಿಸುತ್ತದೆ.
ವ್ಯಾಟಿಕನ್ ವರದಿ
ಚೀನಾದ ಕಲಾವಿದೆ ಪಾನ್ ಡೈಜಿಂಗ್ ರವರ 'ಕೋನ್ಚಿಲಿಯಾಚಿಯೋನೇ 5' ಸ್ಥಾಪನಾ ಕಲಾಕೃತಿಯು ಕತ್ತಲೆಯ ಮಧ್ಯೆ ಬೆಳಕಿನ ಕಿರಣದಂತೆ ಸಂದರ್ಶಕರನ್ನು ಮೌನ, ಆತ್ಮಾವಲೋಕನ ಮತ್ತು ಆಂತರಿಕ ಅರಿವಿನ ಪಯಣಕ್ಕೆ ಆಹ್ವಾನಿಸುತ್ತದೆ. ವ್ಯಾಟಿಕನ್‌ನ ಸಂಸ್ಕೃತಿ ಮತ್ತು ಶಿಕ್ಷಣ ವಿಭಾಗದ ಓದುವುದು ಮತ್ತೆ ಸರಣಿಯ ಭಾಗವಾಗಿರುವ ಈ ಕಲಾಕೃತಿಯು ಕೇವಲ ನೋಡುವ ವಸ್ತುವಲ್ಲ ಬದಲಾಗಿ, ಪ್ರೇಕ್ಷಕರ ಸಕ್ರಿಯ ಭಾಗವಹಿಸುವಿಕೆಯೊಂದಿಗೆ ನಿಧಾನವಾಗಿ ತನ್ನ ಅರ್ಥವನ್ನು ತೆರೆದಿಡುವ ಅನುಭವವಾಗಿದೆ.
ಕೃತಿಯ ಪರಿಚಯ ಸಂದರ್ಭದಲ್ಲಿ ಮಾತನಾಡಿದ ಕಾರ್ಡಿನಲ್ ಜೋಸೆ ಟೊಲೆಂಟಿನೊ ದೆ ಮೆಂಡೋನ್ಸಾ ರವರು, ಈ ಸ್ಥಾಪನಾ ಕಲಾಕೃತಿಯು ಓದನ್ನು ಪದಗಳ ಅರ್ಥಗ್ರಹಣಕ್ಕೆ ಮಾತ್ರ ಸೀಮಿತಗೊಳಿಸದೆ, ಮನುಷ್ಯನ ಭಾವನೆಗಳು, ಆಲಿಸುವಿಕೆ, ತಾಳ್ಮೆ ಮತ್ತು ಆತ್ಮಸ್ಪರ್ಶವನ್ನು ಒಳಗೊಂಡ ಆಳವಾದ ಮಾನವೀಯ ಅನುಭವವಾಗಿ ಪರಿಚಯಿಸುತ್ತದೆ ಎಂದು ಹೇಳಿದರು. ಜಗದ್ಗುರು ಲಿಯೋರವರು ಮಾತುಗಳನ್ನು ಉಲ್ಲೇಖಿಸಿದ ಅವರು, “ನಮಗೆ ಒಪ್ಪಿಸಲಾದ ಅದ್ಭುತ ಮಾನವೀಯತೆಯನ್ನು ಪ್ರೀತಿಯಿಂದ ಕಾಪಾಡುವುದು ನಮ್ಮ ತುರ್ತು ಕರ್ತವ್ಯವಾಗಿದೆ” ಎಂದು ನೆನಪಿಸಿದರು.
ಪಾನ್ ಡೈಜಿಂಗ್ ರವರ ಪ್ರಕಾರ, ಇಂದಿನ ಗದ್ದಲಮಯ ಜಗತ್ತಿನಲ್ಲಿ ಮನುಷ್ಯನು ತನ್ನೊಳಗಿನ ಮೌನವನ್ನು ಮರುಹುಡುಕಿಕೊಳ್ಳಬೇಕಾಗಿದೆ. ಅವರ ದೃಷ್ಟಿಯಲ್ಲಿ ಮೌನ ಎಂದರೆ ನಿಶ್ಚಲತೆ ಅಲ್ಲ ಅದು ಬೆಳವಣಿಗೆ, ಆತ್ಮಾವಲೋಕನ ಮತ್ತು ನಮ್ಮ ಭಾವನೆಗಳು ಹಾಗೂ ಕನಸುಗಳೊಂದಿಗೆ ಪ್ರಾಮಾಣಿಕವಾಗಿ ಮುಖಾಮುಖಿಯಾಗುವ ಅವಕಾಶವಾಗಿದೆ. ತಮ್ಮ ಕಲಾಸೃಷ್ಟಿಯ ಮೂಲಕ ಅವರು ತಮ್ಮನ್ನೇ ಹೆಚ್ಚು ಆಳವಾಗಿ ಅರಿತುಕೊಳ್ಳುವ ಪ್ರಯತ್ನವನ್ನು ಮುಂದುವರಿಸುತ್ತಿದ್ದಾರೆ.
ಕಾರ್ಡಿನಲ್ ಟೊಲೆಂಟಿನೊ ರವರು ಈ ಕಲಾಕೃತಿಯನ್ನು ಪ್ಲೇಟೋನ ಗುಹೆಯ ರೂಪಕ ಮತ್ತು ಸಂತ ಆಗಸ್ಟಿನ್ ರವರ ‘ಸ್ಮೃತಿಯ ಗುಹೆ’ಯೊಂದಿಗೆ ಹೋಲಿಸಿದರು. ಅವರ ಮಾತಿನಲ್ಲಿ, ಈ ಕಲಾಕೃತಿಯ ಕತ್ತಲೆ ಅಜ್ಞಾನದ ಸಂಕೇತವಲ್ಲ, ಅದು ಮನುಷ್ಯನ ಆಂತರಿಕ ಜಗತ್ತನ್ನು ಅನ್ವೇಷಿಸುವ ಮತ್ತು ಸತ್ಯವನ್ನು ಕಂಡುಕೊಳ್ಳುವ ಜೀವಂತ ಸ್ಥಳವಾಗಿದೆ. ಇಲ್ಲಿ ಕಲೆಯು ಮಾಹಿತಿ ನೀಡುವುದಕ್ಕಿಂತ ಹೆಚ್ಚಾಗಿ, ಆತ್ಮಶೋಧನೆಗೆ ದಾರಿ ಮಾಡಿಕೊಡುತ್ತದೆ.
ಶಿಲ್ಪಕಲೆ, ಧ್ವನಿ, ಸಂಗೀತ, ವಿಡಿಯೊ ಮತ್ತು ಪ್ರದರ್ಶನ ಕಲೆಯನ್ನು ಒಂದೇ ಅನುಭವವಾಗಿ ಬೆಸೆದಿರುವ ಪಾನ್ ಡೈಜಿಂಗ್ ರವರ ಕೃತಿಯು ಪ್ರತಿಯೊಬ್ಬ ಪ್ರೇಕ್ಷಕರಿಗೂ ತಮ್ಮೊಳಗಿನ ಲೋಕವನ್ನು ಅರಿಯುವ ಅವಕಾಶವನ್ನು ನೀಡುತ್ತದೆ. ಕ್ಯುರೇಟರ್ ಡೊನಾಟಿಯನ್ ಗ್ರೋರವರ ಮಾತಿನಲ್ಲಿ, ಈ ಕಲೆಯು ಕೇವಲ ಒಂದು ಕಲಾಕೃತಿಯಲ್ಲ ಅದು ಜೀವನ, ಸಂಶೋಧನೆ ಮತ್ತು ಆತ್ಮಶೋಧನೆಯ ನಿರಂತರ ಪಯಣವಾಗಿದೆ. ಅವರು ಮಾರ್ಸೆಲ್ ಪ್ರೂಸ್ಟ್ ರವರ ಮಾತನ್ನು ಉಲ್ಲೇಖಿಸಿ, “ಪ್ರತಿಯೊಬ್ಬ ಓದುಗರೂ ಓದುವಾಗ ತಮ್ಮನ್ನೇ ಓದುತ್ತಾರೆ” ಎಂದು ಹೇಳಿದರು.
ಪ್ರದರ್ಶನದ ಪೂರ್ವಭಾವಿ ಸಂವಾದದಲ್ಲಿ ಪಾನ್ ಡೈಜಿಂಗ್, ಓದು ಎಂದರೆ ಕೇವಲ ಸಾಹಿತ್ಯವನ್ನು ಓದುವುದಲ್ಲ,ಅದು ಮೌನವನ್ನು, ಆಲೋಚನೆಗಳನ್ನು, ಅರ್ಥವಾಗದ ಅನುಭವಗಳನ್ನು ಮತ್ತು ನಮ್ಮೊಳಗಿನ ಪ್ರತಿಕ್ರಿಯೆಗಳನ್ನು ಓದುವುದೂ ಆಗಿದೆ ಎಂದು ವಿವರಿಸಿದರು. ಕಲಾವಿದನ ಪಾತ್ರವು ಒಂದು ‘ಶೋಧಕ’ದಂತಿದ್ದು, ಜೀವನದ ಅನುಭವಗಳಿಂದ ಮೂಡುವ ಸೂಕ್ಷ್ಮ ಭಾವನೆಗಳನ್ನು ಶುದ್ಧೀಕರಿಸಿ ಇತರರೊಂದಿಗೆ ಹಂಚಿಕೊಳ್ಳುವುದೇ ತನ್ನ ಕಲೆಯ ಉದ್ದೇಶ ಎಂದು ಅವರು ಹೇಳಿದರು.