ಉಕ್ರೇನ್: ನ್ಯಾಯಸಮ್ಮತ ಶಾಂತಿ ಸ್ಥಾಪನೆಗೆ ಅಗತ್ಯವಾದ ಪರಿಸ್ಥಿತಿಗಳನ್ನು ರೂಪಿಸುವಂತೆ ಆರ್ಚ್‌ಬಿಷಪ್ ಗ್ಯಾಲಗರ್ ಕರೆ.
ವ್ಯಾಟಿಕನ್ ವರದಿ
ಉಕ್ರೇನ್‌ನಲ್ಲಿ ಆರ್ಚ್‌ಬಿಷಪ್ ಗ್ಯಾಲಗರ್: ನ್ಯಾಯಸಮ್ಮತ ಶಾಂತಿಗೆ ಅಗತ್ಯವಾದ ಪರಿಸ್ಥಿತಿಗಳನ್ನು ನಿರ್ಮಿಸಬೇಕು
ಲ್ಯಾಟಿನ್ ವಿಧಿಯ ಕಥೋಲಿಕ ಧರ್ಮ ಸಭೆಯ ರಚನೆಗಳ ಪುನರುಜ್ಜೀವನದ 35ನೇ ವಾರ್ಷಿಕೋತ್ಸವದ ಆಚರಣೆಗಳ ಅಂಗವಾಗಿ ಜಗದ್ಗುರುಗಳ ವಿಶೇಷ ಪ್ರತಿನಿಧಿಯಾಗಿ ಆರ್ಚ್‌ಬಿಷಪ್ ಪಾಲ್ ರಿಚರ್ಡ್ ಗ್ಯಾಲಗರ್ ರವರು ಉಕ್ರೇನ್‌ಗೆ ತಮ್ಮ ಭೇಟಿಯನ್ನು ಆರಂಭಿಸಿದ್ದಾರೆ. ರಾಜ್ಯ ಕಾರ್ಯದರ್ಶಿಯಾಲಯದ ಅಧಿಕೃತ X ಖಾತೆ @ಟೆರ್ಜಾಲಾಗ್ಜಿಯಾ ಪ್ರಕಟಿಸಿದ ಮಾಹಿತಿಯಂತೆ, ಮುಖ್ಯ ಸಮಾರಂಭವು ಜುಲೈ 19, ಭಾನುವಾರ, ಬೆರ್ಡಿಚಿವ್‌ನ ಮೌಂಟ್ ಕಾರ್ಮೆಲ್ ಮಾತೆಯ ಧಾರ್ಮಿಕ ಕ್ಷೇತ್ರದಲ್ಲಿ ನಡೆಯಲಿದೆ. ಈ ಸಂದರ್ಭವು 2001ರಲ್ಲಿ ಸಂತ ದ್ವಿತೀಯ ಜಾನ್ ಪಾಲ್ ಉಕ್ರೇನ್‌ಗೆ ಕೈಗೊಂಡ ಪ್ರೇಷಿತರ ಯಾತ್ರೆಯ ಸ್ಮರಣೆಯನ್ನೂ ಒಳಗೊಂಡಿದೆ.
ಜಗದ್ಗುರುಗಳ ಅಧಿಕಾರ ಸ್ಥಳದ ರಾಜ್ಯಗಳು ಹಾಗೂ ಅಂತರರಾಷ್ಟ್ರೀಯ ಸಂಸ್ಥೆಗಳೊಂದಿಗಿನ ಸಂಬಂಧಗಳ ಕಾರ್ಯದರ್ಶಿಯಾಗಿರುವ ಆರ್ಚ್‌ಬಿಷಪ್ ಗ್ಯಾಲಗರ್ ಅವರು, ಜುಲೈ 16, ಗುರುವಾರ, ಮೊದಲು ಪೋಲೆಂಡ್‌ನ ಕ್ರಾಕೋವ್‌ಗೆ ಆಗಮಿಸಿ, ಅಲ್ಲಿಂದ ಉಕ್ರೇನ್‌ನ ಪ್ರೇಷೀತರ ರಾಯಭಾರಿ ಆರ್ಚ್‌ಬಿಷಪ್ ವಿಸ್ವಾಲ್ದಾಸ್ ಕುಲ್ಬೋಕಾಸ್ ರವರೊಂದಿಗೆ ರಸ್ತೆ ಮಾರ್ಗವಾಗಿ ಉಕ್ರೇನ್‌ಗೆ ಪ್ರಯಾಣ ಬೆಳೆಸಿದರು. ಯುದ್ಧದ ಕಾರಣದಿಂದ ಉಕ್ರೇನ್‌ನ ವಾಯುಪ್ರದೇಶ ಇನ್ನೂ ಮುಚ್ಚಲ್ಪಟ್ಟಿರುವುದರಿಂದ ಈ ಮಾರ್ಗವನ್ನು ಆಯ್ಕೆ ಮಾಡಲಾಯಿತು. ಅವರು ಜುಲೈ 21ರವರೆಗೆ ಉಕ್ರೇನ್‌ನಲ್ಲಿ ಉಳಿಯಲಿದ್ದಾರೆ.
ಕ್ರಾಕೊವೆಟ್ಸ್ ಗಡಿ ದಾಟುವಿಕೆ
ಉಕ್ರೇನ್‌ಗೆ ಪ್ರವೇಶಿಸಲು ಮತ್ತು ಹೊರಬರಲು ವಾಹನಗಳ ದೀರ್ಘ ಸಾಲುಗಳು ಕಂಡುಬಂದ ಕ್ರಾಕೊವೆಟ್ಸ್ ಗಡಿ ತಪಾಸಣಾ ಕೇಂದ್ರದಲ್ಲಿ, ವ್ಯಾಟಿಕನ್ ನಿಯೋಗವನ್ನು ಜಗದ್ಗುರುಗಳ ಅಧಿಕಾರ ಸ್ಥಳವು ಉಕ್ರೇನ್ ರಾಯಭಾರಿ ಆಂಡ್ರಿಯ್ ಯುರಾಶ್ ಹಾಗೂ ಉಕ್ರೇನ್ ವಿದೇಶಾಂಗ ಸಚಿವಾಲಯದ ಪ್ರತಿನಿಧಿಗಳು ಆತ್ಮೀಯವಾಗಿ ಸ್ವಾಗತಿಸಿದರು.
ಅಲ್ಲಿಂದ ನಿಯೋಗವು ಲ್ವಿವ್ ನಗರಕ್ಕೆ ಪ್ರಯಾಣಿಸಿತು. 1998ರಲ್ಲಿ ಯುನೆಸ್ಕೋ ವಿಶ್ವ ಪರಂಪರೆ ಪಟ್ಟಿಗೆ ಸೇರಿಸಲಾದ ಈ ನಗರದ ಐತಿಹಾಸಿಕ ಕೇಂದ್ರವು ಪ್ರಸಿದ್ಧವಾಗಿದೆ. ಕ್ರಿ.ಶ. 1256ರಲ್ಲಿ ಗ್ಯಾಲಿಸಿಯಾದ ರಾಜ ಡಾನ್ಯಲೋರವರು ಈ ನಗರವನ್ನು ಸ್ಥಾಪಿಸಿದ್ದು, ತಮ್ಮ ಪುತ್ರ ಲೆವ್ ಅವರ ಹೆಸರನ್ನು ಇದಕ್ಕೆ ಇಟ್ಟರು. ಇತಿಹಾಸದ ವಿವಿಧ ಕಾಲಘಟ್ಟಗಳ ವಾಸ್ತುಶಿಲ್ಪ ಹಾಗೂ ಸಾಂಸ್ಕೃತಿಕ ಪ್ರಭಾವಗಳನ್ನು ಈ ನಗರ ಹೊಂದಿದೆ. ಯುದ್ಧದ ಅವಧಿಯಲ್ಲಿ ರಷ್ಯಾದ ದಾಳಿಗಳಿಗೆ ಈ ನಗರವೂ ಗುರಿಯಾಗಿದ್ದು, ಇತ್ತೀಚೆಗೆ 2026ರ ಮಾರ್ಚ್ ಅಂತ್ಯದಲ್ಲಿ ಮತ್ತೊಮ್ಮೆ ದಾಳಿಯನ್ನು ಎದುರಿಸಿತು.
“ಯುರೋಪಿನ ಈ ಭಾಗದಲ್ಲಿ ಶಾಂತಿಯನ್ನು ಮರುಸ್ಥಾಪಿಸಬೇಕು”
ಶುಕ್ರವಾರ ಬೆಳಿಗ್ಗೆ ಆರ್ಚ್‌ಬಿಷಪ್ ಗ್ಯಾಲಗರ್ ಅವರನ್ನು ಲ್ವಿವ್‌ನ ಲ್ಯಾಟಿನ್ ಕಥೋಲಿಕ ಮಹಾಧರ್ಮಾಧ್ಯಕ್ಷರಾದ ಆರ್ಚ್‌ಬಿಷಪ್ ಮಿಯೆಚಿಸ್ವಾವ್ ಮೊಕ್ರ್ಝಿಚ್ಕಿ ಸ್ವಾಗತಿಸಿದರು. ಬಳಿಕ ಮಹಾಧರ್ಮಪ್ರಾಂತ್ಯದ ಕುರಿಯಾದಲ್ಲಿ ಅವರು ಪ್ರಾದೇಶಿಕ ಹಾಗೂ ನಗರಾಡಳಿತದ ಅಧಿಕಾರಿಗಳನ್ನು ಭೇಟಿಯಾದರು.
“ಯುದ್ಧಕ್ಕೆ ನ್ಯಾಯಸಮ್ಮತ ಅಂತ್ಯ ಎಂದರೆ ಯುರೋಪಿನ ಈ ಭಾಗದಲ್ಲಿ ಶಾಂತಿಯನ್ನು ಮರುಸ್ಥಾಪಿಸುವುದಾಗಿದೆ,” ಎಂದು ಆರ್ಚ್‌ಬಿಷಪ್ ಗ್ಯಾಲಗರ್ ಹೇಳಿದರು.
ಅವರು ಮುಂದುವರಿದು, “ಧಮ೯ಸಭೆ ಹಾಗೂ ಜಗದ್ಗುರು XIVನೇ ಲಿಯೋರವರು ಉಕ್ರೇನ್ ಜನರ ದುಃಖವನ್ನೂ ಅವರ ತ್ಯಾಗಗಳನ್ನೂ ಎಂದಿಗೂ ಮರೆತಿಲ್ಲ. ನ್ಯಾಯಸಮ್ಮತ ಶಾಂತಿ ಸ್ಥಾಪನೆಗೆ ಅಗತ್ಯವಾದ ಸೂಕ್ತ ಪರಿಸ್ಥಿತಿಗಳನ್ನು ನಾವು ನಿರ್ಮಿಸಬೇಕು,” ಎಂದು ಹೇಳಿದರು.
ಬೆಳಿಗ್ಗೆ 9 ಗಂಟೆಗೆ ಸಂಘರ್ಷದಲ್ಲಿ ಪ್ರಾಣ ಕಳೆದುಕೊಂಡವರ ನೆನಪಿಗಾಗಿ ಪ್ರಾರ್ಥನೆ ಮತ್ತು ಮೌನಾಚರಣೆ ನಡೆಯಿತು. 2022ರ ಫೆಬ್ರುವರಿಯಲ್ಲಿ ರಷ್ಯಾದ ಪೂರ್ಣ ಪ್ರಮಾಣದ ಆಕ್ರಮಣ ಆರಂಭವಾದ ನಂತರ ಉಕ್ರೇನಿನಾದ್ಯಂತ ಪ್ರತಿದಿನ ಇದೇ ಸಮಯದಲ್ಲಿ ಒಂದು ನಿಮಿಷ ಮೌನ ಪಾಲಿಸುವ ಪದ್ಧತಿ ಆರಂಭವಾಗಿದ್ದು, ಬಳಿಕ ಅದನ್ನು ಅಧಿಕೃತವಾಗಿ ಜಾರಿಗೆ ತರಲಾಗಿದೆ.
ಉಕ್ರೇನಿನ ಕಥೋಲಿಕ ವಿಶ್ವವಿದ್ಯಾಲಯಕ್ಕೆ ಭೇಟಿ
ನಂತರ ಆರ್ಚ್‌ಬಿಷಪ್ ಗ್ಯಾಲಗರ್ ರವರು ಉಕ್ರೇನಿಯನ್ ಕಥೋಲಿಕ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದರು. ಈ ವಿಶ್ವವಿದ್ಯಾಲಯದಲ್ಲಿ ಕ್ಯಾಂಪಸ್ ಹಾಗೂ ಆನ್‌ಲೈನ್ ಮೂಲಕ ಸುಮಾರು 30,000 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
1998ರಲ್ಲಿ ಖರೀದಿಸಲಾದ ಭೂಮಿಯಲ್ಲಿ ಸ್ಥಾಪಿಸಲಾದ ಈ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಏಳು ಅಧ್ಯಾಪಕ ವಿಭಾಗಗಳಿದ್ದು, ದಾಳಿಯ ಸಮಯದಲ್ಲಿ ಸಮೀಪದ ನಿವಾಸಿಗಳಿಗೂ ಆಶ್ರಯ ನೀಡಬಹುದಾದ ಸುರಕ್ಷಿತ ಬಂಕರ್‌ಗಳಿವೆ. ಕ್ಯಾಂಪಸ್ ಮೇಲೆ ನೇರ ದಾಳಿ ನಡೆದಿಲ್ಲವಾದರೂ, ಸಮೀಪದಲ್ಲಿ ನಡೆದ ಬಾಂಬ್ ದಾಳಿಗಳ ಪರಿಣಾಮವನ್ನು ಅದು ಅನುಭವಿಸಿದೆ. ಎರಡು ವರ್ಷಗಳ ಹಿಂದೆ ಕ್ಷಿಪಣಿಯೊಂದು ಕ್ಯಾಂಪಸ್‌ನಿಂದ ಕೆಲವೇ ನೂರು ಮೀಟರ್ ದೂರದಲ್ಲಿ ಬಿದ್ದು ಹಲವರು ಮೃತಪಟ್ಟಿದ್ದರು. ಯುದ್ಧದಲ್ಲಿ ವಿದ್ಯಾರ್ಥಿಗಳು ಹಾಗೂ ಅವರ ಕುಟುಂಬ ಸದಸ್ಯರನ್ನು ಒಳಗೊಂಡಂತೆ ವಿಶ್ವವಿದ್ಯಾಲಯದ ಸಮುದಾಯದ ಸುಮಾರು ನಲವತ್ತು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
“ಯುದ್ಧ ಇಲ್ಲಿಯೇ ಇದೆ,” ಎಂದು ಉಕ್ರೇನಿಯನ್ ಗ್ರೀಕ್ ಕಥೋಲಿಕ ಧರ್ಮ ಸಭೆಯ ಆರ್ಚ್‌ಬಿಷಪ್ ಹಾಗೂ ವಿಶ್ವವಿದ್ಯಾಲಯದ ಅಧ್ಯಕ್ಷರಾದ ಬೋರಿಸ್ ಗುಡ್ಜಿಯಾಕ್ ಹೇಳಿದರು. ಅವರು ಆರ್ಚ್‌ಬಿಷಪ್ ಗ್ಯಾಲಗರ್ ರವರನ್ನು ಸ್ವಾಗತಿಸಿ ವಿಶ್ವವಿದ್ಯಾಲಯದ ಶೈಕ್ಷಣಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನು ಪರಿಚಯಿಸಿದರು.
ಅವುಗಳಲ್ಲಿ ಅಂಗವಿಕಲರಿಗೆ ಬೆಂಬಲ ನೀಡುವ ವಿಶೇಷ ಯೋಜನೆಯೂ ಸೇರಿದ್ದು, ಅವರನ್ನು ವಿಶ್ವವಿದ್ಯಾಲಯದ ಜೀವನದಲ್ಲಿ ಸಂಪೂರ್ಣವಾಗಿ ಒಳಗೊಳ್ಳುವಂತೆ ಮಾಡಲಾಗಿದೆ. ವ್ಯಾಟಿಕನ್ ನಿಯೋಗದ ಸದಸ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದವರನ್ನು ಭೇಟಿಯಾಗಿ, ವಿಶ್ವವಿದ್ಯಾಲಯದ ಕಾಲೇಜಿನ ರೂಪಣಾ ಕಾರ್ಯಕ್ರಮದ ಜವಾಬ್ದಾರಿ ಹೊಂದಿರುವ ಸಿಸ್ಟರ್ ಮರಿಯಾ ರಾಡಿಸ್ಟ್ ರವರಿಂದ ಅವರ ಅನುಭವಗಳನ್ನು ಆಲಿಸಿದರು.
“ಪ್ರತಿಯೊಬ್ಬರೂ ಸಹಾಯ ಮತ್ತು ಬೆಂಬಲ ನೀಡುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ,” ಎಂದು ಆರ್ಚ್‌ಬಿಷಪ್ ಗುಡ್ಜಿಯಾಕ್ ಹೇಳಿದರು. “ವಿದ್ಯಾರ್ಥಿಗಳು ಇತರರಿಗೆ ಸೇವೆ ಸಲ್ಲಿಸುವ ಮನೋಭಾವವನ್ನೂ ಒಳಗೊಂಡ ಸಮಗ್ರ ಶಿಕ್ಷಣವನ್ನು ಪಡೆಯುತ್ತಿದ್ದಾರೆ.”
ಮೇಜರ್ ಆರ್ಚ್‌ಬಿಷಪ್ ಶೆವ್ಚುಕ್ ಅವರೊಂದಿಗೆ ಭೇಟಿ
ಸಂಜೆಯ ವೇಳೆಗೆ, ರಿವ್ನೆಯಲ್ಲಿರುವ ಸಂತ ದ್ವಿತೀಯ ಜಾನ್ ಪಾಲ್ ರವರು ಧರ್ಮ ಸಭೆಗೆ ಭೇಟಿ ನೀಡಿದ ಬಳಿಕ, ಆರ್ಚ್‌ಬಿಷಪ್ ಗ್ಯಾಲಗರ್ ರವರು ಕೀವ್‌ನಲ್ಲಿರುವ ಪ್ರೇಷಿತರ ರಾಯಭಾರಿಗೆ ಪ್ರಯಾಣ ಬೆಳೆಸಿದರು. ಅಲ್ಲಿ ಅವರು ಉಕ್ರೇನಿಯನ್ ಗ್ರೀಕ್ ಕಥೋಲಿಕ ಧರ್ಮ ಸಭೆಯ ಕೀವ್–ಹಾಲಿಚ್‌ನ ಮೇಜರ್ ಆರ್ಚ್‌ಬಿಷಪ್ ಅವರಾದ ಪರಮಪೂಜ್ಯ ಸ್ವಿಯಾತೊಸ್ಲಾವ್ ಶೆವ್ಚುಕ್ ಅವರನ್ನು ಭೇಟಿಯಾಗುವ ಕಾರ್ಯಕ್ರಮ ನಿಗದಿಯಾಗಿತ್ತು.