ಹುಡುಕಿ

ಅಕ್ಟೋಬರ್ 2024ರಲ್ಲಿ ಸಿನೊಡ್‌ನ ಮಹಾ ಅಧಿವೇಶನಕ್ಕಾಗಿ ಪ್ರತಿನಿಧಿಗಳು VIನೆ ಪಾಲ್  ಸಭಾಂಗಣದಲ್ಲಿ ಸೇರಿದರು. ಅಕ್ಟೋಬರ್ 2024ರಲ್ಲಿ ಸಿನೊಡ್‌ನ ಮಹಾ ಅಧಿವೇಶನಕ್ಕಾಗಿ ಪ್ರತಿನಿಧಿಗಳು VIನೆ ಪಾಲ್ ಸಭಾಂಗಣದಲ್ಲಿ ಸೇರಿದರು.  (ANSA)

2027ರ ಸ್ಥಳೀಯ ಧರ್ಮ ಸಭೆಗಳಿಗಾಗಿ ‘ರೀಕಲೆಕ್ಟಿಂಗ್’ ಸಂಪನ್ಮೂಲವನ್ನು ಸಿನೋಡ್ ಪ್ರಕಟಿಸಿದೆ.

2027ರ ಮೊದಲಾರ್ಧದಲ್ಲಿ ನಡೆಯಲಿರುವ ಮೌಲ್ಯಮಾಪನ ಸಭೆಗಳಿಗಾಗಿ, ಸಿನೋಡ್‌ನ ಪ್ರಧಾನ ಕಾರ್ಯದರ್ಶಿಯಾಲಯವು ಬಿಷಪ್‌ಗಳು ಹಾಗೂ ಧರ್ಮಪ್ರಾಂತೀಯ ಸಿನೋಡಲ್ ತಂಡಗಳಿಗೆ ಪ್ರಾಯೋಗಿಕ ಮಾರ್ಗದರ್ಶನವನ್ನು ಒದಗಿಸಿದೆ.

ವ್ಯಾಟಿಕನ್ ವರದಿ

ಸಿನೋಡ್‌ನ ಪ್ರಧಾನ ಕಾರ್ಯದರ್ಶಾಯಾಲಯವು ಧರ್ಮಪ್ರಾಂತ್ಯಗಳು ಹಾಗೂ ಪೂರ್ವ ಕಥೋಲಿಕ ಧರ್ಮ ಸಭೆಗಳ ಧರ್ಮಪ್ರಾಂತ್ಯಗಳಾದ ಎಪಾರ್ಕಿಗಳಿಗೆ ತಮ್ಮ ಮೌಲ್ಯಮಾಪನ ಸಭೆಗಳನ್ನು ಸಿದ್ಧಪಡಿಸಿಕೊಳ್ಳಲು ನೆರವಾಗುವ ಹೊಸ ಮಾರ್ಗದರ್ಶಿ ಸಂಪನ್ಮೂಲವನ್ನು ಪ್ರಕಟಿಸಿದೆ. ಈ ಸಭೆಗಳು ಸಿನೋಡ್ ಅನುಷ್ಠಾನ ಪ್ರಕ್ರಿಯೆಯ ಸ್ಥಳೀಯ ಹಂತವನ್ನು ಸಮಾಪ್ತಿಗೊಳಿಸಲಿವೆ.

“ರೀಕಲೆಕ್ಟಿಂಗ್: ಸ್ಥಳೀಯ ಧರ್ಮ ಸಭೆಯ ಮೌಲ್ಯಮಾಪನ ಸಭೆಯ ಸಿದ್ಧತೆಗೆ ಸಹಯಾತ್ರೆ” ಎಂಬ ಶೀರ್ಷಿಕೆಯ ಈ ದಸ್ತಾವೇಜನ್ನು ಜುಲೈ 27ರಂದು ಬಿಡುಗಡೆ ಮಾಡಲಾಗಿದ್ದು, ಇದು ಹಲವು ಭಾಷೆಗಳಲ್ಲಿ ಲಭ್ಯವಿದೆ.

“ಮೌಲ್ಯಮಾಪನವು ಕೇವಲ ತಾಂತ್ರಿಕ ವ್ಯಾಯಾಮವಲ್ಲ ಅದು ಕೃತಜ್ಞತೆ ಮತ್ತು ಸತ್ಯದ ಅನುಭವವಾಗಿದೆ,” ಎಂದು ಸಿನೋಡ್‌ನ ಪ್ರಧಾನ ಕಾರ್ಯದರ್ಶಿ ಕಾರ್ಡಿನಲ್ ಮಾರಿಯೋ ಗ್ರೆಕ್ ರವರು ಹೇಳಿದ್ದಾರೆ. “ರೀಕಲೆಕ್ಟಿಂಗ್ ಎಂದರೆ ನಮ್ಮ ಸಮುದಾಯಗಳ ಪಯಣದಲ್ಲಿ ಪ್ರಭು ಪರಿಪಕ್ವಗೊಳಿಸಿರುವ ಫಲಗಳನ್ನು ಗುರುತಿಸುವುದು ಹಾಗೂ ಮುಂದಿನ ಹೆಜ್ಜೆಗಳತ್ತ ಆತನು ನಡೆಸುವ ಮಾರ್ಗದರ್ಶನಕ್ಕೆ ನಮ್ಮನ್ನು ನಾವು ತೆರೆದುಕೊಳ್ಳುವುದಾಗಿದೆ.”

ದೇವರ ಕಾರ್ಯವನ್ನು ನೆನಪಿಸಿಕೊಳ್ಳುವುದು

ಈ ದಸ್ತಾವೇಜು ವಿವರಿಸುವಂತೆ, ಪವಿತ್ರ ಗ್ರಂಥದಲ್ಲಿ ‘ರೀಕಲೆಕ್ಟಿಂಗ್’ ಎಂದರೆ ಕೇವಲ ಹಿಂದಿನ ಘಟನೆಗಳನ್ನು ನೆನಪಿಸಿಕೊಳ್ಳುವುದಲ್ಲ. ಅದು ಇತಿಹಾಸದಲ್ಲಿ ದೇವರು ನಡೆಸಿದ ಕಾರ್ಯವನ್ನು ಗುರುತಿಸಿ, ವರ್ತಮಾನವನ್ನು ವಿವೇಚಿಸುವುದಕ್ಕೂ ಭವಿಷ್ಯದತ್ತ ಮುಕ್ತ ಮನಸ್ಸಿನಿಂದ ಸಾಗುವುದಕ್ಕೂ ನೆರವಾಗುವ ಆಧ್ಯಾತ್ಮಿಕ ಪ್ರಕ್ರಿಯೆಯಾಗಿದೆ.

ಆದ್ದರಿಂದ ಸ್ಥಳೀಯ ಧರ್ಮ ಸಭೆಗಳು ಸಿನೋಡ್‌ನ ಅನುಷ್ಠಾನದ ಹಂತವನ್ನು ಕೃತಜ್ಞತೆ ಮತ್ತು ಪ್ರಾಮಾಣಿಕತೆಯಿಂದ ಮರುಪರಿಶೀಲಿಸಲು ಆಹ್ವಾನಿಸಲ್ಪಟ್ಟಿವೆ. ಈ ಪಯಣದಲ್ಲಿ ಈಗಾಗಲೇ ಮೂಡಿಬಂದಿರುವ ಫಲಗಳನ್ನು ಗುರುತಿಸುವುದರ ಜೊತೆಗೆ, ದೇವರು ತಮ್ಮನ್ನು ಯಾವ ಮುಂದಿನ ಹೆಜ್ಜೆಗಳತ್ತ ಕರೆಯುತ್ತಿದ್ದಾನೆ ಎಂಬುದನ್ನೂ ವಿವೇಚಿಸಲು ಅವುಗಳನ್ನು ಪ್ರೋತ್ಸಾಹಿಸಲಾಗಿದೆ.

ಈ ಮಾರ್ಗದರ್ಶಿ ಮುಖ್ಯವಾಗಿ ಈ ಪ್ರಕ್ರಿಯೆಯ ಹೊಣೆ ಹೊತ್ತಿರುವ ಬಿಷಪ್‌ಗಳು ಹಾಗೂ ಎಪಾರ್ಕ್‌ಗಳಿಗೆ ಮತ್ತು ಈ ಕಾರ್ಯಕ್ಕೆ ಚೈತನ್ಯ ತುಂಬುವ ಸಿನೋಡಲ್ ತಂಡಗಳಿಗೆ ಉದ್ದೇಶಿತವಾಗಿದೆ. ಇದು ಎಲ್ಲರಿಗೂ ಒಂದೇ ಮಾದರಿಯನ್ನು ಹೇರದೆ, ಪ್ರತಿ ಸ್ಥಳೀಯ ಪರಿಸ್ಥಿತಿಗೆ ಹೊಂದಿಕೊಳ್ಳುವಂತೆ ಪ್ರಶ್ನೆಗಳು, ಮಾನದಂಡಗಳು ಹಾಗೂ ಪ್ರಾಯೋಗಿಕ ಸಲಹೆಗಳನ್ನು ಒದಗಿಸುತ್ತದೆ.

ಈ ವಿಧಾನವು ಸಿನೋಡಾಲಿಟಿಯನ್ನು “ಭೇಟಿಯಿಂದ ಹುಟ್ಟುವ, ಆಲಿಸುವಿಕೆಯ ಮೂಲಕ ಬೆಳೆಯುವ ಮತ್ತು ವಿವೇಚನೆಯ ಮೂಲಕ ಪರಿಪಕ್ವಗೊಳ್ಳುವ ಆಧ್ಯಾತ್ಮಿಕ ಜೀವನಶೈಲಿ” ಎಂದು ಜಗದ್ಗುರು XIVನೇ ಲಿಯೋರವರು ನೀಡಿರುವ ವಿವರಣೆಯನ್ನು ಪ್ರತಿಬಿಂಬಿಸುತ್ತದೆ ಎಂದು ದಸ್ತಾವೇಜು ತಿಳಿಸುತ್ತದೆ.

ಸ್ಮರಣೆಯಿಂದ ವಿವೇಚನೆಯತ್ತ

ಈ ಸಂಪನ್ಮೂಲವು ಪರಸ್ಪರ ನಿಕಟವಾಗಿ ಸಂಬಂಧಿಸಿರುವ ಎರಡು ಭಾಗಗಳಾಗಿ ವಿಭಾಗಿಸಲಾಗಿದೆ. ಮೊದಲ ಭಾಗವು ಸ್ಥಳೀಯ ಧರ್ಮ ಸಭೆಗೆ ಒಂದು ಕಥನಾತ್ಮಕ ವರದಿಯನ್ನು ಸಿದ್ಧಪಡಿಸಲು ಮಾರ್ಗದರ್ಶನ ನೀಡುತ್ತದೆ. ಇದರಲ್ಲಿ ನೆನಪುಗಳು ಮತ್ತು ಸಾಕ್ಷ್ಯಗಳನ್ನು ಸಂಗ್ರಹಿಸುವುದು, “ಸೂಚನೆಗಳನ್ನು” ಗುರುತಿಸಿ ಆಲಿಸುವುದು ಹಾಗೂ ಸಿನೋಡ್‌ನ ಅಂತಿಮ ದಸ್ತಾವೇಜಿನಲ್ಲಿ ಉಲ್ಲೇಖಿಸಲಾದ ಮೂರು ಪರಿವರ್ತನೆಗಳಾದ ಸಂಬಂಧಗಳು, ಧರ್ಮ ಸಭೆಯ ಪ್ರಕ್ರಿಯೆಗಳು ಮತ್ತು ಪರಸ್ಪರ ಬಂಧಗಳ ಮೂಲಕ ಸಂಭವಿಸಿರುವ ಬದಲಾವಣೆಯ ಪ್ರಕ್ರಿಯೆಗಳನ್ನು ವಿವೇಚಿಸುವುದಕ್ಕೆ ಸಹಾಯ ಮಾಡುತ್ತದೆ.

ಎರಡನೇ ಭಾಗವು ಮೌಲ್ಯಮಾಪನ ಸಭೆಯ ಸಿದ್ಧತೆ ಮತ್ತು ಆಚರಣೆಗೆ ಸಂಬಂಧಿಸಿದೆ. ಬಿಷಪ್ ಅವರಿಂದ ಕರೆಯಲ್ಪಡುವ ಈ ಸಭೆಯು ಪ್ರಾರ್ಥನೆ, ಮೌನ, ಹಂಚಿಕೊಂಡ ಚಿಂತನೆ ಹಾಗೂ ಪವಿತ್ರಾತ್ಮನಲ್ಲಿ ಸಂವಾದದಿಂದ ಗುರುತಿಸಲ್ಪಡುವ ಆಳವಾದ ಆಧ್ಯಾತ್ಮಿಕ ಅನುಭವವಾಗಿರಲಿದೆ.

ಈ ಸಭೆಯು ಅಂತಿಮ ಕಥನಾತ್ಮಕ ವರದಿ ಹಾಗೂ “ಇತರ ಧರ್ಮ ಸಭೆಗಳಿಗೆ ಪತ್ರ”ವನ್ನು ಸಿದ್ಧಪಡಿಸುತ್ತದೆ. ಆರಂಭಿಕ ಧರ್ಮ ಸಭೆಯ (ಸಾಮುದಾಯಿಕ ಐಕ್ಯದ ಪತ್ರಗಳು)ಗಳಿಂದ ಪ್ರೇರಿತವಾದ ಈ ಪತ್ರವು ಸ್ಥಳೀಯ ಧರ್ಮ ಸಭೆ ಕಲಿತ ಪಾಠಗಳನ್ನು, ಅದು ಕೈಗೊಳ್ಳಲಿರುವ ಮುಂದಿನ ಹೆಜ್ಜೆಗಳನ್ನು ಹಾಗೂ ಇತರ ಸಮುದಾಯಗಳಿಗೆ ಭರವಸೆಯ ಸಂದೇಶವನ್ನು ಹಂಚಿಕೊಳ್ಳಲಿದೆ.

2028ರ ವ್ಯಾಟಿಕನ್ ಧಾರ್ಮಿಕ ಸಭೆಯತ್ತ

ಬಿಷಪ್ ರವರ ಅನುಮೋದನೆಯ ನಂತರ, ಈ ಎರಡೂ ದಸ್ತಾವೇಜುಗಳನ್ನು ರಾಷ್ಟ್ರೀಯ ಅಥವಾ ಪ್ರಾದೇಶಿಕ ಸಿನೋಡಲ್ ತಂಡಕ್ಕೆ ಕಳುಹಿಸಬೇಕು ಹಾಗೂ 2027ರ ಜೂನ್ 30ರೊಳಗೆ ಸಿನೋಡ್‌ನ ಪ್ರಧಾನ ಕಾರ್ಯದರ್ಶಿಯಾಲಯಕ್ಕೂ ಸಲ್ಲಿಸಬೇಕು.

2027ರ ದ್ವಿತೀಯಾರ್ಧದಲ್ಲಿ ಬಿಷಪ್‌ಗಳ ಸಮ್ಮೇಳನಗಳು ಹಾಗೂ ಪೂರ್ವ ಕಥೋಲಿಕ ಧರ್ಮ ಸಭೆಗಳ ಶ್ರೇಣೀಬದ್ಧ ರಚನೆಗಳ ಸಭೆಗಳು ನಡೆಯಲಿದ್ದು, 2028ರ ಆರಂಭದಲ್ಲಿ ಖಂಡಮಟ್ಟದ ಸಭೆಗಳು ಜರುಗಲಿವೆ. ಈ ಸಂಪೂರ್ಣ ಸಿನೋಡಲ್ ಪ್ರಕ್ರಿಯೆಯು 2028ರ ಅಕ್ಟೋಬರ್‌ನಲ್ಲಿ ವ್ಯಾಟಿಕನ್‌ನಲ್ಲಿ ನಡೆಯಲಿರುವ ಧಾರ್ಮಿಕ ಸಭೆಯೊಂದಿಗೆ ಸಮಾಪ್ತಿಗೊಳ್ಳಲಿದೆ.

27 ಜುಲೈ 2026, 17:37