ಹುಡುಕಿ

2026.07.14 Oleksandra Matviichuk

ಮೆಲಿಸ್ಸಾ ಪಾರ್ಕೆ: ಅಣ್ವಸ್ತ್ರಗಳು ಮತ್ತು ಕೃತಕ ಬುದ್ಧಿಮತ್ತೆ ಹೊಸ ಚಿಂತನಾ ವಿಧಾನವನ್ನು ಒತ್ತಾಯಿಸುತ್ತವೆ.

ಕ್ಯಾಸ್ಟೆಲ್ ಗಾಂಡೋಲ್ಫೊದಲ್ಲಿ ನಡೆದ ಜಾಗತಿಕ ನೊಬೆಲ್ ಪ್ರಶಸ್ತಿ ವಿಜೇತರ ಮಹಾಸಭೆಯಲ್ಲಿ ಮಾತನಾಡಿದ ಅಂತರರಾಷ್ಟ್ರೀಯ ಅಣ್ವಸ್ತ್ರ ನಿರ್ಮೂಲನಾ ಅಭಿಯಾನದ ಕಾರ್ಯನಿರ್ವಾಹಕ ನಿರ್ದೇಶಕಿ ಮೆಲಿಸ್ಸಾ ಪಾರ್ಕೆ, ಕೃತಕ ಬುದ್ಧಿಮತ್ತೆಯು ಅಣ್ವಸ್ತ್ರಗಳಿಂದ ಉಂಟಾಗುವ ಅಪಾಯಗಳನ್ನು ಮತ್ತಷ್ಟು ಹೆಚ್ಚಿಸುತ್ತಿದೆ ಎಂದು ಎಚ್ಚರಿಕೆ ನೀಡಿದರು. ಅಲ್ಲದೆ, ಸಂವಾದ, ಅಣ್ವಸ್ತ್ರ ನಿಶ್ಶಸ್ತ್ರೀಕರಣ ಹಾಗೂ ಅಂತರರಾಷ್ಟ್ರೀಯ ಕಾನೂನಿನ ಪಾಲನೆಗೆ ನವೀಕೃತ ಬದ್ಧತೆ ಅಗತ್ಯವೆಂದು ಅವರು ಕರೆ ನೀಡಿದರು.

ವ್ಯಾಟಿಕನ್ ವರದಿ

ಯುದ್ಧಗಳ ಸಂಖ್ಯೆ ಹೆಚ್ಚುತ್ತಿರುವ ಮತ್ತು ಅಣ್ವಸ್ತ್ರಗಳ ಬೆದರಿಕೆಯ ಭಾಷಣಗಳು ಮತ್ತೆ ಅಂತರರಾಷ್ಟ್ರೀಯ ರಾಜಕೀಯದಲ್ಲಿ ಕೇಳಿಬರುತ್ತಿರುವ ಈ ಸಂದರ್ಭದಲ್ಲಿ, ಅಂತರರಾಷ್ಟ್ರೀಯ ಅಣ್ವಸ್ತ್ರ ನಿರ್ಮೂಲನಾ ಅಭಿಯಾನದ ಕಾರ್ಯನಿರ್ವಾಹಕ ನಿರ್ದೇಶಕಿ ಮೆಲಿಸ್ಸಾ ಪಾರ್ಕೆ, ಜಾಗತಿಕ ನಾಯಕರಿಗೆ ಭಯೋತ್ಪಾದಕ ತಡೆ ನೀತಿಯನ್ನು ತಿರಸ್ಕರಿಸಿ, ಅದರ ಬದಲಿಗೆ ಸಂವಾದ, ರಾಜತಾಂತ್ರಿಕತೆ ಮತ್ತು ಅಣ್ವಸ್ತ್ರ ನಿಶ್ಶಸ್ತ್ರೀಕರಣದ ಮಾರ್ಗವನ್ನು ಅಳವಡಿಸಿಕೊಳ್ಳುವಂತೆ ಕರೆ ನೀಡಿದ್ದಾರೆ.

ಕ್ಯಾಸ್ಟೆಲ್ ಗಾಂಡೋಲ್ಫೊದಲ್ಲಿರುವ  ಬೊರ್ಗೋ ಲೌದಾತೋ ಸಿನಲ್ಲಿ ನಡೆದ ಕೃತಕ ಬುದ್ಧಿಮತ್ತೆ ಮತ್ತು ಅಣ್ವಸ್ತ್ರ ಯುದ್ಧ ಕುರಿತ ಜಾಗತಿಕ ನೊಬೆಲ್ ಪ್ರಶಸ್ತಿ ವಿಜೇತರ ಮಹಾಸಭೆಯ ಸಂದರ್ಭದಲ್ಲಿ ವ್ಯಾಟಿಕನ್ ನ್ಯೂಸ್ಗೆ ನೀಡಿದ ಸಂದರ್ಶನದಲ್ಲಿ ಪಾರ್ಕೆ, ಅಣ್ವಸ್ತ್ರಗಳ ಮೂಲಕ ಶತ್ರುವನ್ನು ತಡೆಯುವ ಸಿದ್ಧಾಂತವನ್ನೇ ಪ್ರಶ್ನಿಸಿದರು. ಸಾಮೂಹಿಕ ವಿನಾಶದ ಬೆದರಿಕೆಯ ಮೇಲೆ ಶಾಶ್ವತ ಶಾಂತಿಯನ್ನು ನಿರ್ಮಿಸಲು ಸಾಧ್ಯವಿಲ್ಲ ಎಂದು ಅವರು ಪ್ರತಿಪಾದಿಸಿದರು.

'ನಿರೋಧಕ ಶಕ್ತಿ'ಎಂಬ ಪದದ ಮೂಲದಲ್ಲೇ ಭಯೋತ್ಪಾದನೆ ಎಂಬ ಪದವಿದೆ. ನಾವು ಬದುಕಬೇಕೆಂದಿರುವ ಜಗತ್ತು ಇದೇನಾ? ಯುದ್ಧದ ನೆರಳಿನಲ್ಲಿ ಬದುಕುವ ಜಗತ್ತನ್ನೇ ನಾವು ಬಯಸುತ್ತೇವೆಯೇ? ಅಥವಾ ಪ್ರೀತಿ, ಸಹಕಾರ ಮತ್ತು ಪರಸ್ಪರ ಸೌಹಾರ್ದದಿಂದ ಕೂಡಿದ ಜಗತ್ತನ್ನೇ ಬಯಸುತ್ತೇವೆಯೇ? ಏಕೆಂದರೆ ಅದುವೇ ಮಾನವೀಯತೆಯ ನಿಜವಾದ ಅಡಿಪಾಯ ಎಂದು ನಾನು ನಂಬುತ್ತೇನೆ," ಎಂದು ಅವರು ಹೇಳಿದರು.

ಇತ್ತೀಚಿನ ಸಂಘರ್ಷಗಳು ಭದ್ರತಾ ತಂತ್ರವಾಗಿ ಭಯೋತ್ಪಾದಕ ತಡೆ ಎಷ್ಟು ಮಿತಿಯುತವಾಗಿದೆ ಎಂಬುದನ್ನು ತೋರಿಸಿವೆ ಎಂದು ಪಾರ್ಕೆ ಅಭಿಪ್ರಾಯಪಟ್ಟರು. ಉಕ್ರೇನ್ ಮತ್ತು ಇರಾನ್‌ನ ಯುದ್ಧಗಳನ್ನು ಉಲ್ಲೇಖಿಸಿದ ಅವರು, ಅಣ್ವಸ್ತ್ರಗಳು "ಶಾಂತಿಯನ್ನು ತರಲಿಲ್ಲ" ಹಾಗೂ "ಯುದ್ಧವನ್ನು ತಡೆಯಲಿಲ್ಲ" ಎಂದು ಹೇಳಿದರು.

"ಅವು ಕಾರ್ಯತಂತ್ರದ ದೃಷ್ಟಿಯಿಂದ ಯಾವುದೇ ಮಹತ್ವವನ್ನು ತೋರಿಸಲಿಲ್ಲ, ಆದರೆ ಅತ್ಯಂತ ಅಪಾಯಕಾರಿ ಮತ್ತು ಅತ್ಯಂತ ದುಬಾರಿಯಾದವುಗಳಾಗಿವೆ. ಆದರೂ ಅವು ಕಾರ್ಯತಂತ್ರದ ಮಟ್ಟದಲ್ಲಿ ಅಪ್ರಸ್ತುತವಾಗಿಯೇ ಉಳಿದಿವೆ," ಎಂದು ಅವರು ಹೇಳಿದರು. ಆದಾಗ್ಯೂ, ಅವು "ಹಿನ್ನೆಲೆಯಲ್ಲಿ ಅಸ್ತಿತ್ವದಲ್ಲೇ ಉಳಿದು, ಮಾನವಕುಲದ ಅಸ್ತಿತ್ವಕ್ಕೇ ನಿರಂತರ ಅಪಾಯವನ್ನು ಉಂಟುಮಾಡುತ್ತಿವೆ" ಎಂದು ಅವರು ಎಚ್ಚರಿಸಿದರು.

ಹೆಚ್ಚುತ್ತಿರುವ ಅಣ್ವಸ್ತ್ರದ ಅಪಾಯ

ಪಾರ್ಕೆ ಅವರ ಪ್ರಕಾರ, ಇಂದಿನ ಜಾಗತಿಕ ಭದ್ರತಾ ಪರಿಸ್ಥಿತಿ "ಸಂಪೂರ್ಣ ವಿಶ್ವಾಸದ ಕೊರತೆ"ಯಿಂದ ಕೂಡಿದೆ. ಅಣ್ವಸ್ತ್ರಗಳನ್ನು ಹೊಂದಿರುವ ರಾಷ್ಟ್ರಗಳನ್ನು ಒಳಗೊಂಡ ಸಂಘರ್ಷಗಳು ನಡೆಯುತ್ತಿರುವುದರ ಜೊತೆಗೆ, ಶಸ್ತ್ರಾಸ್ತ್ರ ನಿಯಂತ್ರಣ ಒಪ್ಪಂದಗಳು ಕುಸಿಯುತ್ತಿವೆ, ಅಣ್ವಸ್ತ್ರ ಬೆದರಿಕೆಗಳು ಮತ್ತೆ ಹೆಚ್ಚುತ್ತಿವೆ ಮತ್ತು ಹೊಸ ಅಣ್ವಸ್ತ್ರ ಸ್ಪರ್ಧೆ ಆರಂಭವಾಗಿದೆ.

"ನಾವು ಈಗ ಅಣ್ವಸ್ತ್ರಗಳ ಬಳಕೆಯ ಅಪಾಯವು ಅತ್ಯಂತ ಗರಿಷ್ಠ ಮಟ್ಟಕ್ಕೆ ಏರಿರುವುದನ್ನು ಕಾಣುತ್ತಿದ್ದೇವೆ," ಎಂದು ಅವರು ಹೇಳಿದರು. ಸೇನಾ ವ್ಯವಸ್ಥೆಗಳಲ್ಲಿ ಕೃತಕ ಬುದ್ಧಿಮತ್ತೆಯ ಬಳಕೆ ಈ ಅಪಾಯವನ್ನು ಮತ್ತಷ್ಟು ತೀವ್ರಗೊಳಿಸುತ್ತಿದೆ ಎಂದು ಅವರು ಎಚ್ಚರಿಸಿದರು.

ಮಿಲಿಟರೀಕರಣದ ಹಾದಿಯಲ್ಲಿ ಸಾಗುವುದಕ್ಕಿಂತ, "ಘರ್ಷಣೆಯ ಬದಲು ಸಂವಾದ, ಮಿಲಿಟರೀಕರಣದ ಬದಲು ರಾಜತಾಂತ್ರಿಕತೆ ಮತ್ತು ಶಸ್ತ್ರಾಸ್ತ್ರ ಪ್ರಸರಣದ ಬದಲು ನಿಶ್ಶಸ್ತ್ರೀಕರಣ" ಎಂಬ ತತ್ವಗಳ ಆಧಾರದ ಮೇಲೆ "ಹೊಸ ಚಿಂತನಾ ವಿಧಾನ"ವನ್ನು ಅಳವಡಿಸಿಕೊಳ್ಳಬೇಕೆಂದು ಅವರು ಕರೆ ನೀಡಿದರು.

ಮಾನವೀಯತೆಯನ್ನು ಕೇಂದ್ರಬಿಂದುವಾಗಿರಿಸಬೇಕು

ಉಕ್ರೇನ್ ಮತ್ತು ಇರಾನ್ ಸೇರಿದಂತೆ ಇಂದಿನ ಯುದ್ಧಗಳನ್ನು ಉಲ್ಲೇಖಿಸಿದ ಪಾರ್ಕೆ, ನಾಗರಿಕರೇ ಹೆಚ್ಚಾಗಿ ಹಿಂಸೆಯ ಬಲಿಯಾಗುತ್ತಿದ್ದಾರೆ ಎಂದು ಹೇಳಿದರು. ನಾಗರಿಕ ಮೂಲಸೌಕರ್ಯಗಳ ಮೇಲಿನ ದಾಳಿಗಳು ಹಾಗೂ ಜನರ ಬದುಕಿಗೆ ಅಗತ್ಯವಾದ ಮೂಲಸಾಧನಗಳನ್ನು ಗುರಿಯಾಗಿಸುವುದು ಹೆಚ್ಚುತ್ತಿರುವುದಾಗಿ ಅವರು ಹೇಳಿದರು.

ಆಧುನಿಕ ಯುದ್ಧಗಳಲ್ಲಿ "ಅತ್ಯಾಚಾರವನ್ನು ಯುದ್ಧದ ಆಯುಧವಾಗಿ ಬಳಸಲಾಗುತ್ತಿದೆ" ಎಂಬ ಗಂಭೀರ ಎಚ್ಚರಿಕೆಯನ್ನೂ ಅವರು ನೀಡಿದರು.

ಇದೇ ವೇಳೆ, ಸಾಮಾಜಿಕ ಮಾಧ್ಯಮಗಳು ಮತ್ತು ಕ್ಷಣಾರ್ಧದ ಸಂವಹನ ವ್ಯವಸ್ಥೆಗಳು ಯುದ್ಧದ ಭೀಕರತೆಯನ್ನು ಹಿಂದೆಂದಿಗಿಂತಲೂ ಹೆಚ್ಚು ಸ್ಪಷ್ಟವಾಗಿ ಜಗತ್ತಿನ ಮುಂದೆ ತರುತ್ತಿವೆ. ಇದರ ಪರಿಣಾಮವಾಗಿ, ವಿಶ್ವದ ಜನರು ಯುದ್ಧದ ಮಾನವೀಯ ಬೆಲೆಯನ್ನು ಅದು ನಡೆಯುತ್ತಿರುವಂತೆಯೇ ಕಣ್ಣಾರೆ ನೋಡುತ್ತಿದ್ದಾರೆ ಎಂದು ಅವರು ಹೇಳಿದರು.

"ನಾವು ಈಗ ನೋಡುತ್ತಿರುವುದರಿಂದ ಕಲಿಯಬೇಕಾದ ಪಾಠವೆಂದರೆ, ಇಂತಹ ದುರಂತಗಳು ಸಂಭವಿಸದಂತೆ ತಡೆಯಲು ನಮ್ಮಿಂದ ಸಾಧ್ಯವಿರುವ ಎಲ್ಲವನ್ನೂ ಮಾಡಬೇಕು," ಎಂದು ಅವರು ಹೇಳಿದರು.

ಈ ವಾಸ್ತವಿಕತೆಯ ಹಿನ್ನೆಲೆಯಲ್ಲಿ, ಕ್ಯಾಸ್ಟೆಲ್ ಗಾಂಡೋಲ್ಫೊದಲ್ಲಿ ನಡೆದ ಜಾಗತಿಕ ನೊಬೆಲ್ ಪ್ರಶಸ್ತಿ ವಿಜೇತರ ಮಹಾಸಭೆಯು "ಮಾನವೀಯತೆಯನ್ನು ಕೇಂದ್ರಬಿಂದುವಾಗಿರಿಸುವ" ಅಪೂರ್ವ ಅವಕಾಶವಾಗಿದೆ ಎಂದು ಪಾರ್ಕೆ ಹೇಳಿದರು. ನೊಬೆಲ್ ಪ್ರಶಸ್ತಿ ವಿಜೇತರು, ವಿಜ್ಞಾನಿಗಳು, ಧಾರ್ಮಿಕ ನಾಯಕರು ಹಾಗೂ ನಾಗರಿಕ ಸಮಾಜದ ಪ್ರತಿನಿಧಿಗಳು ಒಂದಾಗಿ ಸೇರಿ ಘರ್ಷಣೆಗೆ ಪರ್ಯಾಯ ಮಾರ್ಗಗಳನ್ನು ಹುಡುಕುತ್ತಿರುವುದು ಆಶಾದಾಯಕ ಬೆಳವಣಿಗೆ ಎಂದು ಅವರು ಅಭಿಪ್ರಾಯಪಟ್ಟರು.

ಇಂದಿನ ಜಾಗತಿಕ ಭದ್ರತಾ ಸವಾಲುಗಳನ್ನು ಎದುರಿಸಲು ರಾಜಕೀಯ ಮತ್ತು ವೈಜ್ಞಾನಿಕ ಪರಿಣತಿಯ ಜೊತೆಗೆ ನೈತಿಕ ನಾಯಕತ್ವವೂ ಅತ್ಯಗತ್ಯ ಎಂಬುದನ್ನು ಈ ಚರ್ಚೆಗಳು ಪ್ರತಿಬಿಂಬಿಸುತ್ತವೆ ಎಂದು ಅವರು ಹೇಳಿದರು.

ನೈತಿಕತೆಯ ಹೊಸ ಗಡಿ

ಪಾರ್ಕೆ ಅವರ ದೃಷ್ಟಿಯಲ್ಲಿ, ಅಣ್ವಸ್ತ್ರಗಳನ್ನು ನಿರ್ಮೂಲನೆ ಮಾಡುವುದು ಹಾಗೂ ಕೃತಕ ಬುದ್ಧಿಮತ್ತೆಯಿಂದ ಉಂಟಾಗುವ ಅಪಾಯಗಳನ್ನು ಎದುರಿಸುವುದು ಕೇವಲ ರಾಜಕೀಯ ಅಥವಾ ಭದ್ರತಾ ವಿಷಯವಲ್ಲ, ಅದು ಮೂಲಭೂತವಾಗಿ ನೈತಿಕ ಪ್ರಶ್ನೆಯಾಗಿದೆ.

ಅವರು ಅಣ್ವಸ್ತ್ರ ನಿಶ್ಶಸ್ತ್ರೀಕರಣ ಮತ್ತು ಕೃತಕ ಬುದ್ಧಿಮತ್ತೆಯ ಆಡಳಿತವನ್ನು "ನೈತಿಕತೆಯ ಹೊಸ ಗಡಿ" ಎಂದು ಬಣ್ಣಿಸಿದರು. ಗುಲಾಮಗಿರಿಯ ನಿರ್ಮೂಲನೆ ಮತ್ತು ಸಾರ್ವತ್ರಿಕ ಮಾನವ ಹಕ್ಕುಗಳ ಘೋಷಣೆಯ ಅಂಗೀಕಾರದಷ್ಟೇ ಮಹತ್ವದ ತಿರುವು ಇದು ಎಂದು ಅವರು ಹೇಳಿದರು.

ತಂತ್ರಜ್ಞಾನದ ಪ್ರಗತಿಯು ಮಾನವಜೀವನಕ್ಕೆ ಸೇವೆ ಸಲ್ಲಿಸಬೇಕೋ ಅಥವಾ ಅದನ್ನೇ ಅಪಾಯಕ್ಕೆ ತಳ್ಳಬೇಕೋ ಎಂಬ ನಿರ್ಣಾಯಕ ಆಯ್ಕೆಯ ಎದುರು ಇಂದು ಮಾನವಕುಲ ನಿಂತಿದೆ ಎಂದು ಅವರು ಅಭಿಪ್ರಾಯಪಟ್ಟರು.

"ಸಾಮೂಹಿಕ ಹತ್ಯೆಯ ಕಲೆಯನ್ನು ಇನ್ನಷ್ಟು ಅಭಿವೃದ್ಧಿಪಡಿಸಲು ಮತ್ತು ಕೃತಕ ಬುದ್ಧಿಮತ್ತೆಯ ಮೂಲಕ ಪ್ರಾಬಲ್ಯ ಸಾಧಿಸಲು ನಮ್ಮ ಅತ್ಯುತ್ತಮ ಪ್ರತಿಭೆಗಳನ್ನೂ ಅಮೂಲ್ಯ ಸಂಪನ್ಮೂಲಗಳನ್ನೂ ಬಳಸುತ್ತಲೇ ಇರುವುದು, ಮಾನವಕುಲದ ಪರಂಪರೆ ಮತ್ತು ಅದರ ಆಧ್ಯಾತ್ಮಿಕ ಪರಂಪರೆಯನ್ನು ವ್ಯರ್ಥಗೊಳಿಸುವಂತಾಗಿದೆ," ಎಂದು ಅವರು ಹೇಳಿದರು.

ಒಂದು ಸ್ಪಷ್ಟ ಹೆಜ್ಜೆ

ಮುಂದಿನ ಒಂದು ವರ್ಷದೊಳಗೆ ವಿಶ್ವವನ್ನು ಹೆಚ್ಚು ಸುರಕ್ಷಿತವಾಗಿಸಲು ಜಾಗತಿಕ ನಾಯಕರು ಏನು ಮಾಡಬಹುದು ಎಂದು ಕೇಳಿದಾಗ, ಪಾರ್ಕೆ ಒಂದು ಸ್ಪಷ್ಟವಾದ ಕ್ರಮವನ್ನು ಸೂಚಿಸಿದರು: ಅಣ್ವಸ್ತ್ರ ನಿಷೇಧ ಒಪ್ಪಂದಕ್ಕೆ ಸೇರ್ಪಡೆಯಾಗುವುದು.

ಈ ಒಪ್ಪಂದಕ್ಕೆ ಸೇರ್ಪಡೆಯಾದ ಮೊದಲ ರಾಷ್ಟ್ರ ಜಗದ್ಗುರುಗಳ ಅಧಿಕಾರ ಸ್ಥಳ ಆಗಿತ್ತು ಎಂದು ಅವರು ನೆನಪಿಸಿದರು. ಈಗಾಗಲೇ ಸುಮಾರು 100 ರಾಷ್ಟ್ರಗಳು ಈ ಒಪ್ಪಂದಕ್ಕೆ ಸಹಿ ಹಾಕಿವೆ ಎಂದು ತಿಳಿಸಿದ ಅವರು, ಅಣ್ವಸ್ತ್ರರಹಿತ ಜಗತ್ತಿನ ನಿರ್ಮಾಣಕ್ಕಾಗಿ ಅಂತರರಾಷ್ಟ್ರೀಯ ಸಹಕಾರದ ಒಂದು ಸ್ಪಷ್ಟ ಮಾದರಿಯಾಗಿದೆ ಎಂದು ಹೇಳಿದರು.

ಪಾರ್ಕೆರವರ ಪ್ರಕಾರ, ಈ ಒಪ್ಪಂದವು ಸಂವಾದ, ಬಹುಪಕ್ಷೀಯ ಸಹಕಾರ, ಅಂತರರಾಷ್ಟ್ರೀಯ ಕಾನೂನು ಹಾಗೂ ಮಾನವ ಹಕ್ಕುಗಳು ಮತ್ತು ಮಾನವ ಘನತೆಗೆ ಗೌರವ ಎಂಬ ಮೌಲ್ಯಗಳ ಆಧಾರದ ಮೇಲೆ, ಸೇನಾ ಉದ್ವಿಗ್ನತೆ ಮತ್ತು ಅಣ್ವಸ್ತ್ರ ತಡೆ ನೀತಿಗೆ ವಿಶ್ವಾಸಾರ್ಹ ಪರ್ಯಾಯವನ್ನು ಒದಗಿಸುತ್ತದೆ.

"ಮುಂದೆ ಸಾಗುವ ಮಾರ್ಗ ಇದೇ. ಸಂವಾದದ ಮೂಲಕ, ಬಹುಪಕ್ಷೀಯ ಸಹಕಾರದ ಮೂಲಕ, ಅಂತರರಾಷ್ಟ್ರೀಯ ಕಾನೂನಿನ ಮೂಲಕ ಹಾಗೂ ಮಾನವ ಹಕ್ಕುಗಳು ಮತ್ತು ಮಾನವ ಘನತೆಗೆ ಗೌರವ ನೀಡುವ ಮೂಲಕವೇ ನಾವು ಮುಂದುವರಿಯಬೇಕು," ಎಂದು ಅವರು ಹೇಳಿದರು.

16 ಜುಲೈ 2026, 16:52