ಆರ್ಚ್‌ಬಿಷಪ್ ಗ್ಯಾಲಘರ್ ಕೀವ್‌ನ ಬಾಂಬ್ ದಾಳಿಗೆ ಒಳಗಾದ ಪ್ರದೇಶಗಳಿಗೆ ಭೇಟಿ ನೀಡಿ, ಶಾಂತಿಗಾಗಿ ಪ್ರಾರ್ಥಿಸಲು ಕರೆ ನೀಡಿದರು.
ವ್ಯಾಟಿಕನ್ ವರದಿ
ಉಕ್ರೇನಿಗೆ ತಮ್ಮ ಧರ್ಮಸೇವಾ ಭೇಟಿಯ ಮೂರನೇ ದಿನವಾದ ಜುಲೈ 18ರಂದು, ಜಗದ್ಗುರುಗಳ ಅಧಿಕಾರ ಸ್ಥಳದ ರಾಜ್ಯಗಳೊಂದಿಗಿನ ಸಂಬಂಧಗಳು ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳ ಕಾರ್ಯದರ್ಶಿಯಾದ ಆರ್ಚ್‌ಬಿಷಪ್ ಪಾಲ್ ರಿಚರ್ಡ್ ಗಲ್ಲಾಗರ್ ರವರು, ಯುದ್ಧದ ಭೀಕರತೆಯನ್ನು ಸಾಕ್ಷಿಯಾಗಿರುವ ಕೀವ್‌ನ ಹಲವು ಪ್ರದೇಶಗಳಿಗೆ ಭೇಟಿ ನೀಡಿದರು. ಬುಚಾ, ಇರ್ಪಿನ್ ಮತ್ತು ವೊರ್ಜೆಲ್‌ನಂತಹ ಸ್ಥಳಗಳು ಉಕ್ರೇನ್ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದಿರುವ ನೋವಿನ ಸಂಕೇತಗಳಾಗಿವೆ ಎಂದು ಅವರು ನೆನಪಿಸಿದರು. ಆದರೂ, ಯುದ್ಧದಿಂದ ನಾಶವಾದ ದೇವಾಲಯಗಳು, ಕಟ್ಟಡಗಳು ಮತ್ತು ಸಮುದಾಯಗಳನ್ನು ಪುನರ್‌ನಿರ್ಮಿಸುವ ದೃಢ ಸಂಕಲ್ಪ ಜನರಲ್ಲಿ ಜೀವಂತವಾಗಿರುವುದನ್ನು ಅವರು ಪ್ರಶಂಸಿಸಿದರು.
ಬೆಳಿಗ್ಗೆ ಆರ್ಚ್‌ಬಿಷಪ್ ಗ್ಯಾಲಘರ್ ರವರು ಕೀವ್‌ನ ಸೇಂಟ್ ನಿಕೋಲಸ್ ಧರ್ಮ ಸಭೆಗೆ ಭೇಟಿ ನೀಡಿ, ಅಲ್ಲಿನ ವಿಶ್ವಾಸಿಗಳೊಂದಿಗೆ ಉಕ್ರೇನಿಯನ್ ಭಾಷೆಯಲ್ಲಿ ಶಾಂತಿಗಾಗಿ ಪ್ರಾರ್ಥಿಸಿದರು. 2024ರ ಡಿಸೆಂಬರ್‌ನಲ್ಲಿ ರಷ್ಯಾದ ಕ್ಷಿಪಣಿ ದಾಳಿಯಿಂದ ಹಾನಿಗೊಳಗಾದ ಈ ಧರ್ಮ ಸಭೆ ಈಗ ಪುನರ್‌ನಿರ್ಮಾಣ ಹಂತದಲ್ಲಿದೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು, "ಉಕ್ರೇನ್‌ನಿಗಾಗಿ ಮತ್ತು ನಿಮ್ಮೆಲ್ಲರಿಗಾಗಿ ಜಗದ್ಗುರು XIVನೇ ಲಿಯೋರವರು ಪ್ರತಿದಿನವೂ ಪ್ರಾರ್ಥಿಸುತ್ತಾರೆ" ಎಂದು ತಿಳಿಸಿ, ವಿಶ್ವಾಸ, ಭರವಸೆ ಮತ್ತು ತಾಳ್ಮೆಯನ್ನು ಕಾಪಾಡಿಕೊಳ್ಳುವಂತೆ ಪ್ರೋತ್ಸಾಹಿಸಿದರು. ಅಲ್ಲಿನ ಕುಟುಂಬವೊಂದು ವೈಮಾನಿಕ ದಾಳಿಯಿಂದ ತಮ್ಮ ಮನೆ ನಾಶವಾದರೂ ಅಕ್ಷತವಾಗಿದ್ದ ಪವಿತ್ರ ಕುಟುಂಬದ ಐಕಾನ್‌ನ್ನು ಅವರಿಗೆ ಉಡುಗೊರೆಯಾಗಿ ನೀಡಿ, ಅದನ್ನು ಭರವಸೆಯ ಸಂಕೇತವೆಂದು ವಿವರಿಸಿತು.
ನಂತರ ಅವರು ಮೇ ತಿಂಗಳಲ್ಲಿ ನಡೆದ ರಷ್ಯಾದ ಕ್ಷಿಪಣಿ ದಾಳಿಯಲ್ಲಿ ಮೂರು ಮಕ್ಕಳೂ ಸೇರಿದಂತೆ 24 ಮಂದಿ ಮೃತಪಟ್ಟ ವಸತಿ ಪ್ರದೇಶಕ್ಕೆ ಭೇಟಿ ನೀಡಿ, ಮೃತರಿಗೆ ನಿರ್ಮಿಸಲಾದ ಸ್ಮಾರಕದಲ್ಲಿ ಮೌನ ಪ್ರಾರ್ಥನೆ ಸಲ್ಲಿಸಿದರು. ಸ್ಥಳೀಯ ಅಧಿಕಾರಿಗಳು, ತುರ್ತು ಸೇವಾ ಸಿಬ್ಬಂದಿ ಹಾಗೂ ವಿಶ್ವಸಂಸ್ಥೆಯ ನಿರಾಶ್ರಿತರ ಉನ್ನತ ಆಯುಕ್ತರ ಕಚೇರಿ ಪ್ರತಿನಿಧಿಗಳನ್ನು ಭೇಟಿಯಾಗಿ, ಯುದ್ಧದಿಂದ ತೀವ್ರ ಮಾನಸಿಕ ಆಘಾತ ಅನುಭವಿಸುತ್ತಿರುವ ಮಕ್ಕಳು ಮತ್ತು ಕುಟುಂಬಗಳಿಗೆ ನೀಡಲಾಗುತ್ತಿರುವ ನೆರವಿನ ಬಗ್ಗೆ ಮಾಹಿತಿ ಪಡೆದರು.
ಆರ್ಚ್‌ಬಿಷಪ್ ಗ್ಯಾಲಘರ್ ರವರು ನಂತರ ಸೇಂಟ್ ಥಾಮಸ್ ಅಕ್ವಿನಾಸ್ ಡೊಮಿನಿಕನ್ ಧರ್ಮಶಾಸ್ತ್ರ ಸಂಸ್ಥೆಗೆ ಭೇಟಿ ನೀಡಿದರು. ಇತ್ತೀಚಿನ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳಿಂದ ಸಂಸ್ಥೆಯ ಕಟ್ಟಡಗಳು ತೀವ್ರ ಹಾನಿಗೊಳಗಾಗಿವೆ. ಸಂಸ್ಥೆಯ ಮುಖ್ಯಸ್ಥ ವಂ.ಸ್ವಾಮಿ ಜರೋಸ್ಲಾವ್ ಕ್ರಾವಿಯೆಕ್, ಯುದ್ಧದ ಅತ್ಯಂತ ಭಯಾನಕ ಅನುಭವವೆಂದರೆ "ನಾವು ಒಂಟಿಯಾಗಿದ್ದೇವೆ" ಎಂಬ ಭಾವನೆ ಎಂದು ಹೇಳಿ, ವಿಶ್ವ ಧರ್ಮ ಸಭೆಯ ಮತ್ತು ಜಗದ್ಗುರುಗಳ ಅಧಿಕಾರ ಸ್ಥಳ ತೋರಿದ ಐಕ್ಯತೆ ಹಾಗೂ ಬೆಂಬಲಕ್ಕೆ ಕೃತಜ್ಞತೆ ಸಲ್ಲಿಸಿದರು.
ದಿನದ ಕೊನೆಯಲ್ಲಿ ಆರ್ಚ್‌ಬಿಷಪ್ ಗ್ಯಾಲಘರ್ ರವರು ಉಕ್ರೇನ್‌ನ ಐತಿಹಾಸಿಕ ಹಾಗೂ ಆಧ್ಯಾತ್ಮಿಕ ಪರಂಪರೆಯ ಪ್ರತೀಕವಾದ ಕೀವ್ ಪೆಚೆರ್ಸ್ಕ್ ಲಾವ್ರಾಗೆ ಭೇಟಿ ನೀಡಿದರು. 2026ರ ಜೂನ್‌ನಲ್ಲಿ ರಷ್ಯಾದ ದಾಳಿಯಿಂದ ಹಾನಿಗೊಳಗಾಗಿದ್ದ ಈ ಯುನೆಸ್ಕೋ ವಿಶ್ವ ಪರಂಪರೆ ತಾಣದ ಪುನಃಸ್ಥಾಪನಾ ಕಾರ್ಯಗಳನ್ನು ವೀಕ್ಷಿಸಿದ ಅವರು, ಯುದ್ಧದ ನಡುವೆಯೂ ವಿಶ್ವಾಸ, ಪ್ರಾರ್ಥನೆ ಮತ್ತು ಪುನರುತ್ಥಾನದ ಮನೋಭಾವವೇ ಉಕ್ರೇನ್ ಜನರಿಗೆ ಹೊಸ ಭರವಸೆ ನೀಡುತ್ತಿದೆ ಎಂಬ ಸಂದೇಶವನ್ನು ಸಾರಿದರು.