ಹುಡುಕಿ

ಎಎಸ್ಐಎಫ್ ಮತ್ತು ಡಾಯ್ಚ ಬುಂಡೆಸ್‌ಬ್ಯಾಂಕ್ ನಡುವೆ ತಾಂತ್ರಿಕ ಸಹಕಾರ ಶಿಷ್ಟಾಚಾರಕ್ಕೆ ಸಹಿ ಎಎಸ್ಐಎಫ್ ಮತ್ತು ಡಾಯ್ಚ ಬುಂಡೆಸ್‌ಬ್ಯಾಂಕ್ ನಡುವೆ ತಾಂತ್ರಿಕ ಸಹಕಾರ ಶಿಷ್ಟಾಚಾರಕ್ಕೆ ಸಹಿ 

ಎಎಸ್‌ಐಎಫ್ ಹಾಗೂ ಡಾಯ್ಚೆ ಬುಂಡೆಸ್‌ಬ್ಯಾಂಕ್ ತಾಂತ್ರಿಕ ಸಹಕಾರಕ್ಕಾಗಿ ಪರಸ್ಪರ ಸಹಕಾರ ಒಪ್ಪಂದಕ್ಕೆ ಸಹಿ ಹಾಕಿದವು.

ಎರಡೂ ಸಂಸ್ಥೆಗಳ ನಡುವಿನ ತಾಂತ್ರಿಕ ಸಹಕಾರ ಒಪ್ಪಂದಕ್ಕೆ ಜುಲೈ 17ರಂದು ವ್ಯಾಟಿಕನ್‌ನಲ್ಲಿ ಸಹಿ ಹಾಕಲಾಯಿತು. ಈ ಸಹಭಾಗಿತ್ವವು, ಅಂತರರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ ತನ್ನ ಹಣಕಾಸು ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಜಗದ್ಗುರುಗಳ ಅಧಿಕಾರ ಸ್ಥಳವು ಸ್ಪಷ್ಟ ಬದ್ಧತೆಯಿಂದ ಸಾಧ್ಯವಾಗಿದೆ.

ವ್ಯಾಟಿಕನ್ ವರದಿ

ಜುಲೈ 17ರ ಶುಕ್ರವಾರ ವ್ಯಾಟಿಕನ್‌ನ ಪಲಾಜ್ಜೊ ಸಾನ್ ಕಾರ್ಲೋದಲ್ಲಿ, ಮೇಲ್ವಿಚಾರಣೆ ಮತ್ತು ಹಣಕಾಸು ಮಾಹಿತಿ ಪ್ರಾಧಿಕಾರ ( ಎಎಸ್‌ಐಎಫ್ )ಹಾಗೂ ಡಾಯ್ಚೆ ಬುಂಡೆಸ್‌ಬ್ಯಾಂಕ್  ಎರಡೂ ಸಂಸ್ಥೆಗಳ ನಡುವಿನ ತಾಂತ್ರಿಕ ಸಹಕಾರಕ್ಕಾಗಿ ಪರಸ್ಪರ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಿದವು. ಡಾಯ್ಚೆ ಬುಂಡೆಸ್‌ಬ್ಯಾಂಕ್ ಪರವಾಗಿ ಅದರ ಕಾರ್ಯಕಾರಿ ಮಂಡಳಿಯ ಸದಸ್ಯ ಡಾ. ಬೂರ್ಖಾರ್ಡ್ ಬಾಲ್ಜ್ ಅವರು ಹಾಗೂ ಎಎಸ್‌ಐಎಫ್ ಪರವಾಗಿ ಅದರ ನಿರ್ದೇಶಕರಾದ ಫೆಡೆರಿಕೊ ಅಂಟೆಲ್ಲಿನಿ ರುಸ್ಸೋ ಅವರು ಒಪ್ಪಂದಕ್ಕೆ ಸಹಿ ಹಾಕಿದರು.

ಅಂತರರಾಷ್ಟ್ರೀಯ ಹಣಕಾಸು ಸಮುದಾಯದಲ್ಲಿ ವಿಶ್ವಾಸಾರ್ಹತೆಯನ್ನು ಮತ್ತಷ್ಟು ಬಲಪಡಿಸುವ ಹೆಜ್ಜೆ

ಈ ಒಪ್ಪಂದವು ಜಗದ್ಗುರುಗಳ ಅಧಿಕಾರ ಸ್ಥಳ ಮತ್ತು ವ್ಯಾಟಿಕನ್ ನಗರರಾಜ್ಯದ ಹಣಕಾಸು ಕ್ಷೇತ್ರದ ಮೇಲ್ವಿಚಾರಣಾ ಪ್ರಾಧಿಕಾರ ಹಾಗೂ ಜರ್ಮನಿಯ ಫೆಡರಲ್ ಗಣರಾಜ್ಯದ ಕೇಂದ್ರ ಬ್ಯಾಂಕ್ ನಡುವಿನ ಸಂಬಂಧವನ್ನು ಇನ್ನಷ್ಟು ಬಲಪಡಿಸುವ ಮಹತ್ವದ ಹೆಜ್ಜೆಯಾಗಿದೆ. ಕಳೆದ ಹಲವು ವರ್ಷಗಳಿಂದ ಈ ಸಂಬಂಧ ನಿರಂತರವಾಗಿ ಬೆಳೆಯುತ್ತ ಬಂದಿದ್ದು, ಇತ್ತೀಚಿನ ತಿಂಗಳುಗಳಲ್ಲಿ ಅದು ಇನ್ನಷ್ಟು ಗಟ್ಟಿಯಾಗಿದೆ.

ಅಂತರರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ ತನ್ನ ಹಣಕಾಸು ವ್ಯವಸ್ಥೆಯನ್ನು ಬಲಪಡಿಸುವ ಜಗದ್ಗುರುಗಳ ಅಧಿಕಾರ ಸ್ಥಳ ಸ್ಪಷ್ಟ ಬದ್ಧತೆಯೇ ಈ ಸಹಭಾಗಿತ್ವ ಸಾಧ್ಯವಾಗಲು ಪ್ರಮುಖ ಕಾರಣವಾಗಿದೆ. ಹೆಚ್ಚಿದ ಪಾರದರ್ಶಕತೆ, ಉತ್ತರದಾಯಿತ್ವ ಹಾಗೂ ವೃತ್ತಿಪರತೆಯ ಮೂಲಕ ಜಗದ್ಗುರುಗಳ ಅಧಿಕಾರ ಸ್ಥಳವು ಅಂತರರಾಷ್ಟ್ರೀಯ ಹಣಕಾಸು ಸಮುದಾಯದಲ್ಲಿ ತನ್ನ ವಿಶ್ವಾಸಾರ್ಹತೆಯನ್ನು ಇನ್ನಷ್ಟು ದೃಢವಾಗಿ ಬೆಳೆಸಿಕೊಂಡಿದೆ.

ಅನುಭವ ಮತ್ತು ಅತ್ಯುತ್ತಮ ಕಾರ್ಯಪದ್ಧತಿಗಳ ವಿನಿಮಯ

ಈ ತಿಳಿವಳಿಕೆ ಒಪ್ಪಂದದ ಉದ್ದೇಶವು ಹಣಕಾಸು ಮೇಲ್ವಿಚಾರಣೆಯ ಕ್ಷೇತ್ರದಲ್ಲಿ ಎರಡೂ ಸಂಸ್ಥೆಗಳ ಜಂಟಿ ಪ್ರಯತ್ನಗಳು ಮತ್ತು ಪರಸ್ಪರ ಸಹಕಾರವನ್ನು ಮತ್ತಷ್ಟು ಬಲಪಡಿಸಿ ವಿಸ್ತರಿಸುವುದಾಗಿದೆ. ಇದರಲ್ಲಿ ತರಬೇತಿ ಕಾರ್ಯಕ್ರಮಗಳು, ಅನುಭವಗಳ ವಿನಿಮಯ ಹಾಗೂ ಅತ್ಯುತ್ತಮ ಕಾರ್ಯಪದ್ಧತಿಗಳ ಹಂಚಿಕೆ ಕೂಡ ಸೇರಿವೆ. ಈ ಸಹಕಾರದ ಸಾಮಾನ್ಯ ಗುರಿಯು ಅಂತರರಾಷ್ಟ್ರೀಯ ಹಣಕಾಸು ವ್ಯವಸ್ಥೆಯ ಪಾರದರ್ಶಕತೆ ಮತ್ತು ಸುಸ್ಥಿರತೆಯನ್ನು ಉತ್ತೇಜಿಸುವುದಾಗಿದೆ.

ಸಮಾರಂಭದಲ್ಲಿ ಮಾತನಾಡಿದ ಡಾ. ಬೂರ್ಖಾರ್ಡ್ ಬಾಲ್ಜ್ ಅವರು, "ಈ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ನಾವು ಪ್ರಾಮಾಣಿಕತೆ, ಪಾರದರ್ಶಕತೆ ಮತ್ತು ಅಂತರರಾಷ್ಟ್ರೀಯ ಸಹಕಾರ ಎಂಬ ತತ್ವಗಳ ನಮ್ಮ ಹಂಚಿಕೆಯ ಬದ್ಧತೆಯನ್ನು ಮತ್ತೊಮ್ಮೆ ದೃಢಪಡಿಸುತ್ತಿದ್ದೇವೆ. ಈ ಒಪ್ಪಂದವು ನಿರಂತರ ಮಾಹಿತಿ ವಿನಿಮಯ ಮತ್ತು ಪರಸ್ಪರ ಸಹಕಾರಕ್ಕೆ ಒಂದು ಚೌಕಟ್ಟನ್ನು ಒದಗಿಸುತ್ತದೆ. ಸ್ಥಿರ ಮತ್ತು ನ್ಯಾಯಸಮ್ಮತ ಹಣಕಾಸು ವ್ಯವಸ್ಥೆಯ ಮೂಲಕ ಸಾರ್ವಜನಿಕ ಹಿತವನ್ನು ಉತ್ತೇಜಿಸುವ ನಮ್ಮ ಸಾಮಾನ್ಯ ಆಶಯವನ್ನು ಇದು ಪ್ರತಿಬಿಂಬಿಸುತ್ತದೆ" ಎಂದು ಹೇಳಿದರು.

ಭವಿಷ್ಯದತ್ತ ವಿಶ್ವಾಸದಿಂದ ಮುನ್ನಡೆಯುವ ಸಂಕಲ್ಪ

ತಮ್ಮ ಉದ್ಘಾಟನಾ ಭಾಷಣದಲ್ಲಿ ಎಎಸ್‌ಐಎಫ್ ನಿರ್ದೇಶಕರಾದ ಫೆಡೆರಿಕೊ ಅಂಟೆಲ್ಲಿನಿ ರುಸ್ಸೋ ಅವರು, "ಈ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕುತ್ತಿರುವುದು ನಮ್ಮ ಪ್ರಾಧಿಕಾರ ಸ್ಥಾಪನೆಯ ಹದಿನೈದನೇ ವಾರ್ಷಿಕೋತ್ಸವದ ವರ್ಷದಲ್ಲಿ ನಡೆಯುತ್ತಿದೆ. ಇದೇ ವೇಳೆ, ಪರಮಪೂಜ್ಯ ಜಗದ್ಗುರುಗಳ ಅಧಿಕಾರ ಸ್ಥಳ‌ ಘೋಷಿಸಿರುವ ಮೇಲ್ವಿಚಾರಣೆ ಮತ್ತು ಹಣಕಾಸು ಮಾಹಿತಿ ಪ್ರಾಧಿಕಾರದ ಹೊಸ ನಿಯಮಾವಳಿ ಜಾರಿಗೆ ಬಂದ ಕೆಲವೇ ವಾರಗಳ ನಂತರ ಈ ಮಹತ್ವದ ಕ್ಷಣ ಬಂದಿದೆ. ಇಂತಹ ಮೈಲಿಗಲ್ಲುಗಳು ಮತ್ತು ವಾರ್ಷಿಕೋತ್ಸವಗಳು ನಾವು ಇದುವರೆಗೆ ನಡೆದು ಬಂದ ಹಾದಿಯನ್ನು ಅವಲೋಕಿಸಲು ಅವಕಾಶ ನೀಡುವುದರ ಜೊತೆಗೆ, ಎಲ್ಲಕ್ಕಿಂತ ಹೆಚ್ಚಾಗಿ ಭವಿಷ್ಯದತ್ತ ವಿಶ್ವಾಸದಿಂದ ನೋಡುವ ಪ್ರೇರಣೆಯನ್ನು ನೀಡುತ್ತವೆ. ನಮ್ಮ ಎರಡು ಸಂಸ್ಥೆಗಳ ನಡುವಿನ ಸಹಕಾರ ಮುಂದಿನ ದಿನಗಳಲ್ಲಿ ಇನ್ನಷ್ಟು ಬಲಗೊಂಡು, ಮತ್ತಷ್ಟು ಆತ್ಮೀಯವಾಗಲಿ ಎಂಬುದು ನನ್ನ ಆಶಯ" ಎಂದು ಹೇಳಿದರು.

ಈ ಸಹಿ ಸಮಾರಂಭದಲ್ಲಿ ರಾಜ್ಯ ಕಾರ್ಯದರ್ಶಾಲಯದ ರಾಜ್ಯಗಳೊಂದಿಗಿನ ಸಂಬಂಧಗಳು ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳ ವಿಭಾಗದ ಉಪ ಕಾರ್ಯದರ್ಶಿ ಮೊನ್ಸಿನ್ಯೋರ್ ಮಿಹೈತಾ ಬ್ಲಾಜ್ ಹಾಗೂ ಜಗದ್ಗುರುಗಳ ಅಧಿಕಾರ ಸ್ಥಳಕ್ಕೆ ಜರ್ಮನಿಯ ರಾಯಭಾರ ಕಚೇರಿಯ ಪೂರ್ಣಾಧಿಕಾರ ಸಚಿವ ಡಾ. ಕ್ರಿಸ್ಟೋಫ್ ಬ್ರಾನರ್ ಕೂಡ ಉಪಸ್ಥಿತರಿದ್ದರು.

18 ಜುಲೈ 2026, 17:33