ಹುಡುಕಿ

ಕೀವ್‌ನ ಮೈದಾನ್ ಸ್ಮಾರಕದಲ್ಲಿ ಆರ್ಚ್‌ಬಿಷಪ್ ಗ್ಯಾಲಘರ್. ಕೀವ್‌ನ ಮೈದಾನ್ ಸ್ಮಾರಕದಲ್ಲಿ ಆರ್ಚ್‌ಬಿಷಪ್ ಗ್ಯಾಲಘರ್.  (ANSA)

ಉಕ್ರೇನ್: ಮೈದಾನ್ ಸ್ಮಾರಕಕ್ಕೆ ಆರ್ಚ್‌ಬಿಷಪ್ ಗ್ಯಾಲಘರ್ ಭೇಟಿ.

ಉಕ್ರೇನಿಗೆ ತಮ್ಮ ಭೇಟಿಯ ಅಂತಿಮ ದಿನದಲ್ಲಿ, ಆರ್ಚ್‌ಬಿಷಪ್ ಪಾಲ್ ರಿಚರ್ಡ್ ಗ್ಯಾಲಘರ್ ರವರು ಕೀವ್‌ನಲ್ಲಿ ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ ಹಾಗೂ ಹಂಗಾಮಿ ವಿದೇಶಾಂಗ ಸಚಿವ ಆಂಡ್ರಿಯ್ ಸಿಬಿಹಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಅಲ್ಲದೆ, ಮೈದಾನ್ ಸ್ಮಾರಕಕ್ಕೆ ಭೇಟಿ ನೀಡಿ ಗೌರವ ನಮನ ಸಲ್ಲಿಸಿದರು ಹಾಗೂ ಅಖಿಲ ಉಕ್ರೇನಿಯನ್ ಧರ್ಮ ಸಭೆಗಳು ಮತ್ತು ಧಾರ್ಮಿಕ ಸಂಸ್ಥೆಗಳ ಮಂಡಳಿಯ ಪ್ರತಿನಿಧಿಗಳೊಂದಿಗೆ ಮಹತ್ವದ ಚರ್ಚೆಗಳನ್ನು ನಡೆಸಿದರು.

ವ್ಯಾಟಿಕನ್ ವರದಿ

ಉಕ್ರೇನಿಗೆ ಜಗದ್ಗುರು XIVನೇ ಲಿಯೋರವರ ವಿಶೇಷ ಪ್ರತಿನಿಧಿಯಾಗಿ ಐದು ದಿನಗಳ ಭೇಟಿಯನ್ನು ಪೂರ್ಣಗೊಳಿಸಿದ ಆರ್ಚ್‌ಬಿಷಪ್ ಪಾಲ್ ರಿಚರ್ಡ್ ಗ್ಯಾಲಘರ್, ಕೀವ್‌ನಲ್ಲಿ ಉಕ್ರೇನಿನ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ ಹಾಗೂ ಹಂಗಾಮಿ ವಿದೇಶಾಂಗ ಸಚಿವ ಆಂಡ್ರಿಯ್ ಸಿಬಿಹಾ ರವರನ್ನು ಭೇಟಿಯಾಗಿ ತಮ್ಮ ಪ್ರವಾಸವನ್ನು ಮುಕ್ತಾಯಗೊಳಿಸಿದರು. ಅವರು ಮೈದಾನ್ ಸ್ಮಾರಕಕ್ಕೆ ಭೇಟಿ ನೀಡಿ, 2013–2014ರ ಗೌರವ ಕ್ರಾಂತಿಯಲ್ಲಿ ಹಾಗೂ ನಂತರದ ಯುದ್ಧದಲ್ಲಿ ಪ್ರಾಣ ಕಳೆದುಕೊಂಡವರ ಸ್ಮರಣಾರ್ಥ ಗುಲಾಬಿ ಹೂಗಳ ಗುಚ್ಛವನ್ನು ಅರ್ಪಿಸಿ ಗೌರವ ನಮನ ಸಲ್ಲಿಸಿದರು.

ಹಂಗಾಮಿ ವಿದೇಶಾಂಗ ಸಚಿವರೊಂದಿಗೆ ನಡೆದ ಮಾತುಕತೆಯಲ್ಲಿ, ಜಗದ್ಗುರುಗಳ ಅಧಿಕಾರ ಸ್ಥಳವು ಉಕ್ರೇನ್ ಜನರೊಂದಿಗಿನ ತನ್ನ ಆಧ್ಯಾತ್ಮಿಕ ಸಾಮೀಪ್ಯವನ್ನು ಪುನರುಚ್ಚರಿಸಿತು. ಅಲ್ಲದೆ, ಉಕ್ರೇನ್‌ನಲ್ಲಿ ನ್ಯಾಯಯುತ, ಶಾಶ್ವತ ಮತ್ತು ಸ್ಥಿರವಾದ ಶಾಂತಿ ಶೀಘ್ರದಲ್ಲೇ ನೆಲೆಸಲೆಂಬ ಆಶಯವನ್ನು ವ್ಯಕ್ತಪಡಿಸಿತು. ಯುದ್ಧದಿಂದ ತತ್ತರಿಸಿರುವ ಜನರಿಗೆ ಮಾನವೀಯ ನೆರವು ಮತ್ತು ಅಂತರರಾಷ್ಟ್ರೀಯ ಸಹಕಾರದ ಅಗತ್ಯವನ್ನೂ ಒತ್ತಿ ಹೇಳಲಾಯಿತು.

ಈ ಭೇಟಿಯ ಪ್ರಮುಖ ಭಾಗವಾಗಿ, ಆರ್ಚ್‌ಬಿಷಪ್ ಗ್ಯಾಲಘರ್ ರವರು ಬೆರ್ಡಿಚಿವ್‌ನ ಕಾರ್ಮೆಲ್ ಮಾತೆಯವರ ಪುಣ್ಯಕ್ಷೇತ್ರದಲ್ಲಿ ಉಕ್ರೇನ್‌ನ ಲ್ಯಾಟಿನ್ ಸಂಪ್ರದಾಯದ ಕಥೋಲಿಕ ಧರ್ಮ ಸಭೆಯ ಮರುಸ್ಥಾಪನೆಯ 35ನೇ ವಾರ್ಷಿಕೋತ್ಸವದ ಆಚರಣೆಯಲ್ಲಿ ಭಾಗವಹಿಸಿದರು. ಸಾವಿರಾರು ಯಾತ್ರಿಕರ ಸಮ್ಮುಖದಲ್ಲಿ ಪವಿತ್ರ ಬಲಿಪೂಜೆಯನ್ನು ಅರ್ಪಿಸಿದ ಅವರು, ಯುದ್ಧದ ಸಂಕಷ್ಟಗಳ ನಡುವೆಯೂ ವಿಶ್ವಾಸ ಮತ್ತು ಭರವಸೆಯಲ್ಲಿ ದೃಢವಾಗಿ ನಿಲ್ಲುವಂತೆ ಕರೆ ನೀಡಿದರು ಹಾಗೂ ಜಗದ್ಗುರು XIVನೇ ಲಿಯೋರವರ ಪ್ರಾರ್ಥನೆ ಮತ್ತು ಸಾಮೀಪ್ಯವು ಸದಾ ಉಕ್ರೇನ್ ಜನರೊಂದಿಗಿದೆ ಎಂದು ಭರವಸೆ ನೀಡಿದರು.

ಪ್ರವಾಸದ ಅವಧಿಯಲ್ಲಿ ಅವರು ಉಕ್ರೇನಿನ ಬಿಷಪ್‌ಗಳು, ಧರ್ಮಗುರುಗಳು ಮತ್ತು ಧಾರ್ಮಿಕ ಸಮುದಾಯಗಳ ಸದಸ್ಯರನ್ನು ಭೇಟಿಯಾದರು. ಕೀವ್‌ನಲ್ಲಿರುವ ಗ್ರೀಕ್ ಕಥೋಲಿಕ ಪುನರುತ್ಥಾನ ಕ್ಯಾಥೆಡ್ರಲ್ಗೆ ಭೇಟಿ ನೀಡಿ, ಯುದ್ಧದಿಂದ ಉಂಟಾಗಿರುವ ಮಾನವೀಯ ಸಂಕಷ್ಟ ಮತ್ತು ಸಂತ್ರಸ್ತರಿಗೆ ನೆರವು ನೀಡುವ ಪ್ರಯತ್ನಗಳ ಕುರಿತು ವಿವಿಧ ಸಭೆಗಳಲ್ಲಿ ಪಾಲ್ಗೊಂಡರು. ಅಲ್ಲದೆ, ಅಖಿಲ ಉಕ್ರೇನಿಯನ್ ಧರ್ಮ ಸಭೆಗಳು ಮತ್ತು ಧಾರ್ಮಿಕ ಸಂಸ್ಥೆಗಳ ಮಂಡಳಿಯ ಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸಿ, ವಿವಿಧ ಧರ್ಮ ಸಭೆಗಳು ಮತ್ತು ಧಾರ್ಮಿಕ ಸಮುದಾಯಗಳ ನಡುವಿನ ಸಹಕಾರವನ್ನು ಶ್ಲಾಘಿಸಿದರು.

ಸಭೆಯಲ್ಲಿ ಭಾಗವಹಿಸಿದ ಧಾರ್ಮಿಕ ನಾಯಕರು, ಯುದ್ಧದಿಂದ ಜನರು ತೀವ್ರವಾಗಿ ದಣಿದಿದ್ದರೂ ನ್ಯಾಯಯುತ ಶಾಂತಿಯ ಮೇಲಿನ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು. ಜಗದ್ಗುರುಗಳ ಅಧಿಕಾರ ಸ್ಥಳ ಹಾಗೂ ಉಕ್ರೇನ್‌ನ ಪ್ರೇಷಿತರ ರಾಯಭಾರಿ ಆರ್ಚ್‌ಬಿಷಪ್ ವಿಸ್ವಾಲ್ದಾಸ್ ಕುಲ್ಬೋಕಾಸ್ ರವರ ನಿರಂತರ ಬೆಂಬಲ ಮತ್ತು ಮಾನವೀಯ ಕಾಳಜಿಗೆ ಕೃತಜ್ಞತೆ ಸಲ್ಲಿಸಿದರು. ಧಾರ್ಮಿಕ ಸೇವಕರನ್ನು ಕಡ್ಡಾಯ ಸೇನಾ ಸೇವೆಯಿಂದ ವಿನಾಯಿತಿ ನೀಡಿರುವ ಉಕ್ರೇನ್ ಸರ್ಕಾರದ ನಿರ್ಧಾರವನ್ನು ಅವರು ಸ್ವಾಗತಿಸಿದ್ದು, ಇದು ಧರ್ಮ ಸಭೆಗಳ ಆಧ್ಯಾತ್ಮಿಕ ಮತ್ತು ಸಾಮಾಜಿಕ ಸೇವೆಯನ್ನು ಸರ್ಕಾರ ಮಾನ್ಯತೆ ನೀಡಿದ ಮಹತ್ವದ ಹೆಜ್ಜೆಯಾಗಿದೆ ಎಂದು ಆರ್ಚ್‌ಬಿಷಪ್ ಗ್ಯಾಲಘರ್ ಹೇಳಿದರು.

20 ಜುಲೈ 2026, 20:11